ಬಾಕ್ಸಾಫೀಸ್‌ನಲ್ಲಿ 'ಹನುಮಾನ್' ಕಥೆ ಏನಾಯ್ತು? 'ಕಾಂತಾರ' ದಾಖಲೆ ಮುರಿಯೋದು ಕಷ್ಟನಾ?
ಸಂಕ್ರಾಂತಿ ಸಂಭ್ರಮದಲ್ಲಿ ಬಂದ ಸಿನಿಮಾಗಳಲ್ಲಿ 'ಹನುಮಾನ್' ಭರ್ಜರಿ ಸಕ್ಸಸ್ ಕಂಡಿದ್ದು ಗೊತ್ತೇಯಿದೆ. ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ'ಗಿಂತಲೂ 'ಹನುಮಾನ್' ಬಾಕ್ಸಾಫೀಸ್ ಗಳಿಕ ಚೆನ್ನಾಗಿದೆ. ವಿದೇಶಗಳಲ್ಲಿ ಕೂಡ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿದೆ. ಹಿಂದಿ ವರ್ಷನ್ ಸಹ ಹಿಟ್ ಆಗಿದೆ.
ಸ್ಟಾರ್‌ಗಳಿಗಳಿಗಿಂತ ಕಂಟೆಂಟ್ ಮುಖ್ಯ ಅನ್ನೋದು ಇತ್ತೀಚೆಗೆ ಪದೇ ಪದೆ ಸಾಬೀತಾಗುತ್ತಿದೆ. ಯುವನಟ ತೇಜ ಸಜ್ಜ ನಟನೆಯ ಸಣ್ಣ ಸಿನಿಮಾ 'ಹನುಮಾನ್' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಿದೆ. ಸುಗ್ಗಿ ಸಂಭ್ರಮದಲ್ಲಿ ಕರ್ನಾಟದಲ್ಲೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ವಾರದ ಬಳಿಕ 'ಗುಂಟೂರು ಖಾರಂ' ಸಿನಿಮಾ ತೆಗೆದು 'ಹನುಮಾನ್' ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡಲಾಗಿತ್ತು. ಅಷ್ಟರಮಟ್ಟಿಗೆ ಸಿನಿಮಾ ಸದ್ದು ಮಾಡ್ತಿದೆ. ಮಹೇಶ್ ಬಾಬು ಸಿನಿಮಾ 185 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸುಸ್ತಾಗಿದೆ. 'ಹನುಮಾನ್' ಗಳಿಕೆ 230 ಕೋಟಿ ರೂ. ದಾಟಿರುವ ಅಂದಾಜಿದೆ.

ತೆಲುಗು 450 ಸ್ಕ್ರೀನ್‌ಗಳಲ್ಲಿ, ಹಿಂದಿ 1500 ಸ್ಕ್ರೀನ್‌ಗಳಲ್ಲಿ ಇನ್ನುಳಿದಂತೆ ವಿಶ್ವದಾದ್ಯಂತ 2500 ಸ್ಕ್ರೀನ್‌ಗಳಲ್ಲಿ 'ಹನುಮಾನ್' ಬಿಡುಗಡೆ ಆಗಿತ್ತು. ಫಸ್ಟ್ ಶೋನಿಂದಲೇ 'ಹನುಮಾನ್' ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿತ್ತು. ಸಿನಿಮಾ ನೋಡಿದವರೆಲ್ಲರೂ ಅದ್ಭುತವಾಗಿದೆ ಎನ್ನುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಪಾಸಿಟಿವ್ ಟಾಕ್ ಬಂದಿದ್ದರಿಂದ ಥಿಯೇಟರ್ ಗಳ ಸಂಖ್ಯೆ ನಿಧಾನವಾಗಿ ಹೆಚ್ಚಾಯಿತು. ಸದ್ಯ ಪ್ರಪಂಚದಾದ್ಯಂತ ಸುಮಾರು 3000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. 13ನೇ ದಿನ ಚಿತ್ರ 3.46 ಕೋಟಿ ಕಲೆಕ್ಷನ್ ಮಾಡಿದೆ. 12ನೇ ದಿನ ರೂ. 4.65 ಕೋಟಿ ಗಳಿಕೆ ಕಂಡಿದ್ದ ಸಿಇಮಾ 13ನೇ ದಿನಕ್ಕೆ ಶೇ.33ರಷ್ಟು ಕುಸಿತ ಕಂಡಿದೆ.
ತೆಲುಗು ರಾಜ್ಯಗಳಲ್ಲಿ 'ಹನುಮಾನ್' ಚಿತ್ರ ರೂ. 101 ಕೋಟಿ, ಕರ್ನಾಟಕದಲ್ಲಿ ರೂ. 12 ಕೋಟಿ, ತಮಿಳುನಾಡಿನಲ್ಲಿ ರೂ. 3 ಕೋಟಿ, ಕೇರಳದಲ್ಲಿ ರೂ. ಕೋಟಿ, ಹಿಂದಿಯಲ್ಲಿ ರೂ. 45 ಕೋಟಿ ಸಂಗ್ರಹಿಸಿದೆ. 14 ದಿನಗಳಲ್ಲಿ ಸಿನಿಮಾ 230 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ.

