ಕೊಡವ ಸಮುದಾಯದ ಕೆಂಗಣ್ಣಿಗೆ ಗುರಿಯಾದ ಅಕ್ಷಯ್ ಕುಮಾರ್, ಸ್ಕೈ ಫೋರ್ಸ್ ಚಿತ್ರದ ವಿರುದ್ಧ ಕರ್ನಾಟಕದಲ್ಲಿ ಆಕ್ರೋಶ...!
ಈಗೀಗ ಮನರಂಜನೆಯ ನೆಪದಲ್ಲಿ ಇತಿಹಾಸವನ್ನು ತಿರುಚುವ ಕೆಲಸವನ್ನು ಅನೇಕರು ಮಾಡುತ್ತಿದ್ದಾರೆ. ತಮ್ಮ ಇಷ್ಟಾನುಸಾರ ಕಥೆಯನ್ನು ಹೆಣೆದು ಮೂಲ ಕತೆಯನ್ನು ಮರೆಯಾಗಿಸುವ ಪ್ರಯತ್ನ ಮಾಡುತ್ತಾರೆ. ಬಾಲಿವುಡ್‌ನಲ್ಲಿ ತೆರೆಗೆ ಬಂದ ಸ್ಕೈ ಫೋರ್ಸ್ ಇದಕ್ಕೆ ಸದ್ಯದ ಉದಾಹರಣೆ.
ಹೌದು, ಅಕ್ಷಯ್ ಕುಮಾರ್ ಅಭಿನಯದ ಸ್ಕೈ ಫೋರ್ಸ್ ಮೊನ್ನೆ ಶುಕ್ರವಾರ ಬಿಡುಗಡೆಯಾಗಿದೆ. ಚಿತ್ರ ಸದ್ಯ ಉತ್ತಮವಾದ ಪ್ರದರ್ಶನವನ್ನು ಕಾಣುತ್ತಿದೆ. ಮುಳುಗುತ್ತಿದ್ದ ಅಕ್ಷಯ್ ಕುಮಾರ್ ವೃತ್ತಿ ಜೀವನವನ್ನು ಕೂಡ ಈ ಚಿತ್ರ ಕಾಪಾಡಿದೆ. ಇನ್ನು ಚಿತ್ರ ನೋಡಿದವರು ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಅಭಿನಯವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ದೇಶಭಕ್ತಿಯನ್ನು ಬಡಿದೆಬ್ಬಿಸುವ ಈ ಚಿತ್ರವನ್ನು ಬೆಳ್ಳಿತೆರೆಯ ಮೇಲೆಯೇ ನೋಡಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಆದರೆ, ಕರುನಾಡಿನಲ್ಲಿ ಮಾತ್ರ ಈ ಚಿತ್ರದ ವಿರುದ್ಧ ಅನೇಕರು ಕೆಂಡ ಕಾರುತ್ತಿದ್ದಾರೆ. ಇತಿಹಾಸ ಗೊತ್ತಿಲ್ಲದಿದ್ದರೆ ತಿಳಿದುಕೊಂಡು ಕೆಲಸ ಮಾಡಿ ಸುಖಾ ಸುಮ್ಮನೆ ಏನೇನೋ ಕೆಲಸ ಮಾಡಬೇಡಿ ಎನ್ನುತ್ತಿದ್ದಾರೆ. ಹೌದು, ಅಸಲಿಗೆ 1965ರ ಭಾರತ ಪಾಕಿಸ್ತಾನದ ನಡುವೆ ನಡೆದ ಮೊದಲ ಏರ್ ಸ್ಟ್ರೈಕ್ ಕಥೆಯನ್ನಾಧರಿಸಿದ ಈ ಚಿತ್ರದಲ್ಲಿ ಕೊಡಗಿನ ವೀರ ಅಜ್ಜಮಾಡಾ ಬೊಪಯ್ಯ ದೇವಯ್ಯ ಅವರನ್ನು ತಮಿಳುನಾಡಿನ ಯೋಧ ಎಂದು ತೋರಿಸಲಾಗಿದೆ. ಇದು ಕೊಡವ ಸಮುದಾಯದ ಕಣ್ಣನ್ನು ಕೆಂಪಾಗಿಸಿದೆ.
