Ek Din Box Office ; ಆಮಿರ್ ಖಾನ್ ಮಗನಿಗೆ ಕ್ಯಾರೇ ಎನ್ನದ ಪ್ರೇಕ್ಷಕರು - ಆರು ದಿನವಾದರೂ ಚಿತ್ರ ಗಳಿಸಿದ್ದು ಇಷ್ಟೇ
ಹೊಸ ಹೊಸ ಕನಸನ್ನೊತ್ತು ಚಿತ್ರವನ್ನು ರೂಪಿಸುವುದು ಎಷ್ಟು ಕಷ್ಟವೋ, ಅಷ್ಟೇ ಆ ಚಿತ್ರವನ್ನು ಪ್ರೇಕ್ಷಕರಿಗೆ ಸಮರ್ಥವಾಗಿ ತಲುಪಿಸುವುದು ಕೂಡ ಕಷ್ಟ. ಅದರಲ್ಲಿಯೂ ನಾಯಕ-ನಾಯಕಿಯರ ಮುಖ ಹೊಸದಾಗಿದ್ದರೆ ಮುಗಿದೇ ಹೋಯ್ತು. ಕಣ್ಮುಂದೆ ಹಲವಾರು ಸವಾಲುಗಳು ಕಾಣುತ್ತಾವೆ. ಬಿಡುಗಡೆಗೆ ಮುನ್ನ ಮತ್ತು ಬಿಡುಗಡೆಯ ನಂತರ ಹಲವು ಎಡರುತೊಡರುಗಳು ಎದುರಾಗುತ್ತಾವೆ.
ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ ಬೇರೆ ಭಾಷೆಯಲ್ಲಿ ಕೂಡ ಈ ಸವಾಲು ಇದ್ದೇ ಇರುತ್ತಾವೆ. ಈ ಸವಾಲುಗಳಿಗೆ ಸೆಡ್ಡು ಹೊಡೆದು ನಿಂತರೆ.. ಚಿತ್ರದ ಕಥೆಯಲ್ಲಿ ಧಮ್ ಇದ್ದರೆ .. ಹಿಡಿದು ಕಟ್ಟಿ ಹಾಕಲು ಯಾರಿಂದಲೂ ಸಾಧ್ಯವೇ ಇಲ್ಲ. ಪ್ರೇಕ್ಷಕರ ಅಲೆ ತಂತಾನೇ ಎದ್ದೇಳುತ್ತೆ. ಹೊಸ ಇತಿಹಾಸ ಕೂಡ ಸೃಷ್ಟಿಯಾಗುತ್ತೆ. ಆದರೆ ಅದೇ ಚಿತ್ರ ಚೆನ್ನಾಗಿಲ್ಲದಿದ್ದರೆ, ಕಥೆ ಹಳಿ ತಪ್ಪಿದ್ದರೆ, ಆ ಚಿತ್ರವನ್ನು ಯಾರಿಂದಲೂ ಕಾಪಾಡಲು ಸಾಧ್ಯ ಇಲ್ಲ. ಉದಾಹರಣೆಗೆ ''ಏಕ್ ದಿನ್'' ಚಿತ್ರವನ್ನೇ ತೆಗೆದುಕೊಳ್ಳಿ.

ಹೌದು. ''ಏಕ್ ದಿನ್''.. ಆಮಿರ್ ಖಾನ್ ಮುದ್ದಿನ ಮಗ ಜುನೈದ್ ಖಾನ್ ಅಭಿನಯದ 3ನೇ ಸಿನಿಮಾ. ಚಿತ್ರಮಂದಿರದಲ್ಲಿ ಬಿಡುಗಡೆಯಾದ ಇವರ ಎರಡನೇ ಸಿನಿಮಾ. ಸಾಯಿ ಪಲ್ಲವಿ ಈ ಚಿತ್ರದ ನಾಯಕಿ. ಈ ಕಾರಣಕ್ಕೆ ಕುತೂಹಲ ಕೆರಳಿಸಿದ್ದ ಸಿನಿಮಾ ಇದು.
ಯಾಕೆಂದರೆ ದಕ್ಷಿಣದ ಸರಳ ಸುಂದರಿ ಮೊದಲಿಂದ ಕಥೆಗೆ ಪ್ರಾಮುಖ್ಯತೆ ನೀಡಿದವರು. ಅಭಿನಯಕ್ಕೆ ಒತ್ತು ಇರುವ ಪಾತ್ರವನ್ನೇ ಆಯ್ಕೆ ಮಾಡಿಕೊಂಡು ಬಂದವರು. ಈ ಕಾರಣಕ್ಕೆ ತಮ್ಮ ಮೊದಲ ಹಿಂದಿ ಚಿತ್ರವನ್ನು ಅಳೆದು ತೂಗಿ ಸಾಯಿ ಪಲ್ಲವಿ ಆಯ್ಕೆ ಮಾಡಿರುತ್ತಾರೆ ಎನ್ನುವ ಭರವಸೆ ಇತ್ತು.
ಇನ್ನು ಆಮಿರ್ ಖಾನ್ ಈ ಚಿತ್ರದ ಪ್ರಚಾರದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಿದ್ದರು. ಹೆಚ್ಚು ಕಡಿಮೆ ಕಳೆದ ಒಂದು ಒಂದೂವರೆ ತಿಂಗಳಿಂದ ಚಿತ್ರದ ಪ್ರಚಾರವನ್ನು ಕೂಡ ಮಾಡಿದರು. ಸಂಗೀತ ಕಾರ್ಯಕ್ರಮ ಹಮ್ಮಿಕೊಂಡರು.
ಆದರೆ ಹೀಗೆ ಮಾಡಿದ ಪ್ರಯತ್ನಗಳೆಲ್ಲವೂ ಸದ್ಯ ವ್ಯರ್ಥವಾಗಿವೆ. ಯಾಕೆಂದರೆ ಬಿಡುಗಡೆಗೊಂಡು ಆರು ದಿನವಾದರೂ ಈ ಚಿತ್ರದ ಗಳಿಕೆಯಲ್ಲಿ ಚೇತರಿಕೆ ಕಂಡು ಬಂದಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದೆ. ಬಾಕ್ಸಾಫೀಸ್‌ನ ಅಂಕಿ ಅಂಶ ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಆರು ದಿನದಲ್ಲಿ ಈ ಚಿತ್ರ ಕೇವಲ ₹3.81 (Net) ಕೋಟಿಯನ್ನು ಮಾತ್ರ ಗಳಿಸಿದೆ.

ಸ್ಯಾಕ್ನಿಲ್ ಪ್ರಕಾರ ಏಕ್ ದಿನ್ ಚಿತ್ರದ ಆರು ದಿನದ ಗಳಿಕೆ ಈ ಕೆಳಗಿನಂತೆ ಇದೆ
| ದಿನ | ಒಟ್ಟು ಗಳಿಕೆ (Gross) | ನಿವ್ವಳ ಗಳಿಕೆ (Net) |
|---|---|---|
| ಮೊದಲನೇ ದಿನ (ಶುಕ್ರವಾರ) | ₹1.37 Cr | ₹1.15 Cr |
| ಎರಡನೇ ದಿನ (ಶನಿವಾರ) | ₹1.20 Cr | ₹1.00 Cr |
| ಮೂರನೇ ದಿನ (ಭಾನುವಾರ) | ₹1.07 Cr | ₹0.90 Cr |
| ನಾಲ್ಕನೇ ದಿನ (ಸೋಮವಾರ) | ₹0.29 Cr | ₹0.25 Cr |
| ಐದನೇ ದಿನ (ಮಂಗಳವಾರ) | ₹0.32 Cr | ₹0.28 Cr |
| ಆರನೇ ದಿನ (ಬುಧವಾರ) | ₹0.25 Cr | ₹0.23 Cr |
| ಒಟ್ಟು ಗಳಿಕೆ | ₹4.50 Cr | ₹3.81 Cr |
ಅಂದ್ಹಾಗೇ ಜುನೈದ್ ಖಾನ್ ಅಭಿನಯದ ಹಿಂದಿನ ಚಿತ್ರ ''ಲವ್‌ಯಪಾ'' ಆರು ದಿನದಲ್ಲಿ₹6.15 ಕೋಟಿಯನ್ನು (Net) ಗಳಿಸಿತ್ತು. ಈ ಚಿತ್ರಕ್ಕೆ ಹೋಲಿಸಿಕೊಂಡರೆ ''ಏಕ್ ದಿನ್'' ಇನ್ನೂ 5 ಕೋಟಿಯ ಗಡಿಯನ್ನು ಕೂಡ ತಲುಪಿಲ್ಲ. ಇನ್ನು ಮುಂಬರುವ ದಿನಗಳಲ್ಲಿ ಬೇರೆ ಬೇರೆ ಭಾಷೆಯಲ್ಲಿ ಚಿತ್ರಗಳು ಒಂದಾದ ಮೇಲೊಂದರಂತೆ ಬಿಡುಗಡೆಯಾಗಲಿವೆ. ಈ ಹಿನ್ನೆಲೆ ಈ ವಾರಾಂತ್ಯಕ್ಕೆ ''ಏಕ್ ದಿನ್'' ಚಿತ್ರಮಂದಿರದಲ್ಲಿ ಉಳಿಯುತ್ತಾ ಎನ್ನುವ ಅನುಮಾನ ಕೂಡ ಸದ್ಯ ಬಾಲಿವುಡ್ ಪಂಡಿತರನ್ನು ಕಾಡುತ್ತಿದೆ.
ಅಂದ್ಹಾಗೇ ''ಏಕ್ ದಿನ್'' ಚಿತ್ರಕ್ಕೆ ಆಮಿರ್ ಖಾನ್ 15-16 ಕೋಟಿ ಹಣ ಹೂಡಿದ್ದಾರೆ ಎನ್ನುವ ಸುದ್ದಿ ಮುಂಬೈನಲ್ಲಿ ಕೇಳಿ ಬರುತ್ತಿದೆ. ಹೇಗೆ ಕೂಡಿ ಕಳೆದರು ಕೂಡ ಚಿತ್ರಮಂದಿರದ ಮೂಲಕ ಆಮಿರ್ ಖಾನ್‌ಗೆ ಹಾಕಿದ ಬಂಡವಾಳ ಮರಳಿ ಬರುವುದು ಅನುಮಾನ. ಓಟಿಟಿಯಲ್ಲಿ ಈ ಚಿತ್ರ ಎಷ್ಟು ಮೊತ್ತಕ್ಕೆ ಮಾರಾಟವಾಗಿದೆ ಎನ್ನುವುದರ ಮೇಲೆ ಲಾಭ-ನಷ್ಟದ ಲೆಕ್ಕಾಚಾರ ನಿಂತಿದೆ. ಆಮಿರ್ ಖಾನ್ ಮಗನಿಗೆ ಮೂರನೇ ಬಾರಿ ಈ ಮೂಲಕ ಸೋಲಿನ ದರ್ಶನವಾದಂತೆ ಆಗಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications