ಆರು ವರ್ಷದ ಮಗು ಇರುವ ತಾಯಿ ಜೊತೆ 3ನೇ ಮದ್ವೆಗೆ ಸಿದ್ಧವಾದ ಅಮೀರ್ ಖಾನ್, ಯಾರು ಈ ಗೌರಿ ?
ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವತಂಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ನಿಜವಾಗಿ ಪ್ರೀತಿಯ ಮೂಲಕ ಇಳಿದು ನೋಡಿದಾಗ, ಅದರ ಅರ್ಥ ಹುಡುಕುತ್ತಾ ಹೋದಾಗ ಪ್ರೀತಿ ಎನ್ನುವುದು ಮನಸಿಂದ ಬರಬೇಕೆ ಹೊರತು ಆ ಪ್ರೀತಿ ಒತ್ತಾಯಪೂರ್ವಕವಾಗಿರಬಾರದು ಎಂಬ ವಿಚಾರದ ಅರಿವು ಆಗುತ್ತೆ. ಹೀಗೆ ಪ್ರೀತಿಯನ್ನು ಅರಿತು ಅರ್ಥ ಮಾಡಿಕೊಂಡವರಲ್ಲಿ ಅಮೀರ್ ಖಾನ್ ಕೂಡ ಒಬ್ಬರು.
ಹೌದು, ತಮ್ಮ ಚಿತ್ರ ಮತ್ತು ಪಾತ್ರಗಳ ಮೂಲಕವೇ ಹೆಸರುವಾಸಿಯಾದವರು ಅಮೀರ್ ಖಾನ್. ತಮ್ಮ ಪ್ರತಿ ಚಿತ್ರಕ್ಕೂ ಅದಕ್ಕೇ ಬೇಕಾದ ತಯಾರಿಯನ್ನೆಲ್ಲ ಮಾಡಿಕೊಂಡೇ ಅಖಾಡಕ್ಕೆ ಇಳಿಯುವ ಅಮೀರ್ ಖಾನ್ ಕೇವಲ ಮಿಸ್ಟರ್ ಪರ್ಫೆಕ್ಷನಿಸ್ಟ್ ಮಾತ್ರ ಅಲ್ಲ ಬಾಲಿವುಡ್‌ನ ಗೇಮ್ ಚೇಂಜರ್ ಕೂಡ ಹೌದು. ಇಂಥಾ ಅಮೀರ್ ಖಾನ್ ತಮ್ಮ 59ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಓಡಾಡುತ್ತಿದೆ.

ಅಮೀರ್ ಖಾನ್ ಹೃದಯ ಕದ್ದ ಚಂದ್ರಚಕೋರಿ ಬೆಂಗಳೂರಿನವರು ಎನ್ನುವುದು ಕೂಡ ಜಗಜ್ಜಾಹೀರಾಗಿದೆ. ಆ ಚೆಲುವೆಯ ಹೆಸರು ಗೌರಿ ಎಂದು ಕೂಡ ಎಲ್ಲೆಡೆ ಗುಲ್ಲಾಗಿದೆ. ಹೀಗಿರುವಾಗ ಇದೀಗ ಖುದ್ದು ಅಮೀರ್ ಖಾನ್ ತಮ್ಮ ಮೂರನೇ ಪ್ರೇಯಸಿಯನ್ನು ಪರಿಚಯಿಸಿದ್ದಾರೆ. ತಮ್ಮ 60ನೇ ಹುಟ್ಟುಹಬ್ಬದ ಪ್ರಯುಕ್ತ ವಿವರಗಳನ್ನು ಹಂಚಿಕೊಂಡಿದ್ದಾರೆ.
