Baaghi 4 Boxoffice: ಹನುಮ ಭಕ್ತ ಹರ್ಷ 'ಬಾಘಿ- 4' ಚಿತ್ರಕ್ಕೆ ಗಣೇಶನ ಪರೀಕ್ಷೆ; 3 ದಿನಕ್ಕೆ ಗಳಿಸಿದ್ದೆಷ್ಟು?
ಕನ್ನಡ ನಿರ್ದೇಶಕರು ಒಬ್ಬೊಬ್ಬರಾಗಿ ಬಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಸದ್ಯ ಎ. ಹರ್ಷ ನಿರ್ದೇಶನದ 'ಬಾಘಿ- 4' ಸಿನಿಮಾ ತೆರೆಕಂಡು ಸಖತ್ ಸದ್ದು ಮಾಡ್ತಿದೆ. ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಮಾಸ್ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಿದೆ. ಟೈಗರ್ ಶ್ರಾಫ್ ಹಾಗೂ ಸಂಜಯ್ ದತ್ ರಕ್ತಸಿಕ್ತ ಅಧ್ಯಾಯ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ.
'ಬಾಘಿ' ಸರಣಿಯ ಹಿಂದಿನ ಸಿನಿಮಾಗಳು ಸಕ್ಸಸ್ ಕಂಡಿವೆ. ಅದೇ ಸಾಲಿಗೆ ಈ ಸಿನಿಮಾ ಕೂಡ ಸೇರಿಕೊಳ್ಳಲಿದೆ. ಎ. ಹರ್ಷ ನಿರ್ದೇಶನದ ಬಗ್ಗೆಯೂ ಮೆಚ್ಚುಗೆಯ ಮಾತುಗಳು ಕೇಳಿಬರ್ತಿದೆ. ಸದ್ಯ ಸಿನಿಮಾ ಗೆಲುವು ಸುಳಿವು ಸಿಕ್ಕಿದ್ದು ಕನ್ನಡ ನಿರ್ದೇಶಕ ಬಿಟೌನ್‌ನಲ್ಲೇ ಸೆಟ್ಲ್ ಆಗಿಬಿಡ್ತಾರಾ ಎನ್ನುವ ಚರ್ಚೆ ಶುರುವಾಗಿದೆ. ಗೆದ್ದೆತ್ತಿನ ಬಾಲ ಹಿಡಿಯುವುದರಲ್ಲಿ ಬಾಲಿವುಡ್ ಮಂದಿ ಸದಾ ಮುಂದಿರುತ್ತಾರೆ.

ಶುಕ್ರವಾರ ತೆರೆಕಂಡಿದ್ದ ಸಿನಿಮಾ ಫಸ್ಟ್ ವೀಕೆಂಡ್ ಮುಗಿಸಿ ಸೋಮವಾರಕ್ಕೆ ಕಾಲಿಟ್ಟಿದೆ. ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದ್ದ ಚಿತ್ರ ಶನಿವಾರ ಡಲ್ ಆಗಿತ್ತು. ಭಾನುವಾರ ಮತ್ತೆ ಚೇತರಿಸಿಕೊಂಡು ಮುನ್ನುಗ್ಗುತ್ತಿದೆ. ಅದಕ್ಕೆ ಬಲವಾದ ಕಾರಣ ಕೂಡ ಇದೆ. ಚಿತ್ರದ ಟಿಕೆಟ್ 50% ಕಡಿತಗೊಳಿಸಿರುವುದು ಕೂಡ ಸಿನಿಮಾ ಗಳಿಕೆ ಹೆಚ್ಚಾಗಲು ಕಾರಣವಾಗಿದೆ.
30 ಕೋಟಿ ರೂ. ಗಳಿಕೆ
ಮೊದಲ 3 ದಿನಕ್ಕೆ 'ಬಾಘಿ- 4' ಸಿನಿಮಾ ಅಂದಾಜು 31.25 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು Sacnilk. com ವೆಬ್‌ಸೈಟ್ ವರದಿ ಮಾಡಿದೆ. ಇದು ಬರೀ ಭಾರತದಲ್ಲಿ ಸಿನಿಮಾ ಕಲೆಕ್ಷನ್ ಮಾತ್ರ. ವಿದೇಶಗಳಲ್ಲಿ ಸಿನಿಮಾ ಗಳಿಕೆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ. ಶುಕ್ರವಾರಿ 12 ಕೋಟಿ ರೂ. ಶನಿವಾರ 9.25 ಕೋಟಿ ರೂ. ಹಾಗೂ ಭಾನುವಾರ 10 ಕೋಟಿ ರೂ. ಗಳಿಕೆ ಕಂಡಿದೆ ಎಂದು ಹೇಳಲಾಗ್ತಿದೆ.

