ಭಯವೇ ಬಂಡವಾಳ ; ಪ್ರೇತಾತ್ಮದ ಅಬ್ಬರಕ್ಕೆ ಬಾಲಿವುಡ್ ಬಾಕ್ಸಾಫೀಸ್ ಗಡಗಡ, ಐದೇ ದಿನದಲ್ಲಿ ಗೆದ್ದ ವಿಕ್ರಮ್ ಭಟ್ 'ಹಾಂಟೆಡ್ 3D'
ಆ ಭಾಷೆ ಈ ಭಾಷೆ ಅಂತ ಅಲ್ಲ. ಎಲ್ಲ ಭಾಷೆಯಲ್ಲಿಯೂ ಹಾರರ್ ಚಿತ್ರಕ್ಕೆ ಅದ್ರದ್ದೇ ಆದ ಬೇಡಿಕೆ ಇದೆ. ವಿಶೇಷ ಸ್ಥಾನ ಇದೆ. ಹಾಗಂಥ ಈ ಜಾನರ್‌ನಲ್ಲಿ ಬರುವ ಎಲ್ಲ ಚಿತ್ರಗಳು ಬ್ಲಾಕ್‌ಬಸ್ಟರ್ ಆಗುವುದಿಲ್ಲ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಈ ಪ್ರೇತಾತ್ಮಗಳ ಹಾವಳಿಯನ್ನು ಕಂಡು ಬೆಚ್ಚಿ ಕೂಡ ಬೀಳುವುದಿಲ್ಲ. ಎಲ್ಲೋ ಬೆರಳಣಿಯ ಚಿತ್ರಗಳು ಮಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತವೆ. ನೋಡುಗರ ಎದೆಬಡಿತವನ್ನು ಹೆಚ್ಚಿಸುತ್ತವೆ. ಉದಾಹರಣೆಗೆ ''ಹಾಂಟೆಡ್ 3ಡಿ: ಎಕೋಸ್ ಆಫ್ ದಿ ಪಾಸ್ಟ್''.
ಹೌದು, ''ಹಾಂಟೆಡ್ 3ಡಿ: ಎಕೋಸ್ ಆಫ್ ದಿ ಪಾಸ್ಟ್''..ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ವಿಕ್ರಮ್ ಭಟ್ ನಿರ್ದೇಶನದ ಚಿತ್ರ. ಒಂದಲ್ಲ.. ಎರಡಲ್ಲ.. ಕಳೆದ 30 ವರ್ಷಗಳಿಂದ ಚಿತ್ರರಂಗದಲ್ಲಿ ಇರುವವರು ಇವರು.

''ಫರೇಬ್''.. ''ಗುಲಾಮ್''.. ''ಕಸೂರ್''.. ''ಆಪ್ ಮುಝೇ ಅಚ್ಚೆ ಲಗನೇ ಲಗೇ''.. ''ಆವಾರಾ ಪಾಗಲ್ ದಿವಾನಾ''.. ''ದಿವಾನೆ ಹುಯೇ ಪಾಗಲ್''.. ಹೀಗೆ ಹಲವು ಸದಭಿರುಚಿ ಸಿನಿಮಾಗಳನ್ನು ಮಾಡಿದ ಕೀರ್ತಿ ಇವರದ್ದು. ಇಷ್ಟೇ ಅಲ್ಲ.. ಚಿತ್ರೋದ್ಯಮದಲ್ಲಿಯೇ ಹೊಸ ಅಲೆ ಎಬ್ಬಿಸಿದ್ದ ಬ್ಲಾಕ್‌ಬಸ್ಟರ್ ಸಿನಿಮಾ ''ರಾಝ್''ನ ಹಿಂದಿರುವ ರೂವಾರಿ ಕೂಡ ಇವರೇ.
''ರಾಝ್''.. '''ರಾಝ್ 3D''.. ''ರಾಝ್ ರೀಬೂಟ್''.. ''1920''.. ''ಶಾಪಿತ್''.. ''ಹಾಟೆಂಡ್''.. ಹೀಗೆ ಹಲವಾರು ಪ್ರೇತಾತ್ಮದ ಕಥೆಯನ್ನೊಂದಿರುವ ಹಾರರ್ ಚಿತ್ರಗಳು ತೆರೆಗೆ ಬಂದಿದ್ದು ಇವರ ಬತ್ತಳಿಕೆಯಿಂದಲೇ. ಈ ಹಿನ್ನೆಲೆ ಬಾಲಿವುಡ್ ಇವರನ್ನು ಮಾಸ್ಟರ್ ಆಫ್ ದಿ ಹಾರರ್ ಜಾನರ್ ಎಂದೇ ಕರೆಯುತ್ತೆ.
ಇಂಥಾ ವಿಕ್ರಂ ಭಟ್ ಇದೀಗ ಮತ್ತೊಮ್ಮೆ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವಲ್ಲಿ ಯಶಸ್ವಿಯಾಗಿದ್ಧಾರೆ. ''ಹಾಂಟೆಡ್ 3ಡಿ: ಎಕೋಸ್ ಆಫ್ ದಿ ಪಾಸ್ಟ್'' ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಮತ್ತೊಮ್ಮೆ ಗೆಲುವಿನ ಪತಾಕೆ ಹಾರಿಸಿದ್ದಾರೆ. ಒಂದರ್ಥದಲ್ಲಿ ಇವರಿಗೆ ಭಯವೇ ಬಂಡವಾಳ.

