ಕಾಂತಾರ ಅಬ್ಬರ, ದೈವದ ಚಮತ್ಕಾರ ; ಕೇವಲ ಹನ್ನೆರಡೇ ದಿನದಲ್ಲಿ 'ಹೊಂಬಾಳೆ'ಗೆ ಆದ ಲಾಭ ಎಷ್ಟು ?
ಕನ್ನಡ ಚಿತ್ರಕ್ಕೆ ಬಂಡವಾಳ ಹಾಕಲು ಅನೇಕರು ಯೋಚನೆ ಮಾಡುತ್ತಾರೆ. ಯಾಕೆಂದರೆ .. ಲಾಭ ಇರಲಿ ಹಾಕಿದ ಬಂಡವಾಳವಾದರು ಮರಳಿ ಬರುವುದಿಲ್ಲ ಎನ್ನುವ ಅಭಿಪ್ರಾಯ ಹಲವರದ್ದು. ಆದರೆ ಈ ಅಭಿಪ್ರಾಯ ಈಗೀಗ ಬದಲಾಗುತ್ತಿದೆ. ಮಾರುಕಟ್ಟೆ ಮೊದಲಿನಂತೆ ಇಲ್ಲ ವಿಸ್ತಾರವಾಗಿದೆ ಎನ್ನುವ ವಿಚಾರ ಹಲವರಿಗೆ ಮನವರಿಕೆಯಾಗಿದೆ. ಹಾಗಂಥ ಎಲ್ಲ ಚಿತ್ರಗಳು ಕೂಡ ಗಡಿಯಾಚೆ ಸದ್ದು ಮಾಡುತ್ತವೆ.. ಆ ಭಾಷೆ ಈ ಭಾಷೆ...
ಎನ್ನದೇ ಎಲ್ಲ ಭಾಷೆಯ ಜನರನ್ನು ಸೆಳೆಯುತ್ತವೆ.. ಬ್ಲಾಕ್ ಬಸ್ಟರ್ ಫಲಿತಾಂಶ ಬಂದು ಹಣದ ಮಳೆ ಆಗುತ್ತೆ ಅಂತ ಅಲ್ಲ. ಶ್ರದ್ದೆ .. ಭಕ್ತಿ.. ಪ್ರಾಮಾಣಿಕತೆ.. ಒಳ್ಳೆಯ ಕಥೆ ಮತ್ತು ತಂಡದ ಜೊತೆ ಚಿತ್ರ ಮಾಡಿದಾಗ, ಮಾಡಿದ ಪ್ರಯತ್ನದ ಜೊತೆ ಅದೃಷ್ಟ ಕೂಡ ಕೂಡಿಕೊಂಡಾಗ ಗಲ್ಲಾಪೆಟ್ಟಿಗೆಯಲ್ಲಿ ಕೆಲ ಪವಾಡಗಳು ನಡೆಯುತ್ತವೆ. ಹಾಕಿದ ಬಂಡವಾಳಕ್ಕಿಂತ ಎರಡು..ಮೂರು..ನಾಲ್ಕರಷ್ಟು ಹಣ ಮರಳಿ ಬರುತ್ತೆ. ಉದಾಹರಣೆಗೆ ''ಕಾಂತಾರ- ಚಾಪ್ಟರ್ 1'' .

