ಯಾರನ್ನು ನೋಡಿ ಯಾರು ಕಾಪಿ ಮಾಡಿದ್ರು? ಎಲ್ಲಿಂದ ಎಲ್ಲಿಗೆ ಬಂತು ಗನ್ ಸ್ಟೋರಿ?
ಸಿನಿಮಾ ಕ್ರಿಯೇಟಿವ್ ಫೀಲ್ಡ್. ಪ್ರತಿಯೊಬ್ಬರು ತಮ್ಮ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುತ್ತಾರೆ. ಎಲ್ಲೋ ನೋಡಿದ್ದ ಕೇಳಿದ್ದ ಕತೆಗಳಿಗೆ ನಿರ್ದೇಶಕರು ದೃಶ್ಯ ರೂಪ ಕೊಡುತ್ತಾರೆ. ಕೆಲವೊಮ್ಮೆ ಬೇರೆ ಸಿನಿಮಾಗಳಿಂದಲೂ ಪ್ರೇರಣೆಗೊಂಡು ಸಿನಿಮಾ ಮಾಡೋದು ಇದೆ. ಸಿನಿಮಾ ಕೆಲ ಸನ್ನಿವೇಶಗಳನ್ನು ಕಾಪಿ ಮಾಡೋದನ್ನು ನೋಡಬಹುದು.
ಕಮರ್ಷಿಯಲ್ ಸಿನಿಮಾಗಳ ವಿಚಾರದಲ್ಲಿ ಈ ಕಾಪಿ ಪೇಸ್ಟ್ ಬಗ್ಗೆ ಪದೇ ಪದೇ ಚರ್ಚೆ ನಡೆಯುತ್ತಲೇ ಇರುತ್ತದೆ. ಸೋಶಿಯಲ್ ಮೀಡಿಯಾ ಬಂದಮೇಲೆ ಈ ಬಗ್ಗೆ ಚರ್ಚೆ ಹೆಚ್ಚಾಗುತ್ತಲೇ ಇದೆ. ಬರೀ ಭಾರತದ ಸಿನಿಮಾಗಳು ಮಾತ್ರವಲ್ಲ ವಿದೇಶಿ ಸಿನಿಮಾ ಸನ್ನಿವೇಶಗಳನ್ನು ನೋಡಿ ಪ್ರೇರಣೆಗೊಂಡು ನಮ್ಮಲ್ಲಿ ಸಿನಿಮಾ ಮಾಡುವವರನ್ನು ನೋಡಬಹುದು. ಕೆಲವರು ಇದನ್ನು ಕಾಪಿ ಎಂದರೆ ಮತ್ತೆ ಕೆಲವರು ಪ್ರೇರಣೆ ಎನ್ನುತ್ತಾರೆ. ಆದರ ಇದೇ ವಿಚಾರವನ್ನಿಟ್ಟುಕೊಂಡು ಟ್ರೋಲ್ ಮಾಡೋದು ಇತ್ತೀಚೆಗೆ ಹೆಚ್ಚಾಗ್ತಿದೆ.

ಸದ್ಯ 'KGF-2' ಚಿತ್ರದ ದೊಡ್ಡಮ್ಮ(ದೊಡ್ಡ ಮಿಷನ್ ಗನ್) ಸನ್ನಿವೇಶ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಅದಕ್ಕೆ ಕಾರಣ ರಣ್‌ಬೀರ್ ಕಪೂರ್ ನಟನೆ 'ಅನಿಮಲ್' ಸಿನಿಮಾ ಟ್ರೈಲರ್. ಹೌದು ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಚಿತ್ರದಲ್ಲೂ ರಣ್‌ಬೀರ್ ದೊಡ್ಡ ಗನ್ ಹಿಡಿದು ವಿಧ್ವಂಸ ಸೃಷ್ಟಿಸುವ ಸನ್ನಿವೇಶ ಇದೆ. ಆ ಸನ್ನಿವೇಶ ನೋಡಿ ಕೆಲವರು 'KGF-2' ಕಾಪಿ ಎನ್ನುವ ಚರ್ಚೆ ಶುರು ಮಾಡಿದ್ದಾರೆ. ಅಂದಹಾಗೆ ಈ ರೀತಿ ದೊಡ್ಡ ಮಷಿನ್ ಗನ್ ಆರ್ಭಟದ ಸನ್ನಿವೇಶಗಳು ಸಾಕಷ್ಟು ಸಿನಿಮಾಗಳಲ್ಲಿ ಬಂದು ಹೋಗಿದೆ. ರಾಕಿಭಾಯ್ 'ದೊಡ್ಡಮ್ಮ' ಸೀನ್ ಇಂಪ್ಯಾಕ್ಟ್ ದೊಡ್ಡದಾಗಿದೆ.
