Dhamaal 4 Box Office Day 4 ; ನಾಲ್ಕನೇ ದಿನ ಡಲ್ ಆದ ಧಮಾಲ್, ಗೆಲುವಿನ ದಡ ತಲುಪುತ್ತಾ ಅಜಯ್ ದೇವಗನ್ ಅಂಡ್ ಗ್ಯಾಂಗ್?
ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ ಸಿನಿಮಾಗಳನ್ನು ನೋಡಲು ಗ್ರಾಮೀಣ ಪ್ರದೇಶದವರು ಬಂಡಿ ಹಾಗೂ ಟ್ರ್ಯಾಕ್ಟರ್‌ನಲ್ಲಿ ಚಿತ್ರಮಂದಿರಕ್ಕೆ ಬರುತ್ತಿದ್ದರು. ಆದರೆ ಈಗ ದೂರ ದೂರಕ್ಕೆ ನೋಡಿದರೂ ಪ್ರೇಕ್ಷಕರು ಕಾಣುತ್ತಿಲ್ಲ. ಎಲ್ಲೋ ಅಲ್ಲೊಂದು .. ಇಲ್ಲೊಂದು .. ಸಿನಿಮಾ ಮಾತ್ರ ಪ್ರೇಕ್ಷಕರನ್ನು ಸೆಳೆಯುತ್ತೆ. ಚಿತ್ರಮಂದಿರ ಅಪರೂಪಕ್ಕೆ ಭರ್ತಿಯಾಗುತ್ತೆ.
ಆದರೆ, ಬದಲಾದ ಈ ಕಾಲದಲ್ಲಿ ಈ ಸಂಭ್ರಮ ಕೂಡ ಕೇವಲ ಮೂರು ದಿನಕ್ಕೆ ಮಾತ್ರ ಸೀಮಿತ ಎನ್ನುವಂತಾಗಿದೆ. ಮೊದಲ ವೀಕೆಂಡ್ ನಂತರ ಪ್ರೇಕ್ಷಕರ ಬರ ಕಂಡು ಬರುತ್ತಿದೆ. ಎಷ್ಟೇ ದೊಡ್ಡ ಸ್ಟಾರ್ ಚಿತ್ರದಲ್ಲಿದ್ದರೂ ಕೂಡ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬರುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆಯೇ ''ಧಮಾಲ್ 4''.

ಹೌದು, ''ಧಮಾಲ್ 4''.. ಕಳೆದ ವಾರ (ಜುಲೈ 10) ತೆರೆಗೆ ಬಂದಿದ್ದ ಮಲ್ಟಿ ಸ್ಟಾರರ್ ಸಿನಿಮಾ. ಅಜಯ್ ದೇವಗನ್ ಅಂತಹ ಸ್ಟಾರ್ ಇದ್ದರೂ ಮೊದಲ ದಿನ ಕೇವಲ 14 ಕೋಟಿಯನ್ನು ಗಳಿಸಿದ್ದ ಈ ಚಿತ್ರ ಶನಿವಾರ ಮತ್ತು ಭಾನುವಾರ ಮಾತ್ರ ಬಾಕ್ಸಾಫೀಸ್‌ನಲ್ಲಿ ಮ್ಯಾಜಿಕ್ ಮಾಡಿತ್ತು. ಕೇವಲ ಮೂರೇ ದಿನದಲ್ಲಿ ₹65 ಕೋಟಿಯನ್ನು ದೋಚಿತ್ತು. ಈ ಮೂಲಕ ಹೊಸದೊಂದು ಭರವಸೆ ಮೂಡಿಸಿತ್ತು. ಆದರೆ ಈಗ ಭರವಸೆ ಕ್ಷೀಣಿಸುತ್ತಿದೆ. ಆತಂಕದ ವಾತಾವರಣ ನಿಧಾನಕ್ಕೆ ನಿರ್ಮಾಣವಾಗುತ್ತಿದೆ.
ಸೋಮವಾರದ ಪರೀಕ್ಷೆಯಲ್ಲಿ ಜಸ್ಟ್ ಪಾಸ್
ಸಾಮಾನ್ಯವಾಗಿ ಸೋಮವಾರ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬರುತ್ತೆ. ಆದರೆ..''ಧಮಾಲ್'' ಫ್ರಾಂಚೈಸಿಗೆ ಅದರದ್ದೇ ಆದ ವರ್ಗ ಇದೆ. ಇನ್ನು ಈ ಚಿತ್ರದ ಸ್ಟಾರ್ ಪವರ್ ಕೂಡ ಕಡಿಮೆ ಇಲ್ಲ. ಈ ಹಿನ್ನೆಲೆ ಮೊದಲ ಮೂರು ದಿನ ಎರಡಂಕಿ ಪಾರು ಮಾಡಿದ್ದ ''ಧಮಾಲ್-4'' ನಾಲ್ಕನೇ ದಿನ ಅಂದರೆ ಸೋಮವಾರ (ಜುಲೈ 13) ಕೂಡ ಡಬಲ್ ಡಿಜಿಟ್ ಕಲೆಕ್ಷನ್ ಮಾಡುತ್ತೆ ಎಂದು ಹಲವರು ಅಂದುಕೊಂಡಿದ್ದರು.
