Baahubali The Epic Day 3 Boxoffice: ಮರುಬಿಡುಗಡೆಯಾಗಿ ಬಾಕ್ಸಾಫೀಸ್ ಕೊಳ್ಳೆ ಹೊಡೆದ 'ಬಾಹುಬಲಿ'
ಹೊಸದಾಗಿ ಬಿಡುಗಡೆಯಾಗುವ ಹೈಬಜೆಟ್ ಚಿತ್ರಗಳೇ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಲು ವಿಫಲವಾಗುತ್ತವೆ. ಆದರೆ ಹಳೇ ಸೂಪರ್ ಹಿಟ್ ಸಿನಿಮಾಗಳು ಮರುಬಿಡುಗಡೆಯಾಗಿ ಬಾಕ್ಸಾಫೀಸ್ ಶೇಕ್ ಮಾಡುತ್ತವೆ. ಅದಕ್ಕೆ ತಾಜಾ ಉದಾಹರಣೆ 'ಬಾಹುಬಲಿ ದಿ ಎಪಿಕ್'. ದಶಕದ ಹಿಂದೆ ಎರಡು ಭಾಗವಾಗಿ ತೆರೆಗೆ ಬಂದಿದ್ದ ಸಿನಿಮಾ ಇದೀಗ ಒಟ್ಟಾಗಿ ಒಂದೇ ಸಿನಿಮಾ ಆಗಿ ಪ್ರೇಕ್ಷಕರನ್ನು ರಂಜಿಸ್ತಿದೆ.
ರಾಜಮೌಳಿ ನಿರ್ದೇಶನದಲ್ಲಿ ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ, ರಮ್ಯಾಕೃಷ್ಣ, ಸತ್ಯರಾಜ್, ನಾಸರ್ ನಟನೆಯ 'ಬಾಹುಬಲಿ ದಿ ಬಿಗಿನಿಂಗ್' ಹಾಗೂ 'ಬಾಹುಬಲಿ ದಿ ಕನ್‌ಕ್ಲೂಷನ್' ಸಿನಿಮಾಗಳು ಹೊಸ ಇತಿಹಾಸ ನಿರ್ಮಿಸಿದ್ದು ಗೊತ್ತೇಯಿದೆ. 10 ವರ್ಷಗಳ ಬಳಿಕ ಆ ಚಿತ್ರಗಳನ್ನು ಒಟ್ಟಾಗಿ ಎಡಿಟ್ ಮಾಡಿ ಜಕ್ಕಣ್ಣ ಮರು ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಥಿಯೇಟರ್, ಟಿವಿ, ಮೊಬೈಲ್‌ನಲ್ಲಿ ಹಲವು ಬಾರಿ ನೋಡಿದ್ದರೂ ಮತ್ತೆ ದೊಡ್ಡ ಪರದೆಯಲ್ಲಿ ಪ್ರೇಕ್ಷಕರು ಸಿನಿಮಾ ನೋಡಿ ಎಂಜಾಯ್ ಮಾಡ್ತಿದ್ದಾರೆ.

ಫಸ್ಟ್ ವೀಕೆಂಡ್‌ನಲ್ಲಿ 'ಬಾಹುಬಲಿ ದಿ ಎಪಿಕ್' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಶುಕ್ರವಾರ(ಅಕ್ಟೋಬರ್ 31) ಅಂದಾಜು 18 ರಿಂದ 20 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಸಿನಿಮಾ ಶನಿವಾರ, ಭಾನುವಾರ ಕೂಡ ಭರ್ಜರಿ ಕಲೆಕ್ಷನ್ ಮಾಡಿದೆ. ಮರು ಬಿಡುಗಡೆ ಆಗಿರುವ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿರುವುದು 'ಬಾಹುಬಲಿ' ಕ್ರೇಜ್‌ಗೆ ಹಿಡಿದ ಕನ್ನಡಿ. 3 ದಿನಕ್ಕೆ ಬರೀ ಬುಕ್‌ಮೈ ಶೋನಲ್ಲಿ 7 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿ ದಾಖಲೆ ಬರೆದಿದೆ.
ಅಧಿಕೃತವಾಗಿ 'ಬಾಹುಬಲಿ ದಿ ಎಪಿಕ್' ಸಿನಿಮಾ ಕಲೆಕ್ಷನ್ ಮಾಹಿತಿ ಸಿಕ್ಕಿಲ್ಲ. www.sacnilk.com ವರದಿ ಪ್ರಕಾರ ಮೊದಲ 3 ದಿನಕ್ಕೆ ಸಿನಿಮಾ ಭಾರತದಲ್ಲಿ 24.10 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಗುರುವಾರ ಪ್ರೀಮಿಯರ್ ಶೋಗಳಲ್ಲಿ 1.15 ಕೋಟಿ ರೂ. ಶುಕ್ರವಾರ 9.65 ಕೋಟಿ ರೂ. ಶನಿವಾರ 7.3 ಕೋಟಿ ರೂ. ಹಾಗೂ ಭಾನುವಾರ ಅಂದಾಜು 6 ಕೋಟಿ ರೂ. ಕಲೆಕ್ಷನ್ ಮಾಡಿದಂತಾಗಿದೆ.

