ಯಶ್‌ಗೆ ಹೆದರಿದ ಅಜಯ್ ದೇವಗನ್ ; ಈದ್ ರೇಸ್‌ದಿಂದ ಹಿಂದೆ ಸರಿದ ಬಾಲಿವುಡ್ ಸೂಪರ್ ಸ್ಟಾರ್ - ಧುರಂಧರ್ 2 ಕಥೆ ಏನು ?
ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ .. ಪರಭಾಷೆಯ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿವೆ ಅಂದರೆ, ನಮ್ಮ ಚಿತ್ರರಂಗದವರು .. ನಮ್ಮ ನೆಲದಲ್ಲಿಯೇ .. ತಮ್ಮ ಚಿತ್ರದ ಬಿಡುಗಡೆಯ ದಿನವನ್ನು ಮುಂದೂಡುತ್ತಿದ್ದರು. ತಮ್ಮ ಚಿತ್ರದ ಕಥೆ ಎಷ್ಟೇ ಚೆನ್ನಾಗಿದ್ದರು ಕೂಡ, ಅಯ್ಯೋ .. ಅವರ ಚಿತ್ರ ಬಂದಾಗ ನಮ್ಮ ಚಿತ್ರ ಯಾರು ನೋಡುತ್ತಾರೆ ಎಂದು ಮಾತನಾಡುತ್ತಿದ್ದರು.
ಹಬ್ಬ-ಹರಿದಿನಗಳಂತೂ ಬರೀ ಈ ಬೇರೆ ಭಾಷೆಯ ಸ್ಟಾರ್‌ಗಳಿಗೆ ಮಾತ್ರ ಸೀಮಿತವಾಗಿದ್ದವು. ಇವತ್ತು ಕೂಡ ಪರಭಾಷೆ ಚಿತ್ರಗಳ ಅಬ್ಬರ ಕರುನಾಡಿನಲ್ಲಿ ಇದ್ದೇ ಇದೆ. ಹಲವರು ಈಗಲೂ ಕೂಡ ತಮ್ಮ ಚಿತ್ರಗಳನ್ನು ಬೇರೆ ಭಾಷೆಯ ದೊಡ್ಡ ಸ್ಟಾರ್‌ಗಳ ಎದುರು ಬಿಡುಗಡೆ ಮಾಡಲು ಮೀನಾ ಮೇಷ ಎಣಿಸುತ್ತಾರೆ.

ಆದರೆ .. ಈಗೀಗ ಬದಲಾದ ಕಾಲದಲ್ಲಿ ಕನ್ನಡದಲ್ಲಿ ಅಲ್ಲೊಬ್ಬರು .. ಇಲ್ಲೊಬ್ಬರು .. ಪರಭಾಷೆಯ ಚಿತ್ರಗಳಿಗೆ ಸೆಡ್ಡು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬಾಕ್ಸಾಫೀಸ್ ಸಮರದಲ್ಲಿ ಮಣ್ಣನ್ನೂ ಕೂಡ ಮುಕ್ಕಿಸಿದ್ದಾರೆ.
ಹೀಗಾಗಿ ಕನ್ನಡದ ಸ್ಟಾರ್‌ಗಳ ಎದುರು ಬರಲು ಪರಭಾಷೆಯ ಸ್ಟಾರ್‌ಗಳು ಕೂಡ ಈಗ ಕವಡೆ ಹಾಕುತ್ತಿದ್ದಾರೆ. ಹೆದರುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಯಶ್ ಎದುರು ಅಬ್ಬರಿಸಲು ಅಣಿಯಾಗಿದ್ದ ಅಜಯ್ ದೇವಗನ್ ಕಣದಿಂದ ಹಿಂದೆ ಸರಿದಿದ್ದಾರೆ ಎನ್ನುವ ಸುದ್ದಿಯೊಂದು ಮುಂಬೈನೆಲ್ಲೆಡೆ ಕೇಳಿ ಬರುತ್ತಿದೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಮಾರ್ಚ್ 19ಕ್ಕೆ ಈ ಬಾರಿ ''ಈದ್'' ಹಬ್ಬ ಇದೆ. ನಾಲ್ಕು ದಿನದ ವೀಕೆಂಡ್ ಇರಲಿದೆ. ಈ ಹಿನ್ನೆಲೆ ಯಶ್ ತಮ್ಮ ''ಟಾಕ್ಸಿಕ್'' ಅಳೆದು ತೂಗಿ ಮಾರ್ಚ್ 19ಕ್ಕೆ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ತಮ್ಮ ಕನಸಿನ ಯೋಜನೆಯನ್ನು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದಾರೆ.
ಆದರೆ, ಅವತ್ತೇ..ಬಾಲಿವುಡ್ ಕಡೆಯಿಂದ ಅಜಯ್ ದೇವಗನ್ ತಮ್ಮ ಗ್ಯಾಂಗ್ ಜೊತೆ ಕಣಕ್ಕಿಳಿಯುವುದಾಗಿ ಈ ಹಿಂದೆ ಹೇಳಿದ್ದರು. ''ಧಮಾಲ್ 4'' ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದ್ದರು. ಆದರೆ ಈಗ ಅಜಯ್ ದೇವಗನ್ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ತಮ್ಮ ''ಧಮಾಲ್ 4'' ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದಾರೆ.

