ಬಾಲಿವುಡ್‌ನಿಂದ ಬಂದಿದ್ದ ಮೊದಲ ಅವಕಾಶ ಕೈಬಿಟ್ಟಿದ್ದ ರಶ್ಮಿಕಾ
ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ 'ಮಿಷನ್ ಮಜ್ನು' ಹಾಗೂ ಅಮಿತಾಬ್ ಬಚ್ಚನ್ ಜೊತೆ 'ಗುಡ್ ಬೈ' ಸಿನಿಮಾಗಳಲ್ಲಿ ನಟಿಸುತ್ತಿರುವುದು ಹೊಸ ಸುದ್ದಿಯೇನಲ್ಲ. ಆದರೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಕಾತರರಾಗಿದ್ದ ರಶ್ಮಿಕಾ ಮಂದಣ್ಣ ತಮ್ಮ ಪಾಲಿಗೆ ಬಂದ ಮೊದಲ ಬಾಲಿವುಡ್ ಸಿನಿಮಾ ಅವಕಾಶವನ್ನು ತಿರಸ್ಕರಿಸಿದ್ದರು.
'ಮಿಷನ್ ಮಜ್ನು' ರಶ್ಮಿಕಾ ನಟಿಸುತ್ತಿರುವ ಮೊದಲ ಬಾಲಿವುಡ್ ಸಿನಿಮಾ ಆದರೆ ಇದಕ್ಕೂ ಮುನ್ನ ಬಾಲಿವುಡ್ ಸ್ಟಾರ್ ನಟ ನಟಿಸುತ್ತಿರುವ ಸಿನಿಮಾದಿಂದಲೇ ಅವಕಾಶ ಅರಸಿ ಬಂದಿತ್ತು ಆದರೆ ಅವಕಾಶವನ್ನು ನಿರಾಕರಿಸಿದ್ದರು ರಶ್ಮಿಕಾ. ಈ ಬಗ್ಗೆ ಸಂದರ್ಶನವೊಂದರಲ್ಲಿ ರಶ್ಮಿಕಾ ಮಾತನಾಡಿದ್ದಾರೆ.
ಶಾಹಿದ್ ಕಪೂರ್ ನಟಿಸುತ್ತಿರುವ 'ಜೆರ್ಸಿ' ಸಿನಿಮಾದಲ್ಲಿ ನಾಯಕಿ ಪಾತ್ರವನ್ನು ಮಾಡುವಂತೆ ರಶ್ಮಿಕಾ ಅವರನ್ನು ಕೇಳಲಾಗಿತ್ತು. ಆದರೆ ರಶ್ಮಿಕಾ ಪಾತ್ರವನ್ನು ಒಪ್ಪಿಕೊಳ್ಳಲಿಲ್ಲ. ತೆಲುಗಿನಲ್ಲಿ ಇದೇ ಹೆಸರಿನಲ್ಲಿ ನಿರ್ಮಾಣವಾಗಿದ್ದ ಸಿನಿಮಾದಲ್ಲಿ ನಾನಿ ಹಾಗೂ ಕನ್ನಡತಿ ಶ್ರದ್ಧಾ ಶ್ರೀನಾಥ್ ನಟಿಸಿದ್ದರು. ಅದೇ ಸಿನಿಮಾದ ಹಿಂದಿ ರೀಮೇಕ್‌ನಲ್ಲಿ ಶಾಹಿದ್ ಕಪೂರ್ ನಟಿಸುತ್ತಿದ್ದಾರೆ.

''ಜೆರ್ಸಿ' ನನ್ನ ಮೊದಲ ಬಾಲಿವುಡ್ ಸಿನಿಮಾ ಆಗಬೇಕಿತ್ತು: ರಶ್ಮಿಕಾ
''ಜೆರ್ಸಿ' ನನ್ನ ಮೊದಲ ಬಾಲಿವುಡ್ ಸಿನಿಮಾ ಆಗಬೇಕಿತ್ತು. ನಾಯಕಿ ಪಾತ್ರದಲ್ಲಿ ನಟಿಸುವಂತೆ ಕೇಳಿದ್ದರು. ಆದರೆ ಆ ಪಾತ್ರಕ್ಕೆ ನಾನು ಸೂಕ್ತವಾಗಿ ನ್ಯಾಯ ಒದಗಿಸಬಲ್ಲೆನಾ ಎಂಬ ಅನುಮಾನ ಇತ್ತು ಹಾಗಾಗಿ ಆ ಸಿನಿಮಾ ಒಪ್ಪಿಕೊಳ್ಳಲಿಲ್ಲ'' ಎಂದಿದ್ದಾರೆ ರಶ್ಮಿಕಾ ಮಂದಣ್ಣ.

