ಶಾರುಖ್ ಖಾನ್ ಮಗಳಿಗೆ ತಾಯಿಯಾಗಲಿದ್ದಾರೆ ದೀಪಿಕಾ ಪಡುಕೋಣೆ !
ಸಾಮಾನ್ಯವಾಗಿ ಚಿತ್ರರಂಗದಲ್ಲಿ ಒಂದು ಜೋಡಿ ಯಶಸ್ವಿಯಾದರೆ, ಆ ಜೋಡಿಯನ್ನೇ ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲು ಅನೇಕರು ಮುಂದಾಗುತ್ತಾರೆ.ಪ್ರೇಕ್ಷಕರು ಕೂಡ ತಮ್ಮ ನೆಚ್ಚಿನ ಜೋಡಿಯನ್ನೇ ಮತ್ತೆ ಮತ್ತೆ ತೆರೆಯ ಮೇಲೆ ನೋಡಲು ಬಯಸುತ್ತಾರೆ.ಇದಕ್ಕೆ ಉದಾಹರಣೆ ಎನ್ನುವಂತೆ ಯಶ್-ರಾಧಿಕಾ ಪಂಡಿತ್ ಒಂದಾದ ಮೇಲೊಂದು ಸಿನಿಮಾ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿಯನ್ನು ರಿಯಲ್ ಮತ್ತು ರೀಲ್ ಲೈಫ್‌ನಲ್ಲಿ ಕೂಡ ಜನ ಮೆಚ್ಚಿದ್ದಾರೆ.
ಇನ್ನು ಡಾ.ರಾಜ್ ಕುಮಾರ್ ಮತ್ತು ಜಯಂತಿ ಅವರದ್ದು ಆ ಕಾಲದ ದಿ ಬೆಸ್ಟ್ ಜೋಡಿ. 36 ಚಿತ್ರಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದರು ಇಬ್ಬರು. ಕೇವಲ ಕನ್ನಡ ಮಾತ್ರವಲ್ಲ ಬಾಲಿವುಡ್‌ನಲ್ಲಿ ಕೂಡ ಅನೇಕ ಜೋಡಿಗಳು ಅಭಿಮಾನಿಗಳ ಹೃದಯವನ್ನು ಗೆದ್ದಿವೆ. ಆ ಪೈಕಿ ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಜೋಡಿ ಕೂಡ ಒಂದು. ಓಂ ಶಾಂತಿ ಓಂ, ಚೆನ್ನೈ ಎಕ್ಸ್‌ಪ್ರೆಸ್, ಹ್ಯಾಪಿ ನ್ಯೂ ಇಯರ್, ಪಠಾಣ್, ಜವಾನ್ ಹೀಗೆ ಇಲ್ಲಿಯವರೆಗೆ ಐದು ಚಿತ್ರಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದಾರೆ ಇವರಿಬ್ಬರು.

ಇಂಥಾ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಇದೀಗ ಆರನೇ ಬಾರಿ ಬೆಳ್ಳಿತೆರೆಯ ಮೇಲೆ ಒಂದಾಗುತ್ತಿದ್ದಾರೆ. ಹೌದು, ಒಂದಾದ ಮೇಲೊಂದರಂತೆ ಮೂರು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರುವ ಶಾರುಖ್ ಖಾನ್ ಸದ್ಯ ಮತ್ತೊಂದು ಚಿತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದ ಹೆಸರು ಕಿಂಗ್. ವಿಶೇಷ ಅಂದರೆ ಈ ಚಿತ್ರದ ಮೂಲಕ ಶಾರುಖ್ ಖಾನ್ ಅವರ ಮುದ್ದಾದ ಮಗಳು ಸುಹಾನಾ ಖಾನ್ ಚಿತ್ರರಂಗಕ್ಕೆ ಬರುತ್ತಿದ್ದಾರೆ.
ಈ ಹಿಂದೆ ಸುಹಾನಾ ಆರ್ಚಿಸ್ ಚಿತ್ರವನ್ನು ಮಾಡಿದ್ದರಾದರೂ ಅದು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಹೀಗಾಗಿ ಬೆಳ್ಳಿತೆರೆಯಲ್ಲಿ ಕಿಂಗ್ ಸುಹಾನಾಗೆ ಮೊದಲ ಅನುಭವ. ಈ ಹಿನ್ನೆಲೆ ಶಾರುಖ್ ಖಾನ್ ಅವರ ಅಭಿಮಾನಿಗಳು ಈ ಚಿತ್ರಕ್ಕೆ ಕಾತುರರಾಗಿದ್ದಾರೆ. ತೆರೆಯ ಮೇಲೆ ಅಪ್ಪ ಮತ್ತು ಮಗಳ ಜುಗಲಬಂದಿ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ.
ಹೀಗಿರುವಾಗ ಇದೀಗ ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ. ಕಿಂಗ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಸುಹಾನಾ ಅವರ ತಾಯಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಚಿತ್ರದಲ್ಲಿ ಇವರದ್ದು ಅತಿಥಿ ಪಾತ್ರವಾದರೂ ಕೂಡ ಆ ಪಾತ್ರಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ ಎನ್ನುವ ಮಾತು ಬಾಲಿವುಡ್‌ನಲ್ಲಿ ಸದ್ಯ ಕೇಳಿ ಬರುತ್ತಿದೆ. ಸಹಜವಾಗಿ ಈ ಸುದ್ದಿ ಕೇಳಿ ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅವರ ಅಭಿಮಾನಿ ಬಳಗ ಖುಷಿಯಾಗಿದೆ.
ಆದರೆ. ಕಿಂಗ್ ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಈ ಸಂಭ್ರಮಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ. ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಯಾವ ವಿಚಾರವನ್ನು ಪ್ರಸಾಪಿಸದೇ ಕೇವಲ ಸುಳ್ಳು ಎಂದು ಮಾತ್ರ ಬರೆದುಕೊಂಡಿದ್ದಾರೆ. ಹೀಗಾಗಿ ಅನೇಕರು ದೀಪಿಕಾ ಪಡುಕೋಣೆಯ ಕುರಿತು ಹಬ್ಬಿರುವ ಸುದ್ದಿಯ ಕುರಿತು ಸಿದ್ಧಾರ್ಥ್ ಆನಂದ್ ಟ್ವಿಟ್ ಮಾಡಿದ್ದಾರೆ ಎಂದುಕೊಂಡಿದ್ಧಾರೆ. ಇನ್ನು ಕೆಲವರು ಆರಂಭದಲ್ಲಿ ಎಲ್ಲರು ಸುದ್ದಿಯನ್ನು ಅಲ್ಲಗೆಳೆಯುತ್ತಾರೆ ಆ ನಂತರ ಆ ಸುದ್ದಿಯೇ ನಿಜವಾಗಿರುತ್ತೆ ಎನ್ನುವ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಚಿತ್ರದಲ್ಲಿ ಇಲ್ಲವೆಂದ ಮೇಲೆ ಅದನ್ನು ನೇರವಾಗಿಯೇ ಸಿದ್ಧಾರ್ಥ್ ಆನಂದ್ ಹೇಳಬಹುದಿತ್ತಲ್ಲ ಎನ್ನುತ್ತಿದ್ದಾರೆ.
ಇನ್ನು ಕೆಲವರು ದೀಪಿಕಾ ಪಡುಕೋಣೆ ಆಯ್ಕೆಯ ಕುರಿತು ಅಪಸ್ವರ ತೆಗೆಯುತ್ತಿದ್ದಾರೆ. ಈಗಾಗಲೇ ಶಾರುಖ್ ಮತ್ತು ದೀಪಿಕಾ ಜೋಡಿಯನ್ನು ಹಲವು ಚಿತ್ರಗಳಲ್ಲಿ ನಾವು ನೋಡಿದ್ದೇವೆ, ಪಠಾಣ್ ಚಿತ್ರದ ಎರಡನೇ ಭಾಗದಲ್ಲಿ ಕೂಡ ದೀಪಿಕಾ ಪಡುಕೋಣೆ ಅವರೇ ನಾಯಕಿ, ಹೀಗಾಗಿ ಕಿಂಗ್ ಚಿತ್ರಕ್ಕೆ ಬೇರೆ ನಾಯಕಿಯನ್ನು ಆಯ್ಕೆ ಮಾಡಿಕೊಳ್ಳಿ ಎಂದು ಸಿದ್ದಾರ್ಥ್ ಆನಂದ್‌ಗೆ ಸಲಹೆಯನ್ನು ನೀಡುತ್ತಿದ್ದಾರೆ. ಈ ವಯಸ್ಸಿನಲ್ಲಿ ಶಾರುಖ್ ಖಾನ್ ಅವರಿಗೆ ಮಾಧುರಿ ದೀಕ್ಷಿತ್ ಅಥವಾ ಟಬು ಅತ್ಯುತ್ತಮ ಜೋಡಿ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ. ಇನ್ನು ಕೆಲವರು ಕಾಜೋಲ್ ಹೆಸರನ್ನು ಕೂಡ ಸೂಚಿಸುತ್ತಿದ್ಧಾರೆ.
