ಎರಡು ವರ್ಷದ ಹಿಂದೆಯೇ ಬಾಲಿವುಡ್ ಅವಕಾಶ ನಿರಾಕರಿಸಿದ್ದ ಯಶ್
'ಕೆಜಿಎಫ್ 2' ಸಿನಿಮಾದ ಬಳಿಕ ನಟ ಯಶ್ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಕನ್ನಡ ಸಿನಿ ಪ್ರೇಮಿಗಳಲ್ಲಿದೆ.
ತಮಿಳು ನಿರ್ದೇಶಕನ ಬಹುಭಾಷಾ ಸಿನಿಮಾದಲ್ಲಿ ಯಶ್ ನಟಿಸುತ್ತಿದ್ದಾರೆ ಎಂಬ ಗಾಳಿಸುದ್ದಿ ಹರಿದಾಡಿತ್ತು, ಅದಾದ ಬಳಿಕ ಆ ಸುದ್ದಿ ಸುಳ್ಳಾಯಿತು. ಕರಣ್ ಜೋಹರ್ ನಿರ್ಮಾಣದ ಸಿನಿಮಾದಲ್ಲಿ ಯಶ್ ನಟಿಸುತ್ತಾರೆ ಎನ್ನಲಾಯಿತು. ಆದರೆ ಆ ಸುದ್ದಿಯೂ ಸುಳ್ಳಾಯಿತು.
ಆದರೆ ಯಶ್‌ಗೆ ಎರಡು ವರ್ಷಗಳ ಮುಂಚೆಯೇ ಬಾಲಿವುಡ್‌ನಿಂದ ದೊಡ್ಡ ಸಿನಿಮಾದ ಆಫರ್ ಒಂದು ಬಂದಿತ್ತಂತೆ. ಆದರೆ ಯಶ್ ಆ ಆಫರ್ ಅನ್ನು ತಿರಸ್ಕರಿಸಿದ್ದರು. ಯಶ್ ತಿರಸ್ಕರಿಸಿದ ಆ ಸಿನಿಮಾದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ನಟಿಸಿದರು.
ಸೈಫ್ ಅಲಿ ಖಾನ್ ನಟಿಸಿದ್ದ 'ಲಾಲ್ ಕಪ್ತಾನ್' ಸಿನಿಮಾದ ಆಫರ್ ಮೊದಲಿಗೆ ಬಂದಿದ್ದು ಯಶ್‌ಗೆ. ಆದರೆ ಯಶ್ ಆಗ ಸಿನಿಮಾವನ್ನು ನಿರಾಕರಿಸಿದರು. ಅದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಏಕೆಂದರೆ ಆ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಇನ್ನಿಲ್ಲದಂತೆ ನೆಲಕಚ್ಚಿತು. ಆಗಷ್ಟೆ 'ಕೆಜಿಎಫ್' ಸಿನಿಮಾ ಯಶಸ್ಸು ಕಂಡಿದ್ದಾಗ ಈ ಸಿನಿಮಾವನ್ನು ಯಶ್‌ಗೆ ಆಫರ್ ಮಾಡಲಾಗಿತ್ತು.

ಭಿನ್ನ ಕತೆಯನ್ನು ಹೊಂದಿದ್ದ 'ಲಾಲ್ ಕಪ್ತಾನ್'
'ಲಾಲ್ ಕಪ್ತಾನ್' ಸಿನಿಮಾವು 1700 ರ ಕಾಲದ ಕುತೂಹಲ ಭರಿತ ಆಕ್ಷನ್ ಕತೆಯನ್ನು ಹೊಂದಿದೆ. ವ್ಯಕ್ತಿಯೊಬ್ಬ ತನ್ನ ಶಿಕಾರಿಯನ್ನು ಹುಡುಕಿಕೊಂಡು 20 ವರ್ಷ ಅಲೆದು ಕೊನೆಗೂ ಅವನನ್ನು ಕೊಲ್ಲುವ ಕತೆಯನ್ನು ಸಿನಿಮಾ ಹೊಂದಿತ್ತು. ಸಿನಿಮಾದ ನಾಯಕನ ಪಾತ್ರ ಬಹಳ ಭಿನ್ನವಾಗಿತ್ತು, ಸಿನಿಮಾದಲ್ಲಿ ನಾಯಕನ ಕಾಸ್ಟ್ಯೂಮ್‌ಗಳು ಸಹ ಬಹಳ ಭಿನ್ನವಾಗಿದ್ದವು. 'ಕೆಜಿಎಫ್' ಮೂಲಕ ಮಾಸ್ ಹೀರೋ ಆಗಿ ದೊಡ್ಡ ಯಶಸ್ಸು ಗಳಿಸಿದ್ದ ಯಶ್ ಈ ರೀತಿಯ ಭಿನ್ನ ಪಾತ್ರಲು ಮಾಡಲು ಒಪ್ಪದೆ ಸಿನಿಮಾವನ್ನು ನಿರಾಕರಿಸಿದರು.