ಗಣೇಶನ ಅಗ್ನಿ ಪರೀಕ್ಷೆ
ಶುಕ್ರವಾರ ಒಳ್ಳೆ ಓಪನಿಂಗ್ ಪಡೆದುಕೊಂಡಿದ್ದ 'ಬಾಘಿ- 4' ಚಿತ್ರದ ಗಳಿಕೆ ಶನಿವಾರ ಕಮ್ಮಿ ಆಗಲು ಕಾರಣ ಗಣೇಶೋತ್ಸವ. ಉತ್ತರ ಭಾರತದ ಬಹುತೇಕ ಕಡೆಗಳಲ್ಲಿ 10 ದಿನಗಳ ಕಾಲ ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಆಗಸ್ಟ್ 27ರಂದು ಮುಂಬೈ, ಪುಣೆ ಸೇರಿ ಹಲವು ಭಾಗಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದ್ದರು. 10ನೇ ದಿನವಾದ ಶನಿವಾರ(ಸೆಪ್ಟೆಂಬರ್ 6) ಗಣೇಶನ ಮೆರವಣಿಗೆ ಹಾಗೂ ವಿಸರ್ಜನೆ ಹಮ್ಮಿಕೊಳ್ಳಲಾಗಿತ್ತು. ಸಾಮೂಹಿಕವಾಗಿ ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಹಾಗಾಗಿ ಸಿನಿಮಾ ನೋಡಲು ಹಿಂದೇಟು ಹಾಕಿದ್ದರು.
ಹಿಂದೆ ಬಿದ್ದ 'ಬಾಘಿ- 4'
ಟೈಗರ್ ಶ್ರಾಫ್ ನಟನೆಯ 'ಬಾಘಿ' ಸರಣಿಯ ಹಿಂದಿನ ಚಿತ್ರಗಳು ಫಸ್ಟ್ ವೀಕೆಂಡ್ ಒಳ್ಳೆ ಕಲೆಕ್ಷನ್ ಮಾಡಿದ್ದವು. 'ಬಾಘಿ'-3 ಮೊದಲ 3 ದಿನಕ್ಕೆ 53 ಕೋಟಿ ರೂ. ಹಾಗೂ 'ಬಾಘಿ- 2' ಸಿನಿಮಾ 54 ಕೋಟಿ ಗಳಿಸಿತ್ತು. ಆ ಎರಡೂ ಸಿನಿಮಾಗಳಿಗೆ ಹೋಲಿಸಿದರೆ ಈ ವಾರ ಬಂದಿರೋ ಸಿನಿಮಾ ಹವಾ ಅಷ್ಟೇನು ಇಲ್ಲ. ಆದರೂ ಚಿತ್ರಕ್ಕೆ ಮಾಸ್ ಪ್ರೇಕ್ಷಕರ ರೆಸ್ಪಾನ್ಸ್ ಚೆನ್ನಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಚೇತರಿಸಿಕೊಳ್ಳುತ್ತಾ ಕಾದು ನೋಡಬೇಕಿದೆ.
ಬಾಲಿವುಡ್‌ನಲ್ಲಿ ಎ. ಹರ್ಷ
ಕನ್ನಡದಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿ ಗುರ್ತಿಸಿಕೊಂಡಿದ್ದ ಎ. ಹರ್ಷ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. 'ಭಜರಂಗಿ', 'ವಜ್ರಕಾಯ', 'ಸೀತಾರಾಮ ಕಲ್ಯಾಣ' ಹಾಗೂ 'ವೇದ' ಚಿತ್ರಗಳ ಬಳಿಕ ತೆಲುಗಿನ 'ಭೀಮ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಅದರಲ್ಲಿ ಅವರ ಕೆಲಸ, ಶ್ರದ್ಧೆ ನೋಡಿ 'ಬಾಘಿ'-4 ಅವಕಾಶ ಕೊಟ್ಟಿದ್ದರು. ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಮತ್ತಷ್ಟು ಹಿಂದಿ ಸಿನಿಮಾ ಅವಕಾಶಗಳು ಸಿಗುತ್ತಾ ಕಾದು ನೋಡಬೇಕಿದೆ.


Click it and Unblock the Notifications