ಅಂದ್ಹಾಗೇ ದೀಪಿಕಾ ಪಡುಕೋಣೆ ಕಳೆದ ವರ್ಷವಷ್ಟೇ ತಾಯಿಯಾಗಿದ್ದಾರೆ. ತಮ್ಮ ಮುದ್ದಾದ ಮಗು ಜೊತೆ ಸದ್ಯ ಸಮಯವನ್ನು ಕಳೆಯುತ್ತಿದ್ದಾರೆ. ಇನ್ನು, ಚಿತ್ರರಂಗದಲ್ಲಿ ನಾಯಕಿಯರಿಗೆ ಮದುವೆಯಾದರೆ, ಮಕ್ಕಳಾದರೆ ಅವಕಾಶ ಸಿಗುವುದಿಲ್ಲ ಎನ್ನುವ ಮಾತು ಇದೆ. ನಾಯಕಿಯರನ್ನು ತಾಯಿಯ ಪಾತ್ರಕ್ಕೆ ಅಥವಾ ಪೋಷಕ ಪಾತ್ರಕ್ಕೆ ಸೀಮಿತಗೊಳಿಸುತ್ತೆ ಎನ್ನುವ ಮಾತು ಕೂಡ ಇದೆ.
ಹೀಗಾಗಿಯೇ ಕಿಂಗ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ತಾಯಿಯ ಪಾತ್ರವನ್ನು ನಿರ್ವಹಿಸುತ್ತಿದ್ಧಾರೆ ಎನ್ನುವ ಸುದ್ದಿ ಕೇಳಿ ಅನೇಕರು ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಮಗು ಆದ ಮೇಲೆ ದೀಪಿಕಾ ಪಡುಕೋಣೆಯ ಬೆಲೆ ಕಡಿಮೆ ಆಯ್ತಾ, ನಾಯಕಿಯ ಬದಲು ಸುಹಾನಾ ತಾಯಿಯ ಪಾತ್ರವನ್ನು ಮಾಡಲು ದೀಪಿಕಾ ಒಪ್ಪುತ್ತಾರಾ ? ಎಂದು ಚರ್ಚೆ ಮಾಡುತ್ತಿದ್ಧಾರೆ. ಯಾವುದೇ ಕಾರಣಕ್ಕೂ ದೀಪಿಕಾ ಈ ಪಾತ್ರವನ್ನು ಒಪ್ಪಬಾರದು ನಾಯಕಿಯಾಗಿಯೇ ಚಿತ್ರರಂಗದಲ್ಲಿ ಮುಂದುವರೆಯಬೇಕು ಎಂದು ಕೂಡ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಸದ್ಯಕ್ಕೆ ಈ ವಿಚಾರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಇನ್ನುಳಿದಂತೆ ಅಂದ್ಹಾಗೇ ಕಿಂಗ್ ಚಿತ್ರವನ್ನು ಈ ಹಿಂದೆ ನಡೆದ ಮಾತುಕಥೆಯಂತೆ ಸುಜೋಯ್ ಘೋಷ್ ನಿರ್ದೇಶಿಸಬೇಕಿತ್ತು. ಆದರೆ ಆ ನಂತರ ಅದೇನಾಯ್ತೋ ? ಏಕಾಏಕಿ ಸುಜೋಯ್ ಘೋಷ್ ಅವರನ್ನು ಶಾರುಖ್ ಖಾನ್ ಮನೆಗೆ ಕಳುಹಿಸಿದರು. ಸುಜೋಯ್ ಘೋಶ್ ಬದಲು ಸಿದ್ಧಾರ್ಥ್ ಆನಂದ್ ಅವರನ್ನು ಕರೆತಂದು ನಿರ್ದೇಶಕನ ಕುರ್ಚಿಯ ಮೇಲೆ ಕೂರಿಸಿದರು.
ಕಿಂಗ್ ಖಾನ್ ಅವರ ಈ ನಡೆ ಹಲವಾರು ಪ್ರಶ್ನೆಗಳನ್ನು ಬಾಲಿವುಡ್‌ನಲ್ಲಿ ಹುಟ್ಟುಹಾಕಿತ್ತು. ಶಾರುಖ್ ಖಾನ್ ಅವರ ಇಮೇಜ್‌ನ ಸಂಭಾಳಿಸುವ ಸಾಮರ್ಥ್ಯ ಇರದ ಕಾರಣ ಸುಜೋಯ್ ಘೋಷ್ ಖುದ್ದು ಚಿತ್ರದಿಂದ ಹೊರ ನಡೆದರಾ ಅಥವಾ ಸೋಲಿನ ಭಯದಿಂದ ಖುದ್ದು ಶಾರುಖ್ ಖಾನ್ ಅವರೇ ಸುಜೋಯ್ ಘೋಷ್ ಅವರನ್ನು ಮನೆಗೆ ಕಳುಹಿಸಿದರಾ ಎನ್ನುವ ಅನುಮಾನ ಅನೇಕರನ್ನು ಕಾಡಲು ಶುರು ಮಾಡಿತ್ತು.