ವಿದೇಶಗಳಲ್ಲಿ ಕೂಡ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಒಟ್ಟಾರೆ 3 ದಿನಕ್ಕೆ ವಿಶ್ವದಾದ್ಯಂತ 35 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಬಾಹುಬಲಿ ಸರಣಿಯ ಸಿನಿಮಾಗಳ ಒಟ್ಟು ಕಲಾವಧಿ 5 ಗಂಟೆ 27 ನಿಮಿಷ ಇದೆ. ಅದನ್ನು 3 ಗಂಟೆ 43 ನಿಮಿಷಕ್ಕೆ ಕತ್ತರಿಸಿ ಮತ್ತೆ ತೆರೆಗೆ ತರಲಾಗಿದೆ.
ಎಷ್ಟೇ ಕತ್ತರಿ ಹಾಕಿದರೂ ಈಗಾಗಲೇ ನೋಡಿರುವ ಚಿತ್ರವನ್ನು ಮತ್ತೆ ಹೆಚ್ಚು ಕಮ್ಮಿ 4 ಗಂಟೆ ಚಿತ್ರಮಂದಿರಗಳಲ್ಲಿ ಕೂತು ನೋಡುವುದು ಕಷ್ಟ ಎಂದು ಕೆಲವರು ಹೇಳುತ್ತಿದ್ದಾರೆ. ಆದರೂ ಅಭಿಮಾನಿಗಳು ಮತ್ತೆ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ರಾಜಮೌಳಿ ವಿಷನ್, ಮೇಕಿಂಗ್, ನಿರೂಪಣೆ ಮೆಚ್ಚಿಕೊಳ್ಳುತ್ತಿದ್ದಾರೆ. ಪ್ರಭಾಸ್ ಸೇರಿ ಎಲ್ಲಾ ಕಲಾವಿದರ ಅದ್ಭುತ ನಟನೆಯನ್ನು ಮತ್ತೆ ದೊಡ್ಡಪರದೆಯಲ್ಲಿ ಕಣ್ತುಂಬಿಕೊಳ್ಳುತ್ತಿದ್ದಾರೆ.
ಒಟ್ಟಾರೆ ಈ ರೀ-ಎಡಿಟೆಡ್ ಸಿನಿಮಾ ರೀ-ರಿಲೀಸ್ ಕಾನ್ಸೆಪ್ಟ್ ಕ್ಲಿಕ್ ಆಗಿದೆ. 'ಬಾಹುಬಲಿ ದಿ ಎಪಿಕ್' ಸಿನಿಮಾ ಪ್ರೇಕ್ಷಕರ ಮನಗೆದ್ದಿರುವುದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳನ್ನು ಇದೇ ರೀತಿ ತೆರೆಗೆ ತರಲು ದಾರಿ ಮಾಡಿಕೊಟ್ಟಂತೆ ಆಗಿದೆ. 'ಕೆಜಿಎಫ್' ಹಾಗೂ 'ಪುಷ್ಪ' ಸರಣಿ ಸಿನಿಮಾಗಳನ್ನು ಇದೇ ರೀತಿ ಒಟ್ಟಾಗಿ ನೋಡುವ ಅವಕಾಶ ಸಿನಿರಸಿಕರಿಗೆ ಸಿಕ್ಕರೂ ಸಿಗಬಹುದು. ಇದೇ ಸಂಭ್ರಮದಲ್ಲಿ ರಾಜಮೌಳಿ ತಮ್ಮ ಮುಂದಿನ ಸಿನಿಮಾ ಟೀಸರ್ ಬಿಡುಗಡೆಗೆ ತಯಾರಿ ನಡೆಸಿದೆ. ಮಹೇಶ್ ಬಾಬು, ಪ್ರಿಯಾಂಕ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ನಟನೆಯ ಹೊಸ ಚಿತ್ರದ ಟೀಸರ್ ನವೆಂಬರ್ 15ರಂದು ರಿಲೀಸ್ ಆಗಲಿದೆ.


Click it and Unblock the Notifications











