ಸೈಫ್ ಅಲಿ ಖಾನ್ ಮೇಲಿನ ದಾಳಿಗೆ ಮಹಿಳೆ ಕಾರಣ ? ಪಶ್ಚಿಮ ಬಂಗಾಳದಲ್ಲಿ ಅರೆಸ್ಟ್..!
ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆದು ಹತ್ತು ದಿನಗಳಾಗಿವೆ. ಆದರೆ, ಪೊಲೀಸರಿಗೆ ಸೈಫ್ ಅಲಿ ಖಾನ್ ಮನೆಗೆ ಅನಾಯಾಸವಾಗಿ ನುಗ್ಗಿ ಚಾಕು ಇರಿದಿದ್ದು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ನೋಡಲು ಸರಳವೆನಿಸುವ ಈ ಕೇಸ್ ಪೊಲೀಸರ ಪಾಲಿಗೆ ಈಗ ಕಬ್ಬಿಣದ ಕಡಲೆಯಾದಂತೆ ಇದೆ.
ಸಿಸಿಟಿವಿಯಲ್ಲಿ ವ್ಯಕ್ತಿಯ ಮುಖ ಚಹರೆ ಸೆರೆಯಾದರೂ ಕೂಡ ಆ ವ್ಯಕ್ತಿಯನ್ನು ಬಂಧಿಸದೇ ಯಾರ ಯಾರನ್ನೋ ಪೊಲೀಸರು ಅರೆಸ್ಟ್ ಮಾಡುತ್ತಿದ್ದಾರೆ. ಈಗಾಗಲೇ ಆಕಾಶ್ ಕನೋಜಿಯಾ ಲೈಫು ಈ ಪ್ರಕರಣದಿಂದ ಬರ್ಬಾದ್ ಆಗಿದೆ. ಇದರ ನಡುವೆ ಈಗ ಪಶ್ಚಿಮ ಬಂಗಾಳದಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ.

ಹೌದು, ಅಸಲಿಗೆ ಈ ಮೊದಲು ಶರೀಫುಲ್ ಇಸ್ಲಾಂ ಶೆಹಜಾದ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಏಳು ತಿಂಗಳ ಹಿಂದೆ ಢಾಕಿ ನದಿ ದಾಟುವ ಮೂಲಕ ಅಕ್ರಮವಾಗಿ ಬಾಂಗ್ಲಾದೇಶದಿಂದ ಈತ ಬಂದಿದ್ದಾನೆ ಎಂದು ಪೊಲೀಸರು ಹೇಳಿದ್ದರು. ಈಗ ಈ ವ್ಯಕ್ತಿಯ ಹಿನ್ನೆಲೆ ಕೆದಕುತ್ತಿರುವ ಪೊಲೀಸರಿಗೆ ಪಶ್ಚಿಮ ಬಂಗಾಳದ ಮಹಿಳೆಯ ಜೊತೆ ಈ ವ್ಯಕ್ತಿಯ ಸಂಪರ್ಕ ಇರುವುದು ಗೊತ್ತಾಗಿದೆ. ಈ ಹಿನ್ನೆಲೆ ಪೊಲೀಸರು ಪಶ್ಚಿಮ ಬಂಗಾಳಕ್ಕೆ ತೆರಳಿ ಮಹಿಳೆಯನ್ನು ಬಂಧಿಸಿದ್ದಾರೆ
ಆರೋಪಿ ಮೊಹಮ್ಮದ್ ಶರೀಫುಲ್ ಇಸ್ಲಾ ಶೆಹಜಾದ್ ಬಳಸುತ್ತಿರುವ ಸಿಮ್ ಕಾರ್ಡ್ ಈ ಬಂಧಿತ ಮಹಿಳೆಯ ಹೆಸರಿನಲ್ಲಿದೆ. ಈ ಕಾರಣಕ್ಕೆ ಪಶ್ಚಿಮ ಬಂಗಾಳಕ್ಕೆ ತೆರಳಿ ಶೋಧ ಕಾರ್ಯ ನಡೆಸಿರುವ ಪೊಲೀಸರು ಸದ್ಯ ಮಹಿಳೆಯನ್ನು ಬಂಧಿಸಿ ಮುಂಬೈಗೆ ಕರೆದೊಯ್ಯಲು ಟ್ರಾನ್ಸಿಟ್ ರಿಮಾಂಡ್ ಅರ್ಜಿ ಸಲ್ಲಿಸಬಹುದು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇನ್ನು ಬಂಧಿತ ಮಹಿಳಾ ಆರೋಪಿಯ ಹೆಸರು ಖುಖುಮೋನಿ ಜಹಾಂಗೀರ್ ಶೇಖ್ ಎಂದು ಹೇಳಲಾಗಿದ್ದು, ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಚಾಪ್ರಾದಿಂದ ಇವರನ್ನು ಅರೆಸ್ಟ್ ಮಾಡಲಾಗಿದೆ. ಈ ಪ್ರಕರಣದಲ್ಲಿ ಇವರ ಭಾಗವೇನು ಎಂದು ಪೊಲೀಸರು ಸದ್ಯ ತನಿಖೆಯನ್ನು ಮಾಡುತ್ತಿದ್ದಾರೆ.