'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ತಯಾರಾಗಿದೆ
ಇದೀಗ ಯಶ್ ನಟನೆಯ 'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಸಿನಿಮಾವು 2020, ಏಪ್ರಿಲ್ 14 ರಂದು ತೆರೆಗೆ ಬರಲಿದೆ. ಸಿನಿಮಾದ ಬಗ್ಗೆ ದೇಶದಾದ್ಯಂತ ಭಾರಿ ನಿರೀಕ್ಷೆ ಇದೆ. ಆದರೆ 'ಕೆಜಿಎಫ್' ಸಿನಿಮಾದ ಬಳಿಕ ಯಶ್ ಹೆಗಲ ಮೇಲೆ ಏರಿರುವ ನಿರೀಕ್ಷೆಯ ಭಾರದಿಂದಾಗಿ ಯಶ್ ತಮ್ಮ ಮುಂದಿನ ಸಿನಿಮಾ ಆಯ್ಕೆ ಮಾಡಿಕೊಳ್ಳಲು ಬಹಳ ಕಷ್ಟಪಡುತ್ತಿದ್ದಾರೆ.

'ಕಿರಾತಕ 2' ಸಿನಿಮಾ ಕೈಬಿಟ್ಟ ಯಶ್
'ಕೆಜಿಎಫ್' ಸಿನಿಮಾದ ಚಿತ್ರೀಕರಣ ಮುಗಿದ ಕೂಡಲೇ ಯಶ್, 'ಕಿರಾತಕ 2' ಸಿನಿಮಾದ ಚಿತ್ರೀಕರಣ ಆರಂಭಿಸಿದ್ದರು. ಆದರೆ ಅದೇ ವೇಳೆಗೆ 'ಕೆಜಿಎಫ್' ಬಿಡುಗಡೆ ಆಗಿ ಬಹುದೊಡ್ಡ ಯಶಸ್ಸು ಗಳಿಸಿತು. ಹಾಗಾಗಿ 'ಕಿರಾತಕ 2' ಸಿನಿಮಾವನ್ನು ಕೈಬಿಟ್ಟ ಯಶ್, 'ಕೆಜಿಎಫ್ 2' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡರು. 'ಕಿರಾತಕ 2' ಸಿನಿಮಾ ಚಿತ್ರೀಕರಣಕ್ಕೆ ನಿರ್ಮಾಪಕ ಜಯಣ್ಣ ಖರ್ಚು ಮಾಡಿದ್ದ ಹಣವನ್ನು 3% ಬಡ್ಡಿ ಸೇರಿಸಿ ಒಟ್ಟು 13 ಕೋಟಿಯನ್ನು ಯಶ್ ವಾಪಸ್ಸು ಮಾಡಿದರು.

ಯಶ್ ಮುಂದಿನ ಸಿನಿಮಾ ಯಾವುದು?
ಯಶ್ ಮುಂದಿನ ಸಿನಿಮಾ ಬಗ್ಗೆ ಹಲವು ಗಾಳಿ ಸುದ್ದಿಗಳು ಹರಿದಾಡುತ್ತಿವೆ. ನರ್ತನ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೆಲ ದಿನ ಓಡಾಡಿತು. ತೆಲುಗಿನ ದಿಲ್ ರಾಜು ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಾರೆ, ಆ ಸಿನಿಮಾವನ್ನು ತೆಲುಗಿನ ಜನಪ್ರಿಯ ನಿರ್ದೇಶಕರೊಬ್ಬರು ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಹರಿದಾಡಿತು. ಅದಾದ ಬಳಿಕ ತಮಿಳಿನ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಸುದ್ದಿ ಹಬ್ಬಿಸಲಾಯಿತು. ನೇರ ಬಾಲಿವುಡ್‌ಗೆ ಹಾರಿಬಿಡುತ್ತಾರೆ ಎಂದೂ ಹೇಳಲಾಯ್ತು. ಆದರೆ ಯಾವ ಸುದ್ದಿಯೂ ಅಧಿಕೃತವಾಗಿಲ್ಲ.


Click it and Unblock the Notifications