ಪೌರಾಣಿಕ, ಜನಪದ ಸಿನಿಮಾಗಳಿಗೆ ಇತ್ತೀಚೆಗೆ ಉತ್ತರ ಭಾರತದಲ್ಲಿ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಕನ್ನಡದ 'ಕಾಂತಾರ', ತೆಲುಗಿನ 'ಕಾರ್ತಿಕೇಯ'-2 ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದವು. 'ಕಾಂತಾರ' ಹಿಂದಿ ವರ್ಷನ್ ಬರೋಬ್ಬರಿ 85 ಕೋಟಿ ರೂ. ಗಳಿಕೆ ಕಂಡಿತ್ತು. 'ಹನುಮಾನ್' ಹಿಂದಿ ವರ್ಷನ್‌ಗೂ ಉತ್ತರ ಭಾರತದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಫಸ್ಟ್ ವೀಕೆಂಡ್ 'ಕಾಂತಾರ' ದಾಖಲೆ ಮುರಿದಿತ್ತು. ಆದರೆ ನಿಧಾನವಾಗಿ ಹವಾ ಕಮ್ಮಿ ಆಗುತ್ತಿದೆ.
2 ವಾರಕ್ಕೆ 'ಹನುಮಾನ್' ಹಿಂದಿ ವರ್ಷನ್ 38 ಕೋಟಿ ರೂ. ಕಲೆಕ್ಷನ್ ಮಾಡಿದೆ. 'ಕಾಂತಾರ' ಸಿನಿಮಾ ಒಟ್ಟು 85 ಕೋಟಿ ರೂ. ಗಳಿಕೆ ಕಂಡಿತ್ತು. 'ಹನುಮಾನ್' ಸಿನಿಮಾ ಕಲೆಕ್ಷನ್ ಡಲ್ ಆಗಿದ್ದು 'ಕಾಂತಾರ' ದಾಖಲೆ ಮುರಿಯುವುದು ಕಷ್ಟ ಎನ್ನಲಾಗ್ತಿದೆ.
ಪ್ರಶಾಂತ್ ವರ್ಮಾ 'ಹನುಮಾನ್' ಸಿನಿಮಾ ನಿರ್ದೇಶನ ಮಾಡಿದ್ದಾರೆ. ತೇಜ ಸಜ್ಜಾ ಜೋಡಿಯಾಗಿ ಅಮೃತಾ ಅಯ್ಯರ್ ಮಿಂಚಿದ್ದಾರೆ. ವರಲಕ್ಷ್ಮಿ ಶರತ್ ಕುಮಾರ್, ಸಮುದ್ರ ಖನಿ ತಾರಾಗಣದಲ್ಲಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯನಾಗಿದ್ದ ಹನುಮಂತು ಎಂಬ ಯುವಕನಿಗೆ ಸೂಪರ್ ಪವರ್ ಬಂದರೆ ಏನಾಗುತ್ತದೆ? ಆ ಪವರ್ ಬಳಸಿಕೊಂಡು ತನ್ನವರನ್ನು, ತನ್ನ ಊರನ್ನು ಹೇಗೆ ಕಾಪಾಡುತ್ತಾನೆ ಎನ್ನುವುದು ಸಿನಿಮಾ ಕಥೆ.
ಸಿಂಪಲ್ ಕತೆಯನ್ನು ಗ್ರಾಫಿಕ್ಸ್ ಬಳಿಕ ಬಹಳ ರೋಷಕವಾಗಿ ಕಟ್ಟಿಕೊಡಲಾಗಿದೆ. ಮೇಕಿಂಗ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಇನ್ನು ಚಿತ್ರದ ಮುಂದುವರೆದ ಭಾಗ ಕೂಡ ಘೋಷಣೆಯಾಗಿದೆ. 'ಜೈ ಹನುಮಾನ್' ಟೈಟಲ್‌ನಲ್ಲಿ ಸರಣಿಯ ಹೊಸ ಸಿನಿಮಾ ಮೂಡಿ ಬರಲಿದೆ.


Click it and Unblock the Notifications











