ಮೌಳಿ ತಂದೆ 'ಭಜರಂಗಿ ಭಾಯಿಜಾನ್' ಕಥೆ ಕದ್ದಿದ್ದು ಎಲ್ಲಿಂದ? ಮುನ್ನಿ ಕಥೆಗೆ ಆ ನೈಜ ಘಟನೆಯೇ ಸ್ಫೂರ್ತಿ
ಸಲ್ಮಾನ್ ಖಾನ್ ನಟನೆಯ 'ಭಜರಂಗಿ ಭಾಯಿಜಾನ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಸದ್ಯ ಚಿತ್ರದ ಸೀಕ್ವೆಲ್ ಕಥೆ ಸಿದ್ಧವಾಗಿದ್ದು ಶೀಘ್ರದಲ್ಲೇ ಸಿನಿಮಾ ಮಾಡುವ ಚರ್ಚೆ ನಡೀತಿದೆ. ಹಿಂದಿನ ಚಿತ್ರಕ್ಕೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದರು. ಇದೀಗ ಮುಂದುವರೆದ ಕಥೆಯನ್ನು ಸಿದ್ಧಪಡಿಸಿದ್ದಾರೆ. ಅಂದು ಬಾಲಿವುಡ್ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದ ಸಿನಿಮಾ 'ಭಜರಂಗಿ ಭಾಯಿಜಾನ್'.
ವಿಶೇಷ ಅಂದರೆ 10 ವರ್ಷಗಳ ಹಿಂದೆ ಈ ಚಿತ್ರವನ್ನು ಕನ್ನಡ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದರು. ಸಲ್ಮಾನ್ ಖಾನ್ ಹಾಗೂ ನಿರ್ದೇಶಕ ಕಬೀರ್ ಖಾನ್ ಸಹ ನಿರ್ಮಾಪಕರಾಗಿದ್ದರು. ಸಿಂಪಲ್ ಕಥೆಯನ್ನು ಬಹಳ ಪರಿಣಾಮಕಾರಿ ಕಟ್ಟಿಕೊಟ್ಟು ಚಿತ್ರತಂಡ ಗೆದ್ದಿತ್ತು. ಅಂದಾಜು 75 ಕೋಟಿ ರೂ. ಬಜೆಟ್ ಸಿನಿಮಾ ಆ ಕಾಲಕ್ಕೆ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಅಚ್ಚರಿ ಎಂದರೆ 'ಭಜರಂಗಿ ಭಾಯಿಜಾನ್' ಕಥೆಯನ್ನು ಆಮೀರ್ ಖಾನ್ ಕೂಡ ಕೇಳಿದ್ದರು. ಆದರೆ ಯಾಕೋ ನಟಿಸೋಕೆ ಹಿಂದೇಟು ಹಾಕಿದ್ದರು.

ಒಂದು ಸಿನಿಮಾ ಗೆಲುವಿಗೆ ಕಥೆ, ಚಿತ್ರಕಥೆ ಎಷ್ಟು ಮಹತ್ವ ಎನ್ನುವುದು 'ಭಜರಂಗಿ ಭಾಯಿಜಾನ್' ಸಿನಿಮಾ ನೋಡಿದರೆ ಅರ್ಥವಾಗುತ್ತದೆ. ನೋಡೋಕೆ ಬಹಳ ಸಿಂಪಲ್ ಎನಿಸುವ ಕಥೆ. ರೆಗ್ಯೂಲರ್ ಮಸಾಲಾ ಕಮರ್ಷಿಯಲ್ ಅಂಶಗಳು ಕಮ್ಮಿ ಇತ್ತು. ಆದರೆ ಎಮೋಷನ್ ಪ್ರೇಕ್ಷಕರನ್ನು ಕಟ್ಟಿ ಹಾಕಿತ್ತು. ನಾಯಕ ಪವನ್ ಕುಮಾರ್ ಚತುರ್ವೇದಿ(ಸಲ್ಮಾನ್ ಖಾನ್) ಹಾಗೂ ಮುನ್ನಿ(ಹರ್ಷಾಲಿ ಮಲ್ಹೋತ್ರಾ) ಪಾತ್ರಗಳನ್ನು ಪ್ರೇಕ್ಷಕರು ಅಪ್ಪಿಕೊಂಡಿದ್ದರು.