ಹೌದು, ಅಸಲಿಗೆ ಇಂದು ಅಮೀರ್ ಖಾನ್ 60ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆ ಮೊನ್ನೆ ತಮ್ಮ ಆಪ್ತರಿಗೆ ಪಾರ್ಟಿಯೊಂದನ್ನು ಹಮ್ಮಿಕೊಂಡಿದ್ದ ಅಮೀರ್ ಖಾನ್ ಇದೇ ಸಮಯದಲ್ಲಿ ಪತ್ರಕರ್ತರನ್ನು ಕೂಡ ಭೇಟಿಯಾಗಿದ್ದಾರೆ. ಪಾರ್ಟಿ ಮಾಡುವ ಮುನ್ನ ಕೆಲ ಹೊತ್ತು ಪತ್ರಕರ್ತರ ಜೊತೆ ಕಾಲ ಕಳೆದಿದ್ದಾರೆ. ಕೆಲ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ತಮ್ಮ ಮೂರನೇ ಪ್ರಿಯತಮೆ ಗೌರಿಯ ಕುರಿತು ಕೂಡ ಅಮೀರ್ ಖಾನ್ ಮಾತನಾಡಿದ್ದಾರೆ. ಈ ಕುರಿತು ಮಾತನಾಡಿರುವ ಅಮೀರ್ ಖಾನ್ ನನ್ನ ಮತ್ತು ಗೌರಿಯ ಪರಿಚಯ ಇಂದು ನಿನ್ನೆಯದ್ದಲ್ಲ. ಬದಲಿಗೆ ನಮ್ಮ ಇಬ್ಬರದ್ದು 25 ವರ್ಷದ ಸ್ನೇಹ ಎಂದು ಹೇಳಿದ್ದಾರೆ. 25 ವರ್ಷದ ಹಿಂದೆ ನಮ್ಮ ಇಬ್ಬರ ಪರಿಚಯವಾಗಿತ್ತು ಆದರೆ ಆ ನಂತರ ಸಂಪರ್ಕ ಕಡಿತಗೊಂಡಿತ್ತು ಎಂದು ಹೇಳಿರುವ ಅಮೀರ್ ಖಾನ್ ಎರಡು ವರ್ಷಗಳ ಹಿಂದೆ ಮತ್ತೆ ನಮ್ಮ ಭೇಟಿಯಾಯ್ತು ಆ ನಂತರ ಮತ್ತೆ ಸ್ನೇಹ ಚಿಗುರಿತು ಎಂದು ಹೇಳಿದ್ದಾರೆ.
ಮುಂದುವರೆದು ಗೌರಿ ಅವರಿಗೆ ಆರು ವರ್ಷದ ಒಬ್ಬ ಮಗ ಇದ್ದಾನೆ ಎಂದಿರುವ ಅಮೀರ್ ಖಾನ್ ಅವರಿಗೆ ಈ ಮಾಧ್ಯಮದರ ಕ್ಯಾಮರಾ, ಸಿನಿಮಾರಂಗ ಎಲ್ಲವೂ ಹೊಸದು ಹೀಗಾಗಿ ನಿಮ್ಮೆಲ್ಲರನ್ನು ಎದುರಿಸಲು ನಾನು ಅವರಿಗೆ ತರಬೇತಿಯನ್ನು ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಕಳೆದ 18 ತಿಂಗಳಿಂದ ನಾವು ಜೊತೆಯಲ್ಲಿಯೇ ವಾಸ ಮಾಡುತ್ತಿದ್ದೇವೆ ಆದರೆ ನಿಮಗೆ ಇಲ್ಲಿಯವರೆಗೆ ಅದರ ಸುಳಿವು ಸಿಗದಂತೆ ನಾನು ನೋಡಿಕೊಂಡಿದ್ದೇನೆ ಹೆಂಗೆ ನಾವು ಎಂದು ತಮಾಷೆಯನ್ನು ಕೂಡ ಮಾಡಿದ್ದಾರೆ.
ಇನ್ನು ಬೆಂಗಳೂರಿನ ಗೌರಿ ನನ್ನ ಲಗಾನ್ ಮತ್ತು ದಂಗಲ್ ಎರಡೇ ಚಿತ್ರಗಳನ್ನು ನೋಡಿದ್ಧಾರೆ ಎಂದು ಹೇಳಿರುವ ಅಮೀರ್ ಖಾನ್ ಇದೇ ವೇಳೆ ತಮ್ಮ ಲಗಾನ್ ಚಿತ್ರದ ಡೈಲಾಗ್ ನೆನಪಿಸಿಕೊಂಡಿದ್ದಾರೆ. ಭುವನ್ ಗೆ ಅವನ ಗೌರಿ ಸಿಕ್ಕಿದ್ದಾಳೆ ಎಂದು ಹೇಳಿದ್ದಾರೆ. ಇನ್ನುಳಿದಂತೆ ಮಾಧ್ಯಮದವರ ಜೊತೆ ನಡೆದ ಈ ಪ್ರಶ್ನೋತ್ತರ ಕಾರ್ಯಕ್ರಮದ ನಂತರ ಅಮೀರ್ ಖಾನ್ ಹಮ್ಮಿಕೊಂಡಿದ್ದ ಬರ್ತ್‌ಡೇ ಪಾರ್ಟಿಯಲ್ಲಿ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಕೂಡ ಭಾಗವಹಿಸಿದ್ದರು. ಇದೇ ಸಮಯದಲ್ಲಿ ಅಮೀರ್ ಖಾನ್ ತಮ್ಮ ಹೊಸ ಪ್ರೇಯಸಿ ಗೌರಿ ಅವರನ್ನು ಸಲ್ಮಾನ್ ಮತ್ತು ಶಾರುಖ್ ಖಾನ್ ಅವರಿಗೆ ಪರಿಚಯಿಸಿದ್ದಾರೆ. ಎಲ್ಲರು ಸೇರಿ ಮೋಜು ಮಸ್ತಿ ಮಾಡಿದ್ದಾರೆ.