ರಾಕಿಭಾಯ್ ಸಂಪಾದಿಸಿದ ಚಿನ್ನದ ಖಜಾನೆಯ ಒಂದೇ ಒಂದು ಚಿನ್ನದ ಬಿಸ್ಕತ್ ಅನ್ನು ಪೊಲೀಸರು ವಶಪಡಿಸಿಕೊಂಡು ಬಂದು ಪೊಲೀಸ್ ಠಾಣೆಯಲ್ಲಿ ಇಟ್ಟಿರುತ್ತಾರೆ. ಇದರಿಂದ ಕೋಪಗೊಂಡ ರಾಕಿ ದೊಡ್ಡ ವ್ಯಾನ್‌ನಿಂದ ದೊಡ್ಡ ಗನ್ ತೆಗೆದ ಅದಕ್ಕೆ ಟ್ರೈಪಾಡ್ ಹಾಕಿ ನಿಲ್ಲಿಸಿ ಪೊಲೀಸ್ ಠಾಣೆ ಮೇಲೆ ಮನಸೋ ಇಚ್ಛೆ ಶೂಟ್ ಮಾಡುತ್ತಾನೆ. ಆ ರಭಸಕ್ಕೆ ಕಾದ ಗನ್ ನಳಿಕೆಯಿಂದ ಸ್ಟೈಲ್ ಆಗಿ ಸಿಗರೇಟ್ ಹಚ್ಚಿ ಸೇದುತ್ತಾನೆ. ಈ ಸೀಕ್ವೆನ್ಸ್ ಕ್ರಿಯೇಟ್ ಮಾಡಿದ ಮ್ಯಾಜಿಕ್ ಅಷ್ಟಿಷ್ಟಲ್ಲ. ಅಭಿಮಾನಿಗಳಂತೂ ಇದನ್ನು ನೋಡಿ ಶಿಳ್ಳೆ, ಚಪ್ಪಾಳೆ ಹೊಡೆದಿದ್ದರು.
ಅಂದಹಾಗೆ ರಾಕಿ ಈ ರೀತಿ ಚಿತ್ರದಲ್ಲಿ ಬಳಸಿದ ಮಚಿನ್ ಗನ್ ಹೆಸರು 'M1919'. ನಿಜಕ್ಕೂ ಇದು ರಕ್ಕಸ ಗಾತ್ರದ ಬಂದೂಕೇ ಸರಿ. ಭಾರೀ ವಿಧ್ವಂಸವನ್ನು ಸೃಷ್ಟಿಸುವಂತದ್ದು. ಅಂದಹಾಗೆ ಈ ರೀತಿಯ ಗನ್‌ಗಳನ್ನು ಸಾಕಷ್ಟು ಹಾಲಿವುಡ್ ಸಿನಿಮಾಗಳಲ್ಲಿ ದಶಕಗಳಿಂದ ಬಳಸಲಾಗುತ್ತಿದೆ. ಬಾಲಿವುಡ್‌ನಲ್ಲೂ ಆಗೊಮ್ಮೆ ಈಗೊಮ್ಮೆ ಇದರ ಆರ್ಭಟ ನೋಡಿದ್ದೆವು. 'KGF-2' ಚಿತ್ರಕ್ಕೂ ಮುನ್ನ 'ಟೈಗರ್ ಜಿಂದಾ ಹೈ' ಚಿತ್ರದಲ್ಲಿ ಸಲ್ಲು ಇಂತದ್ದೇ ಗನ್ ಹಿಡಿದು ಅಬ್ಬರಿಸಿದ್ದರು.