ಇನ್ನೂ ಈಗಾಗಲೇ ಘೋಷಣೆಯಾದಂತೆ ಮೊನ್ನೆ (ಡಿಸೆಂಬರ್ 5) ಬಿಡುಗಡೆಯಾದ ''ಧುರಂಧರ್'' ಚಿತ್ರದ ಎರಡನೇ ಭಾಗ ಕೂಡ ಮಾರ್ಚ್ 19ರಂದೇ ಬಿಡುಗಡೆಯಾಗಲಿದೆ. ಈ ಹಿನ್ನೆಲೆ ಚಿತ್ರದ ಗಳಿಕೆಗಳ ಮೇಲೆ ಪರಿಣಾಮ ಬೀರಬಹುದೆಂದು ತುಂಬಾ ಆಲೋಚನೆ ಮಾಡಿ, ವಿತರಕರ ಜೊತೆ ಚರ್ಚೆ ಮಾಡಿ ಅಜಯ್ ದೇವಗನ್ ''ಧಮಾಲ್ 4'' ಬಿಡುಗಡೆಯನ್ನು ಮುಂದೂಡಿದ್ದಾರೆ ಎಂದು ''ಬಾಲಿವುಡ್ ಹಂಗಾಮ'' ವರದಿ ಮಾಡಿದೆ. ಮಾರ್ಚ್ ಬದಲು ''ಧಮಾಲ್ 4'' ಚಿತ್ರವನ್ನು ಅಜಯ್ ದೇವಗನ್ ಮೇನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎಂದು ಕೂಡ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಸದ್ಯ ಅಜಯ್ ದೇವಗನ್ ತಮ್ಮ ಹೆಜ್ಜೆ ಮುಂದೆ ಇಟ್ಟಿರುವ ಹಿನ್ನೆಲೆ ಈಗ ಮಾರ್ಚ್ 19ರಂದು ಬಾಕ್ಸಾಫೀಸ್‌ನಲ್ಲಿ ''ಟಾಕ್ಸಿಕ್'' ಮತ್ತು ''ಧುರಂಧರ್ 2'' ಮುಖಾಮುಖಿಯಾಗಲಿವೆ. ರಣ್ವೀರ್ ಮತ್ತು ಆದಿತ್ಯ ಧರ್ ಕೂಡ ತಮ್ಮ ನಿರ್ಧಾರ ಬದಲಿಸುತ್ತಾರಾ ? ''ಧುರಂಧರ್ 2'' ಬಿಡುಗಡೆಯ ದಿನ ಬದಲಿಸುತ್ತಾರಾ..? ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ಇವೆರಡು ಚಿತ್ರಗಳ ಜೊತೆ ಅಂದು ಅಂದರೆ ಮಾರ್ಚ್ 19ರಂದು ಆಂಧ್ರದ ಸ್ಟಾರ್ ಅಡಿವಿ ಶೇಷ್ ಕೂಡ ತಮ್ಮ ''ಡಕೋಯಿಟ್: ಎ ಲವ್ ಸ್ಟೋರಿ'' ಚಿತ್ರವನ್ನು ಕೂಡ ಬಿಡುಗಡೆ ಮಾಡುತ್ತಿದ್ದಾರೆ.
ಇನ್ನು ಈದ್ ಮತ್ತು ಸಲ್ಮಾನ್ ಖಾನ್ ನಡುವೆ ವಿಶೇಷವಾದ ಸಂಬಂಧ ಇದೆ. ಈದ್ ಹಬ್ಬದಂದು ಸಲ್ಮಾನ್ ಖಾನ್ ತಮ್ಮ ''ಬ್ಯಾಟಲ್ ಆಫ್ ಗಲ್ವಾನ್'' ಚಿತ್ರವನ್ನು ಬಿಡುಗಡೆ ಮಾಡಬಹುದು ಎಂದು ಹಲವರು ಅಂದುಕೊಂಡಿದ್ದಾರೆ. ಆದರೆ ಆ ಸಾಧ್ಯತೆ ತುಂಬಾ ಕಡಿಮೆ. ಯಾಕೆಂದರೆ.. ''ಬ್ಯಾಟಲ್ ಆಫ್ ಗಲ್ವಾನ್'' ಚಿತ್ರದ ಚಿತ್ರೀಕರಣ ಇನ್ನು ಮುಕ್ತಾಯವಾಗಿಲ್ಲ.


Click it and Unblock the Notifications











