Alpha Box Office Day 4 ; ಆಲ್ಫಾ ಖೇಲ್ ಖತಂ, 4ನೇ ದಿನ ಬೋರಲು ಬಿದ್ದ ಆಲಿಯಾ ಭಟ್ ಸಿನಿಮಾ- ಪ್ರೇಕ್ಷಕರ ಬರ
ಸಾಮಾನ್ಯವಾಗಿ ಚಿತ್ರವೊಂದರ ಹಣೆಬರಹ ಮೊದಲ ದಿನದ ಮೊದಲ ಪ್ರದರ್ಶನದ ನಂತರವೇ ಗೊತ್ತಾಗುತ್ತೆ. ಪ್ರೇಕ್ಷಕರು ಮತ್ತು ವಿಮರ್ಶಕರು ಕೇವಲ ಮೂರು ಗಂಟೆಯಲ್ಲಿ ಚಿತ್ರದ ಭವಿಷ್ಯವನ್ನು ನಿರ್ಧಾರ ಮಾಡುತ್ತಾರೆ. ಆದರೆ.. ಚಿತ್ರದಲ್ಲಿ ಸೂಪರ್ ಸ್ಟಾರ್‌ಗಳಿದ್ದರೆ ಆ ಚಿತ್ರ ಎಷ್ಟೇ ಕಳಪೆ ಇದ್ದರೂ ಕೂಡ ಮೊದಲ ಮೂರು ದಿನ ಆ ಸ್ಟಾರ್‌ನ ಅಭಿಮಾನಿಗಳು ಚಿತ್ರಮಂದಿರಕ್ಕೆ ದಾಂಗುಡಿ ಇಡುತ್ತಾರೆ.
ಚಿತ್ರದಿಂದ ತಮ್ಮ ಅಭಿಮಾನಕ್ಕೆ ಧಕ್ಕೆಯಾದರೂ ಕೂಡ ಕ್ಯಾಮರಾ ಮತ್ತು ಎಲ್ಲರೆದುರು ಚಿತ್ರವನ್ನು ಬಾಯ್ತುಂಬ ಹೊಗಳುತ್ತಾರೆ. ಇವರ ಮಾತು ನಂಬಿಕೊಂಡು ಇನ್ನೊಂದಿಷ್ಟು ಜನ ಹೋಗುತ್ತಾರೆ. ಹೀಗಾಗಿಯೇ ಚಿತ್ರದ ನಿಜವಾದ ಗೆಲುವು ಅಥವಾ ಸೋಲು ನಿರ್ಧಾರ ಆಗುವುದು ಮೊದಲ ಮೂರು ದಿನಗಳ ನಂತರವಷ್ಟೇ ಎಂದು ಬಾಕ್ಸಾಫೀಸ್‌ನ ಲೆಕ್ಕಾಚಾರವನ್ನು ಹಾಕುವ ಪಂಡಿತರು ಹೇಳುತ್ತಲೇ ಇರುತ್ತಾರೆ. ಸೋಮವಾರದ ಅಗ್ನಿ ಪರೀಕ್ಷೆಯಲ್ಲಿ ಚಿತ್ರ ತೇರ್ಗಡೆಯಾದರೆ ಆ ಚಿತ್ರ ಆ ನಂತರ ಗೆದ್ದಂತೆಯೇ, ಇಲ್ಲವಾದಲ್ಲಿ ಸೋಲಿನತ್ತ ಚಿತ್ರ ಮುಖ ಮಾಡಿದೆ ಎಂದರ್ಥ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ''ಆಲ್ಫಾ'' ಚಿತ್ರದ ಗಳಿಕೆ ನೋಡುತ್ತಿದ್ದರೆ ಈ ಮಾತು ನಿಜಾ ಎಂದು ಅನಿಸದಿರದು.