ಗೃಹಿಣಿ, ತಾಯಿ ಪಾತ್ರ ಬೇಡವೆಂದು ನಿರಾಕರಿಸಿದ ರಶ್ಮಿಕಾ
ರಶ್ಮಿಕಾ ಆ ಪಾತ್ರ ನಿರಾಕರಿಸಲು ಬೇರೆ ಕಾರಣವಿದೆ ಎನ್ನುವ ಗಾಳಿಸುದ್ದಿಯೂ ಇದೆ. 'ಜೆರ್ಸಿ' ಸಿನಿಮಾದಲ್ಲಿ ನಾಯಕಿಗೆ ಗೃಹಿಣಿ ಪಾತ್ರವಿದೆ. ಐದು ವರ್ಷ ವಯಸ್ಸಿನ ಮಗುವಿನ ತಾಯಿ ಪಾತ್ರ ಅದಾಗಿದೆ. ಬಬ್ಲಿ ಯುವತಿ, 'ಲವರ್ ಗರ್ಲ್' ಪಾತ್ರಗಳಲ್ಲಿಯಷ್ಟೆ ನಟಿಸುತ್ತಿರುವ ರಶ್ಮಿಕಾ, ಗೃಹಿಣಿ, ತಾಯಿ ಪಾತ್ರಗಳಲ್ಲಿ ಈಗಲೇ ನಟಿಸುವುದು ಬೇಡವೆಂದು 'ಜೆರ್ಸಿ' ಸಿನಿಮಾ ಆಫರ್ ಅನ್ನು ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ.

ಕನ್ನಡತಿ ಶ್ರದ್ಧಾ ಶ್ರೀನಾಥ್ ನಟಿಸಿದ್ದ ಸಿನಿಮಾ
ಶಾಹಿದ್ ಕಪೂರ್ ನಟಿಸುತ್ತಿರುವ 'ಜೆರ್ಸಿ' ಸಿನಿಮಾ ಅದೇ ಹೆಸರಿನ ತೆಲುಗು ಸಿನಿಮಾದ ರೀಮೇಕ್. ತೆಲುಗಿನಲ್ಲಿ ಕನ್ನಡತಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ನಟಿಸಿದ್ದರು. ನಾಯಕನಾಗಿ ನಾನಿ ನಟಿಸಿದ್ದರು ಸಿನಿಮಾವು ಭರ್ಜರಿ ಹಿಟ್ ಆದ ಜೊತೆಗೆ ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿತ್ತು. ಶ್ರದ್ಧಾ ಶ್ರೀನಾಥ್ ನಟನೆ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.
Recommended Video

ಅಲ್ಲು ಅರ್ಜುನ್ ಜೊತೆಗೆ 'ಪುಷ್ಪ' ಸಿನಿಮಾದಲ್ಲಿ ನಟನೆ
ರಶ್ಮಿಕಾ ಮಂದಣ್ಣ ಕೈಯಲ್ಲಿ ಸದ್ಯಕ್ಕೆ ಹಲವು ಸಿನಿಮಾ ಆಫರ್‌ಗಳಿವೆ. ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸುತ್ತಿರುವ ಜೊತೆಗೆ ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆಗೆ 'ಪುಷ್ಪ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ 'ಥ್ಯಾಂಕ್ ಯೂ' ಸಿನಿಮಾದಲ್ಲಿಯೂ ರಶ್ಮಿಕಾ ನಟಿಸುತ್ತಿದ್ದಾರೆ.


Click it and Unblock the Notifications