ಆದರೆ, ಈ ಲೆಕ್ಕಾಚಾರ ತಲೆಕೆಳಗಾಗಿದೆ. ಸೋಮವಾರದ ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಆಗಿರುವ ''ಧಮಾಲ್ 4'' ಕೇವಲ ₹8.75 ಕೋಟಿಯನ್ನು ಮಾತ್ರ ಗಳಿಸಿದೆ. ಭಾನುವಾರದ ಗಳಿಕೆಗೆ ಹೋಲಿಸಿದರೆ ಶೇಕಡಾ 69.3% ಕುಸಿತ ಕಂಡು ಬಂದಿದೆ.
ಸ್ಯಾಕ್ನಿಲ್ ಪ್ರಕಾರ ಧಮಾಲ್ 4 ಚಿತ್ರದ 4ದಿನದ ಗಳಿಕೆ ಈ ಕೆಳಗಿನಂತಿದೆ.
ಮೊದಲ ದಿನ (ಶುಕ್ರವಾರ) ₹14.00 ಕೋಟಿ
ಎರಡನೇ ದಿನ (ಶನಿವಾರ) ₹22.50 ಕೋಟಿ
ಮೂರನೇ ದಿನ (ಭಾನುವಾರ) ₹28.50 ಕೋಟಿ
ನಾಲ್ಕನೇ ದಿನ ( ಸೋಮವಾರ)₹8.75 ಕೋಟಿ
ಒಟ್ಟು ಭಾರತದ ನೆಟ್ ಕಲೆಕ್ಷನ್ ₹73.75 ಕೋಟಿ

ಕೈ ಹಿಡಿದ ಬಿ ಮತ್ತು ಸಿ ಸೆಂಟರ್‌ಗಳು
ಬಾಕ್ಸ್ ಆಫೀಸ್ ವರದಿಗಳ ಪ್ರಕಾರ, ಉತ್ತರ ಪ್ರದೇಶ, ಬಿಹಾರ, ಗುಜರಾತ್, ಜೈಪುರ್, ಲಕ್ನೋನ ಜನ ''ಧಮಾಲ್ 4'' ಚಿತ್ರತಂಡದ ಕೈಯನ್ನು ಸೋಮವಾರ ಹಿಡಿದಿದ್ದಾರೆ. ಬೆಂಗಳೂರು, ಮುಂಬೈ, ದೆಹಲಿ ಅಂತಹ ಮಹಾನಗರಗಳಲ್ಲಿ ಸೋಮವಾರ ಜನ ಸಂದಣಿ ಕಡಿಮೆ ಕಂಡು ಬಂದಿದೆ. ಆದರೆ ಅದೇ ಮತ್ತೊಂದು ಕಡೆ ಮಲ್ಟಿಪ್ಲೆಕ್ಸ್‌ಗಳಿಗಿಂತ ಸಿಂಗಲ್ ಸ್ಕ್ರೀನ್‌ಗಳಲ್ಲಿ ''ಧಮಾಲ್'' ನೋಡಿ ಕೇಕೆ ಹಾಕಿದವರ ಸಂಖ್ಯೆ ಹೆಚ್ಚಿದೆ.
ಈ ವಾರ ಮುಖ್ಯ, ಧಮಾಕ ಮಾಡುತ್ತಾ ''ಧಮಾಲ್ 4'' ?
''ಧಮಾಲ್ 4'' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ತರಣ್ ಆದರ್ಶ್ ಹೊರತು ಪಡಿಸಿದರೆ ಬಾಲಿವುಡ್‌ನ ಹಲವು ಖ್ಯಾತ ವಿಮರ್ಶಕರು ಈ ಚಿತ್ರವನ್ನು ತೆಗಳಿದ್ದಾರೆ. ಇನ್ನು ಪ್ರೇಕ್ಷಕರ ವರ್ಗದಲ್ಲಿಯೂ ಕೂಡ ಈ ಚಿತ್ರದ ವಿಚಾರದಲ್ಲಿ ಎರಡು ಗುಂಪುಗಳಿವೆ. ಪ್ರೇಕ್ಷಕರ ಅಭಿಪ್ರಾಯ ಮುಂಬರುವ ದಿನಗಳಲ್ಲಿ ಈ ಚಿತ್ರದ ಗಳಿಕೆಯ ಮೇಲೆ ಪರಿಣಾಮ ಬೀರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಇನ್ನು ಮೊದಲ ಸೋಮವಾರದ ಗಳಿಕೆಯಲ್ಲಿ ಆಗಲೇ ಹೇಳಿದಂತೆ 69.3% ಕುಸಿತ ಕಂಡು ಬಂದಿದೆ. ಈ ಕುಸಿತ ದಿನದಿಂದ ದಿನಕ್ಕೆ ಇನ್ನೂ ಹೆಚ್ಚಾದರೆ ''ಧಮಾಲ್'' ಢಮಾರ್ ಆಗುವುದು ಖಚಿತ. ಈ ಹಿನ್ನೆಲೆ ವಾರಾಂತ್ಯದಲ್ಲಿ ಮತ್ತೆ ಪುಟಿದೇಳುತ್ತಾ..? ಎನ್ನುವುದನ್ನು ಕೂಡ ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications