ಗಾಯಕ ಯೋ ಯೋ ಹನಿಸಿಂಗ್ ವಿರುದ್ಧ ದೌರ್ಜನ್ಯ ಕೇಸ್ ದಾಖಲಿಸಿದ ಪತ್ನಿ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ ಕೇಸ್ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದೆ. ಇದೀಗ, ಹಿಂದಿ ಚಿತ್ರರಂಗದಲ್ಲಿ ಮತ್ತೊಂದು ಸೆಲೆಬ್ರಿಟಿ ದಾಂಪತ್ಯ ನ್ಯಾಯಾಲಯದ ಮೆಟ್ಟಿಲೇರಿದೆ ಎಂದು ಎಎನ್‌ಐ ವರದಿ ಮಾಡಿದೆ.
ಬಾಲಿವುಡ್ ಗಾಯಕ ಹಾಗೂ ನಟ ಯೋ ಯೋ ಹನಿ ಸಿಂಗ್ ವಿರುದ್ಧ ಪತ್ನಿ ಶಾಲಿನಿ ತಲ್ವಾರ್ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ. Rap ಸಿಂಗರ್ ಹನಿ ಸಿಂಗ್ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ಪತ್ನಿ ಶಾಲಿನಿ ತಲ್ವಾರ್, ತನ್ನ ಪತಿ ವಿರುದ್ದ ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ ಹಾಗೂ ಆರ್ಥಿಕ ಹಿಂಸೆಯ ಆರೋಪ ಮಾಡಿದ್ದಾರೆ.
ದೆಹಲಿಯ ತಿಸ್ ಹಜಾರಿ ನ್ಯಾಯಾಲಯದಲ್ಲಿ 'ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆ' ಅಡಿಯಲ್ಲಿ ಶಾಲಿನಿ ತಲ್ವಾರ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಶ್ರೀಮತಿ ತಾನಿಯಾ ಸಿಂಗ್ ಅವರು ಆಗಸ್ಟ್ 3 ರಂದು ಹನಿಸಿಂಗ್ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಪರಿಗಣಿಸಿದ್ದಾರೆ.

ಹನಿ ಸಿಂಗ್ ಅವರ ಪತ್ನಿ ಶಾಲಿನಿ ತಲ್ವಾರ್ ಪರವಾಗಿ ವಕೀಲ ಸಂದೀಪ್ ಕಪೂರ್, ಅಪೂರ್ವ ಪಾಂಡೆ ಮತ್ತು ಜಿಜಿ ಕಶ್ಯಪ್ ನ್ಯಾಯಾಲಯಕ್ಕೆ ಹಾಜರಾಗಿ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಆಗಸ್ಟ್ 28ರೊಳಗೆ ಕೋರ್ಟ್‌ಗೆ ಉತ್ತರ ನೀಡಬೇಕು ಎಂದು ಹನಿಸಿಂಗ್‌ಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಇನ್ನು ಶಾಲಿನಿ ತಲ್ವಾರ್ ಮತ್ತು ಯೋ ಯೋ ಹನಿಸಿಂಗ್ ಅವರ ಜಂಟಿ ಒಡೆತನದಲ್ಲಿರುವ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆ ಮಾಡುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿದೆ.
ಬಾಲಿವುಡ್‌ನಲ್ಲಿ ನಟನೆ ಆರಂಭಿಸುವುದಕ್ಕೆ ಮುಂಚೆಯೇ ಯೋ ಯೋ ಹನಿಸಿಂಗ್ ಮದುವೆ ಅಗಿರುವ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿರಲಿಲ್ಲ. ಆದರೆ, 2014ರ ಇಂಡಿಯಾ'ಸ್ ರಾಸ್ಟಾರ್ ರಿಯಾಲಿಟಿ ಶೋನಲ್ಲಿ ಪ್ರಪ್ರಥಮ ಬಾರಿಗೆ ಸಾರ್ವಜನಿಕವಾಗಿ ತಮ್ಮ ಪತ್ನಿಯನ್ನು ಪರಿಚಯಿಸುವ ಮೂಲಕ ಅಚ್ಚರಿ ನೀಡಿದ್ದರು. ಇದೀಗ, ಹನಿಸಿಂಗ್ ದಾಂಪತ್ಯ ಕಲಹ ಬೀದಿಗೆ ಬಂದಿದೆ.

