ಅಯ್ಯಯ್ಯೋ... ಅವರೆಲ್ಲ ಏನು ಅಂದುಕೊಂಡಿದ್ದರೋ, ಏನೋ.!?
''ಅಯ್ಯಯ್ಯೋ... ಅವರೆಲ್ಲ ಏನು ಅಂದುಕೊಂಡಿದ್ದರೋ.. ಏನೋ.!'' - ಅಂತ ಹೇಳ್ತಾ ತುಟಿ ಅಂಚಲ್ಲಿ ನಗೆ ಬೀರುತ್ತಾ, ತಲೆ ಚಚ್ಚಿಕೊಂಡವರು ಬೇರೆ ಯಾರೂ ಅಲ್ಲ.. ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್.
ಅರೇ.. ಜಾಹ್ನವಿ ಕಪೂರ್ ಹೀಗ್ಯಾಕೆ ಹೇಳಿದ್ರು ಅಂದ್ರೆ... ಒಂದು ಸಣ್ಣ ಫ್ಲ್ಯಾಶ್ ಬ್ಯಾಕ್ ಗೆ ಹೋಗಿ ಬರಬೇಕು.
ಅದು ಒಂಬತ್ತು ವರ್ಷಗಳ ಹಿಂದಿನ ಮಾತು. ಸಲ್ಮಾನ್ ಖಾನ್ ಅಭಿನಯದ 'ವಾಂಟೆಡ್' ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಆಗಿನ್ನೂ, ನಟಿ ಜಾಹ್ನವಿ ಕಪೂರ್ ಚಿಕ್ಕ ಹುಡುಗಿ. 'ವಾಂಟೆಡ್' ಚಿತ್ರಕ್ಕೆ ಜಾಹ್ನವಿ ತಂದೆ ಬೋನಿ ಕಪೂರ್ ನಿರ್ಮಾಪಕ.

ಅಪ್ಪನ ಜೊತೆಗೆ 'ವಾಂಟೆಡ್' ಸಿನಿಮಾದ ಸೆಟ್ ಗೆ ಜಾಹ್ನವಿ ಕಪೂರ್ ಕೂಡ ಹೋಗಿದ್ದರು. ಆಗ ಸಲ್ಮಾನ್ ಖಾನ್ ಡ್ಯಾನ್ಸ್ ರಿಹರ್ಸಲ್ ಮಾಡ್ತಿದ್ರಂತೆ. 'ವಾಂಟೆಡ್' ಹಾಡು ಕೇಳಿ, ಸಲ್ಮಾನ್ ಮಾಡ್ತಿದ್ದ ಡ್ಯಾನ್ಸ್ ನೋಡಿ ಸುಮ್ಮನೆ ನಿಲ್ಲದ ಜಾಹ್ನವಿ ಕಪೂರ್ ಸೈಡಲ್ಲೇ ಹೆಜ್ಜೆ ಹಾಕಲು ಆರಂಭಿಸಿದ್ದರು.
ಮೂಲೆಯಲ್ಲಿ ಜಾಹ್ನವಿ ಕಪೂರ್ ಕುಣಿಯುತ್ತಿದ್ದನ್ನ ಗಮನಿಸಿದ ಸಲ್ಮಾನ್ ಖಾನ್, ಎಲ್ಲರ ಮುಂದೆ ಕರೆದು ಹಾಡು ಹಾಕಿ ಡ್ಯಾನ್ಸ್ ಮಾಡಲು ಹೇಳಿದರಂತೆ. ಆಗ ಫುಲ್ ಖುಷಿಯಾದ ಜಾಹ್ನವಿ ಕುಣಿದು ಕುಪ್ಪಳಿಸಿಬಿಟ್ಟರಂತೆ. ಜಾಹ್ನವಿ ಡ್ಯಾನ್ಸ್ ನೋಡಿ ಸಲ್ಮಾನ್ ಚಪ್ಪಾಳೆ ಹೊಡೆದಿದ್ದರಂತೆ.
''ಈ ಘಟನೆ ಅವತ್ತು ನನಗೆ ಖುಷಿ ಕೊಟ್ಟಿತ್ತು. ಆದ್ರೆ, ಇವತ್ತು ನೆನಪಿಸಿಕೊಂಡರೆ ಮುಜುಗರ ಆಗುತ್ತೆ. ಅವತ್ತು ನನ್ನ ಡ್ಯಾನ್ಸ್ ನೋಡಿ ಅವರೆಲ್ಲ ಏನು ಅಂದುಕೊಂಡಿದ್ರೋ ಏನೋ.!?'' ಅಂತ ತಲೆ ಚಚ್ಚಿಕೊಳ್ತಾರೆ ನಟಿ ಜಾಹ್ನವಿ ಕಪೂರ್.
ಅಷ್ಟಕ್ಕೂ, ಒಂಬತ್ತು ವರ್ಷಗಳ ಹಿಂದಿನ ಘಟನೆಯನ್ನ ಜಾಹ್ನವಿ ಇದೀಗ ನೆನಪು ಮಾಡಿಕೊಂಡಿದ್ದು ಸಂದರ್ಶನವೊಂದರಲ್ಲಿ. 'ಧಡಕ್' ಬಿಡುಗಡೆ ಆಗುತ್ತಿರುವ ಹೊತ್ತಿನಲ್ಲಿ ಪತ್ರಿಕೆಯೊಂದಕ್ಕೆ ಇಂಟರ್ ವ್ಯೂ ನೀಡಿದ್ದ ಜಾಹ್ನವಿ ತಮ್ಮ ಬಾಲ್ಯದ ದಿನಗಳ ಬಗ್ಗೆ ಮೆಲುಕು ಹಾಕಿದ್ದು ಇಷ್ಟು.
ಶ್ರೀದೇವಿ-ಬೋನಿ ಕಪೂರ್ ಪುತ್ರಿ ಜಾಹ್ನವಿ ಅಭಿನಯದ ಚೊಚ್ಚಲ ಸಿನಿಮಾ 'ಧಡಕ್' ನಾಳೆ ಭಾರತದಾದ್ಯಂತ ಬಿಡುಗಡೆ ಆಗಲಿದೆ.


Click it and Unblock the Notifications