ಹೌದು, ಬೆಳ್ಳಿತೆರೆಯಲ್ಲಿ ''ಕಾಂತಾರ-1'' ಅಕ್ಷರಶ ಧಗಧಗಿಸುತ್ತಿದೆ. ಬಿಡುಗಡೆಯಾಗಿ ಹನ್ನೆರಡು ದಿನ ಆದರೂ ಕೂಡ ''ಕಾಂತಾರ-1'' ಕ್ರೇಜ್ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿಯೇ ಈ ಚಿತ್ರದ ಗಳಿಕೆ. ಇಲ್ಲಿಯವರೆಗೆ ಕೇವಲ ಭಾರತದಲ್ಲಿಯೇ ₹ 451.75 ಕೋಟಿಯನ್ನು ಕೊಳ್ಳೆ ಹೊಡೆದಿರುವ ''ಕಾಂತಾರ-ಚಾಪ್ಟರ್ 1'' ಚಿತ್ರದಿಂದ ನಿರ್ಮಾಣ ಸಂಸ್ಥೆ ಹೊಂಬಾಳೆಗೆ ಮತ್ತೊಮ್ಮೆ ಕುಬೇರ ವರ ಪ್ರಾಪ್ತಿಯಾಗಿದೆ. ದೈವದ ಅನುಗ್ರಹದಿಂದ 261% ಲಾಭವನ್ನು ಮಾಡಿ ಕೊಟ್ಟಿದೆ. ಅದು ಕೇವಲ ಹನ್ನೆರಡೇ ದಿನದಲ್ಲಿ.
''www.koimoi.com'' ವರದಿಯ ಪ್ರಕಾರ 2023ರಲ್ಲಿ ಏಳೆಂಟು ಕೋಟಿ ಖರ್ಚು ಮಾಡಿ ''ಕಾಂತಾರ'' ಚಿತ್ರದಿಂದ ಬರೋಬ್ಬರಿ ನಾನ್ನೂರು ಕೋಟಿಯನ್ನು ಗಳಿಸಿದ್ದ ಚಿತ್ರದ ನಿರ್ಮಾಪಕ ವಿಜಯ ಕಿರಗಂದೂರು ''ಕಾಂತಾರ 1'' ಚಿತ್ರಕ್ಕೆ 125 ಕೋಟಿ ಹಣ ಹೂಡಿದ್ದರು. ಎಲ್ಲರಿಗೆ ಗೊತ್ತಿರುವಂತೆ, ಈಗಾಗಲೇ ಹೇಳಿದಂತೆ.. ಈ ಹಣ ಈಗಾಗಲೇ ಮರಳಿ ಬಂದಿದೆ. ಹಾಕಿದ ಬಂಡವಾಳ ಮತ್ತು ಚಿತ್ರದ ಗಳಿಕೆ ಕಳೆದರೆ ₹326.75 ಕೋಟಿ ಲಾಭದಲ್ಲಿ ವಿಜಯ ಕಿರಗಂದೂರು ಇದ್ದಾರೆ.

ಈ ಲೆಕ್ಕ ಕೇವಲ ಭಾರತದ ಗಳಿಕೆಯದ್ದು ಮಾತ್ರ. ಹೊರದೇಶಗಳಲ್ಲಿಯ ಗಳಿಕೆಯನ್ನು ಕೂಡಿ ಕಳೆದು ಲೆಕ್ಕ ಹಾಕಿದರೆ ಲಾಭದ ಮೊತ್ತ ಇನ್ನೂ ಹೆಚ್ಚಾಗುತ್ತೆ. ಇನ್ನು ಸ್ಯಾಟಲೈಟ್, ಆಡಿಯೋ, ಡಿಜಿಟಲ್ ಮುಂತಾದ ಹಕ್ಕುಗಳಿಂದ ಬಂದ ಹಣವೆಲ್ಲವೂ ಹೊಂಬಾಳೆಯ ಪಾಲಿಗೆ ಬೋನಸ್ ಇದ್ದಂತೆ.
ಅಂದ್ಹಾಗೇ ಈ ವರ್ಷ ಬೇರೆ ಬೇರೆ ಭಾಷೆಯಲ್ಲಿ ''ಕಾಂತಾರ 1'' ಚಿತ್ರದಂತೆಯೇ ಚಮತ್ಕಾರಗಳು ನಡೆದಿವೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ಅತೀ ಹೆಚ್ಚು ಹಣ ಗಳಿಸುವುದಲ್ಲದೇ ನಿರ್ಮಾಪಕರಿಗೆ ಅತೀ ಹೆಚ್ಚು ಲಾಭವನ್ನು ಕೂಡ ಮಾಡಿ ಕೊಟ್ಟಿವೆ. www.koimoi.com ಉಲ್ಲೇಖ ಮಾಡಿರುವಂತೆ ಈ ವರ್ಷ ಅತೀ ಹೆಚ್ಚು ಲಾಭ ಮಾಡಿದ ಭಾರತದ ಹತ್ತು ಚಿತ್ರಗಳ ಸಾಲಿನಲ್ಲಿ ''ಕಾಂತಾರ 1'' ಸೇರಿಕೊಳ್ಳಲು 38.28% ಗಳಿಕೆಯ ಅವಶ್ಯಕತೆ ಇದೆ. ಸದ್ಯ 261.72% ಲಾಭವನ್ನು ನಿರ್ಮಾಪಕರಿಗೆ ಮಾಡಿ ಕೊಟ್ಟಿರುವ ''ಕಾಂತಾರ-1''ನ ಈ ಲೆಕ್ಕ 300 % ಆದರೆ ಈ ವರ್ಷದ ಅತೀ ಹೆಚ್ಚು ಲಾಭ ಮಾಡಿದ ಹತ್ತು ಚಿತ್ರಗಳ ಸಾಲಿನಲ್ಲಿ ''ಕಾಂತಾರ-1'' ಕೂಡ ಬಂದು ಸೇರಿಕೊಳ್ಳಲಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ


Click it and Unblock the Notifications











