ಕನ್ನಡಕ್ಕೆ ಡಬ್ ಆಗ್ತಿಲ್ಲ 'ವಾರ್- 2'; ಎದುರಾಗುತ್ತಾ ಬಾಯ್ಕಾಟ್ ಬಿಸಿ?
ಕನ್ನಡದಲ್ಲಿ ಈಗ ಡಬ್ಬಿಂಗ್ ಸಿನಿಮಾಗಳ ಬಿಡುಗಡೆಗೆ ಅವಕಾಶ ಇದ್ದರೂ ಪರಭಾಷಾ ಫಿಲ್ಮ್ ಮೇಕರ್ಸ್ ತಲೆ ಕೆಡಿಸಿಕೊಳ್ಳುತ್ತಿಲ್ಲ. ನೇರವಾಗಿ ತಮ್ಮ ಭಾಷೆಯಲ್ಲೇ ದೊಡ್ಡ ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ಹಿಂದೆ ಇದೇ ಕಾರಣಕ್ಕೆ ಕೆಲ ಚಿತ್ರಗಳಿಗೆ ಬಾಯ್ಕಾಟ್ ಬಿಸಿ ಎದುರಾಗಿತ್ತು. ಇದೀಗ ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ 'ವಾರ್- 2' ಚಿತ್ರ ಕೂಡ ಕನ್ನಡಕ್ಕೆ ಡಬ್ ಆಗುತ್ತಿಲ್ಲ.
ಅಯಾನ್ ಮುಖರ್ಜಿ ನಿರ್ದೇಶನದ 'ವಾರ್- 2' ಸಿನಿಮಾ ಆಗಸ್ಟ್ 14ಕ್ಕೆ ತೆರೆಗೆ ಬರಲಿದೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆ ಆಗಿ ಸದ್ದು ಮಾಡಿತ್ತು. ತೆಲುಗು ಹಾಗೂ ತಮಿಳಿಗೆ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಆದರೆ ಕನ್ನಡಕ್ಕೆ ಯಾಕೆ ಡಬ್ ಮಾಡುತ್ತಿಲ್ಲ ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಮೊದಲಿನಿಂದಲೂ ಪರಭಾಷಾ ಸಿನಿಮಾಗಳನ್ನು ಆಯಾ ಭಾಷೆಗಳಲ್ಲೇ ರಾಜ್ಯದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಡಬ್ಬಿಂಗ್ ಮಾಡಲು ಅವಕಾಶ ಸಿಕ್ಕ ಬಳಿಕ ಕೂಡ ಅದೇ ಮುಂದುವರೆದಿದೆ.

ಕೆಲವೊಮ್ಮೆ ಕನ್ನಡಕ್ಕೆ ಡಬ್ ಮಾಡಿದರೂ ಸರಿಯಾಗಿ ಶೋಗಳು ಕೊಡುವುದಿಲ್ಲ. 'ಜೈಲರ್' ಹಾಗೂ 'ಪುಷ್ಪ'-2 ರೀತಿಯ ಸಿನಿಮಾಗಳು ಕನ್ನಡಕ್ಕೆ ಡಬ್ ಸದ್ದು ಮಾಡಿದ್ದವು. ಕನ್ನಡ ವರ್ಷನ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಪರಭಾಷೆಯ ಕೆಲ ದೊಡ್ಡ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡುವ ಪ್ರಯತ್ನ ನಡೀತಿದೆ. ಆದರೆ ಬಾಲಿವುಡ್ ಮಂದಿ ಮಾತ್ರ ಈ ವಿಚಾರದಲ್ಲಿ ಸೈಲೆಂಟ್ ಆಗಿದ್ದಾರೆ.
ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 'ವಾರ್- 2' ಸಿನಿಮಾ ನಿರ್ಮಾಣವಾಗಿದೆ. ಹೃತಿಕ್ ಹಾಗೂ ತಾರಕ್ ಜೊತೆ ಕಿಯಾರಾ ಅದ್ವಾನಿ ನಾಯಕಿಯಾಗಿ ಮಿಂಚಿದ್ದಾರೆ. ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. YRF ಸ್ಪೈ ಸರಣಿ ಸಿನಿಮಾಗಳ ಪಟ್ಟಿಗೆ ಈ ಸಿನಿಮಾ ಕೂಡ ಸೇರಿಕೊಂಡಿದೆ. ತೆಲುಗು ನಟ ಜ್ಯೂ. ಎನ್‌ಟಿಆರ್ ಚಿತ್ರದಲ್ಲಿ ಹೃತಿಕ್ ಎದುರು ಅಬ್ಬರಿಸಿರುವುದು ಕುತೂಹಲ ಮೂಡಿಸಿದೆ. ಆಂಧ್ರ, ತೆಲಂಗಾಣದಲ್ಲಿ ಕೂಡ ಚಿತ್ರ ಹೈಪ್ ಕ್ರಿಯೇಟ್ ಮಾಡುತ್ತಿದೆ.
ಕನ್ನಡಕ್ಕೆ ಯಾಕೆ 'ವಾರ್- 2' ಸಿನಿಮಾ ಡಬ್ ಮಾಡುತ್ತಿಲ್ಲ ಎನ್ನುವ ಪ್ರಶ್ನೆಗೆ ಇದು ಪ್ರೊಡಕ್ಷನ್ ಸಂಸ್ಥೆಯ ನಿರ್ಧಾರ ಎಂದು ಬೆಂಗಳೂರಿನ ಯಶ್ ರಾಜ್ ಫಿಲ್ಮ್ಸ್ ಆಫೀಸ್ ಮ್ಯಾನೇಜರ್ ಚಂದ್ರು ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. "ಇದು ಮುಂಬೈನಲ್ಲೇ ನಿರ್ಧಾರ ಆಗುವಂಥದ್ದು. ಮೊದಲಿನಿಂದಲೂ ಅವ್ರು 3 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡ್ತಾ ಬರ್ತಿದ್ದಾರೆ. ಹಿಂದಿ ವರ್ಷನ್ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಮಾಡುತ್ತೇವೆ. ತೆಲುಗು, ತಮಿಳಿಗೆ ಡಬ್ ಆಗಿದ್ದರೂ ರಾಜ್ಯದಲ್ಲಿ ಹೆಚ್ಚು ಶೋ ಹಾಕುವುದಿಲ್ಲ. ಕಲೆಕ್ಷನ್ ಆಗುವುದಿಲ್ಲ. ಹಾಗಾಗಿ ನಾವು ಹಿಂದಿ ವರ್ಷನ್ ಬಿಡುಗಡೆಗೆ ಹೆಚ್ಚು ಒತ್ತು ನೀಡುತ್ತೇವೆ. ಈ ಬಗ್ಗೆ ನಾನು ಸಂಬಂಧಪಟ್ಟವರನ್ನು ವಿಚಾರಿಸುತ್ತೇನೆ" ಎಂದು ತಿಳಿಸಿದ್ದಾರೆ.
ಪರಭಾಷೆಗಳನ್ನು ಡಬ್ ಮಾಡಿ ಕರ್ನಾಟಕದಲ್ಲಿ ಬಿಡುಗಡೆ ಮಾಡಬೇಕು ಎನ್ನುವ ಕೂಗು ಬಹಳ ದಿನಗಳಿಂದ ಕೇಳಿಬರುತ್ತಿದೆ. ಕೆಲವರು ಆ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ತೆಲುಗಿನ 'ಹಿಟ್- 3' ಚಿತ್ರವನ್ನು ಕೂಡ ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಿದ್ದರು. ಆಗಸ್ಟ್ 14ಕ್ಕೆ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಚಿತ್ರವನ್ನು ಕನ್ನಡಕ್ಕೂ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.
