ಮದುವೆ ಆಗಿಲ್ಲ ಏಕೆ? ಕಾರಣ ನೀಡಿದ ಕಂಗನಾ
ಬಾಲಿವುಡ್‌ನಲ್ಲಿ ಸಾಲು-ಸಾಲಾಗಿ ಮದುವೆಗಳು ನಡೆಯುತ್ತಿವೆ. ವಿಕ್ಕಿ ಕೌಶಲ್-ಕತ್ರಿನಾ ಕೈಫ್ ಇತ್ತೀಚೆಗೆ ರಣ್ಬೀರ್ ಕಪೂರ್-ಆಲಿಯಾ ಭಟ್. ಮುಂದೆ ಇನ್ನಷ್ಟು ವಿವಾಹಗಳು ನಡೆಯಲಿವೆ.
ಆದರೆ ನಟಿ ಕಂಗನಾ ಮಾತ್ರ ಏಕೋ ಏನೋ ಇನ್ನೂ ಮದುವೆಯಾಗಿಲ್ಲ. ನಟಿ, ನಿರ್ಮಾಪಕಿಯಾಗಿ ಯಶಸ್ಸು ಕಂಡಿರುವ ಕಂಗನಾ ಮದುವೆ ವಿಷಯದಲ್ಲಿ ಯಾಕೋ ಹಿಂದೆಯೇ ಉಳಿದಿದ್ದಾರೆ. ಕಳೆದ ವರ್ಷವಷ್ಟೆ ಅವರ ಸಹೋದರನ ಮದುವೆ ಮಾಡಿರುವ ಕಂಗನಾ ತಾವೇಕೆ ಇನ್ನೂ ಮದುವೆ ಆಗಿಲ್ಲ ಎಂಬುದಕ್ಕೆ ಕಾರಣವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಕಂಗನಾರ 'ಧಾಕಡ್' ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರಕ್ಕಾಗಿ ರೆಡಿಯೋ ಜಾಕಿ ಸಿದ್ಧಾರ್ಥ್ ಕನ್ನನ್ ಗೆ ಸಂದರ್ಶನ ನೀಡುವ ಸಮಯದಲ್ಲಿ, 'ನಿಜ ಜೀವನದಲ್ಲಿಯೂ ನೀವು ಸಖತ್ 'ಧಾಕಡ್' (ಮಾರಾ ಮಾರಿ ಮಾಡುವ ವ್ಯಕ್ತಿ) ಅಂತೆ ಹೌದಾ? ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಕಂಗನಾ, ''ಸುಮ್ಮನಿರು, ನಿಜ ಜೀವನದಲ್ಲಿ ಯಾರು ಹಾಗೆಲ್ಲ ಹುಡುಗರಿಗೆ ಹೊಡೆದುಕೊಂಡು ಓಡಾಡುತ್ತಾರೆ. ನಾನಂತೂ ಹಾಗಿಲ್ಲ. ಕಂಗನಾ ಹುಡುಗರನ್ನು ಹೊಡೆಯುತ್ತಾಳೆ, ಬಹಳ ಸಿಟ್ಟಿನ ವ್ಯಕ್ತಿ ಎಂದೆಲ್ಲ ನಿನ್ನಂಥಹವರು ನನ್ನ ಬಗ್ಗೆ ಸುಳ್ಳು ಸುದ್ದಿ ಹರಡಿಸಿದ್ದೀರಿ. ಅದಕ್ಕೆ ನನಗಿನ್ನೂ ಮದುವೆ ಆಗಿಲ್ಲ'' ಎಂದು ಜೋರು ಮಾಡಿದ್ದಾರೆ ಕಂಗನಾ. ''ನನ್ನ ಬಗ್ಗೆ ಹಲವರು ತಪ್ಪಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಾರೆ ಪ್ರಚಾರ ಮಾಡಿದ್ದಾರೆ. ಇದರಿಂದ ನನಗೆ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನಷ್ಟವಾಗಿದೆ'' ಎಂದಿದ್ದಾರೆ.

ನಿಜ ಜೀವನದಲ್ಲಿ ಭಿನ್ನವಾಗಿರುತ್ತಾರೆ ಕಂಗನಾ
ಅದೇ ಸಂದರ್ಶನದಲ್ಲಿ ಹಾಜರಿದ್ದ ನಟ ಅರ್ಜುನ್ ರಾಮ್‌ಪಾಲ್, '' ಸಿನಿಮಾಗಳಲ್ಲಿ ಕಾಣುವಂತೆ ನಿಜ ಜೀವನದಲ್ಲಿ ಕಂಗನಾ ಇಲ್ಲ. ಪಾತ್ರಕ್ಕೆ ಏನು ಬೇಕೋ ಅದನ್ನು ಕಂಗನಾ ನೀಡುತ್ತಾರೆ. ಅವರೊಬ್ಬ ಅದ್ಭುತ ನಟಿ. ಆದರೆ ನಿಜ ಜೀವನದಲ್ಲಿ ಬಹಳಷ್ಟು ಭಿನ್ನವಾಗಿರುತ್ತಾರೆ'' ಎಂದಿದ್ದಾರೆ.

