'ಮಾಡೆಲ್'ಗೆ ವಿಕೆಟ್ ಒಪ್ಪಿಸಿದ ಭಾರತದ ಪಾಕೆಟ್ ಡೈನಮೋ ; ಇಶಾನ್ ಕಿಶನ್ ಹೃದಯ ಗೆದ್ದ ಚೆಲುವೆಯ ಹಿನ್ನೆಲೆ ಏನು ?
ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ.
ಇನ್ನೂ.. ಮೊಹಮ್ಮದ್ ಅಜರುದ್ದೀನ್ ಅವರಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ, ಅಜಯ್ ಜಡೇಜಾ ಅವರಿಂದ ಹಿಡಿದು ಕೆ.ಎಲ್.ರಾಹುಲ್‌ವರೆಗೆ.. ಯುವರಾಜ್ ಸಿಂಗ್ ಅವರಿಂದ ಹಿಡಿದು ಜಹೀರ್ ಖಾನ್‌ವರೆಗೆ.. ಅನೇಕರು ನಾಯಕಿಯರ ಬೆಡಗು-ಭಿನ್ನಾಣಕ್ಕೆ ಮನ ಸೋತಿದ್ದಾರೆ. ಕೆಲವರು ಪ್ರೀತಿಯಲ್ಲಿ ಬಿದ್ದು ಎದ್ದರೆ, ಇನ್ನೂ ಕೆಲವರು ಮದುವೆಯ ಬಂಧನಕ್ಕೊಳಗಾಗಿದ್ದಾರೆ. ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಈ ಸಾಲಿಗೆ ಈಗ ಇಶಾನ್ ಕಿಶನ್ ಕೂಡ ಸೇರಿಕೊಳ್ಳುವ ಎಲ್ಲ ಲಕ್ಷಣ ಸದ್ಯ ಕಂಡು ಬರುತ್ತಿವೆ. ವ್ಯತ್ಯಾಸ ಏನಂದರೆ ಇಶಾನ್ ಕಿಶನ್ ಅವರ ಮನದನ್ನೆ ಇನ್ನೂ ಚಿತ್ರರಂಗಕ್ಕೆ ಬಂದಿಲ್ಲ. ಬದಲಿಗೆ ಫ್ಯಾಷನ್ ವಲಯದಲ್ಲಿ ತಮ್ಮ ಚಾಪನ್ನು ಮೂಡಿಸಿದ್ದಾರೆ. ಅವರ ಹೆಸರು ಅದಿತಿ ಹುಂಡಿಯಾ.

ಹೌದು, ಅದಿತಿ ಹುಂಡಿಯಾ..2017ರ ಫೆಮಿನಾ ಮಿಸ್ ಇಂಡಿಯಾ ಫೈನಲಿಸ್ಟ್. 2018ರ ಮಿಸ್ ದಿವಾ ವಿನ್ನರ್. ಮೂಲತಃ ಜೈಪುರದವರಾದ ಅದಿತಿ ಜನಪ್ರಿಯ ಫ್ಯಾಷನ್ ಇನ್‌ಫ್ಲುಯೆನ್ಸರ್ ಕೂಡ ಹೌದು. ಇನ್ ಸ್ಟಾಗ್ರಾಮ್ ನಲ್ಲಿ 2,80,000ಕ್ಕೂ ಹೆಚ್ಚಿನ ಜನ ಫಾಲೋ ಮಾಡುತ್ತಿದ್ದಾರೆ.
ಇಂಥಾ ಅದಿತಿ ಮತ್ತು ಇಶಾನ್ ಪಾಂಡೆ ನಡುವೆ ಪ್ರೇಮಾಂಕುರವಾಗಿದ್ಹೇಗೆ ಎನ್ನುವುದಕ್ಕೆ ನಿಖರ ಉತ್ತರ ಗೊತ್ತಿಲ್ಲವಾದರೂ 2019ರ ಐಪಿಎಲ್ ಪಂದ್ಯಾವಳಿ ಇವರ ಪ್ರೇಮಕಥೆಗೆ ಮುನ್ನುಡಿ ಬರೆಯಿತು ಎನ್ನುವ ಸುದ್ದಿ ಇದೆ.
