'ರಾಮಾಯಣ' ಚಿತ್ರದಲ್ಲಿ ಕೈಕೇಯಿ ಆಗಿ ಲಾರಾ ದತ್ತಾ? ಕೊನೆಗೂ ಮೌನ ಮುರಿದ ನಟಿ ಏನಂದ್ರು?
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ಕೇಳಿಬರ್ತಿದೆ. ಇತ್ತೀಚೆಗೆ ರಾಮ-ಸೀತೆ ಗೆಟಪ್‌ನಲ್ಲಿ ರಣ್‌ಬೀರ್ ಕಪೂರ್- ಸಾಯಿ ಪಲ್ಲವಿ ಫೋಟೊಗಳು ಲೀಕ್ ಆಗಿ ಭಾರೀ ವೈರಲ್ ಆಗಿತ್ತು. ಈ ಚಿತ್ರದ ನಿರ್ಮಾಣಕ್ಕೆ ಕನ್ನಡ ನಟ ರಾಕಿಂಗ್ ಸ್ಟಾರ್ ಯಶ್ ಸಹ ಕೈ ಜೋಡಿಸಿದ್ದಾರೆ.
'ರಾಮಾಯಣ' ಸಿನಿಮಾ ಅಧಿಕೃತವಾಗಿ ಘೋಷಣೆ ಆಗಿಲ್ಲ. ರಹಸ್ಯವಾಗಿ ಸೆಟ್‌ಗಳಲ್ಲಿ ಸಿನಿಮಾ ಚಿತ್ರೀಕರಣ ಕೂಡ ನಡೀತಿದೆ ಎನ್ನಲಾಗ್ತಿದೆ. ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್ ನಟಿಸುವ ಸಾಧ್ಯತೆ ಕೂಡ ಇದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ನಿಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ಚಿತ್ರಕ್ಕೆ ಬಂಡವಾಳ ಹೂಡುವುದು ಪಕ್ಕಾ ಆಗಿದೆ.

ರಾವಣನ ದೃಷ್ಟಿಕೋನದಲ್ಲಿ ರಾಮಾಯಣ ಕಥೆ ಹೇಳುತ್ತಿದ್ದಾರೆ ಎನ್ನುವ ಗುಸು ಗುಸು ಕೂಡ ಕೇಳಿಬರ್ತಿದೆ. ಈಗಾಗಲೇ ಸೆಟ್ ನಿರ್ಮಿಸಿ ರಾಮ, ಲಕ್ಷ್ಮಣರ ಗುರುಕುಲದ ಸನ್ನಿವೇಶಗಳನ್ನು ಚಿತ್ರೀಕರಿಸುತ್ತಿದ್ದಾರೆ ಎನ್ನಲಾಗ್ತಿದೆ. ಅರುಣ್ ಗೋವಿಲ್ ಚಿತ್ರದಲ್ಲಿ ದಶರಥ ಮಹಾರಾಜನ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕೈಕೇಯಿ ಆಗಿ ಲಾರಾ ದತ್ತ ನಟಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
ಲೀಕ್ ಆಗಿದ್ದ ಕೆಲ ಸೆಟ್ ಫೋಟೊಗಳಲ್ಲಿ ಅರುಣ್ ಗೋವಿಲ್ ಹಾಗೂ ಲಾರಾ ದತ್ತಾ ಕೂಡ ರಾಜಾ, ರಾಣಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಚಿತ್ರದಲ್ಲಿ ಬಣ್ಣ ಹಚ್ಚುತ್ತಿರುವ ಬಗ್ಗೆ ಯಾರೊಬ್ಬರು ಈವರೆಗೆ ಮಾತನಾಡಿಲ್ಲ. ಅಧಿಕೃತವಾಗಿ ಸಿನಿಮಾ ಕೂಡ ಇನ್ನು ಘೋಷಣೆ ಆಗಿಲ್ಲ. ಸದ್ಯ 'ರಾಮಾಯಣ' ಚಿತ್ರದಲ್ಲಿ ನಟಿಸುವ ಬಗ್ಗೆ ನಟಿ ಲಾರಾ ದತ್ತಾ ಮೌನ ಮುರಿದಿದ್ದಾರೆ.
'ರಾಮಾಯಣ' ಚಿತ್ರದಲ್ಲಿ ಕೈಕೇಯಿ ಪಾತ್ರದಲ್ಲಿ ನಟಿಸುತ್ತಿದ್ದೀರಾ? ಎನ್ನುವ ಪ್ರಶ್ನೆಗೆ ಆಕೆ ಉತ್ತರಿಸಿದ್ದಾರೆ. "ನಾನು ಕೂಡ ಈ ಬಗ್ಗೆ ತುಂಬಾ ಕೇಳುತ್ತಿದ್ದೇನೆ. ನಾನು ಈ ರೂಮರ್ಸ್ ಎಲ್ಲಾ ಅಲ್ಲಿಗೆ ಬಿಡುತ್ತಿದ್ದೇನೆ. ನಾನು ಆ ಬಗ್ಗೆ ಓದಲು, ಕೇಳಲು ಇಷ್ಟಪಡುತ್ತೇನೆ, ಆದ್ದರಿಂದ ದಯವಿಟ್ಟು ಮುಂದುವರಿಸಿ" ಎಂದಿದ್ದಾರೆ.

