2025ರ 6 ತಿಂಗಳಿನಲ್ಲಿ ನಿರೀಕ್ಷೆ ಮೂಡಿಸಿ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ ಸಿನಿಮಾಗಳಿವು...!
ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಪ್ರಪಂಚದಲ್ಲಿ ಹಲವಾರು ಜನ ತಮ್ಮ ಬದುಕು ಬದಲಾಗಬಹುದೆಂಬ ಆಶಯದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ತಾರೆ. ಹಲವಾರು ಜನ ತಮ್ಮ ಆಸ್ತಿ ಪಾಸ್ತಿಯೆಲ್ಲ ಅಡವಿಟ್ಟು ಚಿತ್ರವನ್ನು ನಿರ್ಮಾಣ ಕೂಡ ಮಾಡುತ್ತಾರೆ. ಆದರೆ.. ಗೆಲುವು ಎಲ್ಲರಿಗೆ ಸಿಗುವುದಿಲ್ಲ. ವಿಜಯಲಕ್ಷ್ಮಿ ಎಲ್ಲರಿಗೆ ಒಲಿಯುವುದಿಲ್ಲ. ಕುಬೇರ ವರ ಎಲ್ಲರಿಗೆ ಪ್ರಾಪ್ತಿಯೂ ಆಗುವುದಿಲ್ಲ.
ಯಾಕೆಂದರೆ ಇದು ಬಣ್ಣದ ಲೋಕ. ಇವತ್ತು ಟಾರ್ ರೋಡ್‌ನಲ್ಲಿದ್ದವರು ಯಾವುದೋ ಒಂದು ಶುಕ್ರವಾರ ಸ್ಟಾರ್ ಆಗುತ್ತಾರೆ. ಸ್ಟಾರ್ ಆದವರು ಏಕಾಏಕಿ ಪಾಪರ್ ಆಗುತ್ತಾರೆ. ಇದಕ್ಕೆ ಈ ಆರು ತಿಂಗಳ ಬಾಕ್ಸಾಫೀಸ್ ರಿಪೋರ್ಟ್ ಸದ್ಯದ ಸಾಕ್ಷಿ. ಹೌದು.. ಈ ಆರು ತಿಂಗಳಿನಲ್ಲಿ ಹಲವಾರು ಅತ್ಯುತ್ತಮ ಚಿತ್ರಗಳು ತೆರೆಗೆ ಬಂದಿವೆ. ಹೀಗೆ ಬಂದ ಚಿತ್ರಗಳಿಗೆ ಪ್ರೇಕ್ಷಕರ ಬೆಂಬಲ ಕೆಲ ಚಿತ್ರಕ್ಕೆ ಸಿಕ್ಕಿದೆ. ಕೆಲ ಚಿತ್ರಕ್ಕೆ ಸಿಕ್ಕಿಲ್ಲ.

ಅಚ್ಚರಿ ಅಂದರೆ ಯಾವ ಚಿತ್ರ ಗೆಲ್ಲುತ್ತೆ ಎಂದು ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದರೋ ಆ ಪೈಕಿ ಹಲವು ಚಿತ್ರಗಳು ಈ 6 ತಿಂಗಳಿನಲ್ಲಿ ಸೋತಿವೆ. ಹಾಗಿದ್ದರೆ ಈ 6 ತಿಂಗಳಿನಲ್ಲಿ ಸೋತ ಆ ಬಹುನಿರೀಕ್ಷಿತ ಚಿತ್ರಗಳು ಯಾವವು ಎನ್ನುವುದನ್ನು ತಿಳಿಯಲು ಮುಂದೆ ಓದಿ.
ಸಿಕಂದರ್
ಹೆಚ್ಚೇನು ಇಲ್ಲ. 07-08 ವರ್ಷದ ಹಿಂದೆ ಸಲ್ಮಾನ್ ಖಾನ್ ಅಭಿನಯದ ಚಿತ್ರ ಬಿಡುಗಡೆಯಾಗುತ್ತಿದೆ ಎಂದರೆ ಬಾಲಿವುಡ್‌ನಲ್ಲಿ ಕಂಪನವಾಗುತ್ತಿತ್ತು.ಉತ್ತರ ಭಾರತದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತಿತ್ತು.