ಹೌದು, ''ಆಲ್ಫಾ''.. ಪುರುಷ ಪ್ರಧಾನ ಚಿತ್ರರಂಗದಲ್ಲಿ, ಬಾಲಿವುಡ್‌ನ ಮಿನಿಮಮ್ ಗ್ಯಾರಂಟಿ ಚೆಲುವೆ ಆಲಿಯಾ ಭಟ್ ಮಾಡಿರುವ ಪ್ರಯತ್ನ. ಆದಿತ್ಯ ಚೋಪ್ರಾ ನಿರ್ಮಾಣದ ಈ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಅವರಂತಹ ದಿಗ್ಗಜರಿದ್ದಾರೆ. ಶರ್ವರಿ ಎಂಬ ಅತ್ಯುತ್ಸಾಹದ ಚೆಲುವೆ ಇದ್ದಾರೆ. ಒಂದರ್ಥದಲ್ಲಿ ಪ್ರತಿಭಾವಂತರ ಸಂಗಮಕ್ಕೆ ಸಾಕ್ಷಿಯಾದ ಚಿತ್ರ ಈ ''ಆಲ್ಫಾ''.
ಆದರೆ, ಬಾಕ್ಸಾಫೀಸ್‌ನಲ್ಲಿ ಚಿನ್ನದ ಬೆಳೆ ಬೆಳೆಯಬೇಕಿದ್ದ ಈ ಚಿತ್ರ ಮೂಡಿಸಿದ್ದು ಮಾತ್ರ ನಿರಾಸೆ. ಬಿಡುಗಡೆಯಾದ ಮೂರು ದಿನದಲ್ಲಿ ಭಾರತದಲ್ಲಿ ಕೇವಲ ₹34 ಕೋಟಿಯನ್ನು ಮಾತ್ರ ದೋಚಿದ್ದ ಈ ಚಿತ್ರ ನಿನ್ನೆ ಅಂದರೆ ನಾಲ್ಕನೇ ದಿನ (ಜುಲೈ 6) ನಿರಾಸೆ ಮಾಡಿದೆ. ಚಿತ್ರದ ಗಳಿಕೆ ಪಾತಾಳಕ್ಕೆ ಕುಸಿದಿದೆ. ಇದಕ್ಕೆ ಕೈಗನ್ನಡಿಯೇ ಸ್ಯಾಕ್ನಿಲ್ ಹಂಚಿಕೊಂಡಿರುವ ಚಿತ್ರದ ಗಳಿಕೆಯ ವಿವರ
''ಸ್ಯಾಕ್ನಿಲ್'' ಪ್ರಕಾರ ''ಆಲ್ಫಾ'' ಚಿತ್ರದ ಮೊದಲ ಮೂರು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ದಿನ ಭಾರತದ ನೆಟ್ ಗಳಿಕೆ
ಮೊದಲ ದಿನ - (ಶುಕ್ರವಾರ) ₹9.25 ಕೋಟಿ
ಎರಡನೇ ದಿನ - (ಶನಿವಾರ) ₹11.50 ಕೋಟಿ
ಮೂರನೇ ದಿನ -(ಭಾನುವಾರ) ₹13.25 ಕೋಟಿ
ನಾಲ್ಕನೇ ದಿನ -(ಸೋಮವಾರ) ₹3.85 ಕೋಟಿ
ಒಟ್ಟು ಭಾರತದ ಗಳಿಕೆ ₹37.85 ಕೋಟಿ (ನೆಟ್)
ಸೋಮವಾರದ ಮಹಾಪತನ
ನಿಜ. ಸ್ಟಾರ್ ಯಾರೇ ಇರಲಿ, ಆ ಚಿತ್ರ ಎಂತಹದ್ದೇ ಇರಲಿ, ಮೊದಲ ಮೂರು ದಿನದ ನಂತರ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬರುತ್ತೆ. ಆದರೆ. ''ಆಲ್ಫಾ'' ಇಷ್ಟೊಂದು ಕುಸಿಯುತ್ತೆ ಎಂದು ಯಾರು ಅಂದುಕೊಂಡಿರಲಿಲ್ಲ. ಸ್ಯಾಕ್ನಿಲ್ ಹಂಚಿಕೊಂಡ ಅಂಕಿ ಅಂಶದ ಪ್ರಕಾರ ಶೇಕಡಾ 70% ಕುಸಿತ ಕೇವಲ ನಿನ್ನೆ ಒಂದೇ ದಿನ ಕಂಡು ಬಂದಿದೆ. ಚಿತ್ರತಂಡ ಒಪ್ಪಲಿ, ಬಿಡಲಿ ಆದರೆ ಚಿತ್ರಪಂಡಿತರ ಪ್ರಕಾರ ಇದು ಚಿಂತಾಜನಕ ವಿಷಯ.