ಅಂದ್ಹಾಗೇ ಅಮೀರ್ ಖಾನ್‌ಗೆ ಈಗ 60ರ ಹರೆಯ. ಈಗಾಗಲೇ ರೀನಾ ದತ್ತ ಜೊತೆ ಹದಿನಾರು ವರ್ಷ ಮತ್ತು ಕಿರಣ್ ರಾವ್ ಅವರ ಜೊತೆ ಕೂಡ ಹದಿನಾರು ವರ್ಷ ಸಂಸಾರದ ಸುಖ ದುಃಖಗಳನ್ನು ಅಮೀರ್ ಖಾನ್ ಅನುಭವಿಸಿದ್ದಾರೆ. ಇನ್ನು ಮೊದಲ ಪತ್ನಿ ರೀನಾ ಅವರಿಂದ ಜುನೈದ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಎದೆಯೆತ್ತರಕ್ಕೆ ಬೆಳೆದಿದ್ದಾರೆ. ಆ ಪೈಕಿ ಜುನೈದ್ ತಂದೆಯ ಹೆಜ್ಜೆಯ ಜಾಡನ್ನು ಹಿಡಿದು ಚಿತ್ರರಂಗಕ್ಕೆ ಬಂದಿದ್ದಾರೆ. ಇನ್ನು ಇರಾ ಮದುವೆಯಾಗಿ ಮನೆ ಗಂಡ ಎಂದು ನೆಮ್ಮದಿಯಿಂದ ಇದ್ದಾರೆ. ಇನ್ನು ಕಿರಣ್ ರಾವ್ ಅವರಿಂದ ಆಜಾದ್ ರಾವ್ ಖಾನ್ ಎಂಬ ಮಗ ಅಮೀರ್ ಖಾನ್‌ಗೆ ಇದ್ದಾನೆ.
ಇನ್ನು ಈ ಹಿಂದೆ ಅಮೀರ್ ಖಾನ್ ಹೆಸರು ದಂಗಲ್ ಚಿತ್ರದ ನಾಯಕಿ ಫಾತಿಮಾ ಸನಾ ಶೇಖ್ ಜೊತೆ ಥಳುಕು ಹಾಕಿಕೊಂಡಿತ್ತು. ಕಿರಣ್ ರಾವ್ ಅವರಿಂದ ಅಮೀರ್ ದೂರವಾಗಲು ಇದೇ ಕಾರಣವೆಂದು ಕೂಡ ಹೇಳಲಾಗಿತ್ತು. ಹೀಗಾಗಿಯೇ ಫಾತಿಮಾ ಸನಾ ಶೇಖ್ ಅವರ ಜೊತೆ ಅಮೀರ್ ಮದುವೆಯಾಗಬಹುದು ಎಂದು ಅನೇಕರು ಅಂದುಕೊಂಡಿದ್ದರು. ಆದರೆ, ಅಮೀರ್ ಖಾನ್ ಮದುವೆಯಾಗಲು ಸಿದ್ಧವಾಗಿರುವುದು ಫಾತಿಮಾ ಸನಾ ಶೇಖ್ ಅವರ ಜೊತೆ ಅಲ್ಲ ಬದಲಿಗೆ ಗೌರಿ ಅವರ ಜೊತೆ ಎನ್ನುವ ವಿಚಾರ ಈಹ ಜಗಜ್ಜಾಹೀರಾಗಿದೆ.