ಇಷ್ಟೇ ಅಲ್ಲ ಬೇರೆಯವರೆಲ್ಲ ತಮ್ಮ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡುತ್ತಿದ್ದರು. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಹದಿಹರೆಯದ ಯುವಕ ಯುವತಿಯರಿಂದ ಹಿಡಿದು ಬಡ ಮತ್ತು ಮಧ್ಯಮ ವರ್ಗದ ಜನರ ದಂಡು ಚಿತ್ರಮಂದಿರದ ಎದುರು ಕಂಡು ಬರುತ್ತಿತ್ತು.ಆದರೆ ಸಿಕಂದರ್ ಈ ಎಲ್ಲ ನಿರೀಕ್ಷೆಯನ್ನು ಹುಸಿ ಮಾಡಿತು. ಮಕಾಡೆ ಮಲಗಿತು. ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಸಿಕಂದರ್ ಗಳಿಸಿದ್ದು ಕೇವಲ ₹ 110.1 ಕೋಟಿ ಅಷ್ಟೇ.
ಥಗ್ ಲೈಫ್
ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಬಗ್ಗೆ ಬೇರೆ ಏನೂ ಹೇಳಬೇಕಿಲ್ಲ. ಯಾಕೆಂದರೆ ಬಿಡುಗಡೆಗೆ ಮುನ್ನ ವಿಪರೀತ ಸದ್ದು ಮಾಡಿದ್ದ ಚಿತ್ರ ಇದು. ಅದರಲ್ಲಿಯೂ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು ಈ ಚಿತ್ರ. ಕರ್ನಾಟಕದಲ್ಲಿ ಬಿಡುಗಡೆಯ ಭಾಗ್ಯವನ್ನೇ ಕಾಣದ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆಗಳಿದ್ದವು. ಅದಕ್ಕೆ ಹಲವು ಕಾರಣಗಳು ಕೂಡ ಇದ್ದವು.
ಮಣಿರತ್ನಂ ಮತ್ತು ಕಮಲ್ ಹಾಸನ್ ದಶಕಗಳ ನಂತರ ಮತ್ತೆ ಒಂದಾಗಿದ್ದಕ್ಕೆ ಬಾಕ್ಸಾಫೀಸ್‌ಗೆ ಸುನಾಮಿ ಅಪ್ಪಳಿಸುತ್ತೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಎದುರಾಗಿದ್ದು ಮಾತ್ರ ಬರಗಾಲ. ಸ್ಯಾಕ್ನಿಲ್ ವೆಬ್ ಸೈಟ್ ಉಲ್ಲೇಖಿಸಿರುವಂತೆ ಈ ಚಿತ್ರ ಭಾರತದಲ್ಲಿ ಗಳಿಸಿದ್ದು ಕೇವಲ ₹ 48 ಕೋಟಿ ಮಾತ್ರ. ಹೊರದೇಶದ ಲೆಕ್ಕ ಎಲ್ಲ ಸೇರಿಸಿದರೆ ಈ ಚಿತ್ರದ ಒಟ್ಟಾರೆ ಗಳಿಕೆ ಜಸ್ಟ್ ₹98.05 ಕೋಟಿ ಮಾತ್ರ.

