ರಾಮನ ಪಾತ್ರಕ್ಕೆ ಯಶ್ ಬೆಸ್ಟ್, ಆ ಬಿಳಿ ಇಲಿ, ಹೆಣ್ಣುಬಾಕ, ಮದ್ಯವಸನಿ ಅಲ್ಲ; ಸ್ಟಾರ್ ನಟನ ವಿರುದ್ಧ ಕಂಗನಾ ಕಿಡಿ!
ಸ್ಟಾರ್ ನಟರುಗಳ ಮುಂದಿನ ಚಿತ್ರಗಳು ಯಾವುವು ಎಂಬುದರ ಕುರಿತಾಗಿ ಸದ್ಯ ಎಲ್ಲೆಡೆ ಅತಿಯಾಗಿ ಚರ್ಚೆಯಾಗುತ್ತಿದೆ. ಅದರಲ್ಲಿಯೂ ವಿಶೇಷವಾಗಿ ರಾಕಿಂಗ್ ಸ್ಟಾರ್ ಯಶ್ ನಟಿಸಲಿರುವ ಮುಂದಿನ ಚಿತ್ರ ಯಾವುದು ಎಂಬ ಚರ್ಚೆ ದೊಡ್ಡ ಮಟ್ಟದಲ್ಲಿಯೇ ಇದೆ.
ಹೌದು, ಕೆಜಿಎಫ್ ಚಿತ್ರ ಸರಣಿ ಬಳಿಕ ರಾಕಿಂಗ್ ಸ್ಟಾರ್ ಯಶ್ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಹೆಚ್ಚಾಗಿದೆ. ಕೆಜಿಎಫ್ ಚಿತ್ರದ ಮೂಲಕ ನಿರೀಕ್ಷೆಯನ್ನು ಹುಟ್ಟುಹಾಕಿರುವ ಯಶ್ ತಮ್ಮ ಮುಂದಿನ ಚಿತ್ರವನ್ನು ಅದಕ್ಕಿಂತ ಉತ್ತಮವಾಗಿ ಮಾಡಲೇಬೇಕಾದ ಅನಿವಾರ್ಯತೆ ಇದೆ.

ಹೀಗೆ ನಿರೀಕ್ಷೆಯನ್ನು ಯಶ್ ಉಳಿಸಿಕೊಳ್ಳಲೇಬೇಕಾಗಿದ್ದು, ತುಂಬಾ ಜಾಗರೂಕತೆಯಿಂದ ತಮ್ಮ ಮುಂದಿನ ಚಿತ್ರದ ಆಯ್ಕೆಯನ್ನು ಮಾಡುವಲ್ಲಿ ನಿರತರಾಗಿದ್ದಾರೆ. ಇನ್ನು ಕಳೆದ ಏಪ್ರಿಲ್ ತಿಂಗಳಿಗೆ ಯಶ್ ನಟನೆಯ ಕೊನೆಯ ಚಿತ್ರ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ ವರ್ಷ ಕಳೆದಿದೆ. ಹೀಗೆ ವರ್ಷ ತುಂಬಿದರೂ ಸಹ ಯಶ್ ಮುಂದಿನ ಚಿತ್ರ ಯಾವುದು ಎಂಬ ಮಾಹಿತಿ ಸಿಕ್ಕಿಲ್ಲ.
ಯಶ್ ಸಹ ಈ ಕುರಿತು ಮೌನ ವಹಿಸಿದ್ದಾರೆ. ಈಗಾಗಲೇ ಹಲವಾರು ದಿಗ್ಗಜ ನಿರ್ದೇಶಕರ ಹೆಸರು ಹಾಗೂ ಯುವ ಪ್ರತಿಭಾವಂತ ನಿರ್ದೇಶಕರ ಹೆಸರುಗಳು ಯಶ್ ಮುಂದಿನ ಚಿತ್ರದ ಕುರಿತಾಗಿ ಕೇಳಿಬಂದಿದ್ದು, ಇವೆಲ್ಲವೂ ಅಂತೆಕಂತೆಗಳಾಗಿಯೇ ಉಳಿದುಕೊಂಡಿವೆಯೇ ಹೊರತು ಯಾವ ಚಿತ್ರಗಳೂ ಸಹ ಅಧಿಕೃತವಾಗಿ ಘೋಷಣೆಯಾಗಿಲ್ಲ.
