ಕಾಂತಾರ ಅಬ್ಬರ, ದೈವದ ಚಮತ್ಕಾರ ; ಮೂರೇ ದಿನ - ಕರಣ್ ಜೋಹರ್ ಸಿನಿಮಾ ಖಲ್ಲಾಸ್
ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ .. ಪರಭಾಷೆಯ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿವೆ ಅಂದರೆ, ನಮ್ಮ ಚಿತ್ರರಂಗದವರು .. ನಮ್ಮ ನೆಲದಲ್ಲಿಯೇ .. ತಮ್ಮ ಚಿತ್ರದ ಬಿಡುಗಡೆಯ ದಿನವನ್ನು ಮುಂದೂಡುತ್ತಿದ್ದರು. ತಮ್ಮ ಚಿತ್ರದ ಕಥೆ ಎಷ್ಟೇ ಚೆನ್ನಾಗಿದ್ದರು ಕೂಡ, ಅಯ್ಯೋ .. ಅವರ ಚಿತ್ರ ಬಂದಾಗ ನಮ್ಮ ಚಿತ್ರ ಯಾರು ನೋಡುತ್ತಾರೆ ಎಂದು ಮಾತನಾಡುತ್ತಿದ್ದರು.
ಹಬ್ಬ-ಹರಿದಿನಗಳಂತೂ ಬರೀ ಈ ಬೇರೆ ಭಾಷೆಯ ಸ್ಟಾರ್‌ಗಳಿಗೆ ಮಾತ್ರ ಸೀಮಿತವಾಗಿದ್ದವು. ಇವತ್ತು ಕೂಡ ಪರಭಾಷೆ ಚಿತ್ರಗಳ ಅಬ್ಬರ ಕರುನಾಡಿನಲ್ಲಿ ಇದ್ದೇ ಇದೆ. ಹಲವರು ಈಗಲೂ ಕೂಡ ತಮ್ಮ ಚಿತ್ರಗಳನ್ನು ಬೇರೆ ಭಾಷೆಯ ಸ್ಟಾರ್‌ಗಳ ಎದುರು ಬಿಡುಗಡೆ ಮಾಡಲು ಮೀನಾ ಮೇಷ ಎಣಿಸುತ್ತಾರೆ.

ಇನ್ನು.. ಮಲ್ಟಿಪ್ಲೆಕ್ಸ್‌ನವರ ಕಥೆ ಎಲ್ಲರಿಗೆ ಗೊತ್ತಿರುವಂತಹದ್ದೇ. ಇಲ್ಲಿಯ ಅನ್ನ ತಿಂದು.. ಇಲ್ಲಿಯ ವಾತಾವರಣದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಇವರಿಗೆ ಕನ್ನಡಕ್ಕಿಂತ ಬೇರೆ ಚಿತ್ರಗಳ ಮೇಲೆ ಎಲ್ಲಿಲ್ಲದ ವ್ಯಾಮೋಹ.
ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕನ್ನಡ ಚಿತ್ರಕ್ಕೆ ಬೇಡಿಕೆ ಇದೆ. ಕನ್ನಡದ ಚಿತ್ರಗಳಿಗೆ ಅದಕ್ಕೆ ಆದ ಬೆಲೆ ಇದೆ. ಕಾಲಾನು ಕಾಲಕ್ಕೆ ಈ ಮಾತನ್ನು ಅನೇಕ ಚಿತ್ರಗಳು ಸಾಬೀತು ಮಾಡುತ್ತಿದ್ದು ಸದ್ಯ ''ಕಾಂತಾರ- ಚಾಪ್ಟರ್ 1'' ಚಿತ್ರದ ಅಬ್ಬರಕ್ಕೆ ಕರಣ್ ಜೋಹರ್ ನಿರ್ಮಾಣದ ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಚಿತ್ರ ಬೆಚ್ಚಿ ಬಿದ್ದಿದೆ. ಮೂರೇ ದಿನಕ್ಕೆ ಬಾಕ್ಸಾಫೀಸ್‌ನಲ್ಲಿ ಕೊನೆಯುಸಿರೆಳೆದಿದೆ.
ಹೌದು, ಉತ್ತರ ಭಾರತದಲ್ಲಿ ''ಕಾಂತಾರ'' ಮೊದಲ ಭಾಗಕ್ಕೆ ಸಿಕ್ಕ ಪ್ರತಿಕ್ರಿಯೆ, ಆ ಸಂಭ್ರಮ..ಮೂರು ವರ್ಷದ ಹಿಂದೆ ಚಿತ್ರ ಮಾಡಿದ್ದ ದಾಖಲೆ.. ಎಲ್ಲವನ್ನೂ ಮರೆತು ಬಾಲಿವುಡ್‌ನ ಪ್ರಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ತಮ್ಮ ನಿರ್ಮಾಣದಡಿ ಸಿದ್ದವಾದ "ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ" ಚಿತ್ರವನ್ನು ತೆರೆಗೆ ತಂದಿದ್ದರು.