ಕೇವಲ ಈ ಎರಡು ಚಿತ್ರಗಳು ಮಾತ್ರವಲ್ಲ ಸೂರ್ಯ ಅಭಿನಯದ ರೆಟ್ರೋ.. ಕಂಗನಾ ರಣಾವತ್ ನಟಿಸಿ ನಿರ್ದೇಶಿಸಿದ ಎಮರ್ಜೆನ್ಸಿ.. ರಾಮಚರಣ್ ತೇಜಾ ಅಭಿನಯದ ಗೇಮ್ ಚೇಂಜರ್ ಕೂಡ ಈ ಆರು ತಿಂಗಳಿನಲ್ಲಿ ಪ್ರೇಕ್ಷಕರಿಗೆ ನಿರಾಸೆಯನ್ನುಂಟು ಮಾಡಿದವು. ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಸೂರ್ಯ ಅಭಿನಯದ ರೆಟ್ರೋ ಕೇವಲ ₹ 60.26 ಕೋಟಿ ಮಾತ್ರ ಗಳಿಸಿದರೆ, ಗೇಮ್ ಚೇಂಜರ್ ಕೇವಲ ₹ 131.17 ಕೋಟಿಯನ್ನು ಮಾತ್ರ ಗಳಿಸಿತು. ಕಂಗನಾ ರಣಾವತ್ ಅವರ ಎಮರ್ಜೆನ್ಸಿಯ ಲೆಕ್ಕ ಖುದ್ದು ಬಾಲಿವುಡ್ ಮರೆಯಲು ಇಚ್ಚಿಸುತ್ತೆ. ಯಾಕೆಂದರೆ ಕೋಟ್ಯಾಂತರ ರೂಪಾಯಿಯಲ್ಲಿ ನಿರ್ಮಾಣವಾದ ಎಮರ್ಜೆನ್ಸಿ ಗಳಿಸಿದ್ದು ಕೇವಲ ₹ 18.35 ಮಾತ್ರ.
ಹೀಗೆ ಬಾಕ್ಸಾಫೀಸ್‌ನಲ್ಲಿ ದೊಡ್ಡ ಗೆಲುವನ್ನು ಕಾಣುವ ಮುನ್ಸೂಚನೆಯನ್ನು ನೀಡಿ, ಅಪಾರವಾದ ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ ಈ ಚಿತ್ರಗಳು ನಿರೀಕ್ಷಿತ ಮಟ್ಟವನ್ನು ತಲುಪುವಲ್ಲಿ ವಿಫಲವಾದವು. ಬಾಕ್ಸಾಫೀಸ್ ಕದನದಲ್ಲಿ ಸೋತು ಸುಣ್ಣವಾದವು. ಕಲಾಭಿಮಾನಿಗಳನ್ನು ಕೂಡ ನಿರಾಸೆ ಮಾಡಿದವು. ದುರಂತ ಅಂದರೆ ಈ ಚಿತ್ರಗಳನ್ನು ಓಟಿಟಿಯಲ್ಲಿ ಕೂಡ ಯಾರು ನೋಡಲಿಲ್ಲ. ನಮ್ಮ ನೆಚ್ಚಿನ ನಾಯಕ ಅಥವಾ ನಾಯಕಿ ಅಭಿನಯದ ಚಿತ್ರಗಳೆಂದು ಮಣೆಯನ್ನು ಕೂಡ ಹಾಕಲಿಲ್ಲ.
ಒಟ್ಟಾರೆಯಾಗಿ ಈ 2025ರ ಈ 6 ತಿಂಗಳು ಹಲವು ಅಚ್ಚರಿ ಫಲಿತಾಂಶ ನೀಡಿದೆ. ಇದೇ ಸಮಯದಲ್ಲಿ ಭರವಸೆಯನ್ನು ಕೂಡ ಹುಸಿ ಮಾಡಿದೆ. ಕೇವಲ ಈ ಚಿತ್ರಗಳು ಮಾತ್ರವಲ್ಲ ಇನ್ನು ಹಲವು ಚಿತ್ರಗಳು ಕೂಡ ಈ ವರ್ಷದ ಮೊದಲಾರ್ಧದಲ್ಲಿ ಭರವಸೆಯನ್ನು ಮೂಡಿಸಿ ಸೋತಿವೆ. ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿವೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications









