ಬರೀ ಟೀಸರ್‌ನಿಂದ್ಲೇ 'ರಾಮಾಯಣ' ಚಿತ್ರ ನಿರ್ಮಾಪಕರಿಗೆ 1000 ಕೋಟಿ ರೂ. ಬಂತು
ದೊಡ್ಡ ಸಿನಿಮಾಗಳ ಲೆಕ್ಕಾಚಾರವೇ ಬೇರೆ. ಬಾಕ್ಸಾಫೀಸ್ ಗಳಿಕೆ, ಓಟಿಟಿ ರೈಟ್ಸ್, ಜಾಹೀರಾತು ಅಂತೆಲ್ಲಾ ಭಾರೀ ಲಾಭ ನಿರ್ಮಾಪಕರನ್ನು ಹುಡಕಿ ಬರುತ್ತದೆ. ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಮೇಕಿಂಗ್ ಹಂತದಲ್ಲೇ ಸಖತ್ ಸದ್ದು ಮಾಡ್ತಿದೆ. ಇತ್ತೀಚೆಗೆ ಬಂದ ಅನೌನ್ಸ್‌ಮೆಂಟ್ ಟೀಸರ್‌ನಿಂದಲೇ ನಿರ್ಮಾಪಕರಿಗೆ 1000 ಕೋಟಿ ರೂ. ಬಂದಂತಾಗಿದೆ.
ನಿಮಿತ್ ಮಲ್ಹೋತ್ರಾ 'ರಾಮಾಯಣ' ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಬಜೆಟ್ 1500 ಕೋಟಿ ರೂ. ಎನ್ನಲಾಗ್ತಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ನಟಿಸುತ್ತಿದ್ದು ಅದಕ್ಕಾಗಿ ಭಾರೀ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನು ಐಮ್ಯಾಕ್ಸ್ ವರ್ಷನ್‌ನಲ್ಲಿ ಸಿನಿಮಾ ಚಿತ್ರೀಕರಿಸಲಾಗುತ್ತಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.

ಮುಂದಿನ ವರ್ಷ ದೀಪಾವಳಿಗೆ 'ರಾಮಾಯಣ' ಚಿತ್ರದ ಮೊದಲ ಭಾಗ ಪ್ರೇಕ್ಷಕರ ಮುಂದೆ ಬರಲಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಸಿಜಿ ವರ್ಕ್ ಜಾಸ್ತಿಯಿದೆ. ರಾವಣನಾಗಿ ಯಶ್ ಕೂಡ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಮೊದಲ ಭಾಗದಲ್ಲಿ ರಾವಣನ ಪಾತ್ರಕ್ಕೆ ಹೆಚ್ಚು ಅವಕಾಶ ಇಲ್ಲ. ಕೇವಲ 15 ನಿಮಿಷ ಮಾತ್ರ ಯಶ್ ತೆರೆಗೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಗುರುವಾರ(ಜುಲೈ 3) ಚಿತ್ರದ ಇಂಟ್ರಡಕ್ಷನ್ ಟೀಸರ್ ರಿಲೀಸ್ ಆಗಿತ್ತು.
ಸಿನಿಮಾ ದೃಶ್ಯಗಳು ಟೀಸರ್‌ನಲ್ಲಿ ಹೆಚ್ಚು ಇರಲಿಲ್ಲ. ಚಿತ್ರದ ಪಾತ್ರವರ್ಗ, ತಾಂತ್ರಿಕ ವರ್ಗದ ಬಗ್ಗೆ ಮಾತ್ರ ಮಾಹಿತಿ ಸಿಕ್ಕಿತ್ತು. ಕೊನೆಯ ಶ್ರೀರಾಮನಾಗಿ ರಣ್‌ಬೀರ್ ಹಾಗೂ ರಾವಣನಾಗಿ ಯಶ್ ಅವತಾರದ ಸಣ್ಣ ಝಲಕ್ ರಿವೀಲ್ ಆಗಿತ್ತು. ಅಭಿಮಾನಿಗಳು ಇದನ್ನು ನೋಡಿ ಥ್ರಿಲ್ ಆಗಿದ್ದರು. ಯಶ್ ಪ್ರಸೆನ್ಸ್ ಬಗ್ಗೆ ಕೊಂಚ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿತ್ತು. ಸ್ವತಃ ರಾಕಿಂಗ್ ಸ್ಟಾರ್ ಕೂಡ ಚಿತ್ರಕ್ಕೆ ಸಹ ನಿರ್ಮಾಪಕರಾಗಿರುವುದು ವಿಶೇಷ.