"ರಾಮಾಯಣದ ಭಾಗವಾಗಲು ಯಾರು ಬಯಸುವುದಿಲ್ಲ ಹೇಳಿ? ಚಿತ್ರದಲ್ಲಿ ನನಗೆ ಆಫರ್ ನೀಡಿದ್ದರೆ ನಾನು ನಟಿಸಲು ಇಷ್ಟಪಡುವ ಅನೇಕ ಪಾತ್ರಗಳಿವೆ - ಶೂರ್ಪನಖಿ, ಮಂಡೋದರಿ, ನಾನು ಎಲ್ಲಗಳನ್ನು ಪಾತ್ರಗಳನ್ನು ನಿರ್ವಹಿಸುತ್ತಿದ್ದೇನೆ" ಎಂದು ಲಾರಾ ದತ್ತಾ ನಕ್ಕಿದ್ದಾರೆ. ಆ ಮೂಲಕ 'ರಾಮಾಯಣ' ಚಿತ್ರದಲ್ಲಿ ನಟಿಸುವ ಬಗ್ಗೆ ಲಾರಾ ದತ್ತಾ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಯಾವುದನ್ನು ಖಚಿತಪಡಿಸಿಲ್ಲ.
ಬಹುಕೋಟಿ ವೆಚ್ಚದಲ್ಲಿ 3 ಭಾಗಗಳಾಗಿ 'ರಾಮಾಯಣ' ಕಾವ್ಯವನ್ನು ತೆರೆಗೆ ತರುತ್ತಿದ್ದಾರೆ ಎನ್ನಲಾಗ್ತಿದೆ. ವಿಭೀಷಣ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ, ಲಕ್ಷ್ಮಣನಾಗಿ ರವಿ ದುಬೆ, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಾರೆ ಎನ್ನಲಾಗ್ತಿದೆ. ಆಧುನಿಕ ತಂತ್ರಜ್ಞಾನ ಬಳಸಿ ಬಹಳ ರೋಚಕವಾಗಿ ಸಿನಿಮಾವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ.
ಸದ್ಯ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಈ ಚಿತ್ರವನ್ನು ಕೂಡ ಯಶ್ ನಿರ್ಮಾಣ ಮಾಡುತ್ತಿದ್ದಾರೆ. ಬಳಿಕ 'ರಾಮಾಯಣ' ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗುತ್ತಾರೆ ಎನ್ನಲಾಗ್ತಿದೆ. ಆದರೆ ರಾವಣನಾಗಿ ನಟಿಸೋ ಬಗ್ಗೆ ಯಶ್ ಇನ್ನು ಪ್ರತಿಕ್ರಿಯಿಸಿಲ್ಲ. ಇತ್ತೀಚೆಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸದೇ ಸುಮ್ಮನಾಗಿದ್ದರು. ಈಗಾಗಲೇ ಸಿನಿಮಾ, ನಾಟಕ, ಧಾರಾವಾಹಿ ರೂಪದಲ್ಲಿ 'ರಾಮಾಯಣ' ಕಥೆ ಬಂದಿದ್ದರೂ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.


Click it and Unblock the Notifications











