27 ವರ್ಷದ ಹಿಂದೆ ಮಾಡಿದ್ದ ಒಂದು ತಪ್ಪು, ಸೈಫ್ ಅಲಿ ಖಾನ್ ಮೇಲಿನ ಹಲ್ಲೆಗೆ ಕಾರಣನಾ ?
ಸೈಫ್ ಅಲಿ ಖಾನ್ ಮೇಲೆ ನಡೆದ ಮಾರಣಾಂತಿಕ ಹಲ್ಲೆಯಿಂದ ಬಾಲಿವುಡ್ ಬೆಚ್ಚಿ ಬಿದ್ದಿದೆ. ಈ ಪ್ರಕರಣದ ಹಿಂದೆ ಯಾರ ಕೈವಾಡ ಇರಬಹುದು ? ಆ ಆಗುಂತಕನ ಜೊತೆ ಮನೆ ಕೆಲಸದಾಕೆಯ ಸಂಬಂಧವೇನಾದರೂ ಇರಬಹುದಾ ? ಅಷ್ಟೊಂದು ಭದ್ರತೆಯ ನಡುವೆ ಆ ವ್ಯಕ್ತಿ ಮನೆಯೊಳಗೆ ಹೋಗಿದ್ಹೇಗೆ.. ? ಹೀಗೆ ಹತ್ತು ಹಲವು ಪ್ರಶ್ನೆಗಳು ಸದ್ಯಕ್ಕೆ ಹಿಂದಿ ಚಿತ್ರರಂಗವನ್ನು ಕಾಡುತ್ತಿವೆ. ಇದರ ನಡುವೆ ಸೈಫ್ ಅಲಿ ಖಾನ್ ದಶಕದ ಹಿಂದೆ ಮಾಡಿದ್ದ ಅದೊಂದು ತಪ್ಪು ಇದೆಲ್ಲದಕ್ಕೆ ಕಾರಣವಾಯ್ತಾ.. ? ಎನ್ನುವ ಅನುಮಾನ ಕೂಡ ಅನೇಕರಲ್ಲಿ ಈಗ ಮನೆ ಮಾಡಿದೆ.
ಹೌದು, ಅಸಲಿಗೆ ಎರಡೂವರೆ ದಶಕದ ಹಿಂದೆ ರಾಜಸ್ತಾನದ ಕಂಕನಿ ಹಳ್ಳಿಯ ಬಳಿ ಕೃಷ್ಣಮೃಗವನ್ನು ಬೇಟೆಯಾಡಲಾಗಿತ್ತು. ಸಲ್ಮಾನ್ ಖಾನ್ ಈ ಪ್ರಕರಣದ ಪ್ರಮುಖ ಆರೋಪಿ. ಅಂದಿನಿಂದ ಇಂದಿನವರೆಗೆ ಸಲ್ಮಾನ್ ಖಾನ್ ಕೃಷ್ಣ ಮೃಗ ಹೆಸರು ಕೇಳಿದರೆ ಬೆಚ್ಚಿ ಬೀಳುತ್ತಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಕುಳಿತುಕೊಂಡೆ ಲಾರೆನ್ಸ್ ಬಿಷ್ಣೋಯ್ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಶಪಥ ಮಾಡಿದ್ದಾನೆ. ಒಂದಲ್ಲ, ಎರಡಲ್ಲ, ಅನೇಕ ಬಾರಿ ಪ್ರಯತ್ನವನ್ನು ಕೂಡ ಮಾಡಿದ್ದಾನೆ.

ಆದರೆ.. ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿವೆ. ಹೀಗಿರುವಾಗ ಸೈಫ್ ಅಲಿ ಖಾನ್ ಮೇಲೀಗ ಹಲ್ಲೆ ನಡೆದಿದೆ. ಈ ಹಿನ್ನೆಲೆ ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ಈ ಹಲ್ಲೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಕೈವಾಡ ಇರಬಹುದಾ ಎನ್ನುವ ಅನುಮಾನ ಅನೇಕರನ್ನು ಈಗ ಕಾಡುತ್ತಿದೆ. ಯಾಕೆಂದರೆ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಕೇವಲ ಸಲ್ಮಾನ್ ಖಾನ್ ಮಾತ್ರ ಆರೋಪಿ ಅಲ್ಲ ಸೈಫ್ ಅಲಿ ಖಾನ್ ಕೂಡ ಆರೋಪಿಯಾಗಿದ್ದರು. ಹಮ್ ಸಾಥ್ ಸಾಥ್ ಹೈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಕೃತ್ಯ ನಡೆದಾಗ ಸಲ್ಮಾನ್ ಖಾನ್ ಜೊತೆ ಸೈಫ್ ಅಲಿ ಖಾನ್ ಕೂಡ ಇದ್ದರು.