ತೆಲುಗು ಚಿತ್ರದಿಂದ ಕದ್ದ ಕಥೆ ಇದು ಎನ್ನುವುದು ನಿಮಗೆ ಗೊತ್ತಾ? ಈ ವಿಚಾರವನ್ನು ಖುದ್ದು ಕಥೆಗಾರ ವಿಜಯೇಂದ್ರ ಪ್ರಸಾದ್ ಹಳೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಸಾಮಾನ್ಯವಾಗಿ ಯಾವುದೇ ಕಥೆ ಮಾಡಿದರೂ ಫಿಲ್ಮ್ ಮೇಕರ್ಸ್ ತಮ್ಮದೇ ಸ್ವಂತ ಕಥೆ ಎನ್ನುತ್ತಾರೆ. ಯಾವುದೇ ಸಿನಿಮಾದಿಂದ ಸ್ಫೂರ್ತಿ ಪಡೆದಿಲ್ಲ ಎಂದು ವಾದಿಸುತ್ತಾರೆ. ಆದರೆ ರಾಜಮೌಳಿ ತಂದೆ ಯಾವುದೇ ಅಂಜಿಕೆ ಎಲ್ಲದೇ ಎಲ್ಲವನ್ನು ಒಪ್ಪಿಕೊಳ್ಳುತ್ತಾರೆ. ಅದೇ ರೀತಿ 'ಭಜರಂಗಿ ಭಾಯಿಜಾನ್' ಚಿತ್ರಕ್ಕೆ ಚಿರಂಜೀವಿ ನಟನೆಯ 'ಪಸಿವಾಡಿ ಪ್ರಾಣಂ' ಸಿನಿಮಾ ಸ್ಫೂರ್ತಿ ಎಂದು ಅವರು ಹೇಳಿದ್ದರು.
'ಪಸಿವಾಡಿ ಪ್ರಾಣಂ' ಚಿತ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಗಂಡು ಮಗುವೊಂದು ನಾಯಕನ ಬಳಿಗೆ ಬಂದು ಸೇರುತ್ತದೆ. ಕೊನೆಗೆ ಆತನಿಗಿರುವ ಅಪಾಯ ದೂರ ಮಾಡಿ ನಾಯಕ ಕೊನೆಗೆ ಆ ಮಗುವನ್ನು ಸಾಕಿಕೊಳ್ಳುವ ಕಥೆ ಇದೆ. ಚಿರಂಜೀವಿ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದರು. 1987ರಲ್ಲಿ ಬಂದಿದ್ದ ಸಿನಿಮಾ ಸೂಪರ್ ಹಿಟ್ ಆಗಿತ್ತು.

ವಿಜಯೇಂದ್ರ ಪ್ರಸಾದ್ ಮಾತನಾಡಿ ಕನ್ನಡ ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್ ನನಗೆ ಆತ್ಮೀಯರು. ಅವರ ಕೆಲ ಸಿನಿಮಾಗಳಿಗೆ ನಾನು ಕೆಲಸ ಮಾಡಿದ್ದೆ. 'ಭಜರಂಗಿ ಭಾಯಿಜಾನ್' ಕಥೆಯನ್ನು ಅವರಿಗೆ ಹೇಳಿದ್ದೆ. ಬಹಳ ಇಷ್ಟಪಟ್ಟರು. ಅದನ್ನು ಜೈಪುರಕ್ಕೆ ತೆರಳಿ ಆಮೀರ್ ಖಾನ್ ಅವರಿಗೆ ಹೇಳಿದ್ದೆವು. ಕಥೆ ಕೇಳಿ ವಾರದ ಬಳಿಕ ಯಾಕೋ ಪಾತ್ರ ನನಗೆ ಕನೆಕ್ಟ್ ಆಗುತ್ತಿಲ್ಲ ಎಂದು ಆಮೀರ್ ಖಾನ್ ಹೇಳಿಬಿಟ್ಟಿದ್ದರು. ಬಳಿಕ ಕಬೀರ್ ಖಾನ್ ಅವರ ಮೂಲಕ ಸಲ್ಮಾನ್ ಖಾನ್ ಅವರಿಗೆ ಹೇಳಿ, ಅವರು ಇಷ್ಟಪಟ್ಟರು. ಸಿನಿಮಾ ಆಯಿತು ಎಂದು ನೆನಪಿಸಿಕೊಂಡಿದ್ದರು.