ಯೋ ಯೋ ಹನಿಸಿಂಗ್ ಕುರಿತು
ಗಾಯಕ, Rap ಸಿಂಗರ್, ಸಂಗೀತ ನಿರ್ದೇಶಕ ಹಾಗೂ ನಟ ಹನಿಸಿಂಗ್ ಬಾಲಿವುಡ್‌ನಲ್ಲಿ ಪ್ರಸ್ತುತ ಅತಿ ಹೆಚ್ಚು ಸಂಭಾವನೆ ಪಡೆಯುವ ಮ್ಯೂಸಿಕ್ ಕಂಪೋಸರ್ ಎಂದು ಗುರುತಿಸಿಕೊಂಡಿದ್ದಾರೆ.
ಮೂಲತಃ ಪಂಜಾಬಿ ಕುಟುಂಬದಲ್ಲಿ ಜನಸಿರುವ ಸಿಂಗ್, ಆರಂಭದಲ್ಲಿ ಪಂಜಾಬಿ ಭಾಷೆಯಲ್ಲಿ ಹಾಡುಗಳನ್ನು ತಯಾರಿಸುತ್ತಿದ್ದರು. ನಂತರ ಸ್ವತಂತ್ರವಾಗಿ ಆಲ್ಬಮ್ ಹಾಡುಗಳನ್ನು ಮಾಡಿದರು. ನಿಧಾನವಾಗಿ ಬಾಲಿವುಡ್‌ಗೂ ಎಂಟ್ರಿ ಹನಿಸಿಂಗ್ ಭರ್ಜರಿ ಹಾಡುಗಳನ್ನು ಕಂಪೋಸ್ ಮಾಡಿ ಗಮನ ಸೆಳೆದರು. ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ನಟಿಸಿದ್ದ 'ಕಾಕ್‌ಟೈಲ್' ಚಿತ್ರದಲ್ಲಿ 'ಆಗ್ರೇಂಜಿ ಬೀಟ್ಸ್' ಹಾಡು ಕಂಪೋಸ್ ಮಾಡಿದ ನಂತರ ಹನಿಸಿಂಗ್ ಹೆಸರು ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಅಲ್ಲಿಂದ ಬ್ಯಾಕ್ ಟು ಬ್ಯಾಕ್ ಹಿಂದಿ ಚಿತ್ರಗಳಲ್ಲಿ ಹನಿ ಸಿಂಗ್ ಜಾದೂ ಮಾಡಿದರು.

'ಚೆನ್ನೈ ಎಕ್ಸ್‌ಪ್ರೆಸ್' ಸಿನಿಮಾದ 'ಲುಂಗಿ ಡ್ಯಾನ್ಸ್' ಹಾಡು ಕಂಪೋಸ್ ಮಾಡಿದ್ದು ಇದೇ ಹನಿಸಿಂಗ್. ಸನ್ ಆಫ್ ಸರ್ದಾರ್, ಖಲಾಡಿ 76, ರೇಸ್ 2, ಬಾಸ್, ಯಾರಿವನ್, ಸಿಂಗಂ ರಿಟರ್ನ್ಸ್, ಕಿಕ್, ರಾಗಿಣಿ ಎಂಎಂಎಸ್ 2, ಗಬ್ಬರ್ ಈಸ್ ಬ್ಯಾಕ್, ಪಾಗಲ್‌ಪತ್ನಿ, ಮುಂಬೈ ಸಗಾ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಹನಿಸಿಂಗ್ ಹಾಡುಗಳು ಮೋಡಿ ಮಾಡಿವೆ.
2012ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ಹನಿಸಿಂಗ್ ಹಾಡುಗಳ ಸಾಹಿತ್ಯ ವಿವಾದಕ್ಕೆ ಕಾರಣವಾಗಿತ್ತು. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರವನ್ನು ಪ್ರಚೋದಿಸುವ ಸಾಹಿತ್ಯ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರ ತಂಡ ಎಫ್‌ಐಆರ್ ಸಹ ದಾಖಲಿಸಿದ್ದರು.


Click it and Unblock the Notifications











