ಇಷ್ಟದ ಪಾತ್ರ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ 'ಸಂಜು' ಚಿತ್ರ ಕೈಬಿಟ್ಟ ಅಮೀರ್ ಖಾನ್
ರಾಜ್ ಕುಮಾರ್ ಹಿರಾನಿ ಮತ್ತು ರಣ್ಬೀರ್ ಕಪೂರ್ ಕಾಂಬಿನೇಷನ್‌ನಲ್ಲಿ ಸಂಜಯ್ ದತ್ ಬಯೋಪಿಕ್ ಸಿನಿಮಾ ತೆರೆಗೆ ಬಂದಿತ್ತು. 'ಸಂಜು' ಹೆಸರಿನಲ್ಲಿ ತಯಾರಾಗಿದ್ದ ಈ ಸಿನಿಮಾ ಬಿಟೌನ್‌ನಲ್ಲಿ ಯಶಸ್ವಿ ಚಿತ್ರವೆನಿಸಿಕೊಂಡಿದೆ. ದತ್ ಪಾತ್ರದಲ್ಲಿ ನಟಿಸಿದ್ದ ರಣ್ಬೀರ್ ಕಪೂರ್ ಬಹಳ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಪಡೆದುಕೊಂಡರು. ಥೇಟ್ ಸಂಜಯ್ ದತ್‌ರಂತೆ ಮೇಕ್ ಓವರ್ ಮಾಡಿದ್ದ ರಣ್ಬೀರ್ ಪ್ರೇಕ್ಷಕರನ್ನು ವಾಹ್ ಎನಿಸಿದ್ದರು.
ಬಾಲಿವುಡ್‌ನ ವಿವಾದಾತ್ಮಕ ನಟ ಸಂಜಯ್ ದತ್ ಜೀವನದಲ್ಲಿ ನಡೆದ ಘಟನೆಗಳ ಸುತ್ತ ಚಿತ್ರಕಥೆ ಮಾಡಲಾಗಿತ್ತು. ಸಿನಿಮಾ ಜರ್ನಿ, ವಿವಾದ, ಮಹಿಳೆ, ಜೈಲು ವಾಸ ಹೀಗೆ ಹಲವು ವಿಚಾರಗಳನ್ನು ಒಳಗೊಂಡಂತೆ ತೆರೆಗೆ ತರಲಾಗಿತ್ತು. 'ಸಂಜು' ಸಿನಿಮಾ ರಿಲೀಸ್ ಆಗಿ ಇಂದಿಗೆ (ಜೂನ್ 29, 2018) ಮೂರು ವರ್ಷ ಆಗಿದೆ. ಆಸಕ್ತಿಕರ ವಿಷಯ ಏನಪ್ಪಾ ಅಂದ್ರೆ ಅಮೀರ್ ಖಾನ್ ಈ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಆಸೆ ಪಟ್ಟ ಪಾತ್ರದ ಬದಲು ಬೇರೆ ಪಾತ್ರ ಮಾಡುವಂತೆ ಕೇಳಿದ ಪರಿಣಾಮ ಮಾಡಲ್ಲ ಎಂದಿದ್ದರು. ಮುಂದೆ ಓದಿ....

ಸಂಜು ಪಾತ್ರದಲ್ಲಿ ಅಮೀರ್ ಖಾನ್
'ಸಂಜು' ಸಿನಿಮಾದಲ್ಲಿ ಅಮೀರ್ ಖಾನ್ ನಟಿಸುವ ಆಸೆ ಹೊಂದಿದ್ದರು. 2018ರಲ್ಲಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಮೀರ್ ಖಾನ್ ''ನನಗೆ ಸಂಜಯ್ ದತ್ ಪಾತ್ರ ಮಾಡಲು ಇಷ್ಟ, ಅದು ಬಿಟ್ಟು ಬೇರೆ ಯಾವ ಪಾತ್ರವೂ ನಾನು ಮಾಡಲ್ಲ'' ಎಂದು ಹೇಳಿದ್ದರು.

ಅಮೀರ್‌ಗೆ ಆಫರ್ ಮಾಡಿದ ಪಾತ್ರ ಯಾವುದು?
ನಿರ್ದೇಶಕ ರಾಜ್ ಕುಮಾರ್ ಹಿರಾನಿ ನೆಚ್ಚಿನ ನಟ ಅಮೀರ್ ಖಾನ್. 3 ಈಡಿಯೆಟ್ಸ್, ಪಿಕೆ ಅಂತಹ ಸಿನಿಮಾಗಳನ್ನು ಒಟ್ಟಿಗೆ ಮಾಡಿದ್ದರು. ಹಾಗಾಗಿ, ಸಂಜು ಚಿತ್ರದಲ್ಲೂ ಅಮೀರ್ ಖಾನ್‌ರನ್ನು ಕರೆತರುವ ಪ್ರಯತ್ನ ನಡೆಯಿತು. ಸಂಜಯ್ ದತ್ ತಂದೆ ಸುನೀಲ್ ದತ್ ಪಾತ್ರಕ್ಕಾಗಿ ಅಮೀರ್ ಖಾನ್‌ಗೆ ಹಿರಾನಿ ಆಫರ್ ಮಾಡಿದ್ದರು. ಆದರೆ, ತಂದೆ ಪಾತ್ರಕ್ಕೆ ಅಮೀರ್ ಒಪ್ಪಲಿಲ್ಲ.

