Priyanka Chopra: ಸಹೋದರಿ ಪರಿಣಿತಿ ಮದುವೆಗೆ ಪ್ರಿಯಾಂಕಾ ಚೋಪ್ರಾ ಗೈರು, ಕಾರಣವೇನು?
ನಟಿ ಪರಿಣಿತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್ ಚಡ್ಡಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಆದರೆ, ಮದುವೆಗೆ ಬರಬೇಕಿದ್ದ ನಟಿ ಪ್ರಿಯಾಂಕಾ ಚೋಪ್ರಾ ಗೈರಾಗಿದ್ದಾರೆ. ಸಹೋದರಿ ಮದುವೆಗೆ ಬರದ ಕಾರಣ ಚರ್ಚೆಯ ವಿಷಯ ಕೂಡ ಆಗಿದೆ. ಮೊನ್ನೆಯಷ್ಟೇ ತಮ್ಮ ಸ್ನೇಹಿತೆ ಮನೆಯ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಭಾಗವಹಿಸಿದ್ದರು.
ಸೋಮವಾರ (ಸೆಪ್ಟೆಂಬರ್ 25) ಪರಿಣಿತಿ ಚೋಪ್ರಾ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಮದುವೆ ಮುಗಿಸಿ ಅತಿಥಿಗಳು ತಮ್ಮ ತಮ್ಮ ಸ್ಥಳಕ್ಕೆ ವಾಪಾಸ್ ಆಗುತ್ತಿದ್ದು, ಉದಯಪುರದಲ್ಲಿ ನಡೆದ ವಿವಾಹದಲ್ಲಿ ಭಾಗವಹಿಸಿದ ನಂತರ ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ತಾಯಿ ಹೇಳಿದ್ದೇನು?
ಪರಿಣಿತಿ ಮತ್ತು ರಾಘವ್ ಮದುವೆಯಲ್ಲಿ ಭಾಗಿಯಾಗಿದ್ದ ಆಕೆಯ ಚಿಕ್ಕಮ್ಮ ಮಧು ಚೋಪ್ರಾ ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಾ ಏಕೆ ಮದುವೆಗೆ ಬರಲಿಲ್ಲ ಎಂಬ ಪಾಪರಾಜಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮದುವೆಯ ಬಗ್ಗೆ ಮತ್ತು ಪರಿಣಿತಿ, ರಾಘವ್ ಚಡ್ಡಾ ಮತ್ತು ಅವರ ಕುಟುಂಬಗಳು ಉಡುಗೊರೆಗಳನ್ನು ಸ್ವೀಕರಿಸದ ಬಗ್ಗೆ ಮಾತನಾಡಿದ್ದಾರೆ.
ಜೊತೆಗೆ ಪ್ರಿಯಾಂಕಾ ಚೋಪ್ರಾ ಮದುವೆಯನ್ನು ಏಕೆ ಮಿಸ್ ಮಾಡಿಕೊಂಡರು ಎಂದೂ ಹೇಳಿದ್ದಾರೆ. ಪ್ರಿಯಾಂಕಾ ಮದುವೆಯಲ್ಲಿ ಏಕೆ ಇರಲಿಲ್ಲ ಎಂದು ಮಾಧ್ಯಮದವರು ಕೇಳಿದಾಗ, ಮಧು, ಅವರು ಕೆಲಸ ಮಾಡುತ್ತಿದ್ದಾರೆ. ಕೆಲಸದಲ್ಲಿ ಬ್ಯುಸಿ ಇದ್ದಾರೆ ಎಂದು ಉತ್ತರಿಸಿದ್ದಾರೆ. ಈ ಹಿಂದೆಯೇ ಪ್ರಿಯಾಂಕಾ ಮದುವೆಗೆ ಬರುವುದಿಲ್ಲ ಎಂಬ ವದಂತಿಯಿದ್ದವು. ಅದು ನಿಜವಾಗಿದೆ.

