ಹಾಗಿದ್ದರೆ ನನಗೆ ಇಷ್ಟೊತ್ತಿಗೆ ಮಕ್ಕಳಿರಬೇಕಿತ್ತು ; ಚಿರಾಗ್ ಪಾಸ್ವಾನ್ ಜೊತೆ ಮದುವೆ - ಕಂಗನಾ ರಣಾವತ್ ಪ್ರತಿಕ್ರಿಯೆ
ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಅದರಲ್ಲಿಯೂ ಲವ್ .. ಬ್ರೇಕಪ್.. ಮದುವೆ.. ಡಿವೋರ್ಸ್ ಸುದ್ದಿಗಳು ಇಲ್ಲಿ ತುಂಬಾನೇ ಮಾಮೂಲು.
ಯಾಕೆಂದರೆ.. ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ ಬ್ರೇಕಪ್ಪು.. ಲವ್ವು.. ಡವ್ವು.. ಕಡಿಮೆ ಇಲ್ಲ. ಒಬ್ಬರ ನಂತರ ಒಬ್ಬರನ್ನು ಮದುವೆಯಾಗುವುದು ಆ ನಂತರ ಅವರಿಗೂ ಕೂಡ ಗುಡ್ ಬೈ ಹೇಳಿ ಹೊರನಡೆಯುವುದು ಹೊಸದೇನೂ ಅಲ್ಲ. ಇಲ್ಲಿ ಹಲವರಿಗೆ ಎಲ್ಲವೂ ಬಟ್ಟೆ ಬದಲಿಸಿದಷ್ಟೇ ಸುಲಭ.

ಹೀಗಾಗಿ ಇವರ ವ್ಯೆಯಕ್ತಿಕ ಬದುಕಿನ ಮೇಲೆ ಹಲವರ ಕಣ್ಣಿರುತ್ತೆ. ಯಾರದಾದರೂ ಜೊತೆ ಚೂರು ಆತ್ಮೀಯವಾಗಿ ವರ್ತಿಸಿದರೆ ಸಾಕು, ಸಂಬಂಧ ಕಲ್ಪಿಸಿ ಬಿಡುತ್ತಾರೆ. ಸದ್ಯ ಕಂಗನಾ ರಣಾವತ್ ವಿಚಾರದಲ್ಲಿ ಕೂಡ ಇದೇ ಆಗಿದ್ದು ಅಂತೆ-ಕಂತೆಗಳಿಗೆ ಖುದ್ದು ಕಂಗನಾ ಈಗ ಬ್ರೇಕ್ ಹಾಕಿದ್ದಾರೆ.
ಹೌದು, ಅಸಲಿಗೆ ಕೆಲ ದಿನಗಳಿಂದ ಕಂಗನಾ ರಣಾವತ್ ಅವರ ಹೆಸರು ರಾಜಕಾರಣಿ ರಾಮ್ ವಿಲಾಸ್ ಪಾಸ್ವಾನ್ ಮತ್ತು ಕೇಂದ್ರ ಸಚಿವರಾಗಿರುವ ಚಿರಾಗ್ ಪಾಸ್ವಾನ್ ಅವರ ಜೊತೆ ತಳುಕು ಹಾಕಿಕೊಂಡಿದೆ. ಇಬ್ಬರು ಎಲ್ಲಾದರೂ ಜೊತೆಯಲ್ಲಿ ಕಾಣಿಸಿಕೊಂಡರೆ ಸಾಕು..? ಸಂಬಂಧದ ಕುರಿತು ಚರ್ಚೆ ಶುರುವಾಗುತ್ತಿದೆ. ಇಬ್ಬರದ್ದು ಹೇಳಿ ಮಾಡಿಸಿದ ಜೋಡಿ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇನ್ನೇನೂ ಇಬ್ಬರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯನ್ನು ಕೂಡ ಕೆಲವರು ಹಬ್ಬಿಸಿದ್ದಾರೆ. ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಂಗನಾ ಪ್ರತಿಕ್ರಿಯೆ ನೀಡಿದ್ದು, ಹಾಗೊಂದು ವೇಳೆ ಇದೆಲ್ಲವೂ ನಿಜಾ ಆಗಿದ್ದರೆ ನನಗೆ ಇಷ್ಟೊತ್ತಿಗೆ ಮಕ್ಕಳಾಗಿರಬೇಕಿತ್ತು ಎಂದು ಹೇಳಿದ್ದಾರೆ.
