ಬಾಕ್ಸಾಫೀಸ್‌ನಲ್ಲಿ 'ಬೌ ಬುಟ್ಟು ಭೂತಾ' ಹವಾ; 'KGF- 2' ಹಿಂದಿಕ್ಕುತ್ತಾ ಒರಿಯಾ ಭಾಷೆ ಸಿನಿಮಾ?
ಪ್ಯಾನ್ ಇಂಡಿಯಾ ಟ್ರೆಂಡ್ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಗಳಿಕೆಗೆ ಸಹಾಯಕವಾಗುತ್ತಿದೆ. ಕನ್ನಡ ಸಿನಿಮಾಗಳು ಕೂಡ ದೇಶದ ಮೂಲೆ ಮೂಲೆಯಲ್ಲಿ ಸದ್ದು ಮಾಡುತ್ತಿವೆ. ಹೊರ ರಾಜ್ಯಗಳಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿವೆ. ಯಶ್ ನಟನೆಯ 'KGF' ಸರಣಿ ಸಿನಿಮಾಗಳು ಹೊರ ರಾಜ್ಯಗಳಲ್ಲಿ ದಾಖಲೆಯ ಕಲೆಕ್ಷನ್ ಮಾಡಿದ್ದು ಗೊತ್ತೇಯಿದೆ.
ಸದ್ಯ ಒರಿಯಾ ಭಾಷೆಯ ಸಿನಿಮಾ 'ಬೌ ಬುಟ್ಟು ಭೂತಾ' ಸಿನಿಮಾ ಬೆಂಗಳೂರಿನಲ್ಲಿ ಕೂಡ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡ ಸಿನಿಮಾಗಳನ್ನು ಹಿಂದಿಕ್ಕಿ ಸ್ಕ್ರೀನ್ಸ್ ಪಡೆದುಕೊಳ್ತಿದೆ. ಒರಿಯಾ ಭಾಷೆಯ ಸಿನಿಮಾಗಳಲ್ಲೇ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಬೆಂಗಳೂರಿನಲ್ಲಿ 'ಎಡಗೈಯೇ ಅಪಘಾತಕ್ಕೆ ಕಾರಣ' ಚಿತ್ರಕ್ಕಿಂತ ಹೆಚ್ಚು ಸ್ಕ್ರೀನ್ಸ್ ಈ ಹಾರರ್ ಕಾಮಿಡಿ ಸಿನಿಮಾ ಪಾಲಾಗಿದೆ. ಈ ಬಗ್ಗೆ ದಿಗಂತ್ ಸಹ ಬೇಸರ ವ್ಯಕ್ತಪಡಿಸಿದ್ದರು.

ಒರಿಯಾ ಭಾಷೆಯ ಚಿತ್ರರಂಗ ಬಹಳ ಚಿಕ್ಕದು. ಈವೆರೆಗೆ ಯಾವುದೇ ಒರಿಯಾ ಭಾಷೆ ಸಿನಿಮಾ 10 ಕೋಟಿ ರೂ. ಕಲೆಕ್ಷನ್ ಮಾಡಿರಲಿಲ್ಲ. ಆ ದಾಖಲೆ ಈಗ 'ಬೌ ಬುಟ್ಟು ಭೂತಾ' ಸಿನಿಮಾ ಮಾಡಿದೆ. ಒಡಿಶಾದಲ್ಲಿ ಆ ಭಾಷೆಯ ಸಿನಿಮಾಗಳಿಗಿಂತ ದಕ್ಷಿಣದ ಸಿನಿಮಾಗಳ ಆರ್ಭಟವೇ ಜೋರಾಗಿದೆ. ಪುಷ್ಪ-2(22 ಕೋಟಿ ರೂ.), ಬಾಹುಬಲಿ-2 (15.50 ಕೋಟಿ) ಹಾಗೂ KGF-2 (15.25 ಕೋಟಿ ರೂ.) ಅಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳು ಎನಿಸಿಕೊಂಡಿದೆ. ಸದ್ಯ 'ಬೌ ಬುಟ್ಟು ಭೂತಾ' ಸಿನಿಮಾ 12 ದಿನಕ್ಕೆ 10.40 ಕೋಟಿ ರೂ. ಕಲೆಕ್ಷನ್ ಮಾಡಿದೆ.
ದಮನ್ (7.5 ಕೋಟಿ ರೂ. ), ಕರ್ಮ (6.50 ಕೋಟಿ ರೂ.) ಹಾಗೂ ಪಬಾರ್ (3.50 ಕೋಟಿ ರೂ.) ಎಂಬ ಒಡಿಯಾ ಭಾಷೆಯ ಸಿನಿಮಾಗಳೇ ಈವರೆಗೆ ಒಡಿಶಾದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ್ದ ಸಿನಿಮಾಗಳು ಎನಿಸಿಕೊಂಡಿದ್ದವು. ಆ ದಾಖಲೆಗಳನ್ನೆಲ್ಲಾ ಮೀರಿ 'ಬೌ ಬುಟ್ಟು ಭೂತಾ' ಮೊದಲ ಸ್ಥಾನಕ್ಕೇರಿದೆ. ಸದ್ಯ ಈ ಚಿತ್ರದ ಮುಂದೆ ಇರುವು 'KGF-2' ಚಿತ್ರದ ಕಲೆಕ್ಷನ್. ಮುಂದಿನ ದಿನಗಳಲ್ಲಿ ಇದನ್ನು ದಾಟಿ ಮುಂದೆ ಹೋಗಬಹುದು ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ.
ಕನ್ನಡದ 'KGF' ಸರಣಿ ಸಿನಿಮಾ ದೇಶ ವಿದೇಶಗಳಲ್ಲಿ ಕೂಡ ಸದ್ದು ಮಾಡಿದ್ದು ಗೊತ್ತೇಯಿದೆ. 'KGF' ಚಾಪ್ಟರ್-1 ಸಂಚಲನ ಸೃಷ್ಟಿಸಿತ್ತು. ಹಿಂದಿ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಸಿನಿಮಾ ಡಬ್ ಆಗಿ ತೆರೆಗಪ್ಪಳಿಸಿತ್ತು. ಮೊದಲ ಭಾಗಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಮಾತ್ರವಲ್ಲ ಓಟಿಟಿಯಲ್ಲಿ ಹೆಚ್ಚು ಜನರಿಗೆ ರೀಚ್ ಆಗಿತ್ತು. ಹಾಗಾಗಿ ಸಹಜವಾಗಿಯೇ ಚಾಪ್ಟರ್-2 ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಲು ಸಾಕಷ್ಟು ಜನ ಕಾಯುತ್ತಿದ್ದರು. ಅದಕ್ಕೆ ತಕ್ಕಂತೆ ಸಿನಿಮಾ ಓಪನಿಂಗ್ ಪಡೆದುಕೊಂಡು ಎಲ್ಲಾ ಕಡೆ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅದೇ ರೀತಿ ಒಡಿಶಾದಲ್ಲಿ 'KGF'-2 15.25 ಕೋಟಿ ರೂ. ಕೊಳ್ಳೆ ಹೊಡೆದಿತ್ತು.
ಕನ್ನಡ ಸಿನಿಮಾವೊಂದು ಒಡಿಶಾದಲ್ಲಿ ದಾಖಲೆ ಬರೆದಿರುವುದು, ಆ ದಾಖಲೆಯನ್ನು ಅಲ್ಲಿನ ಸಿನಿಮಾಗಳೇ ಮುರಿಯಲು ತಿಣುಕಾಡುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ಮುಂದಿ 'ಟಾಕ್ಸಿಕ್' ಸಿನಿಮಾ ಒಡಿಶಾದಲ್ಲಿ 'ಪುಷ್ಪ- 2' ದಾಖಲೆ ಮುರಿದು ಮೊದಲ ಸ್ಥಾನಕ್ಕೆ ಏರಿದರೂ ಅಚ್ಚರಿ ಪಡಬೇಕಿಲ್ಲ. ಮತ್ತೊಂದು ಕಡೆ ಬೆಂಗಳೂರಿನಲ್ಲಿ 'ಬೌ ಬುಟ್ಟು ಭೂತಾ' ಸಿನಿಮಾ ಕನ್ನಡ ಸಿನಿಮಾಗಳನ್ನು ಮೀರಿ ಬೆಂಗಳೂರಿನಲ್ಲಿ ಹೆಚ್ಚು ಶೋಗಳನ್ನು ಪಡೆಯುತ್ತಿರುವುದು ವಿಪರ್ಯಾಸವೇ ಸರಿ. ಎಲ್ಲವೂ 'KGF' ಹಾಗೂ 'ಕಾಂತಾರ' ಸಿನಿಮಾ ಆಗುವುದಿಲ್ಲ. ಪ್ಯಾನ್ ಇಂಡಿಯಾ ಸಿನಿಮಾಗಳ ಹುಚ್ಚಿಗೆ ಬಿದ್ದು ಬೆಂಗಳೂರಿನಲ್ಲೇ ಕನ್ನಡ ಸಿನಿಮಾಗಳು ಅಸ್ತಿತ್ವ ಕಳೆದುಕೊಳ್ಳುತ್ತಿದ್ಯಾ? ಎನ್ನುವ ಬೇಸರ ವ್ಯಕ್ತವಾಗುತ್ತಿದೆ.


Click it and Unblock the Notifications











