ಕಾಂತಾರ ಅಬ್ಬರ, ದೈವದ ಆಶೀರ್ವಾದ, ₹400 ಕೋಟಿ ಮೈಲಿಗಲ್ಲು ; ಇನ್ನೊಂದೇ ಮೆಟ್ಟಿಲು-ರಿಷಬ್ ಶೆಟ್ಟಿಗೆ ವಜ್ರಖಚಿತ ಸಿಂಹಾಸನ
ಸದಾ ಹೊಸತನವನ್ನೇ ಪ್ರಯತ್ನಿಸುವ ರಿಷಬ್ ಶೆಟ್ಟಿ, ಚುರುಕುತನ, ವ್ಯಾವಹಾರಿಕ ಚತುರತೆ ಹೊಂದಿರುವ ಪ್ರತಿಭೆಯೂ ಹೌದು. ಕಲಾತ್ಮಕ ಚೌಕಟ್ಟಿನ ಸರ್ಕಾರಿ ಶಾಲೆಯಂತಾ ಸಿನಿಮಾವನ್ನೂ ಜನ ಮುಗಿಬಿದ್ದು ನೋಡುವಂತೆ ಮಾಡಿ ಗೆಲ್ಲಿಸಿದ ಹೆಗ್ಗಳಿಕೆಯನ್ನೂ ಹೊಂದಿರುವ ರಿಷಬ್ ಶೆಟ್ಟಿ ಈಗ ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ. ಬದಲಿಗೆ ರಿಷಬ್ ಈಗ ನ್ಯಾಶನಲ್ ಹೀರೋ. ಇದಕ್ಕೆ ಕೈಗನ್ನಡಿಯೇ ''ಕಾಂತಾರ-ಚಾಪ್ಟರ್ 1'' ಚಿತ್ರದ ಅದ್ಭುತವಾದ ಗಳಿಕೆ.
ಹೌದು, ಬೆಳ್ಳಿತೆರೆಯಲ್ಲಿ ''ಕಾಂತಾರ 1'' ಅಕ್ಷರಶ ಧಗಧಗಿಸುತ್ತಿದೆ. ಒಂದು ವಾರ ಆದರೂ ಕೂಡ ದೈವದ ಅಬ್ಬರ ಕಡಿಮೆಯಾಗಿಲ್ಲ. ಬಾಕ್ಸಾಫೀಸ್‌ನಲ್ಲಿ ಈ ಒಂದು ವಾರದಲ್ಲಿ ಹತ್ತು ಹಲವು ದಾಖಲೆಗಳನ್ನು ಮುರಿದಿರುವ ''ಕಾಂತಾರ 1'' ಚಿತ್ರ ಸದ್ಯ ಕಾಲಿವುಡ್‌ನ ಬ್ಲಾಕ್‌ಬಸ್ಟರ್ ಕಮಲ್ ಹಾಸನ್ ಅಭಿನಯದ ವಿಕ್ರಮ್ (₹413 ಕೋಟಿ) ಚಿತ್ರದ ದಾಖಲೆಯನ್ನು ಕೂಡ ಮುರಿದಿದೆ. ಕಾರ್ತಿಕ್ ಆರ್ಯನ್ ಅಭಿನಯದ ಭೂಲ್ ಭೂಲಯ್ಯ 3 (₹411 ಕೋಟಿ ) ಚಿತ್ರದ ಗಳಿಕೆಯನ್ನು ಕೂಡ ಹಿಂದಿಕ್ಕಿದೆ. ವಿಶ್ವದಾದ್ಯಂತ ಈ ಒಂದು ವಾರದಲ್ಲಿ ಒಟ್ಟು ₹414 ಕೋಟಿ ಕೊಳ್ಳೆ ಹೊಡೆದಿದೆ.

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಭಾರತದಲ್ಲಿಯೇ ''ಕಾಂತಾರ 1'' ಈ ಒಂದು ವಾರದಲ್ಲಿ ₹316 ಕೋಟಿ ಹಣವನ್ನು ದೋಚಿದೆ. ಆ ಪೈಕಿ ಹಿಂದಿ ಅವತರಣಿಕೆ ಪಾಲು ₹102 ಕೋಟಿ ಇದೆ.
ಇನ್ನೂ ಕನ್ನಡದಲ್ಲಿ ''ಕಾಂತಾರ''ದ ಶಕ್ತಿ ಎಲ್ಲರನ್ನು ಮಂತ್ರಮುಗ್ದಗೊಳಿಸಿದೆ.ಇದಕ್ಕೆ ಪುರಾವೆ ಎನ್ನುವಂತೆ ಕನ್ನಡದ ಗಳಿಕೆಯೇ ನೂರು ಕೋಟಿಯ ಗಡಿಯನ್ನು ಬಂದು ತಲುಪಿದೆ. ಒಂದು ವಾರದಲ್ಲಿ ಕೇವಲ ಕನ್ನಡದಲ್ಲಿ ''ಕಾಂತಾರ 1'' ₹98.85 ಕೋಟಿಯನ್ನು ಕೊಳ್ಳೆ ಹೊಡೆದಿದೆ.