ಹೀಗಾಗಿಯೇ ಸ್ಕೈ ಫೋರ್ಸ್ ಚಿತ್ರದ ವಿರುದ್ದ ಸಿಡಿದೆದ್ದಿರುವ ಕೊಡವ ಸಮುದಾಯದ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಸ್ಕೈ ಫೋರ್ಸ್ ತಂಡದ ವಿರುದ್ದ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಸ್ಕ್ವಾಡನ್ ಲೀಡರ್ ದೇವಯ್ಯ ಕರ್ನಾಟಕದ ಹೆಮ್ಮೆ ಕೊಡವರ ಗರ್ವ ಎಂದು ಚಿತ್ರತಂಡದ ವಿರುದ್ದ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಿಟ್ಟನ್ನು ಹೊರ ಹಾಕಿರುವ ಕೊಡವ ಸಮುದಾಯದ ವಕೀಲೆ ತಾನಿಯಾ, ಸ್ಕ್ವಾಡನ್ ಲೀಡರ್ ದೇವಯ್ಯ ಅವರ ಸಮುದಾಯವನ್ನು ನೀವು ತಪ್ಪಾಗಿ ತೋರಿಸಿರುವ ಹಿಂದಿನ ಉದ್ದೇಶವೇನು ಎಂದು ಪ್ರಶ್ನೆ ಮಾಡಿದ್ದಾರೆ. ಕೋಟ್ಯಂತರ ಜನರಿಗೆ ಪ್ರೇರಣೆಯಾಗುವ ಅವರ ಮೇಲೆ ಪ್ರಭಾವ ಬೀರುವ ಮಾಧ್ಯಮ ಸಿನಿಮಾ. ಇಂತಹ ಮಾಧ್ಯಮದ ಮೂಲಕ ಸುಳ್ಳನ್ನು ಬಿತ್ತುವ ಕೆಲಸ ಯಾಕೆ ಮಾಡುತ್ತಿದ್ದೀರಾ ಎಂದು ಕೆಂಡ ಕಾರಿದ್ದಾರೆ.
ಇನ್ನು ಸತ್ಯಘಟನೆಯಾಧಾರಿತ ಚಿತ್ರದಲ್ಲಿ ಸತ್ಯವನ್ನೇ ತೋರಿಸಲು ಬಾಲಿವುಡ್‌ನ ನಿರ್ದೇಶಕ ನಿರ್ಮಾಪಕರಿಗೆ ಯಾಕೆ ಹಿಂಜರಿಕೆ ಎಂಬ ಪ್ರಶ್ನೆಯನ್ನು ಕೇಳಿರುವ ಅನೇಕರು ಸ್ಕ್ವಾಡರ್ನ್ ಲೀಡರ್ ದೇವಯ್ಯ ಅವರನ್ನು ಕೊಡವರನ್ನಾಗಿ ತೋರಿಸುವ ಬದಲು ತಮಿಳಿಗನಾಗಿ ತೋರಿಸುವ ಮೂಲಕ ಒಂದು ಜನಾಂಗವನ್ನು ಒಂದು ವಂಶಾವಳಿಯನ್ನು ನೀವು ಅಪಮಾನ ಮಾಡಿದ್ದೀರಾ ಎಂದು ಕೆಂಡ ಕಾರಿದ್ದಾರೆ. ಅಕ್ಷಯ್ ಕುಮಾರ್ ವಿರುದ್ದ ಚಿತ್ರತಂಡದ ವಿರುದ್ದ ಆಕ್ರೋಶವನ್ನು ಟ್ವಿಟ್ ಮಾಡುವ ಮೂಲಕ ಹೊರ ಹಾಕಿದ್ದಾರೆ.
ಅಂದ್ಹಾಗೇ ಸ್ಕ್ವಾಡರ್ನ್ ಲೀಡರ್ ದೇವಯ್ಯ ಮಹಾವೀರ ಚಕ್ರ ಪ್ರಶಸ್ತಿ ಪಡೆದ ಏಕೈಕ ವಾಯುಸೇನೆಯ ಅಧಿಕಾರಿ. 1988ರಲ್ಲಿ ಎರಡನೇ ಅತ್ಯುನತ ಸೇನಾ ಗೌರವವಾದ ಮಹಾವೀರ ಚಕ್ರ ಪ್ರಶಸ್ತಿಗೆ ಇವರು ಭಾಜನರಾಗಿದ್ದರು. ಸುಮಾರು 23 ವರ್ಷ ಅವರು ನಾಪತ್ತೆಯಾದ ಯೋಧರ ಲಿಸ್ಟ್‌ನಲ್ಲಿದ್ದರು. 1965ರಲ್ಲಿ ನಡೆದ ಏರ್ ಸ್ಕ್ರೈಕ್ ಸಮಯದಲ್ಲಿ ಶತ್ರು ಭೂಮಿಯಲ್ಲಿ ದೇವಯ್ಯ ಅವರು ವೀರ ಮರಣವನ್ನಪ್ಪಿದ್ದರು. ಬಾಲಿವುಡ್‌ನ ನಟ ಕೊಡಗು ಮೂಲದ ಗುಲ್ಷನ್ ದೇವಯ್ಯ ಈ ವಿಚಾರವನ್ನು ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನಮ್ಮಿಬ್ಬರ ಅಡ್ಡಹೆಸರು ಒಂದೇ ಆದರೆ ನಾವು ಸಂಬಂಧಿಕರಲ್ಲ ಆದರೆ ಈ ಮಹಾ ಯೋಧನ ಕುರಿತು ಸ್ಕೈಪೋರ್ಸ್ ಚಿತ್ರ ಬಿಡುಗಡೆಯಾದ ಹಿನ್ನೆಲೆ ಕೆಲ ವಿಚಾರ ಹಂಚಿಕೊಳ್ಳುತ್ತಿದ್ದೇನೆ ಎಂದು ಗುಲ್ಷನ್ ದೇವಯ್ಯ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