ಇನ್ನುಳಿದಂತೆ ಕೆಲ ದಿನಗಳ ಹಿಂದೆ ಫಿಲ್ಮ್‌ಫೇರ್ ಮ್ಯಾಗಜೀನ್ ಈ ವಿಚಾರವನ್ನು ಬಹಿರಂಗ ಪಡಿಸಿತ್ತು.ತಮ್ಮ ಹೊಸ ಪ್ರಿಯತಮೆಯನ್ನು ತನ್ನ ಇಬ್ಬರು ಮಾಜಿ ಪತ್ನಿಯರಿಗೆ ಮತ್ತು ತಮ್ಮ ಮೂವರು ಮಕ್ಕಳಿಗೆ ಪರಿಚಯಿಸಿದ್ದಾರೆ, ಎಲ್ಲರೂ ಜೊತೆಯಲ್ಲಿಯೇ ಕುಳಿತು ಭರ್ಜರಿ ಭೋಜನವನ್ನು ಮಾಡಿದ್ದಾರೆ ಎಂದು ಫಿಲ್ಮ್ ಫೇರ್ ವರದಿಯನ್ನು ಪ್ರಕಟಿಸಿತ್ತು. ಆಗ ಅನೇಕರು ಈ ವರದಿ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಅಮೀರ್ ಖಾನ್‌ಗೆ ವಯಸ್ಸಾಗಿದೆ ಈ ವಯಸ್ಸಿನಲ್ಲಿ ಅದ್ಹೇಗೆ ಮತ್ತೊಮ್ಮೆ ಪ್ರೇಮಾಂಕುರವಾಗುತ್ತೆ ಎಂದು ರಾಗ ಎಳೆದಿದ್ದರು. ಈಗ ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಎಲ್ಲರ ಅನುಮಾನ ದೂರವಾಗಿದೆ.
ಸದ್ಯ ಅಮೀರ್ ಖಾನ್ ತಮ್ಮ ಹೊಸ ಪ್ರೇಯಸಿಯನ್ನು ಎಲ್ಲರಿಗೆ ಪರಿಚಯ ಮಾಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಮದುವೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರವನ್ನು ಕೂಡ ನೀಡಿರುವ ಅಮೀರ್ ಖಾನ್ ಈ ವಯಸ್ಸಿನಲ್ಲಿ ಮೂರನೇ ಮದುವೆಯಾಗುವುದು ಅಷ್ಟೊಂದು ಚೆನ್ನಾಗಿರಲ್ಲ ಎಂದು ನನಗೆ ಅನ್ಸುತ್ತೆ ಎಂಧು ಹೇಳಿದ್ದಾರೆ. 60ನೇ ವಯಸ್ಸಿನಲ್ಲಿ ಮದ್ವೆಯಾದರೆ ಜನ ನಗುವುದಿಲ್ವಾ ಎಂದು ತಮಾಷೆಯನ್ನು ಕೂಡ ಮಾಡಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ನೋಡೋಣ ಸಮಯ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಮದುವೆಯ ಕುರಿತು ಇನ್ನೊಮ್ಮೆ ಆಲೋಚನೆಯನ್ನು ಮಾಡುತ್ತೇನೆ ಎಂದು ಕೂಡ ಅಮೀರ್ ಖಾನ್ ಹೇಳಿದ್ದಾರೆ.
ಒಟ್ನಲ್ಲಿ ಸದ್ಯ ಅಮೀರ್ ಖಾನ್ ತಮ್ಮ ಇಬ್ಬರು ಪತ್ನಿಯರಾದ ಕಿರಣ್ ರಾವ್ ಮತ್ತು ರೀನಾ ದತ್ತಾಗೆ ಡಿವೋರ್ಸ್ ನೀಡಿದ ನಂತರ ಮತ್ತೊಮ್ಮೆ ಗೌರಿ ಸ್ಪ್ರಾಟ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಗೌರಿ ಮತ್ತು ಅಮೀರ್ ಖಾನ್ ಮುಂದಿನ ದಿನಗಳಲ್ಲಿ ಮದುವೆಯಾಗುತ್ತಾರಾ ಅಥವಾ ಹೀಗೆ ಲಿವ್ ಇನ್ ಸಂಬಂಧ ಮುಂದುವರೆಸುತ್ತಾರಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ. ಅಮೀರ್ ಖಾನ್ ಅವರ ವ್ಯೆಯಕ್ತಿಕ ಬದುಕಿನ ಮೇಲೀಗ ಅನೇಕರ ಕಣ್ಣಿದೆ.


Click it and Unblock the Notifications