ಈ ಕುರಿತು ''ಎಎನ್‌ಐ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕಂಗನಾ, ಹಲವರು ಅಂದುಕೊಂಡಂತೆ ನಮ್ಮ ನಡುವೆ ಪ್ರೇಮ ಸಂಬಂಧ ಇಲ್ಲ. ಬದಲಿಗೆ ನಾವು ಸ್ನೇಹಿತರು ಮಾತ್ರ ಎಂದು ಹೇಳಿದ್ದಾರೆ. ನಮ್ಮ ಸಂಬಂಧ ಇಂದು ನಿನ್ನೆಯದಲ್ಲ. ಒಂದು ದಶಕದ ಸ್ನೇಹ ನಮ್ಮದು ಎಂದು ಹೇಳಿರುವ ಕಂಗನಾ 2011ರಲ್ಲಿ ನಮ್ಮಿಬ್ಬರ ' 'ಮಿಲೇ ನಾ ಮಿಲೇ ಹಮ್'' ಚಿತ್ರ ತೆರೆಗೆ ಬಂದಿತ್ತು, ಅಂದಿನಿಂದಲೇ ನಾವು ಸ್ನೇಹಿತರು ಎಂದು ಹೇಳಿದ್ಧಾರೆ.

ಚಿರಾಗ್ ಕೂಡ ಚಿತ್ರರಂಗದವರಾಗಿರುವ ಕಾರಣಕ್ಕೆ ಅವರ ಜೊತೆ ಮಾತನಾಡುವಾಗ ನಾನು ಕಂಫರ್ಟೆಬಲ್ ಆಗಿರುತ್ತೇನೆ ಎಂದು ಹೇಳಿರುವ ಕಂಗನಾ, ರಾಜಕೀಯದ ಲೋಕದಲ್ಲಿ ಪರಿಚಯ ಇರುವ ವ್ಯಕ್ತಿ ಸಿಕ್ಕಾಗ ಒಂದು ರೀತಿಯ ಆಪ್ತತೆ ಬೆಳೆಯುವುದು ಸಹಜ, ಆ ಆಪ್ತತೆಯನ್ನೇ ಜನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ನಮ್ಮ ಇಬ್ಬರ ನಡುವೆ ಸ್ನೇಹಪರ ವಾತಾವರಣ ಇದೆ. ನಾವು ಒಳ್ಳೆಯ ಸ್ನೇಹಿತರು ಅಷ್ಟೇ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಈ ಮೂಲಕ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಇನ್ನುಳಿದಂತೆ ಇತ್ತೀಚಿನ ದಿನಗಳಲ್ಲಿ ಕಂಗನಾ ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಬ್ಯುಸಿಯಾಗಿದ್ದಾರೆ. ''ಎಮರ್ಜೆನ್ಸಿ'' ಚಿತ್ರದ ಸೋಲಿನ ನಂತರ ಕಂಗನಾ ಸದ್ಯ ''ಭಾರತ ಭಾಗ್ಯ ವಿಧಾತಾ'' ಚಿತ್ರ ಮಾಡುತ್ತಿದ್ದಾರೆ. ''ಕ್ವೀನ್ 2'' ಕೂಡ ಶೀಘ್ರದಲ್ಲಿಯೇ ಶುರುವಾಗುವ ಸೂಚನೆ ಇದೆ.
ಮತ್ತೊಂದು ಕಡೆ ಚಿತ್ರರಂಗದಿಂದ ದೂರ ಸರಿದ ಚಿರಾಗ್ ಪಾಸ್ವಾನ್ ಪ್ರಬಲ ರಾಜಕಾರಣಿಯಾಗಿ ಬೆಳೆದಿದ್ದಾರೆ. ಇಂದು ಅವರು ಕೇಂದ್ರ ಸಚಿವರಾಗಿ, ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಒಟ್ನಲ್ಲಿ ಚಿತ್ರರಂಗದ ಹಳೆಯ ಸ್ನೇಹಿತರು ಇಂದು ಒಂದೇ ಸಂಸತ್ತಿನಲ್ಲಿ ಸದಸ್ಯರಾಗಿದ್ದಾರೆ. ನಮ್ಮ ನಡುವೆ ಕೇವಲ ಸ್ನೇಹ ಸಂಬಂಧ ಮಾತ್ರ ಇದೆ ಎನ್ನುವುದನ್ನು ಕಂಗನಾ ಹೇಳಿದ್ದಾರೆ. ಇನ್ನಾದರೂ ಈ ಚರ್ಚೆ ನಿಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications