ಯಶ್ ಕಂಡ್ರೆ ಭಯ, ಅಸೂಯೆ? ಸುಳ್ಳು ಸುದ್ದಿ ಹಬ್ಬಿಸೋರ ಮುಖವಾಡ ಬಯಲು
"ನಮ್ಮನ್ ಕಂಡ್ರೆ ಉರ್ಕೋಳ್ಳೋರು ಒಬ್ರಾ, ಇಬ್ರಾ. ದುಶ್ಮನ್ ಕಹಾ ಹೈ ಅಂದ್ರೆ ಊರ್ ತುಂಬಾ ಹೈ" ಹೀಗೆ ಯಶ್ 'ಮಾಸ್ಟರ್‌ಪೀಸ್' ಚಿತ್ರದಲ್ಲಿ ಖಡಕ್ ಡೈಲಾಗ್ ಹೊಡೆದಿದ್ದರು. ನಿಜ ಜೀವನದಲ್ಲಿ ಕೂಡ ಕೆಲವರಿಗೆ ಇದು ಅನ್ವಯಿಸುತ್ತದೆ. ಸದ್ಯ ಸ್ವತಃ ರಾಕಿಂಗ್ ಸ್ಟಾರ್ ವಿಚಾರದಲ್ಲಿ ಇದೇ ಆಗ್ತಿದೆ.
ಅದೇನೋ ಗೊತ್ತಿಲ್ಲ, ಯಶ್ ಕಂಡು ಬಾಲಿವುಡ್ ಸಿನಿಪ್ರಿಯರು ಭಯಗೊಂಡಂತೆ ಕಾಣುತ್ತಿದೆ. ಇದ್ದಕ್ಕಿದಂತೆ ನೆಗೆಟಿವ್ ಟ್ರೆಂಡ್ ಮಾಡೋಕೆ ಶುರು ಮಾಡಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು 'ರಾಮಯಾಣ' ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಿರುವುದು. ಇದು ಕೆಲವರ ನಿದ್ದೆಗೆಡಿಸಿರುವುದು ಸುಳ್ಳಲ್ಲ.

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗೆ ಬರ್ತಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್ ನಟಿಸಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ಮಿಂಚಿದ್ದಾರೆ. ಇತ್ತೀಚೆಗೆ ಟೀಸರ್ ಸಮೇತ ಸಿನಿಮಾ ಘೋಷಣೆ ಮಾಡಿದ್ದಾರೆ. ಮುಂದಿನ ವರ್ಷ ದೀಪಾವಳಿಗೆ ಚಿತ್ರದ ಮೊದಲ ಭಾಗ ತೆರೆಗೆ ಬರ್ತಿದೆ. ಎರಡನೇ ಭಾಗ 2027ರ ದೀಪಾವಳಿ ಸಂಭ್ರಮದಲ್ಲಿ ಬಿಡುಗಡೆ ಆಗಲಿದೆ.
ಮೊದಲ ಭಾಗದಲ್ಲಿ ಸೀತಾಪಹರಣದವರೆಗೆ ಮಾತ್ರ ಕಥೆಯನ್ನು ಹೇಳಲಾಗ್ತಿದೆ. ಇದರಲ್ಲಿ ರಾವಣನ ಹಿನ್ನೆಲೆಯ ಬಗ್ಗೆ ಒಂದಷ್ಟು ಸನ್ನಿವೇಶಗಳು ಇರಲಿದೆ. ಬಳಿಕ ಅರಣ್ಯಕಾಂಡದಲ್ಲಿ ಸೀತೆಯನ್ನು ಅಪಹರಿಸ ಬರುವ ಸನ್ನಿವೇಶದೊಂದಿಗೆ ಕಥೆ ಮುಕ್ತಾಯವಾಗಲಿದೆ. ಎರಡನೇ ಭಾಗದಲ್ಲಿ ರಾವಣನ ಪಾತ್ರ ವಿಸ್ತಾರವಾಗಿ ತೋರಿಸಲಾಗುತ್ತಿದೆ. ಆದರೆ ಕಳೆದೆರಡು ದಿನಗಳಿಂದ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.