ಮಗಳ ಜೊತೆ ಪ್ರಿಯಾಂಕಾ ಚೋಪ್ರಾ
ಇನ್ನು ಅಮೆರಿಕಾದಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೋನಾಸ್ ಅವರ ಮಗಳು ಮಾಲ್ಟಿ ಮೇರಿ ಚೋಪ್ರಾ ಜೋನಾಸ್ ಅವರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಈ ಬಗ್ಗೆ Instagram ಸ್ಟೋರೀಸ್‌ನಲ್ಲಿ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮಗಳನ್ನು ಎರಡು ಕೈಗಳಿಂದ ಮೇಲೆತ್ತಿ ಬ್ಯಾಕ್ ಫೋಸ್ ನೀಡಿದ್ದಾರೆ. ಇನ್ನು ನಿಕ್ ಜೋನಸ್ ಅಮೆರಿಕಾದಲ್ಲಿ ಸಹೋದರರ ಜೊತೆಗೆ ಬ್ಯಾಕ್ ಟು ಬ್ಯಾಕ್ ಕನ್ಸರ್ಟ್‌ಗಳನ್ನು ನಡೆಸುತ್ತಿದ್ದಾರೆ.
ಉಡುಗೊರೆ ಪಡೆಯದ ರಾಘವ್ ಚಡ್ಡಾ- ಪರಿಣಿತಿ ಚೋಪ್ರಾ!
ಮದುವೆಯ ಸಂಭ್ರಮಕ್ಕೆ ಪ್ರಿಯಾಂಕಾ ಮತ್ತು ಅವರ ಕುಟುಂಬ ಗೈರುಹಾಜರಾಗಿದ್ದರೂ, ಅವರ ತಾಯಿ ಮಧು ಚೋಪ್ರಾ ಶುಕ್ರವಾರವೇ ಉದಯಪುರಕ್ಕೆ ಬಂದಿಳಿದಿದ್ದರು. ಮದುವೆಯ ಎಲ್ಲಾ ಶಾಸ್ತ್ರಗಳಲ್ಲಿ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ ಮಾತನಾಡಿರುವ ಅವರು, ಮದುವೆ ಅದ್ಭುತವಾಗಿತ್ತು ಎಂದಿದ್ದಾರೆ.
ಜೊತೆಗೆ ಮದುವೆಯಲ್ಲಿ ಉಡುಗೊರೆಗಳ ವಿನಿಮಯವಿರಲಿಲ್ಲ. ಕೇವಲ ಆಶೀರ್ವಾದವಷ್ಟೇ ಎಂದಿದ್ದಾರೆ. ನಾನು ಏನು ಗಿಫ್ಟ್ ನೀಡಿಲ್ಲ. ಕೇವಲ ಆಶೀರ್ವಾದ ನೀಡಿದೆ ಎಂದಿರುವ ಅವರು, ಪರಿಣಿತಿ ಮೊದಲಿನಿಂದ ಸುಂದರವಾಗಿದ್ದಾರೆ. ಆದರೆ, ವಧುವಿನ ಆಲಂಕಾರದಲ್ಲಿ ಆಕೆ ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದರು ಎಂದು ಹೇಳಿದ್ದಾರೆ.
ಪರಿಣಿತಿ ಮತ್ತು ರಾಘವ್ ಅದ್ಧೂರಿ ಮದುವೆ
ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ನಾಯಕ ರಾಘವ್ ಚಡ್ಡಾ ಭಾನುವಾರ ರಾಜಸ್ಥಾನದ ಉದಯಪುರದಲ್ಲಿ ಮದುವೆಯಾಗಿದ್ದಾರೆ. ಮದುವೆಯ ಒಂದು ದಿನದ ನಂತರ, ದಂಪತಿ ಅಧಿಕೃತ ಮದುವೆಯ ಆಲ್ಬಂ ಅನ್ನು ಹಂಚಿಕೊಂಡಿದ್ದಾರೆ. ಮದುವೆಯಲ್ಲಿ ರಾಘವ್ ಬಿಳಿ ಶೆರ್ವಾನಿ ಧರಿಸಿದ್ದರೆ, ಪರಿಣಿತಿ ಕ್ರೀಮ್ ಮತ್ತು ಗೋಲ್ಡನ್ ವೆಡ್ಡಿಂಗ್ ಲೆಹೆಂಗಾವನ್ನು ಧರಿಸಿದ್ದರು. ಫೋಟೋಗಳಿಗೆ ಪ್ರಿಯಾಂಕಾ ಚೋಪ್ರಾ ಕಾಮೆಂಟ್ ಮಾಡಿದ್ದು, "ನನ್ನ ಆಶೀರ್ವಾದ ಯಾವಾಗಲೂ ಇರುತ್ತದೆ" ಎಂದು ಹೇಳಿದ್ದಾರೆ.


Click it and Unblock the Notifications