2019ರ ಐಪಿಎಲ್ ನಲ್ಲಿ ಇಶಾನ್ ಪರ ಬೆಂಬಲದ ಧ್ವಜ ಹಾರಿಸಿದ್ದ ಅದಿತಿ ಇಡೀ ಟೂರ್ನಿಯೂದ್ದಕ್ಕೂ ಇಶಾನ್ ಅವರನ್ನು ಹುರಿದುಂಬಿಸಿದ್ದರು. ಇಷ್ಟೇ ಅಲ್ಲ ಒಂದೂವರೆ ವರ್ಷ ಇಶಾನ್ ಕಿಶನ್ ಫಾರ್ಮ್ ನಲ್ಲಿದೆ ಒದ್ದಾಡುತ್ತಿದ್ದಾಗ ಆಗ ಧೈರ್ಯ ತುಂಬಿದ್ದು ಇದೇ ಅದಿತಿ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿಯನ್ನು ಮಾಡಿವೆ.
ಇಲ್ಲಿಂದ ಇಬ್ಬರ ನಡುವೆ ಸ್ನೇಹ ಚಿಗುರೊಡೆಯಿತು ಎಂದು ಹೇಳಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ಆ ನಂತರ ಇಬ್ಬರು ಹಲವು ಬಾರಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು ಇದೆ. ಅದಿತಿ ಮೇಲಿಂದ ಮೇಲೆ ಕ್ರೀಡಾಂಗಣಕ್ಕೆ ಬಂದು ಪಂದ್ಯ ಕಣ್ತುಂಬಿಕೊಂಡ ಉದಾಹರಣೆ ಕೂಡ ಇವೆ.

ಈ ಹಿನ್ನೆಲೆ ಇದೆಲ್ಲವನ್ನೂ ಗಮನಿಸಿದ ಕ್ರೀಡಾಭಿಮಾನಿಗಳು ಮತ್ತು ಫ್ಯಾಷನ್ ಪ್ರಿಯರು ಕಳೆದ ಕೆಲ ದಿನಗಳಿಂದ ಇವರ ಸಂಬಂಧದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದರು. ಇಬ್ಬರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದರು. ಈ ಅನುಮಾನ ಈಗ ನಿಜಾ ಆಗಿದ್ದು ಇಶಾನ್ ಕಿಶನ್ ಅವರ ತಾತ ಇಬ್ಬರ ಸಂಬಂಧವನ್ನು ಖಚಿತ ಪಡಿಸಿದ್ದಾರೆ.
"ಎಎನ್ಐ"ಗೆ ನೀಡಿದ ಸಂದರ್ಶನದಲ್ಲಿ ಇಶಾನ್ ಮತ್ತು ಅದಿತಿ ಸಂಬಂಧದ ಕುರಿತು ಮಾತನಾಡಿರುವ ಇಶಾನ್ ಅವರ ಅಜ್ಜ ಅನುರಾಗ್ ಪಾಂಡೆ, ನನ್ನ ಮೊಮ್ಮಗನ ಆಯ್ಕೆಯೇ ಅಂತಿಮ ಎಂದು ಹೇಳಿದ್ದಾರೆ.
ಇಶಾನ್ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾನೋ ಅವರನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದಿರುವ ಅನುರಾಗ್ ಪಾಂಡೆ ಸದ್ಯ ಕೇಳಿ ಬರುತ್ತಿರುವ ಅದಿತಿ ಅವನ ಆಪ್ತ ಸ್ನೇಹಿತೆ ಎಂದು ಹೇಳಿದ್ದಾರೆ. ಅದಿತಿ ಒಬ್ಬಳು ಮಾಡೆಲ್, ಅವರಿಬ್ಬರು ಖುಷಿಯಾಗಿದ್ದರೆ ಅವರ ಸಂತೋಷವೇ ನಮ್ಮ ಸಂತೋಷ ಎಂದು ಹೇಳಿದ್ದಾರೆ.
ಸದ್ಯ ಇಶಾನ್ ಕಿಶನ್ ಅವರ ಅಜ್ಜ ಅನುರಾಗ್ ಪಾಂಡೆ ಅವರ ಈ ಹೇಳಿಕೆಯಿಂದ ಇಶಾನ್ ಕಿಶನ್ ಮತ್ತು ಅದಿತಿ ಅವರ ಸಂಬಂಧದ ಕುರಿತು ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು ಇಶಾನ್ ಮತ್ತು ಅದಿತಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