ನಿಮಿತ್ ಮಲ್ಹೋತ್ರಾ ತಮ್ಮ ಪ್ರೈಂ ಫೋಕಸ್ ಸಂಸ್ಥೆ ಬ್ಯಾನರ್ ಅಡಿಯಲ್ಲಿ 'ರಾಮಾಯಣ' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ನಲ್ಲಿ ಪಟ್ಟಿ ಮಾಡಲಾದ ಪ್ರೈಮ್ ಫೋಕಸ್ ಲಿಮಿಟೆಡ್ ಕಳೆದೊಂದು ವಾರದಿಂದ ಸುದ್ದಿಯಲ್ಲಿದೆ. 'ರಾಮಾಯಣ' ಟೀಸರ್ ರಿಲೀಸ್ ಬೆನ್ನಲ್ಲೇ ಈ ಕಂಪನಿ ಮೇಲೆ ಹೂಡಿಕೆ ಹೆಚ್ಚಾಗಿದೆ. ಪರಣಾಮ ಜೂನ್ 25 ಹಾಗೂ ಜುಲೈ 1ರ ನಡುವೆ ಪ್ರೈಮ್ ಫೋಕಸ್ ಷೇರು ದರ 30% ಏರಿಕೆಯಾಗಿದೆ.
ಕಳೆದ ತಿಂಗಳ ಅಂತ್ಯಕ್ಕೆ ಪ್ರೈಮ್ ಫೋಕಸ್ ಷೇರುಗಳು ದರ 149.69 ರೂ. ಇತ್ತು. ಆದರೆ ಬಳಿಕ ದಿಢೀರನೆ 176 ರೂ.ಗೆ ಏರಿಕೆ ಕಂಡಿದೆ. ಈ ಏರಿಕೆಯಿಂದಾಗಿ ಕಂಪನಿಯ ಮಾರುಕಟ್ಟೆ ಕ್ಯಾಪಿಟಲೈಸೇಷನ್ ಜುಲೈ 1 ರಂದು 4,638 ಕೋಟಿ ರೂಗಳಿಂದ 5,641 ಕೋಟಿ ರೂ. ಅಷ್ಟು ಗರಿಷ್ಠಮಟ್ಟಕ್ಕೇರಿತ್ತು. ಈ ಮೂಲಕ ಸಹಜವಾಗಿಯೇ 1,000 ಕೋಟಿ ರೂ. ಹೆಚ್ಚಾದಂತೆ ಆಯಿತು. ಹೀಗೆ 'ರಾಮಾಯಣ' ಚಿತ್ರದ ಟೀಸರ್ ನಿರ್ಮಾಣ ಸಂಸ್ಥೆ ಒಳ್ಳೆ ಗಳಿಕೆ ತಂದುಕೊಟ್ಟಂತಾಗಿದೆ. ಸ್ವತಃ ನಟ ರಣ್‌ಬೀರ್ ಕಪೂರ್ ಈಗ ಪ್ರೈಂ ಫೋಕಸ್ ಕಂಪನಿ ಮೇಲೆ 20 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಎನ್ನಲಾಗ್ತಿದೆ.
ಘಟಾನುಘಟಿ ಕಲಾವಿದರು 'ರಾಮಾಯಣ' ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಹಾಲಿವುಡ್ ತಂತ್ರಜ್ಞರು ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಎ. ಆರ್ ರಹಮಾನ್ ಹಾಗೂ ಹ್ಯಾನ್ಸ್ ಜಿಮ್ಮರ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗಿ ತೆರೆಗೆ ಬರಲಿದೆ.


Click it and Unblock the Notifications