'ಭಜರಂಗಿ ಭಾಯಿಜಾನ್' ಚಿತ್ರವನ್ನು 'ಪಸಿವಾಡಿ ಪ್ರಾಣಂ' ಚಿತ್ರಕ್ಕೆ ಹೋಲಿಸುತ್ತಾರಲ್ಲ, ಎನ್ನುವ ಪ್ರಶ್ನೆಗೆ ಉತ್ತರಿಸಿದ್ದ ವಿಜಯೇಂದ್ರ ಪ್ರಸಾದ್, ಹೋಲಿಕೆ ಯಾಕೆ? ಅದೇ ಚಿತ್ರದಿಂದ ಆ ಕಥೆಯನ್ನು ತೆಗೆದುಕಂಡಿದ್ದು. ಅದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. 'ಪಸಿವಾಡಿ ಪ್ರಾಣಂ' ನನಗೆ ಬಹಳ ಇಷ್ಟದ ಸಿನಿಮಾ. ಒಮ್ಮೆ ನಾನು, ಕಾಂಚಿ ಹಾಗೂ ಮಹಾದೇವ್ ಆ ಸಿನಿಮಾ ನೋಡುತ್ತಿದ್ದೆವು. ಬಹಳ ಚೆನ್ನಾಗಿದೆ ಕಥೆ ಕದ್ದು ಬಿಡೋಣ ಎಂದೆ ಅದಕ್ಕೆ ಅವರಿಬ್ಬರು ಒಪ್ಪಿದರು ಎಂದು ಆ ಭಾಯಿಜಾನ್-ಮುನ್ನಿ ಕಥೆ ಹುಟ್ಟಿದ್ದನ್ನು ವಿಜಯೇಂದ್ರ ಪ್ರಸಾದ್ ಮೆಲುಕು ಹಾಕಿದ್ದರು.
ಪಾಕಿಸ್ತಾನದಿಂದ ಬರುವ ಮಗು, ನಾಯಕ ಹನುಮಂತನ ಭಕ್ತ. ಆ ಮಗುವನ್ನು ನಾಯಕ ಕಾಪಾಡುತ್ತಾನೆ, ಇದೇ ಕಥೆ ಎಂದುಕೊಂಡೆವು. ಮೊದಲಿಗೆ ಶ್ರೀಮಂತ ಮನೆತನ ಮಗುವನ್ನು ಆಸ್ತಿಗಾಗಿ ದುಷ್ಟರು ಕೊಲ್ಲಲು ಮುಂದಾಗುತ್ತಾರೆ. ಆತ ಭಾರತಕ್ಕೆ ಬರುವಂತಾಗುತ್ತದೆ. ನಾಯಕ ಪಾಕಿಸ್ತಾನಕ್ಕೆ ಆ ಮಗುವಿನ ಸಮಸ್ಯೆ ಬಗೆಹರಿಸುತ್ತಾನೆ ಹೀಗೆ ಕಥೆ ಎಂದುಕೊಂಡೆವು. ಆದರೆ ನನಗೆ ಯಾಕೋ ಸಮಾಧಾನ ಆಗಿರಲಿಲ್ಲ ಎಂದು ವಿಜಯೇಂದ್ರ ಪ್ರಸಾದ್ ಮತ್ತೊಂದು ಇಂಟ್ರೆಸ್ಟಿಂಗ್ ಕಥೆ ಹೇಳಿದ್ದರು.
