ಒಂದು ಸಿಹಿ ಮುತ್ತು..ಬದುಕು ಅಲ್ಲೋಲ-ಕಲ್ಲೋಲ ; ಅರಳುವ ಮೊದಲೇ ಮುದುಡಿತು 'ಟಾಕ್ಸಿಕ್' ಬೆಡಗಿ ರೆಬೆಕಾ ಪ್ರೀತಿ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಪ್ರೀತಿ ತ್ಯಾಗ ಮತ್ತು ನಿಸ್ವಾರ್ಥ ಭಾವನೆಗಳ ಮೇಲೆ ನಿಂತಿತ್ತು. ಆಗ ಪ್ರೀತಿ ಕೇವಲ ಎರಡಕ್ಷರಗಳಾಗಿರಲಿಲ್ಲ. ಬದಲಿಗೆ ಎರಡು ಆತ್ಮಗಳ ನಡುವಿನ ಪವಿತ್ರ ಒಪ್ಪಂದವಾಗಿತ್ತು. ಪರಸ್ಪರ ನಂಬಿಕೆ ಮತ್ತು ತಾಳ್ಮೆಯ ಫಲ ಎಂದು ಪ್ರೀತಿಯನ್ನು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪ್ರೀತಿಯ ಅರ್ಥವೂ ಬದಲಾಗಿದೆ.
ಇಂದು ಪ್ರೀತಿ ಕೇವಲ ಸುಂದರ ಸುಮಧುರ ಭಾವನೆಯಾಗಿ ಮಾತ್ರ ಉಳಿದಿಲ್ಲ. ಬದಲಿಗೆ ಬಹುತೇಕರ ಪಾಲಿಗೆ ಪ್ರೀತಿ ಸಾರ್ವಜನಿಕವಾಗಿ ಪ್ರದರ್ಶನಕ್ಕಿಟ್ಟ ವಸ್ತುವಾಗಿದೆ. ಇಂದಿನ 5G ಯುಗದಲ್ಲಿ ಲೈಕ್ ಮತ್ತು ಪೋಸ್ಟ್‌ಗಳ ಆಧಾರದ ಮೇಲೆ ಪ್ರೀತಿಯನ್ನು ಅಳೆಯಲಾಗುತ್ತದೆ. ಅಗಾಧ ಪ್ರೀತಿಗಿಂತ ಹೆಚ್ಚಾಗಿ ವೈಭವದ ಪ್ರದರ್ಶನಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಯುವಸಮೂಹದ ಪಾಲಿಗೆ ಪ್ರೀತಿ ಎನ್ನುವುದು ಕೇವಲ ಟೈಮ್ ಪಾಸ್ ಆಗಿ ಬದಲಾಗಿದ್ದು ಸೋಶಿಯಲ್ ಮೀಡಿಯಾಗಳ ಕಣ್ತಪ್ಪಿಸಿ ಬದುಕುವುದು ಕಷ್ಟವಾಗಿದೆ. ಈ ಮಾತು ಚಿತ್ರರಂಗಕ್ಕೂ ಕೂಡ ಅನ್ವಯವಾಗುತ್ತೆ.

ಚಿತ್ರರಂಗದಲ್ಲಿ ಪ್ರೀತಿ ಅರಳಿದಷ್ಟೇ ವೇಗವಾಗಿ ಮುದುಡಿ ಹೋಗುತ್ತೆ. ಇಲ್ಲಿಯೂ ಪ್ರೀತಿ ತನ್ನ ನೈಜತೆ ಕಳೆದುಕೊಂಡು ಮನರಂಜನೆಯ ವಸ್ತುವಾಗಿ ಸೀಮಿತಗೊಂಡಿದೆ. ಇನ್ನೂ ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸವಿರಬೇಕು. ಇಂತಹ ಸಂಬಂಧಗಳು ಮಾತ್ರ ದೀರ್ಘಕಾಲ ಬಾಳಲು ಸಾಧ್ಯ.
