"ಅದೊಂದು ಸಾಂಗ್ ಗೆಲ್ಲದಿದ್ರೆ ಇಂಡಸ್ಟ್ರಿಗೆ ಗುಡ್ ಬೈ ಹೇಳಬೇಕೆಂದುಕೊಂಡಿದ್ದೆ"; ಸೊನಾಲಿ ಬೇಂದ್ರೆ
ಮುಂಬೈ ಬೆಡಗಿ ಸೊನಾಲಿ ಬೇಂದ್ರೆ ಬಾಲಿವುಡ್ ಮಾತ್ರವಲ್ಲದೇ ಸೌತ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. 'ಪ್ರೀತ್ಸೆ' ಚಿತ್ರದಲ್ಲಿ ಉಪೇಂದ್ರ, ಶಿವರಾಜ್‌ಕುಮಾರ್ ಜೊತೆಗೂ ಮಿಂಚಿ ಕನ್ನಡ ಸಿನಿರಸಿಕರಿಗೂ ಪರಿಚಿತರಾಗಿದ್ದರು. 2013ರಲ್ಲಿ ಆಕೆ ಕೊನೆಯ ಬಾರಿಗೆ 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ದೊಬಾರಾ' ಚಿತ್ರದಲ್ಲಿ ನಟಿಸಿದ್ದರು.
ಸಿನಿಮಾಗಳಿಂದ ವಿರಾಮ ಪಡೆದಿದ್ದ ಸೊನಾಲಿ 'ಗಾಟ್ ಟ್ಯಾಲೆಂಟ್', 'ಇಂಡಿಯಾಸ್ ಬೆಸ್ಟ್ ಡ್ರಾಮಾಬಾಜ್' ಹಾಗೂ 'ಅಜೀಬ್ ದಸ್ತಾನ್ ಹೈ ಯೆ' ರೀತಿಯ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು. 2018ರಲ್ಲಿ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಕೆಲ ದಿನಗಳ ಕಾಲ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆದು ಅದರಿಂದ ಚೇತರಿಸಿಕೊಂಡರು. ಬಳಿಕ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು.