ದಶಕದ ಹಿಂದೆ ಪಾಕಿಸ್ತಾನದಿಂದ ಕೆಲವರು ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗಾಗಿ ಭಾರತಕ್ಕೆ ಬರುತ್ತಿದ್ದರು. ಚೆನ್ನೈ, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಅವರಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಯುತ್ತಿತ್ತು. ಅದೇ ರೀತಿ ಪಾಕಿಸ್ತಾನದಿಂದ ಚೆನ್ನೈಗೆ ಬಂದ ಪುಟ್ಟ ಮಗುವಿಗೆ ಇಲ್ಲಿನ ವೈದ್ಯರು ಯಶಸ್ವಿಯಾಗಿ ಸರ್ಜರಿ ಮಾಡಿದ್ದರು. ಪೋಷಕರು ಹಣ ಕೊಡಲು ಹೋದಾಗ ಅದನ್ನು ನಿರಾಕರಿಸಿದ್ದರು. ಈ ಬಗ್ಗೆ ಮಗುವಿನ ಪೋಷಕರು ಮಾತನಾಡುತ್ತಾ ಭಾವುಕರಾಗಿದ್ದ ವೀಡಿಯೋವನ್ನು ವಿಜಯೇಂದ್ರ ಪ್ರಸಾದ್ ನೋಡಿದ್ದರಂತೆ. ಅದರಿಂದ ಪ್ರೇರಣೆಗೊಂಡು 'ಭಜರಂಗಿ ಭಾಯಿಜಾನ್' ಚಿತ್ರದಲ್ಲಿ ಮುನ್ನಿ ಚಿಕಿತ್ಸೆಗಾಗಿ ಭಾರತಕ್ಕೆ ಬರುವ ಕಾನ್ಸೆಪ್ಟ್ ಹುಟ್ಟಿಕೊಳ್ತು ಎಂದು ಅದೇ ಸಂದರ್ಶನದಲ್ಲಿ ವಿವರಿಸಿದ್ದರು.
ಚಿಕಿತ್ಸೆಗಾಗಿ ಭಾರತಕ್ಕೆ ಪೋಷಕರ ಜೊತೆ ಬಂದಿದ್ದ ಮುನ್ನಿ ಮರಳಿ ಪಾಕಿಸ್ತಾನಕ್ಕೆ ಹೋಗುವಾಗ ಟ್ರೈನ್ ಮಿಸ್ ಮಾಡಿಕೊಳ್ಳುತ್ತಾಳೆ. ಬಳಿಕ ಆಕೆ ನಾಯಕ ಭಜರಂಗಿ ಭಾಯಿಜಾನ್ ಕಣ್ಣಿಗೆ ಬೀಳುತ್ತಾಳೆ. ಓದಲು, ಬರೆಯಲು, ಮಾತನಾಡಲು ಬಾರದ ಮುನ್ನಿ ಎಲ್ಲಿಯವಳು? ಆಕೆಯನ್ನು ಪೋಷಕರ ಬಳಿಗೆ ಸೇರಿಸಲು ನಾಯಕ ಏನೆಲ್ಲಾ ಸಾಹಸ ಮಾಡುತ್ತಾನೆ ಎನ್ನುವುದು ಚಿತ್ರದ ಹೈಲೆಟ್ ಆಗಿತ್ತು. ಆಕ್ಷನ್ ಸನ್ನಿವೇಶಗಳು ಇಲ್ಲದೇ ಭಾವನಾತ್ಮಕವಾಗಿಯೇ ಸಿನಿಮಾ ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು.