ಆದರೆ ಬದಲಾದ ಈ ಕಾಲದಲ್ಲಿ ನಂಬಿಕೆಗೆ ಕೊಡಲಿ ಪೆಟ್ಟು ಬಿದ್ದಿದೆ. ಇಂದಿನ ಜಾಲತಾಣಗಳ ಜಗತ್ತಿನಲ್ಲಿ ಒಂದು ಸಣ್ಣ ತಪ್ಪು ನಿರ್ಧಾರ ಅಥವಾ ಕೆಲವು ಸೆಕೆಂಡುಗಳ ವೈರಲ್ ವಿಡಿಯೋಗೆ ತಿಂಗಳುಗಳ ಸಂಬಂಧವನ್ನು ಕ್ಷಣಾರ್ಧದಲ್ಲಿ ಕುಸಿದು ಬೀಳುವಂತೆ ಮಾಡುವ ಶಕ್ತಿ ಇದೆ. ನಂಬಿಕೆಯ ಬುನಾದಿ ಸ್ವಲ್ಪ ಅಲುಗಾಡಿದರೂ ಸಂಬಂಧದಲ್ಲಿ ದೊಡ್ಡ ಬಿರುಕು ಮೂಡುತ್ತೆ. ಕೊನೆಗೆ ಸಂಬಂಧ ಮುರಿದು ಬೀಳುತ್ತೆ. ಉದಾಹರಣೆಗೆ ತಾರಾ ಸುತಾರಿಯಾ ಮತ್ತು ವೀರ್ ಪಹಾರಿಯಾ ಅವರ ಸಂಬಂಧವನ್ನೇ ತೆಗೆದುಕೊಳ್ಳಿ.

ಹೌದು, ತಾರಾ ಸುತಾರಿಯಾ.. ''ಸ್ಟೂಡೆಂಟ್ ಆಫ್ ದಿ ಇಯರ್ 2'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಚೆಲುವೆ. ''ಮರ್‌ಜಾವಾ''.. ''ತಡಪ್''.. ''ಹೀರೋಪಂತಿ 2'' ಚಿತ್ರದಲ್ಲಿ ಕೂಡ ನಾಯಕಿ ಪಾತ್ರ ನಿರ್ವಹಿಸಿದ್ದ ತಾರಾ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ಕನಸಿನ ಚಿತ್ರ ''ಟಾಕ್ಸಿಕ್''ನ ಕಥಾನಾಯಕಿಯಲ್ಲಿ ಒಬ್ಬರು.
ಚಿತ್ರರಂಗದಲ್ಲಿ ಮೂರು ಮತ್ತೊಂದು ಚಿತ್ರವನ್ನು ಮಾಡಿರುವ ಈ ತಾರಾ ಸುತಾರಿಯಾ ಮೊದಲಿಂದ ತಮ್ಮ ಚಿತ್ರಕ್ಕಿಂತ ತಮ್ಮ ವ್ಯೆಯಕ್ತಿಕ ಬದುಕಿನ ವಿಚಾರದಿಂದ ಹೆಚ್ಚು ಸದ್ದು ಮಾಡುತ್ತಾ ಬಂದವರು.
ಇಂಥಾ ತಾರಾ ಸುತಾರಿಯಾ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಮತ್ತು ನಟನಾಗಿ ನಲೆಯೂರುವ ಪ್ರಯತ್ನವನ್ನು ಮಾಡುತ್ತಿರುವ ವೀರ್ ಪಹಾರಿಯಾ ಜೊತೆ ಕಳೆದ ವರ್ಷದ ಆರಂಭದಲ್ಲಿ ಪ್ರೇಮದ ಅಮಲೇರಿಸಿಕೊಂಡಿದ್ದರು. ತಾವು ಇಬ್ಬರು ಪ್ರೀತಿಯಲ್ಲಿ ಬಿದ್ದಿರುವುದಾಗಿ ಇಟಲಿಯಿಂದ ಕೂಗಿ ಹೇಳಿದ್ದರು. ಮೊನ್ನೆಯವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು.
ಆದರೆ ಕಳೆದ ವರ್ಷದ ಅಂತ್ಯದಲ್ಲಿ ಇಂಡೋ-ಕೆನಡಿಯನ್ ಗಾಯಕ ಎ.ಪಿ.ಧಿಲ್ಲೋನ್ ಭಾರತಕ್ಕೆ ಬಂದಿದ್ದರು. ಪುಣೆಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದೇ ಕಾರ್ಯಕ್ರಮದಲ್ಲಿ ತಾರಾ ಸುತಾರಿಯಾ ತಮ್ಮ ಬಾಯ್‌ಫ್ರೆಂಡ್ ವೀರ್ ಪಹಾರಿಯಾ ಜೊತೆ ಭಾಗವಹಿಸಿದ್ದರು.