ಕಂಗನಾ ಬಗ್ಗೆ ಅರ್ಜುನ್ ರಾಮ್‌ಪಾಲ್ ಹೇಳಿದ್ದು ಹೀಗೆ
''ನಿಜ ಜೀವನದಲ್ಲಿ ಕಂಗನಾ ಬಹಳ ಮೃದು ಸ್ವಭಾವದ ವ್ಯಕ್ತಿತ್ವದವರು. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾರೆ. ನಗಿಸುತ್ತಾರೆ, ನಗುತ್ತಿರುತ್ತಾರೆ. ಎಲ್ಲರನ್ನೂ ಕೇರ್ ಮಾಡುತ್ತಾರೆ. ದೇವರ ಬಗ್ಗೆ ಅಪಾರ ಭಕ್ತಿ, ಗೌರವಗಳನ್ನು ಇಟ್ಟುಕೊಂಡಿದ್ದಾರೆ. ಸದಾ ಪೂಜೆಗಳನ್ನು ಮಾಡುತ್ತಿರುತ್ತಾರೆ. ಸಾಕಷ್ಟು ಯೋಗ, ಇತರೆ ವ್ಯಾಯಾಮಗಳನ್ನು ಮಾಡುತ್ತಾರೆ. ಬಹಳ ಸರಳವಾಗಿ ಕಂಗನಾ ಇರುತ್ತಾರೆ'' ಎಂದಿದ್ದಾರೆ ಅರ್ಜುನ್ ರಾಮ್‌ಪಾಲ್.

ಹೃತಿಕ್ ರೋಷನ್ ಜೊತೆ ಹೆಸರು ಕೇಳಿ ಬಂದಿತ್ತು
ಅಸಲಿಗೆ ಕಂಗನಾ ಹೆಸರು ಕೆಲವರೊಟ್ಟಿಗೆ ಹರಿದಾಡಿತ್ತು. ಆದಿತ್ಯ ಪಂಚೋಲಿ ಸೇರಿದಂತೆ ಇನ್ನೂ ಕೆಲವರೊಟ್ಟಿಗೆ ಹೆಸರು ಕೇಳಿ ಬಂದಿತ್ತು. ಅದರಲ್ಲಿಯೂ ಕಂಗನಾ ಹಾಗೂ ಹೃತಿಕ್ ರೋಷನ್ ಸಂಬಂಧವಂತೂ ನ್ಯಾಯಾಲಯದ ಮೆಟ್ಟಿಲು ಸಹ ಏರಿತು. ಹೃತಿಕ್ ಜೊತೆ ಕಂಗನಾರ ಹೆಸರು ಕೇಳಿ ಬಂದ ಬಳಿಕ ಕಂಗನಾರ ಹೆಸರು ಇನ್ನಾವ ನಟನೊಂದಿಗೂ ಕೇಳಿ ಬರಲಿಲ್ಲ.

'ಧಾಕಡ್' ಟ್ರೇಲರ್ ಗಮನ ಸೆಳೆದಿದೆ
ಕಂಗನಾ ನಟಿಸಿರುವ 'ಧಾಕಡ್' ಸಿನಿಮಾದ ಟ್ರೇಲರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಟ್ರೇಲರ್ ವೈರಲ್ ಆಗಿದೆ. ಕಂಗನಾ, ಗೂಢಚಾರಿಣಿ ಪಾತ್ರದಲ್ಲಿ ನಟಿಸಿದ್ದಾರೆ. ಬಿಕಿನಿ ಧರಿಸಿ, ಮದ್ಯ ಹೀರುತ್ತಾ ಸಖತ್ ಸೆಕ್ಸಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಗನ್ ಹಿಡಿದು ದುಷ್ಟರ ಸಂಹಾರ ಸಹ ಮಾಡುತ್ತಿದ್ದಾರೆ. ಸ್ಪೈ ಗೇಮ್‌ಗಳನ್ನು ಹೋಲುವಂತಹಾ ಸೆಟ್‌ಗಳು, ಅದ್ಭುತ ಆಕ್ಷನ್, ಅರ್ಜುನ್ ರಾಮ್‌ಪಾಲ್‌ರ ಅದ್ಭುತ ನಟನೆ ಟ್ರೇಲರ್‌ನಲ್ಲಿ ಗಮನ ಸೆಳೆಯುತ್ತಿದೆ.


Click it and Unblock the Notifications