ಬಹಳ ವರ್ಷಗಳಿಂದ 'ಭಜರಂಗಿ ಭಾಯಿಜಾನ್' ಸೀಕ್ವೆಲ್ ಮಾಡುವಂತೆ ಅಭಿಮಾನಿಗಳು ಕೇಳುತ್ತಿದ್ದಾರೆ. ವಿಜಯೇಂದ್ರ ಪ್ರಸಾದ್ ಕೂಡ ಚಿತ್ರಕ್ಕಾಗಿ ಕಥೆ ಬರೆಯುತ್ತಿರುವುದಾಗಿ ಹೇಳಿದ್ದರು. ಇದೀಗ ಕಥೆ ಫೈನಲ್ ಆಗಿದೆ. ಸಲ್ಮಾನ್ ಖಾನ್ ಸದ್ಯ ಸೋಲಿನ ಸುಳಿಗೆ ಸಿಲುಕಿದ್ದಾರೆ. ಕಳೆದ ವಾರ ತೆರೆಕಂಡ 'ಸಿಕಂದರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಈಗ ದೊಡ್ಡದೊಂದು ಗೆಲುವು ಸಲ್ಲುಗೆ ಬೇಕಿದೆ. ಇಂತಹ ಸಮಯದಲ್ಲೇ 'ಭಜರಂಗಿ ಭಾಯಿಜಾನ್' ಸೀಕ್ವೆಲ್ ಬಗ್ಗೆ ಚರ್ಚೆ ಹೆಚ್ಚಾಗಿದೆ.
ಇತ್ತೀಚೆಗೆ ವಿಜಯೇಂದ್ರ ಪ್ರಸಾದ್ ಹಾಗೂ ಸಲ್ಮಾನ್ ಖಾನ್ ಭೇಟಿ ಆಗಿದ್ದರು. 'ಭಜರಂಗಿ ಭಾಯಿಜಾನ್'-2 ಸಿನಿಮಾ ಮಾಡುವ ಬಗ್ಗೆ ಚರ್ಚಿಸಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿದೆ. ನಿರ್ದೇಶಕ ಕಬೀರ್ ಖಾನ್ ಸಹ ಸೋಲಿನ ಸುಳಿಗೆ ಸಿಲುಕಿದ್ದಾರೆ. ಹಾಗಾಗಿ ಅವರಿಗೂ ಒಂದು ಬ್ರೇಕ್ ಬೇಕಿದೆ. ಇಂತಹ ಸಮಯದಲ್ಲಿ ಸಲ್ಲು, ಕಬೀರ್ ಹಾಗೂ ವಿಜಯೇಂದ್ರ ಪ್ರಸಾದ್ ಒಟ್ಟಿಗೆ ಕೈ ಜೋಡಿಸುತ್ತಾರೆ ಎನ್ನಲಾಗ್ತಿದೆ.
ತೆಲುಗು ನಿರ್ದೇಶಕ ಹರೀಶ್ ಶಂಕರ್ ಕೂಡ ಇತ್ತೀಚೆಗೆ ಸಲ್ಮಾನ್ ಖಾನ್ ಭೇಟಿ ಮಾಡಿ ಚರ್ಚಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮಾಡಲು ಚರ್ಚಿಸಿದ್ದಾರೆ ಎನ್ನಲಾಗ್ತಿದೆ. 'ಭಜರಂಗಿ ಭಾಯಿಜಾನ್'-2 ಚಿತ್ರಕ್ಕೆ ಹರೀಶ್ ಶಂಕರ್ ಆಕ್ಷನ್ ಕಟ್ ಹೇಳಿದರೂ ಅಚ್ಚರಿ ಪಡಬೇಕಿಲ್ಲ. ಒಟ್ಟಾರೆ ಈ ಸೂಪರ್ ಹಿಟ್ ಕಥೆಯನ್ನು ಮುಂದುವರೆಸುತ್ತಾರೆ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.


Click it and Unblock the Notifications











