ದಕ್ಷಿಣ ಭಾರತದ ಚಿತ್ರರಂಗದಿಂದ ದೂರವಾಗಿದ್ದೇಕೆ ಇಲಿಯಾನ..?
ಬಣ್ಣದ ಬದುಕು ಎಲ್ಲರಿಗೂ ಒಗ್ಗೋದಿಲ್ಲ. ಇಲ್ಲಿ ಸೋತೋರು ಮತ್ತೆಲ್ಲೋ ಗೆಲ್ತಾರೆ. ಇನ್ನೆಲ್ಲೋ ಸೋತೋರು ಇಲ್ಲಿ ಗೆಲುವಿನ ಗೋಪುರ ಕಟ್ತಾರೆ. ಸಾಧಿಸುವ ಛಲ ಇದ್ದವರು ಎಲ್ಲೆಡೆ ತಮ್ಮ ಅಭಿನಯದಿಂದ ಸಿನಿರಸಿಕರ ಮನ ಗೆಲ್ಲುತ್ತಾರೆ. ಇಲಿಯಾನ ಡಿಕ್ರೂಜ್ ಇದೇ ಸಾಲಿಗೆ ಸೇರುವ ನಟಿ
ಹೌದು, ಉತ್ತರದಿಂದ.. ದಕ್ಷಿಣಕ್ಕೆ ವಲಸೆ ಬಂದ ಇಲಿಯಾನಾ, ಎರಡನೇ ಚಿತ್ರ ಪೋಕಿರಿಯಲ್ಲಿಯೇ ಪ್ರಚಂಡ ಗೆಲುವನ್ನ ಕಂಡರು. ಅಲ್ಲಿಂದಾಚೆ.. ಇಲಿಯಾನ ನಲಿದ್ದಿದ್ದು.. ನುಲಿದ್ದಿದ್ದು.. ಇಲ್ಲಿಯೇ. ಮುನ್ನಾ.. ಜಲ್ಸಾ.. ಕಿಕ್.. ಶಕ್ತಿ.. ಜುಲಾಯಿ.. ಹೀಗೆ ಒಂದಾದ ಮೇಲೊಂದು ಸಿನಿಮಾದಲ್ಲಿ ಕಾಣಿಸಿಕೊಂಡ ಇಲಿಯಾನ, ಬರೋಬ್ಬರಿ ಆರು ವರ್ಷ ಖ್ಯಾತಿಯ ಉತ್ತುಂಗದಲ್ಲಿದ್ದರು. ತಮ್ಮ ಅಭಿನಯ ಮತ್ತು ಅಂದ ಚೆಂದದಿಂದ ಸಾಕಷ್ಟು ಜನರ ಪ್ರೀತಿಯನ್ನೂ ಇಲಿಯಾನ ಗಳಿಸಿದ್ದರು.

ಆದರೆ.. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನೆಮ್ಮದಿಯಾಗಿದ್ದ ಇಲಿಯಾನ ಮನದಲ್ಲಿ, ಬಾಲಿವುಡ್‌ನ ಬೀಜ ಹಾಗೇ ಇತ್ತು. ಅದೇ ಸಮಯಕ್ಕೆ ರಣ್ಭೀರ್ ಕಪೂರ್ ಅಭಿನಯದ, ಅನುರಾಗ್ ಬಸು ನಿರ್ದೇಶನದ ಬರ್ಫಿ ಇವರನ್ನ ಹುಡುಕಿಕೊಂಡು ಬಂತು. ಇನ್ನೇನು.. ಅರೆಕ್ಷಣವೂ ಯೋಚನೆ ಮಾಡದ ಇಲಿಯಾನ ಬಾಲಿವುಡ್‌ನ ಫ್ಲೈಟ್ ಹತ್ತಿಯೇ ಬಿಟ್ಟರು.
ಇಲಿಯಾನ ಅದೃಷ್ಟನಾ.. ದುರಾದೃಷ್ಟನಾ.. ಗೊತ್ತಿಲ್ಲ. ಆ ಕಡೆ ಇಲಿಯಾನ ಇನ್ನೂ ಬರ್ಫಿ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯೂ ಆಗಿರಲಿಲ್ಲ. ಅಷ್ಟರಲ್ಲಿಯೇ ಇನ್ಮುಂದೆ ಇಲಿಯಾನ, ತೆಲುಗು-ತಮಿಳು ಸಿನಿಮಾಗಳನ್ನ ಮಾಡುವುದಿಲ್ಲ ಎಂದು ಅನೇಕರು ಹುಯಿಲೆಬ್ಬಿಸಿದರು. ಹರಡಲಾದ ಈ ಸುದ್ದಿಯನ್ನೇ ಬಹುತೇಕರು ನಿಜಾ ಎಂದುಕೊಂಡರು.

