Avatar: Fire and Ash Box Office Day 2 ; ಬಾಕ್ಸಾಫೀಸ್‌ನಲ್ಲಿ ಅವತಾರ್ 3 ಹೆಣಗಾಟ - 2ನೇ ದಿನ ಗಳಿಸಿದ್ದೆಷ್ಟು ?
ಹಾಲಿವುಡ್ ನವರ ಹಾವಳಿನೇ ಹಾಗೇ. ತಮ್ಮ ಕಲ್ಪನೆ ಮತ್ತು ಕೈಚಳಕದಿಂದ ಮೊದಲಿಂದಲೂ ನಿಬ್ಬೇರಗಾಗಿಸುವ ಗುಣ ಇವರದ್ದು. ವರ್ಷಕ್ಕೂ ಮುಂಚೆಯೇ ತಮ್ಮ ಚಿತ್ರಕ್ಕೆ ಎಲ್ಲರನ್ನೂ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುವ ಇವರಿಗೆ ಭಾರತ ಮೊದಲಿಂದಲೂ ಕೋಟಿ ಕೋಟಿ ಹಣವನ್ನು ನೀಡುತ್ತಲೇ ಬಂದಿದೆ. ನಿರ್ಮಾಪಕರ ಖಜಾನೆಯನ್ನು ತುಂಬಿಸುತ್ತಲೇ ಇದೆ. ಇದಕ್ಕೆ ಭಾರತದಲ್ಲಿ ಬ್ಲಾಕ್ ಬಸ್ಟರ್ ಆದ ಹಲವು ಚಿತ್ರಗಳು ಉದಾಹರಣೆಗಳಾಗಿ ಇವೆ.
ಈ ಸಾಲಿಗೆ ''ಅವತಾರ್ :ಫೈರ್ ಆಂಡ್ ಆಶ್'' ಚಿತ್ರ ಕೂಡ ಸೇರಿಕೊಳ್ಳುತ್ತೆ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ .. ಅಂದುಕೊಂಡಿದ್ದು ಒಂದು. ಆಗಿದ್ದು ಇನ್ನೊಂದು. ತಮ್ಮ ಹಿಂದಿನ ಚಿತ್ರಗಳ ಮೂಲಕ ಭಾರತದಲ್ಲಿ ಕೋಟ್ಯಂತರ ಹಣ ದೋಚಿದ್ದ ಜೇಮ್ಸ್ ಕ್ಯಾಮರೂನ್ ಅವರಿಗೆ ಈ ಬಾರಿ ಅದೃಷ್ಟ ಕೈ ಕೊಟ್ಟಿದೆ. ಭಾರತದ ಬಾಕ್ಸಾಫೀಸ್‌ನಲ್ಲಿ ಹಣ ಗಳಿಸಲು ''ಅವತಾರ್ 3'' ಅಕ್ಷರಶಃ ಹೆಣಗಾಡುತ್ತಿದೆ.

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಮೊದಲ ದಿನ ಭಾರತದಲ್ಲಿ ಕೇವಲ ₹19 ಕೋಟಿಯನ್ನು ಗಳಿಸಿದ್ದ ಈ ಚಿತ್ರ ನಿನ್ನೆ ( ಡಿಸೆಂಬರ್ 20 ) ₹ 22.25 ಕೋಟಿ ಗಳಿಸಿದೆ. ಈ ಮೂಲಕ ಚೇತರಿಕೆಯನ್ನು ಕಂಡಿದೆ. ಆದರೆ.. ''ಅವತಾರ್'' ಬ್ರ್ಯಾಂಡ್‌ಗೆ ಹೋಲಿಸಿದರೆ ಈ ಗಳಿಕೆ ತೀರಾ ಕಡಿಮೆ. ಯಾಕೆಂದರೆ.. ಭಾರತದಲ್ಲಿ ಹಾಲಿವುಡ್ ಚಿತ್ರಗಳಿಗೆ ಅಪಾರವಾದ ಅಭಿಮಾನಿಗಳಿದ್ದಾರೆ.
