"ಸಿನ್ಮಾ ಸೆಟ್‌ನಲ್ಲೇ ನಾನು ಸಾಯ್ಬೇಕು"; ಶಾರುಖ್ ಖಾನ್
ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಸೂಪರ್ ಹಿಟ್ ಸಿನಿಮಾಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಬರ್ತಿದ್ದಾರೆ. ಸೋತಾಗಲೆಲ್ಲಾ ಮತ್ತೆ ಗೆದ್ದು ಬೀಗಿದ್ದಾರೆ. ಸತತ ಸೋಲಿನ ಬಳಿಕ ಕಳೆದ ವರ್ಷ ಹ್ಯಾಟ್ರಿಕ್ ಹಿಟ್ ಬಾರಿಸಿದ್ದರು. ಸಿನಿಮಾ ಸೆಟ್‌ನಲ್ಲೇ ಸಾಯಬೇಕು ಎನ್ನುವುದು ನನ್ನ ಕೊನೆ ಆಸೆ ಎಂದು ಕಿಂಗ್ ಖಾನ್ ಹೇಳಿಕೊಂಡಿದ್ದಾರೆ.
ತಮ್ಮ ಸಿನಿಮಾ ಪ್ರೀತಿ ಬಗ್ಗೆ ಸಾಕಷ್ಟು ಸಂದರ್ಭಗಳಲ್ಲಿ ಶಾರುಖ್ ಖಾನ್ ಹೇಳಿಕೊಂಡಿದ್ದಾರೆ. ಮತ್ತೊಮ್ಮೆ ಇದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ಲೊಕಾರ್ನೊ ಫಿಲ್ಮ್ ಫೆಸ್ಟಿವಲ್‌ನಲ್ಲಿ ಶಾರುಖ್ ಖಾನ್‌ಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ವೇಳೆ ಸಂದರ್ಶನದಲ್ಲಿ ಮಾತನಾಡಿದ್ದ ಕಿಂಗ್ ಖಾನ್ ಸಾಕಷ್ಟು ವಿಚಾರಗಳ ಬಗ್ಗೆ ಮನದಾಳ ತೆರೆದಿಟ್ಟಿದ್ದಾರೆ.

ಸದಾ ನಟಿಸುತ್ತಲೇ ಇರುತ್ತೀರಾ ಎನ್ನುವ ಪ್ರಶ್ನೆಗೆ ಶಾರುಖ್ ಖಾನ್ ಉತ್ತರಿಸಿದ್ದಾರೆ. ಹೌದು, ನಾನು ಸಾಯುವ ಕೊನೆ ದಿನದವರೆಗೆ ನಟಿಸುತ್ತಲೇ ಇರುತ್ತೇನೆ. ಯಾರಾದರೂ ಆಕ್ಷನ್ ಎಂದು ಹೇಳಬೇಕು. ಆಗ ನಾನು ಸಾಯಬೇಕು, ಬಳಿಕ ಅವರು ಕಟ್, ಕಟ್ ಎಂದು ಹೇಳಿದರೂ ನಾನು ಮೇಲೇಳಬಾರದು, ಇದೇ ನನ್ನ ಜೀವನದ ಕೊನೆಯ ಆಸೆ ಎಂದು ಶಾರುಖ್ ಖಾನ್ ಹೇಳಿಕೊಂಡಿದ್ದಾರೆ.
ನಾನು ಗಂಭೀರ ನಟನಲ್ಲ. ಆದರೆ ಜನರ ಮುಂದೆ ಪ್ರದರ್ಶಿಸಲು ಕೆಲ ವಿಚಾರಗಳನ್ನು ಅರಿತಿದ್ದೇನೆ. ನಟನೆ ಮೂಲಕ ಜೀವದನ ಸಂತೋಷ ಆಚರಿಸುತ್ತೇನೆ. ಯಾರನ್ನಾದರೂ ನಾನು 50 ವರ್ಷ ಪ್ರೀತಿಸಿದ್ದರೆ ಅದು ಎಂಟರ್‌ಟೈನ್‌ಮೆಂಟ್, ನಾನು ಯಾರನ್ನಾದರೂ 30 ಸೆಕೆಂಡ್ ರಂಜಿಸಿದರೆ ಅದು ನನ್ನ ಕ್ರಿಯೇಟಿವ್. ನಿಜಕ್ಕೂ ಇದನ್ನು ನಾನು ಸಂಭ್ರಮಿಸುತ್ತಿದ್ದೇನೆ ಎಂದು ಬಾಲಿವುಡ್ ಬಾದ್‌ಶಾ ವಿವರಿಸಿದ್ದಾರೆ.