ಲೋಕೇಶ್ ಕನಕರಾಜ್ ನಿರ್ದೇಶನದ ಮಲ್ಟಿಸ್ಟಾರರ್ 'ಕೂಲಿ' ಚಿತ್ರದಲ್ಲಿ ಉಪೇಂದ್ರ ಕೂಡ ನಟಿಸಿದ್ದಾರೆ. ತೆಲುಗು ನಟ ನಾಗಾರ್ಜುನ ಮತ್ತೊಂದು ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಆಮೀರ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೂಜಾ ಹೆಗ್ಡೆ ಸ್ಪೆಷಲ್ ಸಾಂಗ್ ಚಿತ್ರದಲ್ಲಿದೆ. ಇನ್ನು ಒಂದೇ ದಿನ ಎರಡೂ ಸಿನಿಮಾಗಳು ಬಿಡುಗಡೆ ಆಗುತ್ತಿರುವ ಬಾಕ್ಸಾಫೀಸ್ ಕ್ಲ್ಯಾಶ್ ಸುಳಿವು ಕೊಟ್ಟಿದೆ. ಎರಡೂ ಕೂಡ ಮಲ್ಟಿಸ್ಟಾರರ್ ಸಿನಿಮಾಗಳು, ಸಿಕ್ಕಾಪಟ್ಟೆ ಕ್ರೇಜ್ ಇರುವ ಚಿತ್ರಗಳು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುವುದರಿಂದ ದೊಡ್ಡಮಟ್ಟದಲ್ಲೇ ಕ್ಲ್ಯಾಶ್ ಏರ್ಪಡುವ ಸಾಧ್ಯತೆಯಿದೆ.
'ವಾರ್- 2' ಹಾಗೂ 'ಕೂಲಿ' ಚಿತ್ರಗಳ ನಡುವೆ ಕನ್ನಡ '45' ಸಿನಿಮಾ ಬಿಡುಗಡೆ ಆಗುತ್ತಾ? ಎನ್ನುವ ಗೊಂದಲ ಮೂಡಿದೆ. ಆಗಸ್ಟ್ 15ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಬಹಳ ಹಿಂದೆಯೇ ಚಿತ್ರತಂಡ ಹೇಳಿತ್ತು. ಚಿತ್ರದಲ್ಲಿ ಅರ್ಜುನ್ ಜನ್ಯಾ ನಿರ್ದೇಶನದ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ನಟಿಸಿದ್ದಾರೆ. 'ಕೂಲಿ' ಹಾಗೂ '45' ಎರಡೂ ಸಿನಿಮಾಗಳಲ್ಲಿ ಉಪ್ಪಿ ಇರುವುದರಿಂದ ಯಾವುದಾದರೂ ಒಂದು ಸಿನಿಮಾ ರಿಲೀಸ್ ಡೇಟ್ ಬದಲಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಒಟ್ಟಾರೆ 'ವಾರ್-2' ಸಿನಿಮಾ ಕನ್ನಡಕ್ಕೆ ಡಬ್ ಆಗದೇ ಇರುವುದು ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಕಾದು ನೋಡಬೇಕಿದೆ. ಇತ್ತೀಚೆಗೆ ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಕೆಲವರು ತಪ್ಪಾಗಿ ಮಾತನಾಡಿ ವಿವಾದ ಸೃಷ್ಟಿಯಾಗಿತ್ತು. ಅದಕ್ಕೆ ತಕ್ಕ ಶಾಸ್ತಿ ಕೂಡ ಆಗುತ್ತಿದೆ. ಸದ್ಯ ಮೈಸೂರು ಸ್ಯಾಂಡಲ್ ಸೋಪಿನ ರಾಯಭಾರಿಯಾಗಿ ತಮನ್ನಾ ಅವರನ್ನು ಆಯ್ಕೆ ಮಾಡಿರುವ ವಿಚಾರವೂ ವಿವಾದ ಸೃಷ್ಟಿಸಿದೆ. ಇಂತಹ ಸಮಯದಲ್ಲಿ 'ವಾರ್- 2' ಕನ್ನಡಕ್ಕೆ ಡಬ್ ಆಗದೇ ಬಿಡುಗಡೆ ಆಗುತ್ತಾ ಕಾದು ನೋಡಬೇಕಿದೆ.


Click it and Unblock the Notifications