ಅಮೀರ್ ಜಾಗಕ್ಕೆ ಪರೇಶ್
ಅಮೀರ್ ಖಾನ್‌ಗೆ ಸಂಜಯ್ ದತ್ ಪಾತ್ರ ಮಾಡಲು ಇಷ್ಟ ಇತ್ತು. ಆದರೆ ಸುನೀಲ್ ದತ್ ಪಾತ್ರ ನಿರ್ವಹಿಸುವಂತೆ ಹಿರಾನಿ ಆಫರ್ ಮಾಡಿದರು. ಹಾಗಾಗಿ, ಇಷ್ಟವಿಲ್ಲದ ಪಾತ್ರ ನಾನು ಮಾಡುವುದಿಲ್ಲ ಎಂದು ಅಮೀರ್ ಹಿಂದೆ ಸರಿದರು. ಆನಂತರ ಸುನೀಲ್ ದತ್ ಪಾತ್ರಕ್ಕೆ ಪರೇಶ್ ರಾವಲ್ ಬಂದರು.

ದತ್ ಸಾಬ್ ಪಾತ್ರ ಅಸಾಧಾರಣ
''ದತ್ ಸಾಬ್ ಪಾತ್ರ ಒಂದು ಅಸಾಧಾರಣ ಪಾತ್ರವಾಗಿದೆ. ತಂದೆಯೊಂದಿಗೆ ಸಂಜಯ್ ದತ್ ಸಂಬಂಧ ಬಹಳ ಚೆನ್ನಾಗಿತ್ತು. ಆದರೆ, ಸಂಜು ಪಾತ್ರ ನಂಬಲಸಾಧ್ಯವಾಗಿದೆ. ನಾನು ಹಿರಾನಿಗೆ ಹೇಳಿದೆ, ಈ ಸ್ಕ್ರಿಪ್ಟ್‌ನಲ್ಲಿ ಸಂಜು ಪಾತ್ರ ನನ್ನ ಹೃದಯ ಮುಟ್ಟಿದೆ. ಆ ಪಾತ್ರ ಬಿಟ್ಟು ಬೇರೆ ಯಾವುದೇ ಪಾತ್ರ ನಾನು ಮಾಡಲ್ಲ. ಈಗ ರಣ್ಬೀರ್ ಆ ಪಾತ್ರದಲ್ಲಿರುವುದರಿಂದ ಬೇರೆ ಯಾವುದೇ ಪಾತ್ರಕ್ಕೆ ನನ್ನನ್ನು ಯೋಚಿಸಬೇಡಿ'' ಎಂದು ಅಮೀರ್ ಖಾನ್ ಹೇಳಿದ್ದರಂತೆ.
Recommended Video

ಸ್ನೇಹಪೂರ್ವಕವಾಗಿ ಸ್ಕ್ರಿಪ್ಟ್ ಹೇಳಿದ್ದೆ
''ಅಮೀರ್ ಖಾನ್ ನನಗೆ ಒಳ್ಳೆಯ ಸ್ನೇಹಿತ. ಸಾಮಾನ್ಯವಾಗಿ ಯಾವುದೇ ಕಥೆ ಮಾಡಿದ್ರು, ಅಮೀರ್ ಬಳಿ ಹೇಳಿ ಆತನಿಂದ ಪ್ರತಿಕ್ರಿಯೆ ಪಡೆದುಕೊಳ್ಳುತ್ತೇನೆ. ಹಾಗೆ, ಸಂಜು ಸ್ಕ್ರಿಪ್ಟ್ ಸಹ ಹೇಳಿದೆ. ಆ ಸಮಯದಲ್ಲಿ ಅಮೀರ್ ಖಾನ್‌ರಿಂದ ಯಾವುದೇ ಪಾತ್ರ ಮಾಡಿಸುವ ಉದ್ದೇಶ ನನಗೆ ಇರಲಿಲ್ಲ. ಕಥೆ ಕೇಳಿದ್ಮೇಲೆ ತುಂಬಾ ಇಷ್ಟಪಟ್ಟರು. ಆಗ ನಾನು ಸುನೀಲ್ ದತ್ ಪಾತ್ರ ಮಾಡ್ತೀರಾ ಅಂದೆ. ದಂಗಲ್ ಚಿತ್ರದಲ್ಲಿ ಅದಾಗಲೇ ಹಿರಿಯ ವ್ಯಕ್ತಿಯ ಪಾತ್ರ ಮಾಡಿದ್ದರಿಂದ ದತ್ ಸಾಬ್ ಆಗಲು ಒಪ್ಪಲಿಲ್ಲ'' ಎಂದು ರಾಜ್ ಕುಮಾರ್ ಹಿರಾನಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.


Click it and Unblock the Notifications











