Avatar: Fire and Ash Box Office Day 1 - ಜೇಮ್ಸ್ ಕ್ಯಾಮರೂನ್‌ಗೆ ಆಘಾತ, ಮಕಾಡೆ ಮಲಗುತ್ತಾ ಅವತಾರ್ 3 ?
ಅಂಗೈನಲ್ಲೇ ಆಕಾಶ ತೋರಿಸೋದ್ರಲ್ಲಿ ''ಹಾಲಿವುಡ್''ನವರು ಸದಾ ಮುಂದು. ಮನುಷ್ಯನ ಊಹೆಗೂ ಮೀರಿದ ಕಥೆಗಳನ್ನು ಬೆಳ್ಳಿತೆರೆಗೆ ತರುವುದರಲ್ಲಿ ಎತ್ತಿದ ಕೈ. ಹೊಸ ಟೆಕ್ನಾಲಜಿ ತ್ರಿಡಿ ಯಾನ ಶುರುವಾದ ಮೇಲಂತೂ ಇವರ ಭಾವನೆ, ಕಲ್ಪನೆಗಳಿಗೆ, ಮತ್ತಷ್ಟು ಮೆರಗು ಬಂದಿದೆ. ಸಿನಿರಸಿಕರ ನಾಡಿ ಮಿಡಿತದ ಜೊತೆ ಇವರ ಕಲ್ಪನೆಗಳು ಬೆರಗಾಗಿಸುತ್ತಿವೆ. ಇಂಥಾ ಹಾಲಿವುಡ್‌ನವರ ಪಾಲಿಗೆ ಮೊದಲಿಂದ ಭಾರತದ ಮಾರುಕಟ್ಟೆ ಚಿನ್ನದ ಗಣಿ ಇದ್ದಂತೆ.
ಇದಕ್ಕೆ ಕೈಗನ್ನಡಿ ಎಂಬಂತೆ ಇಲ್ಲಿಯವರೆಗೆ ಹಲವಾರು ಚಿತ್ರಗಳು ಭಾರತದಲ್ಲಿ ಸದ್ದು ಮಾಡಿವೆ. ಕೋಟ್ಯಂತರ ಹಣವನ್ನು ಕೂಡ ದೋಚಿವೆ. ಹೀಗೆ ಕೊಳ್ಳೆ ಹೊಡೆದ ಚಿತ್ರಗಳಲ್ಲಿ ''ಅವತಾರ್'' ಮತ್ತು ''ಅವತಾರ್ ದಿ ವೇ ಆಫ್ ವಾಟರ್'' ಸಿನಿಮಾಗಳು ಕೂಡ ಇವೆ. ಜೇಮ್ಸ್ ಕ್ಯಾಮರೂನ್ ಸೃಷ್ಟಿಸಿದ ಈ ಎರಡು ಅದ್ಭುತ ಲೋಕವನ್ನು ಭಾರತದ ಪ್ರೇಕ್ಷಕರು ಮುಗಿ ಬಿದ್ದು ನೋಡಿದ್ದರು.

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಕೇವಲ ಭಾರತದಲ್ಲಿಯೇ ''ಅವತಾರ್ ದಿ ವೇ ಆಫ್ ವಾಟರ್'' ₹484.36 ಕೋಟಿಯನ್ನು ಗಳಿಸಿತ್ತು.
ಹೀಗಾಗಿ ''ಅವತಾರ್''ನ ಮೂರನೇ ಸರಣಿ ''ಅವತಾರ್ -ಫೈರ್ ಆಂಡ್ ಆಶ್'' ಬಿಡುಗಡೆಯಾಗುತ್ತಿದೆ ಎಂದಾಗ ಹಲವರಲ್ಲಿ ನಿರೀಕ್ಷೆ ಗರಿಗೇದರಿತ್ತು. ವಿಶ್ವದೆಲ್ಲೆಡೆಯಿಂದ ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಣ ಮಾಡಿರುವ ಜೇಮ್ಸ್ ಕ್ಯಾಮರೂನ್ ಖಜಾನೆ ಕೋಟ್ಯಂತರ ಹಣ ಬಂದು ಸೇರುವ ವಿಶ್ವಾಸ ಇತ್ತು. ''ಅವತಾರ್ - ಫೈರ್ ಆಂಡ್ ಆಶ್'' ನೋಡಲು ಭಾರತದಲ್ಲಿ ಈ ಹಿಂದಿನಂತೆ ನೂಕು ನುಗ್ಗಲಿನ ವಾತಾವರಣ ಕಂಡು ಬರುತ್ತೆ ಎಂದು ಊಹಿಸಲಾಗಿತ್ತು.