'ರಾಮಾಯಣ' ಚಿತ್ರದಲ್ಲಿ ಯಶ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ, ರಾವಣನಾಗಿ ಅವರು 15 ನಿಮಿಷ ಮಾತ್ರ ಕಾಣಿಸಿಕೊಳ್ಳುತ್ತಾರೆ ಅಂತೆಲ್ಲಾ ಅಂತೆಕಂತೆ ಸುದ್ದಿ ತೇಲಿಬಿಡುತ್ತಿದ್ದಾರೆ. ಬಾಲಿವುಡ್ ಸಿನಿಪ್ರೇಮಿಗಳು ಇದನ್ನೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಯಶ್ ಫ್ಯಾನ್ಸ್ ತಿರುಗೇಟು ಕೊಡುತ್ತಿದ್ದಾರೆ. ರಾವಣನಾಗಿ ಯಶ್ ಆರ್ಭಟದ ಮುಂದೆ ರಣ್‌ಬೀರ್ ಕಪೂರ್ ಹವಾ ನಡೆಯುವುದಿಲ್ಲ. ಈ ಬಗ್ಗೆ ಅವರಿಗೆ ಭಯ ಶುರುವಾಗಿದೆ. ನಮ್ಮ ಹೀರೋಗಿಂತ ಯಶ್ ಅಬ್ಬರ ಹೆಚ್ಚಾಗಿಬಿಡುತ್ತದೆ ಎನ್ನುವ ಅಸೂಯೆ ಶುರುವಾಗಿದೆ. ಟೀಸರ್‌ನಲ್ಲಿ ಕೂಡ ಯಶ್ ಪ್ರಸೆನ್ಸ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿತ್ತು. ಅದೇ ಕಾರಣಕ್ಕೆ ಇಂತಾದೊಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಎರಡು ಭಾಗಗಳಾಗಿ ರಾಮಾಯಣ ಕಾವ್ಯವನ್ನು ತೆರೆಗೆ ತಂದಾಗ ಮೊದಲ ಭಾಗದಲ್ಲಿ ರಾವಣನ ಪಾತ್ರ ಕೆಲವೇ ನಿಮಿಷಗಳು ಇರುತ್ತದೆ. ಅದು ಸಹಜ ಕೂಡ. ರಾಮ, ಲಕ್ಷ್ಮಣರ ಬಾಲ್ಯ, ಗುರುಕುಲದಲ್ಲಿ ಕಲಿಯುವುದು ಬಳಿಕ ರಾಮ-ಸೀತಾ ಮದುವೆ, ಆ ನಂತರ ಪಟ್ಟಾಭಿಷೇಕಕ್ಕೆ ತಯಾರಿ ಅಲ್ಲಿಂದ ಮುಂದೆ ವನವಾಸಕ್ಕೆ ತೆರಳುವ ಸನ್ನಿವೇಶಗಳು ಬರುತ್ತವೆ. ಇದರ ಜೊತೆ ಜೊತೆಗೆ ರಾವಣನ ಹಿನ್ನೆಲೆ, ಬಲಾಬಲದ ಬಗ್ಗೆಯೂ ಚಿತ್ರಣ ಇದೆ. ಆದರೆ ಸೀತಾಪರಣದ ಬಳಿಕ ಅಸಲಿ ಕಥೆ ಶುರುವಾಗುತ್ತದೆ. ಅದು ಮುಂದೆ ರಾಮ-ರಾವಣರ ನಡುವೆ ಯುದ್ಧಕ್ಕೆ ವೇದಿಕೆಯಾಗುತ್ತದೆ.
ಈಗಾಗಲೇ ಯಶ್ 'ರಾಮಾಯಣ' ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಒಂದಷ್ಟು ದೃಶ್ಯಗಳಲ್ಲಿ ಬಣ್ಣ ಹಚ್ಚಿ ನಟಿಸಿದ್ದಾರೆ. ಇಂದ್ರದೇವ ಹಾಗೂ ವಿದ್ಯುಜ್ಜಿಹ್ವ ಜೊತೆಗಿನ ಯುದ್ಧದ ಸನ್ನಿವೇಶಗಳ ಚಿತ್ರೀಕರಣದಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಕೆಲ ಬಾಲಿವುಡ್ ವೆಬ್‌ಸೈಟ್‌ಗಳು ಕೂಡ ಚಿತ್ರದಲ್ಲಿ ಯಶ್ 15 ನಿಮಿಷ ಮಾತ್ರ ಇರ್ತಾರೆ ಎಂದು ವರದಿ ಮಾಡಿದ್ದವು. ಇದಕ್ಕೆ ಯಶ್ ಅಭಿಮಾನಿಗಳು ತಕ್ಕ ಉತ್ತರ ಕೊಟ್ಟಿದ್ದಾರೆ. ತಪ್ಪಿನ ಅರಿವಾಗಿ ಕೆಲವರು ಅಸಲಿ ವಿಚಾರವನ್ನು ಈಗ ಮುಂದಿಡುತ್ತಿದ್ದಾರೆ.


Click it and Unblock the Notifications