ಸದ್ಯ ಸೊನಾಲಿ ಬೇಂದ್ರೆ 'ದಿ ಬ್ರೋಕನ್ ನ್ಯೂಸ್ - 2 ವೆಬ್ ಸೀರಿಸ್‌ನಲ್ಲಿ ನಟಿಸಿದ್ದಾರೆ. ಮೇ 3 ರಿಂದ ಇದು ಜೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ವೆಬ್ ಸೀರಿಸ್ ಪ್ರಚಾರದ ಭಾಗವಾಗಿ ಸೋನಾಲಿ ಸಾಕಷ್ಟು ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಸಿನಿಜರ್ನಿ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
1995ರಲ್ಲಿ ಮಣಿರತ್ನಂ ನಿರ್ದೇಶನ 'ಬಾಂಬೆ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಚಿತ್ರದಲ್ಲಿ ಅರವಿಂದ್ ಸಾಮಿ ಹಾಗೂ ಮನಿಷಾ ಕೋಹಿರಾಲ ಲೀಡ್ ರೋಲ್‌ಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನ ಗೆದ್ದಿದ್ದರು. ಆ ಚಿತ್ರದ ಸ್ಪೆಷಲ್ ಸಾಂಗ್‌ವೊಂದರಲ್ಲಿ ಸೋನಾಲಿ ಹೆಜ್ಜೆ ಹಾಕಿದ್ದರು. ಹೌದು. ಸೂಪರ್ ಹಿಟ್ 'ಹಮ್ಮಾ ಹಮ್ಮಾ' ಸಾಂಗ್‌ನಲ್ಲಿ ರಾಜು ಸುಂದರಂ ಮಾಸ್ಟರ್ ಜೊತೆ ಸೋನು ಬಿಂದಾಸ್ ಡ್ಯಾನ್ಸ್ ಮಾಡಿ ರಂಗೇರಿಸಿದ್ದರು.
ನಾನು ಕಾಲೇಜಿನಲ್ಲಿ ಓದುತ್ತಿರುವಾಗಲೇ ತಂದೆ ತಾಯಿಗೆ ಇಷ್ಟವಿಲ್ಲದಿದ್ದರೂ ಸಿನಿಮಾ ರಂಗಕ್ಕೆ ಬಂದೆ. ಸಿನಿಮಾರಂಗಕ್ಕೆ ಬಂದ ನಂತರ ನನ್ನ ಡ್ಯಾನ್ಸ್ ಬಗ್ಗೆ ಸಾಕಷ್ಟು ಟೀಕೆಗಳು ಎದುರಾಗುತ್ತಿತ್ತು. ಆಗ ಚೆನ್ನಾಗಿ ಡ್ಯಾನ್ಸ್ ಮಾಡಲು ಬರದವರು ಹೀರೋಯಿನ್ ಆಗೋದು ಕಷ್ಟ ಎಂಬ ನಂಬಿಕೆ ಇತ್ತು. ಹಾಗಾಗಿ ಶೂಟಿಂಗ್ ಮುಗಿದ ತಕ್ಷಣ ಬಾಲಿವುಡ್ ಡ್ಯಾನ್ಸ್ ತರಬೇತಿ ತೆಗೆದುಕೊಳ್ಳುತ್ತಿದ್ದೆ ಎಂದು ಸೋನಾಲಿ ನೆನಪಿಸಿಕೊಂಡಿದ್ದಾರೆ.
"ಆಗ ನಾನು 5 ಸಿನಿಮಾಗಳಲ್ಲಿ ನಟಿಸಿದ್ದೆ. ಅದೇ ಸಮಯದಲ್ಲಿ 'ಹಮ್ಮಾ ಹಮ್ಮಾ' ಸಾಂಗ್ ಅವಕಾಶ ಸಿಕ್ಕಿತ್ತು. ಆ ಹಾಡಿಗೆ ಪ್ರಭುದೇವ ಕೊರಿಯೋಗ್ರಾಫರ್, ಸಹೋದರ ರಾಜು ಸುಂದರಂ ಜೊತೆ ಕುಣಿಯಬೇಕು ಎಂದರು. ಪ್ರಭುದೇವ ಕೊರಿಯೋಗ್ರಫರ್ ಆಗಿದ್ದರಿಂದ ಬಹಳ ಕಷ್ಟಪಟ್ಟು ಡ್ಯಾನ್ಸ್ ಮಾಡಿದೆ. ಒಂದು ವೇಳೆ ಆ ಹಾಡು ಹಿಟ್ ಆಗದೇ ಇದ್ದರೆ ಚಿತ್ರರಂಗವನ್ನೇ ಬಿಟ್ಟು ಬಿಡಬೇಕು ಎಂದು ನಿರ್ಧರಿಸಿದ್ದೆ" ಎಂದು ಸೋನಾಲಿ ವಿವರಿಸಿದ್ದಾರೆ.
ಆ ಹಾಡಿನಲ್ಲಿ ಮಣಿ ಸರ್ ಲಾಂಗ್ ಶಾಟ್ಸ್ ಜಾಸ್ತಿ ಇಟ್ಟಿದ್ದರು. ಹಾಗಾಗಿ ಬಹುತೇಕ ಎಲ್ಲವೂ ಒಂದೇ ಟೇಕ್‌ನಲ್ಲಿ ಮುಗಿದಿತ್ತು. ಆಗ ಸೆಟ್‌ನಲ್ಲಿ ಪ್ರಭುದೇವ ತಂದೆ ಸುಂದರಂ ಮಾಸ್ಟರ್ ಸಹ ಇರುತ್ತಿದ್ದರು. ನನ್ನ ಡ್ಯಾನ್ಸ್ ನೋಡಿ ಅವರು ಚೆನ್ನಾಗಿ ಡ್ಯಾನ್ಸ್ ಮಾಡ್ದೆ ಎಂದು 100 ರೂ. ಕೊಟ್ಟಿದ್ದರು. ಅಂತಹ ದೊಡ್ಡ ವ್ಯಕ್ತಿ ಮೆಚ್ಚಿಕೊಂಡ ಮೇಲೆ ಬೇರೆ ಯಾವುದೇ ಸರ್ಟಿಫಿಕೇಟ್ ಬೇಡ ಎಂದುಕೊಂಡೆ. ಅಲ್ಲಿಂದ ಮುಂದೆ ಇಂಡಸ್ಟ್ರಿಯಲ್ಲಿ ಉಳಿಯುವ ಧೈರ್ಯ ಬಂತು. ಅದಕ್ಕೆ ನನಗೆ ಆ ಹಾಡು ಬಹಳ ವಿಶೇಷ" ಎಂದಿದ್ದಾರೆ.

ಎ. ಆರ್ ರೆಹಮಾನ್ ಸಂಗೀತದಲ್ಲಿ 'ಹಮ್ಮಾ ಹಮ್ಮಾ' ಸಾಂಗ್ ಸೂಪರ್ ಹಿಟ್ ಆಗಿತ್ತು. ರೆಮೊ ಫರ್ನಾಂಡಿಸ್, ಸ್ವರ್ಣಲತಾ ಜೊತೆ ಸೇರಿ ಖುದ್ದು ರೆಹಮಾನ್ ಈ ಹಾಡು ಹಾಡಿದ್ದರು. ಅದ್ಧೂರಿಯಾಗಿ ಚಿತ್ರೀಕರಿಸಿದ್ದ ಹಾಡು ಸಿನಿರಸಿಕರ ಮನಗೆದ್ದಿತ್ತು.


Click it and Unblock the Notifications