ಅಂದ್ಹಾಗೇ ಈಗ ಪೊಲೀಸರ ವಶದಲ್ಲಿರುವ ಆರೋಪಿ ಶರೀಫುಲ್ ಇಸ್ಲಾಂ ಶೆಹಜಾದ್ ಮುಖಕ್ಕೂ ಮತ್ತು ಸಿಸಿಟಿವಿಯಲ್ಲಿ ಕಾಣಿಸಿದ ಮುಖಕ್ಕೂ ಸಾಮ್ಯತೆಯೇ ಕಂಡು ಬರುತ್ತಿಲ್ಲ. ಆದರೂ ಪೊಲೀಸರು ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಮಾಡಿದ್ದು ಈ ವ್ಯಕ್ತಿಯೇ ಎಂಬ ವಾದ ಮಾಡುತ್ತಿದ್ದಾರೆ.
ಇನ್ನು ಆರೋಪಿ ಮೊಹಮದ್ ಶರೀಫುಲ್ ಇಸ್ಲಾಂ ಶೆಹಜಾದ್‌ನ ಫಿಂಗರ್ ಪ್ರಿಂಟ್ ಮಾದರಿಯನ್ನು ಇತ್ತೀಚೆಗೆ ಪರಿಶೀಲನೆಗೆ ಕಳಿಸಲಾಗಿತ್ತು. ಆಶ್ಚರ್ಯ ಎಂದರೆ ಸೈಫ್ ಅಲಿ ಖಾನ್ ಮನೆಯಲ್ಲಿರುವ ಬೆರಳಚ್ಚಿನ ಜೊತೆ ಆರೋಪಿಯ ಬೆರಳಚ್ಚು ತಾಳೆಯಾಗುತ್ತಿಲ್ಲ ಎಂದು ವರದಿ ಬಂದಿದೆ. ಈ ಕಾರಣಕ್ಕೆ ಹೆಚ್ಚಿನ ಪರೀಕ್ಷೆಗಾಗಿ ಇನ್ನಷ್ಟು ಬೆರಳಚ್ಚು ಸ್ಯಾಂಪಲ್ ಕಳುಹಿಸಿ ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ. ಈಗ ಮಹಿಳೆಯನ್ನು ಬಂಧಿಸಿದ್ದಾರೆ. ಇದೆಲ್ಲದರ ನಡುವೆ ಆರೋಪಿ ಬಾಂಗ್ಲಾದೇಶದವನು ಎಂದು ಹೇಳುವುದಕ್ಕೆ ಕೂಡ ಪೊಲೀಸರ ಬಳಿ ದಾಖಲೆ ಇಲ್ಲ ಎಂದು ಆರೋಪಿ ಶೆಹಜಾದ್ ಪರ ವಕೀಲರು ವಾದ ಮಾಡಿದ್ದಾರೆ.
ಒಟ್ನಲ್ಲಿ ಸದ್ಯ ಸೈಫ್ ಅಲಿ ಖಾನ್ ಮೇಲೆ ನಡೆದ ಈ ಹಲ್ಲೆ ಪ್ರಕರಣ ದಿನಕ್ಕೊಂದು ತಿರುವುನ್ನು ಪಡೆಯುತ್ತಿದೆ. ನಿಜಕ್ಕೂ ಪೊಲೀಸರು ಬಂಧಿಸಿರುವ ಮೊಹಮದ್ ಶರೀಫುಲ್ ಇಸ್ಲಾಂ ಶೆಹಜಾದ್‌ನೇ ಸೈಫ್ ಅಲಿ ಖಾನ್ ಅವರ ಮೇಲೆ ಹಲ್ಲೆ ಮಾಡಿದ್ದಾ ? ಅಥವಾ ಪೊಲೀಸರು ಮತ್ತೊಮ್ಮೆ ತಪ್ಪಾದ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರಾ ? ಎನ್ನುವುದಕ್ಕೆ ಉತ್ತರ ಶೀಘ್ರದಲ್ಲಿಯೇ ಸಿಗುವ ನಿರೀಕ್ಷೆ ಇದೆ.


Click it and Unblock the Notifications