ಇನ್ನು 2022ರಲ್ಲಿ ತೆರೆಗೆ ಬಂದಿದ್ದ ''ಅವತಾರ್- ದಿ ವೇ ಆಫ್ ವಾಟರ್'' ಮೊದಲ ದಿನ ₹ 40.3 ಕೋಟಿ ದೋಚಿತ್ತು. ಎರಡನೇ ದಿನ ₹ 42.5 ಕೋಟಿ ಗಳಿಸಿತ್ತು. ಈ ಮೂಲಕ ಕೇವಲ ಎರಡನೇ ದಿನದಲ್ಲಿ ₹ 82.8 ಕೋಟಿಯನ್ನು ಕೊಳ್ಳೆ ಹೊಡೆದಿತ್ತು. ''ಅವತಾರ್ 2'' ಚಿತ್ರದ ಈ ಗಳಿಕೆಯ ಮುಂದೆ ''ಅವತಾರ್ 3'' ಸದ್ಯ ಡಲ್ ಹೊಡೆದಿದೆ.

ಸದ್ಯ ''ಅವತಾರ್ 3'' ಚಿತ್ರದ ಪ್ರದರ್ಶನ ನೋಡುತ್ತಿದ್ದರೆ ಈ ಚಿತ್ರ ''ಅವತಾರ್ 2'' ದಾಖಲೆಯನ್ನು ಭಾರತದಲ್ಲಿ ಮುರಿಯುತ್ತಾ ಎನ್ನುವ ಪ್ರಶ್ನೆ ಹಲವರಲ್ಲಿದೆ. ನಿಮಗೆ ಗೊತ್ತಿರಲಿ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಕೇವಲ ಭಾರತದಲ್ಲಿಯೇ ''ಅವತಾರ್ ದಿ ವೇ ಆಫ್ ವಾಟರ್'' ₹484.36 ಕೋಟಿಯನ್ನು ಗಳಿಸಿತ್ತು. ಈ ದಾಖಲೆ ಸದ್ಯ ''ಅವತಾರ್ 3'' ವಿಚಾರದಲ್ಲಿ ಮರಿಚೀಕೆಯಂತೆ ಕಾಣ್ತಿದೆ.
ಇನ್ನು ಮೊದಲ ದಿನ ಅಂದರೆ ಮೊನ್ನೆ ( ಡಿಸೆಂಬರ್ 19 ) ''ಅವತಾರ್ 3'' ನೋಡುವ ಉತ್ಸಾಹ ಮತ್ತು ಉತ್ಸುಕತೆ ಕೆಲವರಲ್ಲಿತ್ತು. ಅದರಲ್ಲಿಯೂ ಬೆಂಗಳೂರು, ಚೆನ್ನೈನಲ್ಲಿ ಆಕ್ಯುಪೆನ್ಸಿ ಹೆಚ್ಚು ಕಂಡು ಬಂದಿತ್ತು. ಆದರೆ ನಿನ್ನೆ ( ಡಿಸೆಂಬರ್ 20 ) ಪ್ರೇಕ್ಷಕರ ಸಂಖ್ಯೆಯಲ್ಲಿ ಈ ಎರಡು ಕಡೆ ಗಣನೀಯ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 33.00 % ಅಕ್ಯುಪೆನ್ಸಿ ಕಂಡು ಬಂದರೆ ಚೆನ್ನೈನಲ್ಲಿ ಶೇಕಡಾ 55% ಅಕ್ಯುಪೆನ್ಸಿ ಕಂಡು ಬಂದಿದೆ. ಮುಂಬೈ, ಪುಣೆ, ದೆಹಲಿ, ಅಹಮದಾಬಾದ್, ಕೋಲ್ಕತ್ತಾ ಹೀಗೆ ಅನೇಕ ಕಡೆ ಪ್ರೇಕ್ಷಕರು ''ಅವತಾರ್ 3'' ಚಿತ್ರವನ್ನು ಸರಾಸಗಟವಾಗಿ ತಳ್ಳಿ ಹಾಕಿದ್ದಾರೆ.
ಸದ್ಯ ಎರಡು ದಿನದಲ್ಲಿ ''ಅವತಾರ್ : ಫೈರ್ ಆಂಡ್ ಆಶ್ '' ಕೇವಲ ₹ 42.5 ಕೋಟಿಯನ್ನು ಗಳಿಸಿದ್ದು ಇಂದು ( ಡಿಸೆಂಬರ್ 21 ) ಚಿತ್ರ ಎಷ್ಟು ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ನಾಳೆಯ (ಡಿಸೆಂಬರ್ 22) ನಂತರ ಈ ಚಿತ್ರದ ಫಲಿತಾಂಶ ನಿರ್ಧಾರವಾಗಲಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