ಇದೇ ಸಮಯದಲ್ಲಿ ಸಮಸ್ತ ಸಂಗೀತ ಪ್ರೇಮಿಗಳ ಎದುರು, ಎಲ್ಲಕ್ಕಿಂತ ಹೆಚ್ಚಾಗಿ ತಾವು ಮದುವೆಯಾಗುತ್ತಿರುವ ಹುಡುಗ ವೀರ್ ಪಹಾರಿಯಾ ಎದುರು ಗಾಯಕ ಎ.ಪಿ.ಧಿಲ್ಲೋನ್ ಜೊತೆ ತುಂಬಾನೇ ಆತ್ಮೀಯವಾಗಿ ತಾರಾ ಸುತಾರಿಯಾ ವೇದಿಕೆ ಮೇಲೆ ಕಾಣಿಸಿಕೊಂಡಿದ್ದರು. ಹಿಂದೆ ಮುಂದೆ ಯೋಚನೆ ಮಾಡದೇ ಕಿಸ್ ಕೂಡ ಮಾಡಿದರು.
ತಮ್ಮ ಗೆಳತಿ ತಾರಾ ಸುತಾರಿಯಾ ಅವರ ಈ ವರ್ತನೆ ಕಂಡು ವೀರ್ ಪಹಾರಿಯಾ ಬೆಚ್ಚಿ ಬಿದ್ದಿದ್ದರು. ಒಬ್ಬರೇ ಏನೇನೋ ಗೊಣಗುತ್ತಾ ಆ ಕಡೆಯಿಂದ ಈ ಕಡೆ ಓಡಾಡಿದ್ದರು. ವೀರ್ ಪಹಾರಿಯಾ ಅವರ ಈ ಚಡಪಡಿಕೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿತ್ತು. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿ ಚರ್ಚೆಗೆ ನಾಂದಿ ಹಾಡಿತ್ತು.
ಇದಾದ ನಂತರ ಇಬ್ಬರು ತೇಪೆ ಹಚ್ಚುವ ಕೆಲಸ ಮಾಡಿದ್ದರು. ಇದೆಲ್ಲವೂ ಷಡ್ಯಂತ್ರ.. ಪಿತೂರಿ.. ನಮ್ಮ ಸಂಬಂಧವನ್ನು ಒಂದು ವೈರಲ್ ವಿಡಿಯೋ ಮುರಿಯಲು ಸಾಧ್ಯ ಇಲ್ಲ ಎಂದು ಹೇಳಿದ್ದರು. ನಮ್ಮದು ಜನುಮ ಜನುಮದ ಅನುಬಂಧ ಎಂಬಂತೆ ವಾದವನ್ನು ಕೂಡ ಮಾಡಿದ್ದರು.
ಆದರೆ ಈಗ ಈ ಪ್ರಸಂಗ ನಡೆದ ಹತ್ತು ಹನ್ನೆರಡು ದಿನದ ಈ ನಂತರ ಇವರ ಸಂಬಂಧ ಮುರಿದು ಬಿದ್ದಿದೆ. ''ಫಿಲ್ಮ್ ಫೇರ್'' ಈ ಕುರಿತು ವರದಿಯನ್ನು ಮಾಡಿದ್ದು ವೈರಲ್ ವಿಡಿಯೋ ಇಬ್ಬರ ಮನದ ಮೇಲೆ ಗಾಢವಾದ ಪರಿಣಾಮ ಬೀರಿದೆ ಈ ಹಿನ್ನೆಲೆ ಇಬ್ಬರು ದೂರವಾಗುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಈ ವರದಿಗೆ ಮತ್ತು ತಮ್ಮ ಸಂಬಂಧದ ಕುರಿತು ಕೇಳಿ ಬರುತ್ತಿರುವ ಸುದ್ದಿಗಳಿಗೆ ತಾರಾ ಸುತಾರಿಯಾ ಮತ್ತು ವೀರ್ ಪಹಾರಿಯಾ ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವೀರ್ ಪಹಾರಿಯಾ ಜೊತೆ ಇರುವ ಫೋಟೊಗಳನ್ನು ಕೂಡ ಟಾಕ್ಸಿಕ್‌ನ ಬೆಡಗಿ ರೆಬೆಕಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿಲ್ಲ. ಮುಂಬರುವ ದಿನಗಳಲ್ಲಿ ಇಬ್ಬರು ಸ್ಪಷ್ಟೀಕರಣ ಕೊಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