ಇದೀಗ ಮತ್ತೊಂದು ಇಂತಹದ್ದೇ ಸುದ್ದಿ ಕೇಳಿಬಂದಿದೆ. ದಂಗಲ್ ಹಾಗೂ ಚಿಚ್ಚೋರೆ ಸೇರಿದಂತೆ ಹಲವಾರು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶಿಸಲಿರುವ 'ರಾಮಾಯಣ್' ಚಿತ್ರದಲ್ಲಿ ಯಶ್ ಖಳ ನಾಯಕನಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಕಳೆದ ನಾಲ್ಕೈದು ದಿನಗಳಿಂದ ಈ ಸುದ್ದಿ ಹರಿದಾಡುತ್ತಿದ್ದು, ಈ ಚಿತ್ರದಲ್ಲಿ ಯಶ್ ರಾವಣನ ಪಾತ್ರ ನಿರ್ವಹಿಸಲಿದ್ದು, ನಿಜ ಜೀವನದಲ್ಲಿ ಗಂಡ ಹೆಂಡತಿಯಾಗಿರುವ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ರಾಮ ಹಾಗೂ ಸೀತೆ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಇದೆ.
ಈ ಕುರಿತು ಇದೀಗ ಬಾಲಿವುಡ್‌ನ ನಟಿ ಕಂಗನಾ ರಣೌತ್ ಪ್ರತಿಕ್ರಿಯಿಸಿದ್ದು, ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಈ ಸುದ್ದಿಯನ್ನು ಖಂಡಿಸಿದ್ದಾರೆ. ಉದ್ದನೆಯ ಪ್ಯಾರಾ ಬರೆದುಕೊಂಡಿರುವ ಕಂಗನಾ ರಣೌತ್ ಎಲ್ಲಿಯೂ ಸಹ ಯಾರ ಹೆಸರನ್ನೂ ಬಳಸದೆಯೇ ಪರೋಕ್ಷವಾಗಿ ಕಟು ಟೀಕೆ ಮಾಡಿದ್ದಾರೆ.
"ಇತ್ತೀಚೆಗೆ ಬಾಲಿವುಡ್‌ನಲ್ಲಿ ಬರಲಿರುವ ರಾಮಾಯಣ ಚಿತ್ರವೊಂದರ ಬಗೆಗಿನ ಸುದ್ದಿಗಳನ್ನು ಕೇಳಿದೆ. ಇತರೆ ಕಲಾವಿದರ ವಿರುದ್ಧ ಸದಾ ಹಗೆತನ ಸಾಧಿಸುವ, ಡ್ರಗ್ ತೆಗೆದುಕೊಳ್ಳುವ ಹೆಣ್ಣುಬಾಕ, ಬಿಳಿ ಬಣ್ಣದ ಇಲಿಯೊಂದು ಇತ್ತೀಚೆಗಷ್ಟೆ ಚಿತ್ರವೊಂದರಲ್ಲಿ ಶಿವನ ಪಾತ್ರದಲ್ಲಿ ನಟಿಸಿ ತನ್ನನ್ನು ತಾನು ಶಿವನ ರೀತಿ ಎಂದು ತೋರಿಸಿಕೊಳ್ಳಲು ಯತ್ನಿಸಿದ್ದ. ಅಂತಹ ನಟ ಈಗ ತನ್ನನ್ನು ರಾಮನೆಂದು ತೋರಿಸಿಕೊಳ್ಳಲು ಮುಂದಾಗಿನಿದ್ದಾನೆ. ಇದೇ ಚಿತ್ರದಲ್ಲಿ ಕಷ್ಟಪಟ್ಟು ಮೇಲೆಬಂದ, ಒಳ್ಳೆಯ ಸಂಸ್ಕಾರ ಇರುವ ಕುಟುಂಬದಲ್ಲಿ ಬೆಳೆದ, ರಾಮನ ಪಾತ್ರಕ್ಕೆ ಹೊಂದಿಕೊಳ್ಳುವ ಲಕ್ಷಣಗಳಿರುವ ಸೌತ್‌ನ ನಟನೋರ್ವನಿಗೆ ರಾವಣನ ಪಾತ್ರ ಮಾಡಲು ಕೇಳಲಾಗಿದೆಯಂತೆ. ಇದೆಂತಹ ಕಲಿಯುಗ?" ಎಂದು ಬರೆದುಕೊಂಡು ಕಂಗನಾ ರಣೌತ್ ಯಶ್ ಅವರನ್ನು ಹೊಗಳಿ, ರಣ್‌ಬೀರ್ ಕಪೂರ್ ಅವರನ್ನು ದೂಷಿಸಿದ್ದಾರೆ.


Click it and Unblock the Notifications