ಆದರೆ ತಾವು ಮಾಡಿದ ಈ ತಪ್ಪಿಗೆ ಈಗ ಕರಣ್ ಜೋಹರ್‌ಗೆ ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ಬಂದಿದೆ. ಯಾಕೆಂದರೆ ''ಕಾಂತಾರ-ಚಾಪ್ಟರ್ 1'' ಎದುರು ಬಂದ ವರುಣ್ ಧವನ್ ಮತ್ತು ಜಾಹ್ನವಿ ಕಪೂರ್ ಅಭಿನಯದ ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಚಿತ್ರ ''ಕಾಂತಾರ''ದ ಅಬ್ಬರ ಮತ್ತು ದೈವದ ಚಮತ್ಕಾರದಿಂದ ಬಾಕ್ಸಾಫೀಸ್‌ನಲ್ಲಿ ಬೋರಲು ಬಿದ್ದಿದೆ.

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಮೊದಲ ದಿನ₹ 9.25 ಕೋಟಿ ಮತ್ತು ಎರಡನೇ ದಿನ ₹ 5.5 ಕೋಟಿ ಹಣ ಗಳಿಸಿದ್ದ ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಚಿತ್ರ ನಿನ್ನೆ ಅಂದರೆ ಮೂರನೇ ದಿನ ₹ 7.5 ಕೋಟಿಯನ್ನು ಮಾತ್ರ ಗಳಿಸಿದೆ. ಈ ಮೂಲಕ ಮೂರು ದಿನದಲ್ಲಿ ₹22.25 ಕೋಟಿ ಹಣವನ್ನು ಮಾತ್ರ ಕರಣ್ ಜೋಹರ್ ನಿರ್ಮಾಣದ ಈ ಚಿತ್ರ ಕೊಳ್ಳೆ ಹೊಡೆದಿದೆ.
ಆದರೆ.. ಮತ್ತೊಂದು ಕಡೆ ''ಕಾಂತಾರ-ಚಾಪ್ಟರ್ 1'' ಭಾರತದೆಲ್ಲೆಡೆ ಧಗಧಗಿಸುತ್ತಿದೆ. ಕೇವಲ ಮೂರು ದಿನದಲ್ಲಿಯೇ ₹163.1 ಕೋಟಿಯನ್ನು ಗಳಿಸಿರುವ ''ಕಾಂತಾರ -ಅಧ್ಯಾಯ 1'' ಕೇವಲ ಹಿಂದಿ ಭಾಷೆಯಲ್ಲಿಯೇ ₹ 52 ಕೋಟಿ ಹಣ ಲೂಟಿ ಹೊಡೆದಿದೆ.
ಬಾಲಿವುಡ್ ಬಾಕ್ಸಾಫೀಸ್ ಪಂಡಿತರಾದ ತರಣ್ ಆದರ್ಶ್ ಪ್ರಕಾರ ''ಕಾಂತಾರ-ಅಧ್ಯಾಯ 1'' (ಹಿಂದಿ ವರ್ಷನ್) ಮೊದಲ ಮೂರು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ[ಗುರುವಾರ] ₹ 18.50 ಕೋಟಿ
ಎರಡನೇ ದಿನ[ಶುಕ್ರವಾರ] ₹ 13.50 ಕೋಟಿ
ಮೂರನೇ ದಿನ[ಶನಿವಾರ] ₹ 20 ಕೋಟಿ
ಒಟ್ಟು ಗಳಿಕೆ - ₹ 52 ಕೋಟಿ
ಹೀಗೆ ''ಕಾಂತಾರ-ಚಾಪ್ಟರ್ 1'' ಚಿತ್ರ ಹಿಂದಿ ಮಾರುಕಟ್ಟೆಯಲ್ಲಿ ₹ 52 ಕೋಟಿಯನ್ನು ಕೇವಲ ಮೂರು ದಿನದಲ್ಲಿ ಕೊಳ್ಳೆ ಹೊಡೆದಿದೆ. ಮತ್ತೊಂದು ಕಡೆ ಅವರ ನೆಲದ ಸ್ಟಾರ್‌ಗಳಾದ ವರುಣ್ ಧವನ್-ಜಾಹ್ನವಿ ಕಪೂರ್ ಅಭಿನಯದ'' ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಹಣ ಗಳಿಸಲು ಸಾಧ್ಯವಾಗದೇ ಪರದಾಡುತ್ತಿದೆ. ಮೂರು ದಿನವಾದರೂ ಈ ಚಿತ್ರ ₹50 ಕೋಟಿಯ ಗಡಿಯನ್ನು ತಲುಪಿಲ್ಲ. ಮುಂಬರುವ ದಿನಗಳಲ್ಲಿ ಕರಣ್ ಜೋಹರ್ ನಿರ್ಮಾಣದ '' ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಚಿತ್ರ ಎಷ್ಟು ಹಣ ಗಳಿಸುತ್ತೆ, ಕರಣ್ ಜೋಹರ್‌ಗೆ ಎಷ್ಟು ಕೋಟಿ ನಷ್ಟವಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