ಹೀಗಾಗಿಯೇ.. ದಕ್ಷಿಣ ಚಿತ್ರರಂಗದಿಂದ ನಾನು ದೂರವಾಗಿಲ್ಲ ಬದಲಿಗೆ ನನ್ನನ್ನ ದೂರ ಮಾಡಿದರು ಎಂದಿರುವ ಇಲಿಯಾನ, ಆಗುವುದೆಲ್ಲ ಒಳ್ಳೇಯದಕ್ಕೆ ಎಂದಿದ್ದಾರೆ. ಬಾಲಿವುಡ್ ನಲ್ಲಿ ಸದ್ಯಕ್ಕೆ ನಾನು ಖುಷಿ ಖುಷಿಯಾಗಿಯೇ ಇದ್ದೀನಿ ಎಂದಿದ್ದಾರೆ.
ಉಳಿದಂತೆ 2012ರ ನಂತರ ಸೌತ್ ಇಂಡಸ್ಟ್ರೀಯಿಂದ ಅಂತರವನ್ನ ಕಾಪಾಡಿಕೊಂಡ ಇಲಿಯಾನ, ಇಲ್ಲಿಯವರೆಗೆ ಕೇವಲ ಒಂದೇ ಒಂದು ತೆಲುಗು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮಿಕ್ಕಂತೆ ಇಲಿಯಾನ ನಟಿಸಿದ್ದೆಲ್ಲವೂ ಬಾಲಿವುಡ್ ಸಿನಿಮಾಗಳೇ ಅನ್ನುವುದು ನಿಮ್ಮ ಗಮನಕ್ಕಿರಲಿ.

ಸದ್ಯಕ್ಕೆ ಇಲಿಯಾನಾ ಡಿಕ್ರೂಜ್ ಅಭಿನಯದ ದೋ ಔರ್ ದೋ ಪ್ಯಾರ್ ಚಿತ್ರ ತೆರೆಗೆ ಬಂದಿದೆ. ಈ ಚಿತ್ರದ ಪ್ರಚಾರದ ಸಮಯದಲ್ಲಿಯೇ ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಇಲಿಯಾನ ತಮ್ಮ ಈ ಮನದ ಮಾತನ್ನ ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಇಲಿಯಾನ ಅವರ ಈ ಅಂತರಂಗದ ನುಡಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಇಲಿಯಾನ ಹಿಂದಿ ಚಿತ್ರರಂಗದಲ್ಲಿಯೇ ಬಿಡಾರ ಹೂಡಲಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದು ಯಾರು ಮತ್ತು ಯಾಕೆ ಅನ್ನುವ ಪ್ರಶ್ನೆ ಕೂಡ ಅನೇಕರನ್ನ ಈಗ ಕಾಡುತ್ತಿದೆ. ಇಲಿಯಾನ ಅವರ ಜನಪ್ರಿಯತೆಯನ್ನ ಸಹಿಸದೇ ಯಾರಾದರೂ ಪಿತೂರಿ ಮಾಡಿದರಾ, ಬೇಕೆಂದೇ ಸುಳ್ಳು ಸುದ್ದಿಯನ್ನ ಹಬ್ಬಿಸಿ ದಕ್ಷಿಣದಿಂದ ಇಲಿಯಾನ ಅವರನ್ನ ದೂರ ಮಾಡಿದರಾ ಅನ್ನುವ ಅನುಮಾನ ಕೂಡ ಅನೇಕರನ್ನ ಈಗ ಕಾಡುತ್ತಿದೆ.


Click it and Unblock the Notifications