ಅಂದ್ಹಾಗೇ ಕನ್ನಡ ಚಿತ್ರರಂಗಕ್ಕೆ ನೂರು ಕೋಟಿ ಎನ್ನುವುದು ಮರಿಚೀಕೆ ಎನ್ನುವ ಮಾತು ಕಳೆದ ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತು. ಈ ಮಾತನ್ನು ಕೆಲ ವರ್ಷಗಳಿಂದ ಕೆಲವು ಚಿತ್ರಗಳು ಸುಳ್ಳಾಗಿಸಿವೆ. ಆ ಪೈಕಿ 2022.. ಸೆಪ್ಟೆಂಬರ್ 30ರಂದು ಬಂದಿದ್ದ ''ಕಾಂತಾರ'' ಕೂಡ ಒಂದು.
ಮೂರು ವರ್ಷದ ಹಿಂದೆ ಸದ್ದಿಲ್ಲದೇ ಬಂದು ''ಕಾಂತಾರ'' ₹ 407.82 ಕೋಟಿಯನ್ನು ಗಳಿಸಿತ್ತು. ಈ ಮೂಲಕ ಅತೀ ಹೆಚ್ಚು ಹಣ ಗಳಿಸಿದ ಕನ್ನಡದ ಎರಡನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ''ಕಾಂತಾರ''ದ ಈ ದಾಖಲೆಯನ್ನು ಈಗ ''ಕಾಂತಾರ 1'' ಚಿತ್ರ ಮುರಿದಿದೆ. ಇನ್ನೇನಿದ್ದರೂ ಕಣ್ಮುಂದೆ ''ಕೆಜಿಎಫ್-ಚಾಪ್ಟರ್ 2'' ದಾಖಲೆ ಮಾತ್ರ ಇದೆ. ಈ ದಾಖಲೆಯನ್ನು ಮುರಿದರೆ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗದ ವಜ್ರಖಚಿತ ಸಿಂಹಾಸನದ ಮೇಲೆ ಬಂದು ಆಸೀನರಾಗಲಿದ್ದಾರೆ.

''ಸ್ಯಾಕ್ನಿಲ್'' ಪ್ರಕಾರ 2022ರ ನಂತರ 100 ಕೋಟಿ ಗಡಿ ತಲುಪಿದ ಕನ್ನಡದ ಚಿತ್ರಗಳ ಪಟ್ಟಿ ಈ ಕೆಳಗಿನಂತೆ ಇದೆ.
1 ಕೆಜಿಎಫ್-ಚಾಪ್ಟರ್ 2- 2022 -₹ 1215 ಕೋಟಿ
2 ಕಾಂತಾರ:ಚಾಪ್ಟರ್1 - 2025 -₹ 415 ಕೋಟಿ(7ದಿನ)
3 ಕಾಂತಾರ - 2022 -₹ 407.82 ಕೋಟಿ
4 ಕೆಜಿಎಫ್-ಚಾಪ್ಟರ್ 1 - 2018 -₹ 238.00 ಕೋಟಿ
5 ಸು ಫ್ರಮ್ ಸೋ - 2025 -₹ 121 ಕೋಟಿ
6 777 ಚಾರ್ಲಿ - 2022 -₹ 102.75 ಕೋಟಿ
7 ವಿಕ್ರಾಂತ್ ರೋಣ - 2022 -₹ 100.35 ಕೋಟಿ
ಹೀಗೆ ಸದ್ಯ ಎರಡನೇ ಸ್ಥಾನದಲ್ಲಿ ''ಕಾಂತಾರ-ಚಾಪ್ಟರ್ 1'' ಚಿತ್ರ ಬಂದು ತಲುಪಿದೆ. ಕೇವಲ 7 ದಿನದಲ್ಲಿ ₹ 415 ಕೋಟಿ ಗಳಿಸಿದೆ. ಬಾಕ್ಸಾಫೀಸ್‌ನ ಪಂಡಿತರ ಪ್ರಕಾರ ಒಂದು ಸಾವಿರ ಗಡಿಯನ್ನು ''ಕಾಂತಾರ'' ತಲುಪುವ ಎಲ್ಲಾ ಸಾಧ್ಯತೆಗಳಿವೆ. ''ಕೆಜಿಎಫ್ 2'' ದಾಖಲೆಯನ್ನು ''ಕಾಂತಾರ 1'' ಮುರಿಯುತ್ತಾ..? ಈ ಮೂಲಕ ಅತೀ ಹೆಚ್ಚು ಹಣ ಗಳಿಸಿದ ಕನ್ನಡದ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುತ್ತಾ..? ಅತೀ ಹೆಚ್ಚು ಹಣ ಗಳಿಸಿದ ನಂ 1 ಸ್ಟಾರ್ ಎಂಬ ಹೆಗ್ಗಳಿಕೆಗೆ ರಿಷಬ್ ಶೆಟ್ಟಿ ಪಾತ್ರರಾಗುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