''ಜಿಗ್ರಾ'' ಹಿಂದಿಕ್ಕಿದ ''ಆಲ್ಫಾ''
ಸದ್ಯ ತೆವಳುತ್ತಾ ''ಆಲ್ಫಾ'' ಬಾಕ್ಸಾಫೀಸ್‌ನಲ್ಲಿ ಸಾಗುತ್ತಿದೆ. ಆಲಿಯಾ ಭಟ್ ಪಾಲಿಗೆ ಸಮಾಧಾನದ ವಿಷಯ ಅಂದರೆ, ''ಆಲ್ಫಾ'' ಇವರ ಹಿಂದಿನ ಚಿತ್ರ ''ಜಿಗ್ರಾ'' ಬಾಕ್ಸಾಫೀಸ್ ಗಳಿಕೆಯನ್ನು ಹಿಂದಿಕ್ಕಿದೆ. 2024ರಲ್ಲಿ ಬಂದಿದ್ದ ಆಲಿಯಾ ಭಟ್ ಅಭಿನಯದ ''ಜಿಗ್ರಾ'' ಬಾಕ್ಸಾಫೀಸ್‌ನಲ್ಲಿ ಕೇವಲ ₹32.53 ಕೋಟಿಗೆ ಸುಸ್ತು ಹೊಡೆದಿತ್ತು. ''ಆಲ್ಫಾ'' ಈ ಗಳಿಕೆಯನ್ನು ಹಿಂದಿಕ್ಕಿ ಕೊರೊನಾ ನಂತರ ಆಲಿಯಾ ಭಟ್ ವೃತ್ತಿ ಬದುಕಿನಲ್ಲಿ ಅತಿ ಹೆಚ್ಚು ಹಣ ಗಳಿಸಿದ ನಾಲ್ಕನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೊರೊನಾ ನಂತರ ಬಾಕ್ಸಾಫೀಸ್‌ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಆಲಿಯಾ ಭಟ್ ಸಿನಿಮಾಗಳು
*ಬ್ರಹ್ಮಾಸ್ತ್ರ - ₹268 ಕೋಟಿ
*ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ - ₹153.3 ಕೋಟಿ
*ಗಂಗೂಬಾಯಿ ಕಾಠಿಯಾವಾಡಿ - ₹128.89 ಕೋಟಿ
*ಆಲ್ಫಾ * - ₹37.85 ಕೋಟಿ (ಮೊದಲ 4 ದಿನಗಳ ಗಳಿಕೆ)
*ಜಿಗ್ರಾ - ₹32.53 ಕೋಟಿ
''ಧಮಾಲ್ 4'' ಆತಂಕ
ಸದ್ಯ ಈ ವಾರ ಅಂದರೆ ಜುಲೈ 9ರಂದು ಹಿಂದಿಯಲ್ಲಿ ಅಜಯ್ ದೇವಗನ್ ಸಾರಥ್ಯದ ಮಲ್ಟಿಸ್ಟಾರರ್ ಚಿತ್ರ ''ಧಮಾಲ್ 4'' ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ''ಆಲ್ಫಾ'' ಹಲವು ಕಡೆ ಎತ್ತಂಗಡಿಯಾಗುವುದು ಖಚಿತ. ಮಾಧ್ಯಮಗಳಲ್ಲಿ ವರದಿಯಾದಂತೆ ''ಆಲ್ಫಾ'' ಚಿತ್ರಕ್ಕೆ 130 ಕೋಟಿ + ಹಣ ಸುರಿಯಲಾಗಿದೆ. ಆದರೆ, ಗಳಿಕೆ ಸಾಧಾರಣವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರಕ್ಕೆ ಪ್ರೇಕ್ಷಕರ ಪ್ರೀತಿಯೂ ಸಿಕ್ಕಿಲ್ಲ. ವಿಮರ್ಶಕರು ಕೂಡ ಜೈ ಎಂದಿಲ್ಲ. ಈ ಹಿನ್ನೆಲೆ ಭಾರತದಲ್ಲಿ ಕೊನೆ ಪಕ್ಷ 50 ಕೋಟಿಯ ಗಡಿಯನ್ನು ''ಆಲ್ಫಾ'' ಪಾರು ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications