Sana Javed: ಸಾನಿಯಾ ಮಿರ್ಜಾ ಪತಿ ಶೋಯೆಬ್ ಮಲಿಕ್ ಮದುವೆಯಾದ ಪಾಕಿಸ್ತಾನಿ ನಟಿ ಸನಾ ಜಾವೇದ್ ಯಾರು?
ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಅವರ ದಾಂಪತ್ಯದಲ್ಲಿ ಸಮಸ್ಯೆಗಳಿವೆ ಎಂಬ ವದಂತಿಗಳು ಹರಿದಾಡುತ್ತಿದ್ದ ಬೆನ್ನಲ್ಲೇ ಪಾಕಿಸ್ತಾನಿ ಕ್ರಿಕೆಟಿಗ, ಪಾಕಿಸ್ತಾನಿ ನಟಿಯನ್ನು ಮದುವೆಯಾಗಿದ್ದಾರೆ. ಇನ್ನು, ಸಮಸ್ಯೆ ಇದೆಯೇ ಇಲ್ಲವೇ ಎಂದು ತಿಳಿಯುವ ಮುನ್ನವೇ ಮದುವೆ ನಡೆದಿದ್ದು, ಹಲವು ಮಂದಿಗೆ ಇದು ಶಾಕಿಂಗ್ ನ್ಯೂಸ್ ಆಗಿದೆ. ಇದರ ಜೊತೆಗೆ ಶೋಯೆಬ್ ಮಲಿಕ್ ಮದುವೆಯಾದ ಪಾಕ್ ನಟಿ ಸನಾ ಜಾವೇದ್ ಯಾರು ಎಂಬ ಪ್ರಶ್ನೆಗಳು ಎಲ್ಲರ ತಲೆಗೆ ಬಂದಿವೆ.
ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ. ಆದರೆ, ಇತ್ತೀಚೆಗೆ ಸಾನಿಯ ಆಮಿರ್ಜಾ ಅವರು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಹೊರಹಾಕಿತ್ತು. ಅದಕ್ಕೆ ತಕ್ಕಂತೆ ಜನವರಿ 20 ರಂದು ಶೋಯೆಬ್ ಮಲಿಕ್ ಮತ್ತೊಂದು ಮದುವೆಯಾಗಿರುವ ಫೋಟೋಗಳು ಹೊರಬಂದಿವೆ.

ಶೋಯಬ್ ಮಲಿಕ್ 3ನೇ ಪತ್ನಿ ಸನಾ ಜಾವೇದ್ ಯಾರು?
ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರೊಂದಿಗೆ ಮೂರನೇ ಮದುವೆಯಾಗಿದ್ದಾರೆ. ಜನವರಿ 20 ರಂದು ಈ ಜೋಡಿ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಲವರು ಈ ಫೋಟೋಗಳಿಗೆ ಆಶ್ಚರ್ಯ, ಆತಂಕ, ಪ್ರಶ್ನೆ, ಶುಭಾಶಯ ಎಲ್ಲವನ್ನೂ ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನು, ಸನಾ ಜಾವೇದ್ ಉರ್ದು ದೂರದರ್ಶನದಲ್ಲಿ ಕಾಣಿಸಿಕೊಳ್ಳುವ ಪಾಕಿಸ್ತಾನಿ ನಟಿ. ಅವರು 2012 ರಲ್ಲಿ 'ಶೆಹರ್-ಎ-ಝಾತ್' ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ ಹಲವಾರು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ರೊಮ್ಯಾಂಟಿಕ್ ಡ್ರಾಮಾ 'ಖಾನಿ'ಯಲ್ಲಿನ ಅವರ ಪಾತ್ರ ಹೆಚ್ಚು ಖ್ಯಾತಿ ಗಳಿಸಿತ್ತು. ಇದರಿಂದ ಹೆಚ್ಚು ಜನ ಅವರನ್ನು ಗುರುತಿಸುವಂತಾಯಿತು.
ಗಾಯಕ ಉಮೈರ್ ಜಸ್ವಾಲ್ ಅವರನ್ನು ವರಿಸಿದ್ದ ಸನಾ ಜಾವೇದ್
ಅಕ್ಟೋಬರ್ 2020 ರಲ್ಲಿ, ಅವರು ಕರಾಚಿಯ ತಮ್ಮ ನಿವಾಸದಲ್ಲಿ ನಡೆದ ಖಾಸಗಿ ವಿವಾಹ (ನಿಕಾಹ್) ಸಮಾರಂಭದಲ್ಲಿ ಗಾಯಕ ಉಮೈರ್ ಜಸ್ವಾಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಅವರ ವಿವಾಹವು ವ್ಯಾಪಕ ಚರ್ಚೆಯ ವಿಷಯವಾಗಿತ್ತು. ಶೀಘ್ರದಲ್ಲೇ ಪಾಕಿಸ್ತಾನದ ಅತ್ಯಂತ ಪ್ರಸಿದ್ಧ ಜೋಡಿಗಳಲ್ಲಿ ಒಂದಾದರು. ದುರದೃಷ್ಟವಶಾತ್, ಅವರ ವೈವಾಹಿಕ ಜೀವನ ಸ್ವಲ್ಪ ದಿನದಲ್ಲೇ ಕುಸಿಯಿತು.

ಮದುವೆಯಾದ ಕೆಲವು ದಿನಗಳಲ್ಲೇ ಅವರು ಪ್ರತ್ಯೇಕವಾಗಿ ಉಳಿಯಲು ಪ್ರಾರಂಭಿಸಿದರು. ಅವರ ವೈಯಕ್ತಿಕ ಇನ್‌ಸ್ಟಾಗ್ರಾಮ್ ಖಾತೆಗಳಿಂದ ಇಬ್ಬರ ಪೋಟೋ, ವಿಡಿಯೋ ಸೇರಿ ಎಲ್ಲಾ ಕುರುಹುಗಳನ್ನು ತೆಗೆದುಹಾಕಿದರು. ಯಾವುದೇ ಅಧಿಕೃತ ದೃಢೀಕರಣ ಇಲ್ಲದಿದ್ದರೂ, ದಂಪತಿ ವಿಚ್ಛೇದನವನ್ನು ಪಡೆದಿದ್ದಾರೆ ಎಂಬ ಊಹಾಪೋಹಗಳು ಇದ್ದವು.
ಶೋಯಬ್ ಮಲಿಕ್ ಅವರನ್ನು ವರಿಸಿದ ಸನಾ ಜಾವೇದ್
ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತು ನಟಿ ಸನಾ ಜಾವೇದ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಕಳೆದ ವರ್ಷ ಪಾಕಿಸ್ತಾನಿ ನಟಿಯ ಜನ್ಮದಿನದಂದು ಶೋಯಬ್ ಶುಭಾಶಯ ಕೋರಿದಾಗ ಈ ವದಂತಿ ಕಾಡ್ಗಿಚ್ಚಿನಂತೆ ಹರಡಿತ್ತು. "ಹುಟ್ಟುಹಬ್ಬದ ಶುಭಾಶಯಗಳು ಬಡಿ" ಎಂದು ಶೋಯೆಬ್ ಮಲಿಕ್ ಅವರು ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಒಟ್ಟಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್
ಈ ಹಿಂದೆ, ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಏಪ್ರಿಲ್ 12, 2010 ರಂದು ರಲ್ಲಿ ಹೈದರಾಬಾದ್‌ನಲ್ಲಿ ಸಾಂಪ್ರದಾಯಿಕ ಮುಸ್ಲಿಂ ಸಮಾರಂಭದಲ್ಲಿ ವಿವಾಹವಾಗಿದ್ದರು. ನಂತರ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ವಲೀಮಾ ಸಮಾರಂಭದಲ್ಲಿ ವಿವಾಹವಾದರು. ದಂಪತಿ 2018 ರಲ್ಲಿ ಮೊದಲ ಮಗು ಮಿರ್ಜಾ ಮಲಿಕ್‌ಗೆ ಪೋಷಕರಾಗಿದ್ದಾರೆ.


Click it and Unblock the Notifications