ಆದರೆ ಈ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದೆ. ಜೇಮ್ಸ್ ಕ್ಯಾಮರೂನ್ ಮತ್ತು ತಂಡಕ್ಕೆ ಆಘಾತವಾಗಿದೆ. ಭಾರತದಲ್ಲಿ ''ಅವತಾರ್ ಫೈರ್ ಆಂಡ್ ಆಶ್''ಗೆ ಮೊದಲ ದಿನ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ''ಅವತಾರ್ ಫೈರ್ ಆಂಡ್ ಆಶ್'' ಚಿತ್ರದ ಮೊದಲ ದಿನದ ಅಂಕ ಪಟ್ಟಿಯನ್ನು ''ಸ್ಯಾಕ್ನಿಲ್'' ಹಂಚಿಕೊಂಡಿದ್ದು ಭಾರತದಲ್ಲಿ ಈ ಚಿತ್ರ ಕೇವಲ ₹20 ಕೋಟಿಯನ್ನಷ್ಟೇ ಗಳಿಸಿದೆ. ಈ ಮೂಲಕ ''ಅವತಾರ್ ದಿ ವೇ ಆಫ್ ವಾಟರ್'' ಚಿತ್ರದ ಗಳಿಕೆಯನ್ನು ಕೂಡ ಮುರಿಯುವಲ್ಲಿ ಈ ಚಿತ್ರ ವಿಫಲವಾಗಿದೆ. 2022ರಲ್ಲಿ ತೆರಗೆ ಬಂದಿದ್ದ ''ಅವತಾರ್ ದಿ ವೇ ಆಫ್ ವಾಟರ್'' ಮೊದಲ ದಿನ ₹41 ಕೋಟಿಯನ್ನು ದೋಚಿತ್ತು. ಈ ಚಿತ್ರದ ಅರ್ಧದಷ್ಟು ಈಗ ''ಅವತಾರ್ 3'' ಗಳಿಸಿದೆ.
ಇನ್ನೂ ಬೆಂಗಳೂರು.. ಚೆನ್ನೈ.. ಹೊರತು ಪಡಿಸಿದರೆ ''ಅವತಾರ್ -ಫೈರ್ ಆಂಡ್ ಫಿಶ್'' ನೋಡುವ ಆತುರತೆ-ಉತ್ಸುಕತೆ ಬೇರೆ ಎಲ್ಲಿಯೂ ಕೂಡ ಹೆಚ್ಚು ಕಂಡು ಬಂದಿಲ್ಲ. ಬೆಂಗಳೂರಿನಲ್ಲಿ ನಿನ್ನೆ (ಡಿಸೆಂಬರ್ 19) 86.50% ಆಕ್ಯುಪೆನ್ಸಿ ಕಂಡು ಬಂದರೆ ಚೆನ್ನೈನಲ್ಲಿ 96.75% ಆಕ್ಯುಪೆನ್ಸಿ ಕಂಡು ಬಂದಿದೆ. ಮುಂಬೈನಲ್ಲಿ 56.25% ದೆಹಲಿಯಲ್ಲಿ 58.00% ಮತ್ತು ಪುಣೆಯಲ್ಲಿ 65.33% ಜನ ಮಾತ್ರ ಚಿತ್ರ ನೋಡಿದ್ದಾರೆ.
ಸದ್ಯ ಭಾರತದಲ್ಲಿ ''ಧುರಂಧರ್'' ಅಲೆ ಇದೆ. ''ಅವತಾರ್ 3'' ಚಿತ್ರ ಮೊದಲ ದಿನ ನೆಲಕಚ್ಚಲು ಇದು ಕೂಡ ಕಾರಣ ಎಂದು ಹೇಳಲಾಗುತ್ತಿದೆ. ಇನ್ನು ಪ್ರೇಕ್ಷಕರು ಮತ್ತು ವಿಮರ್ಷಕರು ಚಿತ್ರವನ್ನು ನೋಡಿ ಚಿತ್ರ ಅಷ್ಟಕಷ್ಟೇ ಎಂದು ವಿಮರ್ಶೆ ಮಾಡಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ಚಿತ್ರ ಮಕಾಡೆ ಮಲಗುತ್ತಾ..? ಅಥವಾ ಪುಟಿದೇಳುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