2015ರಲ್ಲಿ ಪುನೀತ್ ರಾಜ್‌ಕುಮಾರ್ 'ರಣವಿಕ್ರಮ' ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಇಂತದ್ದೇ ಗನ್ ಹಿಡಿದು ಎದುರಾಳಿಗಳ ರುಂಡ ಚೆಂಡಾಡಿದ್ದರು. ಹಾಲಿವುಡ್ ಸಿನಿಮಾಗಳಲ್ಲಿ ಇಂತಹ ಸನ್ನಿವೇಶಗಳಿಗೆ ಲೆಕ್ಕವಿಲ್ಲ. ಆದರೆ 'KGF-2' ಚಿತ್ರದಲ್ಲಿ ಆ ಸನ್ನಿವೇಶವನ್ನು ಪ್ರಶಾಂತ್ ನೀಲ್ ತೋರಿಸಿದ ಬಗೆ ಅದ್ಭುತವಾಗಿತ್ತು. ತಮಿಳಿನ 'ಕೈದಿ' ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ನಟ ಕಾರ್ತಿ ಇದೇ ರೀತಿ ಗನ್ ಹಿಡಿದು ವಿಧ್ವಂಸ ಸೃಷ್ಟಿಸಿದ್ದರು. ಆಗ ಸಾಕಷ್ಟು ಜನ ಲೋಕೇಶ್ ಕನಕರಾಜ್ ಹಾಲಿವುಡ್ ಸಿನಿಮಾದಿಂದ ಕಾಪಿ ಮಾಡಿದ್ದಾರೆ ಎಂದಿದ್ದರು.
ಸದ್ಯ ರಣ್‌ಬೀರ್ ಕಪೂರ್ ನಟನೆಯ 'ಅನಿಮಲ್' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಸಂದೀಪ್ ರೆಡ್ಡಿ ವಂಗಾ ಟೇಕಿಂಗ್, ರಣ್‌ಬೀರ್ ಪರ್ಫಾರ್ಮನ್ಸ್ ನೋಡಿದವರು ದಂಗಾಗಿದ್ದಾರೆ. ರಾಕಿಭಾಯ್ ಪಾತ್ರದಿಂದಲೇ ಪ್ರೇರಣೆಗೊಂಡು ಸಂದೀಪ್ ರೆಡ್ಡಿ ಚಿತ್ರದಲ್ಲಿ ಅರ್ಜುನ್ ಸಿಂಗ್ ಪಾತ್ರ ಡಿಸೈನ್ ಮಾಡಿದ್ದಾರೆ ಎನ್ನುವವರು ಇದ್ದಾರೆ. ರಣ್‌ಬೀರ್ ಕೈಗೆ ಬ್ಯಾಂಡೇಜ್ ಕಟ್ಟಿಕೊಂಡು ರಶ್ಮಿಕಾ ಜೊತೆ ಬರೋದು ಹಾಗೂ ಮಷಿನ್ ಗನ್ ಹಿಡಿದು ಅಬ್ಬರಿಸಿರುವ ಸನ್ನಿವೇಶಗಳನ್ನು ಅದಕ್ಕೆ ಸಾಕ್ಷಿಯಾಗಿ ತೋರಿಸುವವರು ಇದ್ದಾರೆ. 'ಅನಿಮಲ್' ಚಿತ್ರದ ಈ ಸನ್ನಿವೇಶದ ಗ್ರಾಫಿಕ್ಸ್ ಬಗ್ಗೆ ಕೆಲವರು ಟ್ರೋಲ್ ಮಾಡುತ್ತಿದ್ದಾರೆ.


Click it and Unblock the Notifications