ಸ್ಟಾರ್‌ಡಮ್ ಬಗ್ಗೆ ಪ್ರತಿಕ್ರಿಯಿಸಿರುವ ಶಾರುಖ್ ಸ್ಟಾರ್‌ಡಮ್‌ನ ನಾನು ಬಹಳ ಗೌರವಿಸುತ್ತೀನಿ. ಯಾಕಂದರೆ ಅದರಿಂದ ಅಭಿಮಾನಿಗಳ ಪ್ರೀತಿ, ಮೆಚ್ಚುಗೆ, ಹಣ ಎಲ್ಲವೂ ಸಿಕ್ಕಿದೆ. ಇನ್ನು ನನಗೆ ಸೆನ್ಸ್ ಆಫ್ ಹ್ಯೂಮರ್ ಜಾಸ್ತಿ. ಆದರೆ ಈಗ ಜನ ಬಹಳ ಸೂಕ್ಷ್ಮವಾಗಿ ಯೋಚಿಸುತ್ತಿದ್ದಾರೆ. ಏನು ಹೇಳಿದರೂ ಡಿಸ್ಟರ್ಬ್ ಆಗುತ್ತಿದ್ದಾರೆ. ಹಾಗಾಗಿ ಸೆನ್ಸ್ ಆಫ್ ಹ್ಯೂಮರ್ ಇಲ್ಲದಿರುವುದೇ ಒಳ್ಳೆಯದು ಅನಿಸುತ್ತದೆ ಎಂದು ಬಾಲಿವುಡ್ ನಟ ತಿಳಿಸಿದ್ದಾರೆ.
ಕಿರುತೆರೆಯಿಂದ ಚಿತ್ರರಂಗಕ್ಕೆ ಬಂದು ಸಕ್ಸಸ್ ಕಂಡವರಲ್ಲಿ ಶಾರೂಖ್ ಖಾನ್ ಸಹ ಒಬ್ಬರು. ದೆಹಲಿಯಲ್ಲಿ ಹುಟ್ಟಿದ ಕಿಂಗ್ ಖಾನ್ ಚಿಕ್ಕಂದಿನಲ್ಲಿ 5 ವರ್ಷಗಳ ಕಾಲ ಮಂಗಳೂರಿನಲ್ಲಿ ಅಜ್ಜಿ ತಾತನ ಜೊತೆಗಿದ್ದರು. ಮಧ್ಯಮವರ್ಗದ ಕುಟುಂಬದಲ್ಲಿ ಓದಿ ಬೆಳೆದ ಶಾರುಖ್ ಮೊದಲಿಗೆ ಕ್ರೀಡಾಕ್ಷೇತ್ರದತ್ತ ಒಲವು ತೋರಿದ್ದರು. ಆದರೆ ಭುಜಕ್ಕೆ ಪೆಟ್ಟಾಗಿ ಗಾಯಗೊಂಡ ಬಳಿಕ ಅದರಿಂದ ಹಿಂದೆ ಸರಿದರು. ಬಳಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡರು.
ಶಾಲೆ, ಕಾಲೇಜು ದಿನಗಳಲ್ಲಿ ನಟನೆಯತ್ತ ಆಸಕ್ತಿ ಬಂತು. ತರಗತಿಯಲ್ಲಿ ಕಾಲ ಕಳೆದಿದ್ದಕ್ಕಿಂತ ನಟನೆಯಲ್ಲಿ ಗುರ್ತಿಸಿಕೊಂಡಿದ್ದೇ ಹೆಚ್ಚು. ನಟನೆಯ ತರಗತಿಗಳಿಗೆ ಸೇರಿ ಪಟ್ಟುಗಳನ್ನು ಕಲಿತರು. 1989ರಲ್ಲಿ 'ಫೌಜಿ' ಕಿರುತೆರೆ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ನಟಿಸಿದರು. ಬಳಿಕ ಒಂದಷ್ಟು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದರು. ನಾನು ಒಳ್ಳೆ ನಟ ಏನಲ್ಲ, ಸಿನಿಮಾಗಳಲ್ಲಿ ನಟಿಸೋದು ಬೇಡ ಎಂದುಕೊಂಡಿದ್ದರು.
ತಮ್ಮ ನಿರ್ಧಾರ ಬದಲಿಸಿಕೊಂಡಿದ್ದ ಶಾರುಖ್ 'ದೀವಾನಾ' ಚಿತ್ರದಲ್ಲಿ ಮೊದಲಿಗೆ ಬಣ್ಣ ಹಚ್ಚಿ ನಟಿಸಿದರು. ಮುಂದೆ 'ಬಾಜೀಗರ್', 'ಢರ್', 'ಪರ್‌ದೇಸ್', 'ದಿಲ್ ತೊ ಪಾಗಲ್ ಹೈ', 'ದಿಲ್‌ದೇ', 'ದೇವದಾಸ್', 'ಸ್ವದೇಶ್', ಚಕ್‌ದೇ 'ಇಂಡಿಯಾ', 'ಡಾನ್', 'ದಿಲ್‌ವಾಲೆ' ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸುತ್ತಾ ಬಂದರು.


Click it and Unblock the Notifications