ಆದರೆ, ಏಪ್ರಿಲ್ 5-2018ರಂದು ಸಲ್ಮಾನ್ ಖಾನ್‌ಗೆ ಐದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದ್ದ ಜೋಧ್‌ಪುರದ ನ್ಯಾಯಾಲಯ ಸೈಫ್ ಅಲಿ ಖಾನ್ ಮತ್ತು ಸೋನಾಲಿ ಬೇಂದ್ರೆ, ಟಬು, ನೀಲಂ, ಅವರನ್ನು ಬೆನಿಫಿಟ್ ಆಫ್ ಡೌಟ್ ಎಂದು ಪರಿಗಣಿಸಿ ಖುಲಾಸೆಗೊಳಿಸಿತ್ತು.
ಇನ್ನು ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಕೇವಲ ಸೈಫ್ ಅಲಿ ಖಾನ್ ಮಾತ್ರ ಸಿಲುಕಿಕೊಂಡಿರಲಿಲ್ಲ. ಬದಲಿಗೆ ಸೈಫ್ ಅಲಿ ಖಾನ್ ಅವರ ತಂದೆ ಖ್ಯಾತ ಕ್ರಿಕೆಟ್ ಆಟಗಾರ ಮನ್ಸೂರ್ ಅಲಿ ಖಾನ್ ಪಟೌಡಿ ಜೂನ್ 5-2005ರಲ್ಲಿ ಹರಿಯಾಣದ ಝಜ್ಜರ್ ಹಾಡಿನಲ್ಲಿ ಹೆಣ್ಣು ಕೃಷ್ಣಮೃಗವನ್ನು ಬೇಟೆಯಾಗಿದ್ದರು. ಹೆಣ್ಣು ಕೃಷ್ಣ ಮೃಗ ಮತ್ತು ಮೊಲಗಳ ಮೃತದೇಹದೊಂದಿಗೆ ಸಿಕ್ಕಿ ಬಿದ್ದಿದ್ದರು. ಪಟೌಡಿ ಸಾವನ್ನಪ್ಪಿದ ನಾಲ್ಕು ವರ್ಷಗಳ ನಂತರ ಅಂದರೆ 2011ರಲ್ಲಿ ಫರಿದಾಬಾದ್‌ನ ವಿಶೇಷ ಪರಿಸರ ನ್ಯಾಯಾಲಯ ಆರು ಸದಸ್ಯರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಮನ್ಸೂರ್ ಅಲಿ ಖಾನ್ ನಿಧನವಾದ ಹಿನ್ನೆಲೆ ಆರೋಪಿಗಳ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿತ್ತು.
ಈ ಕಾರಣಕ್ಕೆ ಈಗ ಸೈಫ್ ಅಲಿ ಖಾನ್ ಮೇಲೆ ನಡೆದ ಈ ದಾಳಿಯ ಹಿಂದೆ ಕೃಷ್ಣಮೃಗದ ನೆರಳಿರಬಹುದಾ ಎನ್ನುವ ಪ್ರಶ್ನೆ ಎದ್ದಿದೆ. 1998ರಲ್ಲಿ ಚೋಟುದ್ದ ಇದ್ದ ಲಾರೆನ್ಸ್ ಬಿಷ್ಣೋಯ್ ಈಗ ಸಲ್ಮಾನ್ ಖಾನ್ ವಿರುದ್ದ ಮಾತ್ರವಲ್ಲದೇ ಸೈಫ್ ಅಲಿ ಖಾನ್ ವಿರುದ್ದ ಹಲ್ಲಲ್ಲು ಕಡಿಯುತ್ತಿದ್ದಾನಾ ? ಸೈಫ್ ಅಲಿ ಖಾನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾನಾ ? ಎನ್ನುವ ಪ್ರಶ್ನೆ ಎದ್ದಿದೆ. ಇದಕ್ಕೆ ಪೂರಕವಾಗಿ ಯಾವ ವಿಚಾರವನ್ನು ಕೂಡ ಹಗುರವಾಗಿ ತೆಗೆದುಕೊಳ್ಳದ ಈ ಪೊಲೀಸರು ಈ ದಿಸೆಯಲ್ಲಿ ಕೂಡ ಈಗ ತನಿಖೆ ಮಾಡುತ್ತಿರುವುದಾಗಿ ಹೇಳಿದ್ದಾರೆ.


Click it and Unblock the Notifications











