ಛೋರಿ ಚಿತ್ರದ ಮೇಕಪ್‌ನಿಂದಾಗಿ ಮುಖ ಸೌಂದರ್ಯವನ್ನೆ ಕಳೆದುಕೊಂಡ ಬಾಲಿವುಡ್ ನಟಿ
ಬಣ್ಣದ ಲೋಕ ಅಂದರೇನೆ ಹಾಗೆ ಅಲ್ಲಿ ಪಾತ್ರಕ್ಕೆ ಜೀವ ತುಂಬಬೇಕು ಮತ್ತು ಪಾತ್ರಕ್ಕೆ ತಕ್ಕಂತೆ ಬಣ್ಣವನ್ನು ಬಳಿದುಕೊಳ್ಳಬೇಕು. ಚಿತ್ರರಂಗದಲ್ಲಿ ನಟನೆಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಹಾಗೇ ಬಣ್ಣಕ್ಕೂ ಕೂಡ ಇದೆ. ಕೆಲವೊಮ್ಮೆ ಕೆಲವೊಂದು ಪಾತ್ರಕ್ಕಾಗಿ ವಿಭಿನ್ನ ಮತ್ತು ವಿಚಿತ್ರ ಎನ್ನಿಸುವ ಮೇಕಪ್‌ಗಳನ್ನು ಹೆಚ್ಚಾಗಿ ಪ್ರಯೋಗ ಮಾಡಲಾಗುತ್ತೆ. ಹಾಲಿವುಡ್ ಸಿನಿಮಾಗಳಲ್ಲಿ ಇದನ್ನು ಹೆಚ್ಚಾಗಿ ಗಮನಿಸಬಹುದು. ಹಾಗೇ ಒಂದಷ್ಟು ಹಾರರ್ ಸಿನಿಮಾಗಳ ದೆವ್ವ ಭೂತಗಳ ಪಾತ್ರಕ್ಕೆ ಕಲಾವಿದರಿಗೆ ವಿಚಿತ್ರವಾಗಿ ಬಣ್ಣ ಬಳಿಯಲಾಗುತ್ತೆ. ಈ ಮೂಲಕ ಗೆಟಪ್ ಅನ್ನೆ ಬದಲಾಯಿಸಲಾಗುತ್ತೆ.ಇದೀಗ ಹೀಗೆ ಮಾಡಲು ಹೋಗಿ ಒಬ್ಬ ನಟಿ ತನ್ನ ಸೌಂದರ್ಯವನ್ನೇ ಕಳೆದುಕೊಂಡಿದ್ದಾರೆ. ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತೀಚೆಗಷ್ಟೆ ಓಟಿಟಿಯಲ್ಲಿ ತೆರೆಕಂಡ ಭಯಾನಕ ಹಾರರ್ ಚಿತ್ರ ಛೋರಿಯನ್ನು ನೀವೆಲ್ಲ ವೀಕ್ಷಿಸಿರಬಹುದು. ಈ ಸಿನಿಮಾದಲ್ಲಿ ಸಾಕಷ್ಟು ಪಾತ್ರಗಳಿವೆ. ಜೊತೆಗೆ ಬೆಂಕಿಯಲ್ಲಿ ಬೆಂದು ಹೋದ ಮಹಿಳೆಯ ಪಾತ್ರವೊಂದು ಸಾಕಷ್ಟು ಭಯಾನಕವಾಗಿ ಮೂಡಿ ಬಂದಿದೆ. ಕೆಂಪು ಸೀರೆ ತೊಟ್ಟು ಭಯ ಹುಟ್ಟಿಸುವ ಈ ಪಾತ್ರವನ್ನು ನಿಭಾಯಿಸಿರೋದು ನಟಿ ಯಾನೀ ಭಾರದ್ವಾಜ್. ಚೋಟಿ ಮಾಯಿ ಪಾತ್ರಕ್ಕಾಗಿ ಸುಟ್ಟುಹೋದ ಮಹಿಳೆಯ ಗೆಟಪ್ ತಯಾರಿ ಮಾಡಬೇಕಾಗಿತ್ತು. ಹೀಗಾಗಿ ಬಾಲಿವುಡ್‌ನಲ್ಲಿ ಬಹು ಬೇಡಿಕೆ ಇರುವ ಪ್ರಾಸ್ಥೆಟಿಕ್ಸ್ ಮೇಕಪ್ ವಿಧಾನವನ್ನು ಅನುಸರಿಸಲಾಗಿತ್ತು.
ಇದೊಂದು ದುಭಾರಿ ಮೇಕಪ್ ವಿಧಾನ ಆಗಿದ್ದು, ಪ್ರಾಸ್ಥೆಟಿಕ್ ಮೇಕಪ್ ಎಂದೇ ಹೆಸರುವಾಸಿ. ಈ ಸಿನಿಮಾದಲ್ಲಿ ನಟಿ ಯಾನೀ ಭಾರದ್ವಾಜ್ ಅವರಿಗೆ ಈ ಮೇಕಪ್ ಅನ್ನೆ ಹಾಕಲಾಗಿತ್ತು. ಈ ಮೇಕಪ್‌ನಿಂದಾಗಿ ನಟಿಯ ಸೌಂದರ್ಯವೆ ಹಾಳಾಗಿದೆ. ಇದನ್ನು ಸ್ವತಃ ನಟಿ ಯಾನೀ ತನಗಾದ ನೋವಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಯಾನೀ ಹೇಳುವಂತೆ "ಪ್ರಾಸ್ಥೆಟಿಕ್ಸ್ ಮೇಕಪ್ ಹಾಕಿಕೊಳ್ಳಲು 3-4 ಗಂಟೆ ಬೇಕಾಗುತ್ತೆ. ಹಾಗೇ ಅದನ್ನು ತೆಗೆಯಲು ಕೂಡ 2 ಗಂಟೆ ಆಗುತ್ತೆ. ಪ್ರತೀ ಬಾರಿ ಶೂಟಿಂಗ್ ಇದ್ದಾಗಲೂ ನಾನು ಸೆಟ್‌ಗೆ ಬೇಗ ಹೋಗಿ ಈ ಮೇಕಪ್ ಹಾಕಿಸಿಕೊಳ್ಳಲು ಕೂರಬೇಕಿತ್ತು. ಸ್ಕ್ರೀನ್‌ನಲ್ಲಿ ಭಯಾನಾಕವಾಗಿ ಕಾಣುತ್ತಿದ್ದರೂ ಕೂಡ , ಅದನ್ನು ಮುಖದ ಮೇಲೆ ಹಾಕಿಸಿಕೊಂಡು ಪಡುವ ಯಾತನೇ ಅದಕ್ಕಿಂತಲೂ ಭಯಾನಕ ಅನ್ನಿಸಿದೆ.ನನ್ನ ಮುಖದ ಜೊತೆಗೆ ನನ್ನ ಇಡೀ ದೇಹಕ್ಕೂ ಕೂಡ ಇದೇ ಮೇಕಪ್ ಅನ್ನು ಹಚ್ಚಬೇಕಿತ್ತು. ಮೇಕಪ್ ತೆಗೆಯುವಾಗ ಚರ್ಮ ಸಮೇತ ಕಿತ್ತು ಬರುತ್ತಿತ್ತು. ಇದರಿಂದ ರಕ್ತಸ್ರಾವ ಕೂಡ ಆಗುತ್ತಿತ್ತು. ರೋಮಗಳು ಕಿತ್ತು ಹೋಗುತ್ತಿತ್ತು. ಇದರಿಂದ ಆಗುತ್ತಿದ್ದ ನೋವುಗಳು ಅಷ್ಟಿಷ್ಟಲ್ಲ" ಎಂದಿದ್ದಾರೆ ಯಾನೀ ಭಾರದ್ವಾಜ್.
ಇದಿಷ್ಟೇ ಅಲ್ಲದೇ "ಮುಖದ ಮೇಲೆ ಹಾಕಿದ್ದ ಮೇಕಪ್ ತೆಗೆಯುವಾಗ ಸಾಕಷ್ಟು ನೋವಾಗುತ್ತಿತ್ತು. ಎಷ್ಟರ ಮಟ್ಟಿಗೆ ಅಂದರೇ ನಾನು ಈ ನೋವನ್ನು ತಡೆದುಕೊಳ್ಳಲಾಗದೇ ಪೈನ್‌ಕಿಲ್ಲರ್ ಟ್ಯಾಬ್ಲೆಟ್‌ಗಳನ್ನು ತೆಗೆದುಕೊಳ್ಳುತ್ತಿದೆ. ಇದರಿಂದ ಸೈಡ್ ಎಫೆಕ್ಟ್ ಆಗಿ ನನ್ನ ಶ್ವಾಸಕೋಶ ಊದಿಕೊಂಡು, ಜ್ವರ ತೀವ್ರವಾಗಿತ್ತು. ಇದರಿಂದ ನಾನು ಆಸ್ಪತ್ರೆಗೆ ಸೇರುವಂತಾಗಿದೆ. ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದೇನೆ " ಎಂದಿದ್ದಾರೆ.

ನನಗೆ ಹಣದ ಅನಿವಾರ್ಯತೆ ಇತ್ತು ಹೀಗಾಗಿ ಈ ಸಿನಿಮಾ ಒಪ್ಪಿಕೊಂಡೆ ಎಂದು ಯಾನೀ ಹೇಳಿಕೊಂಡಿದ್ದಾರೆ. " ನಾನು ಈ ಸಿನಿಮಾ ಒಪ್ಪಿಕೊಳ್ಳುವ ಮೊದಲು ನನ್ನ ಬಳಿ ಕೇವಲ 500 ರುಪಾಯಿ ಇತ್ತು. ಹೀಗಾಗಿ ಹಣದ ಅನಿವಾರ್ಯತೆ ಹೆಚ್ಚು ಇದ್ದಿದ್ರಿಂದ ಈ ಪಾತ್ರವನ್ನು ನಾನು ಒಪ್ಪಿಕೊಂಡಿದ್ದೆ. ಈಗ ಇದರಿಂದಲೇ ನನ್ನ ಸೌಂದರ್ಯ ಹಾಳಾಗಿದೆ. ಸಾಕಷ್ಟು ಹಣ ಖರ್ಚಾಗುತ್ತಿದೆ. ಇದರಿಂದ ಯಾವತ್ತು ಹೊರಬರ್ತಿನೋ ಗೊತ್ತಿಲ್ಲ" ಎಂದಿದ್ದಾರೆ.


Click it and Unblock the Notifications