ಇನ್ನು ಹೃತಿಕ್ ರೋಶನ್ ಅಭಿನಯದ ಬ್ಯಾಂಗ್ ಬ್ಯಾಂಗ್ ಹೊರತುಪಡಿಸಿದರೆ ಸುಜೋಯ್ ಘೋಷ್ ಸಾಹಸ ಪ್ರಧಾನ ಚಿತ್ರಗಳನ್ನು ಮಾಡಿಲ್ಲ. ಬದಲಿಗೆ ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಕಥೆಯಾಧಾರಿತ ಚಿತ್ರಗಳನ್ನು ಮಾಡಿದ್ದಾರೆ. ಆ ಪೈಕಿ ಶಾರುಖ್ ಖಾನ್ ಹಿಂದೆ ನಿರ್ಮಾಣ ಮಾಡಿದ್ದ 'ಬದ್ಲಾ' ಕೂಡ ಒಂದು. ಇನ್ನು ಕಿಂಗ್ ಆಕ್ಷನ್ ಚಿತ್ರ. ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ. ಈ ಕಾರಣಕ್ಕೆ ಸುಜೋಯ್ ಅವರ ಸಾಮರ್ಥ್ಯದ ಮೇಲೆ ಶಾರುಖ್ ಖಾನ್ ಅವರಿಗೆ ನಂಬಿಕೆ ಇಲ್ಲ, ಹೀಗಾಗಿಯೇ ಅವರ ಬದಲು ತಮ್ಮ ಪಠಾಣ್ ಚಿತ್ರವನ್ನು ನಿರ್ದೇಶಿಸಿ ತಮ್ಮನ್ನು ಗೆಲ್ಲಿಸಿದ್ದ ಸಿದ್ಧಾರ್ಥ್ ಆನಂದ್ ಅವರಿಗೆ ಕಿಂಗ್ ಜವಾಬ್ಧಾರಿಗಳನ್ನು ಶಾರುಖ್ ಖಾನ್ ನೀಡಿದ್ದಾರೆ ಎಂಬ ಸುದ್ದಿ ಕೂಡ ಗುಲ್ಲಾಗಿತ್ತು. ಈ ವಿಚಾರಕ್ಕೂ ಕೂಡ ಶಾರುಖ್ ಖಾನ್ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಸಿದ್ಧಾರ್ಥ್ ಆನಂದ್ ಕೂಡ ನಿರ್ದೇಶಕ ಬದಲಾಗಿದ್ದೇಕೆ ಎನ್ನುವುದಕ್ಕೆ ಉತ್ತರ ನೀಡಿರಲಿಲ್ಲ.
ಹೀಗೆ ನಾನಾ ಕಾರಣಗಳಿಂದ ಆರಂಭದಿಂದಲೂ ಸದ್ದು ಮಾಡುತ್ತಾ ಸುದ್ದಿಯಾಗುತ್ತಿರುವ ಕಿಂಗ್ ಚಿತ್ರದ ಚಿತ್ರೀಕರಣ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲಿಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ. ಇನ್ನು, ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಬೆಳ್ಳಿಪರದೆಯ ಮೇಲೆ ನೋಡಿರದ ಸಾಹಸ ಸನ್ನಿವೇಶಗಳು ಕಿಂಗ್ ಚಿತ್ರದಲ್ಲಿರಲಿವೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಚಿತ್ರದ ಚಿತ್ರೀಕರಣ 07 ತಿಂಗಳು ನಡೆಯಲಿದ್ದು 2026ರಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಕಿಂಗ್ ಚಿತ್ರ ಶಾರುಖ್ ಖಾನ್ ವೃತ್ತಿ ಬದುಕಿನ ಬಹುದೊಡ್ಡ ಮೈಲಿಗಲ್ಲಾಗಲಿದೆ ಎನ್ನುವ ಭವಿಷ್ಯವಾಣಿ ಕೂಡ ಕೇಳಿ ಬರುತ್ತಿದೆ.
ಸದ್ಯ ಕಿಂಗ್ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿ ಎನ್ನುವ ಸುದ್ದಿ ಗುಲ್ಲಾಗಿದೆ. ನಿಜಕ್ಕೂ ದೀಪಿಕಾ ಪಡುಕೋಣೆ ರೀಲ್‌ನಲ್ಲಿ ಶಾರುಖ್ ಖಾನ್ ಅವರ ಮಗಳು ಸುಹಾನಾ ಅವರ ತಾಯಿಯಾಗಲು ಒಪ್ಪುತ್ತಾರಾ ? ಉತ್ತರ ಶೀಘ್ರದಲ್ಲಿಯೇ ಸಿಗುವ ನಿರೀಕ್ಷೆ ಇದೆ.


Click it and Unblock the Notifications