ವಿಶೇಷ ಅಂದರೆ ''ಹಾಂಟೆಡ್ 3ಡಿ: ಎಕೋಸ್ ಆಫ್ ದಿ ಪಾಸ್ಟ್'' ಚಿತ್ರದ ಎದುರು ಕಳೆದ ವಾರ ಅರ್ಧ ಡಜನ್ ಚಿತ್ರಗಳು ಬಿಡುಗಡೆಯಾಗಿದ್ದವು. ಆ ಪೈಕಿ ಹಿಂದಿಯಲ್ಲಿ ಕಂಗನಾ ರಣಾವತ್ ಅಭಿನಯದ ''ಭಾರತ್ ಭಾಗ್ಯ ವಿಧಾತ'' ಒಂದಾದರೆ ಮನೋಜ್ ಭಾಜ್‌ಪೈ ಅಭಿನಯದ ''ಗೌರ್ವನರ್'' ಮತ್ತೊಂದು. ಈ ಎರಡು ಚಿತ್ರಗಳ ನಡುವೆ ಬಂದ ''ಹಾಂಟೆಡ್ 3ಡಿ: ಎಕೋಸ್ ಆಫ್ ದಿ ಪಾಸ್ಟ್'' ಬಾಕ್ಸಾಫೀಸ್‌ನ ರೇಸ್‌ನಲ್ಲಿ ಮುಂದಕ್ಕೋಗಿದೆ. ಬಾಕ್ಸಾಫೀಸ್‌ನ ಅಂಕಿ ಅಂಶ ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಕೇವಲ ಐದು ದಿನದಲ್ಲಿ ₹13.35 ಕೋಟಿಯನ್ನು ಕೊಳ್ಳೆ ಹೊಡೆದಿದೆ.
'' ಸ್ಯಾಕ್ನಿಲ್'' ಪ್ರಕಾರ ''ಹಾಂಟೆಡ್ 3ಡಿ: ಎಕೋಸ್ ಆಫ್ ದಿ ಪಾಸ್ಟ್'' ಚಿತ್ರದ 5 ದಿನದ ಗಳಿಕೆ ಈ ಕೆಳಗಿನಂತೆ ಇದೆ.
| ದಿನ | ಭಾರತದ ಒಟ್ಟು ನಿವ್ವಳ ಗಳಿಕೆ (India Net) |
|---|---|
| ಮೊದಲನೇ ದಿನ (ಶುಕ್ರವಾರ) | ₹2 ಕೋಟಿ 50 ಲಕ್ಷ |
| ಎರಡನೇ ದಿನ (ಶನಿವಾರ) | ₹3 ಕೋಟಿ 25 ಲಕ್ಷ |
| ಮೂರನೇ ದಿನ (ಭಾನುವಾರ) | ₹3 ಕೋಟಿ 60 ಲಕ್ಷ |
| ನಾಲ್ಕನೇ ದಿನ (ಸೋಮವಾರ) | ₹2 ಕೋಟಿ |
| ಐದನೇ ದಿನ (ಮಂಗಳವಾರ) | ₹2 ಕೋಟಿ |
| ಒಟ್ಟು ಮೊತ್ತದ ಕಲೆಕ್ಷನ್ | ₹13 ಕೋಟಿ 35 ಲಕ್ಷ |
ಚಿತ್ರಕ್ಕೆ ಖರ್ಚಾದ ಹಣ ಎಷ್ಟು ಗೊತ್ತಾ ..?
ಇನ್ನು ಬಾಲಿವುಡ್ ಅಂದರೆ ಅಲ್ಲಿ ಕೋಟಿಗಳದ್ದೇ ಕಾರುಬಾರು. 50, 70, 100 ಕೋಟಿ ಇನ್ನೂ ಕೆಲವೊಮ್ಮೆ 200 ಕೋಟಿಗೂ ಅಧಿಕ ಹಣವನ್ನು ನೀರಿನಂತೆ ಸುರಿದು ಇಲ್ಲಿ ಚಿತ್ರವನ್ನು ಮಾಡಲಾಗುತ್ತೆ.
ಇಂತಹ ಉದ್ಯಮದಲ್ಲಿ ಮಿಥುನ್ ಚಕ್ರವರ್ತಿಯ ಮಗ ಮಿಮೋ ಚಕ್ರವರ್ತಿ ಮತ್ತು ಚೇತನಾ ಪಾಂಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ''ಹಾಂಟೆಡ್ 3ಡಿ: ಎಕೋಸ್ ಆಫ್ ದಿ ಪಾಸ್ಟ್'' ಚಿತ್ರಕ್ಕೆ ಕೇವಲ 15 ಕೋಟಿಯನ್ನಷ್ಟೇ ಸುರಿದಿದ್ದಾರೆ ವಿಕ್ರಮ್ ಭಟ್. ಅಚ್ಚರಿ ಆದರೂ ಇದು ಸತ್ಯ ಎನ್ನುತ್ತೆ koimoi ಹಂಚಿಕೊಂಡಿರುವ ವರದಿ.
| ವಿವರಗಳು | ಮೊತ್ತ / ಶೇಕಡಾವಾರು |
|---|---|
| ಚಿತ್ರದ ಬಜೆಟ್ (Budget) | ₹15 ಕೋಟಿ |
| ಭಾರತದ ಒಟ್ಟು ನಿವ್ವಳ ಗಳಿಕೆ (India Net) | ₹13 ಕೋಟಿ 55 ಲಕ್ಷ |
| ಬಜೆಟ್ ರಿಕವರಿ (% Recovered) | 90.33% |
| ನಷ್ಟ / ಬಾಕಿ ಮೊತ್ತ (Deficit) | ₹1 ಕೋಟಿ 45 ಲಕ್ಷ |
| ನಷ್ಟದ ಶೇಕಡಾವಾರು (Deficit %) | 9.67% |
ಸದ್ಯ ₹13.55 ಕೋಟಿಯನ್ನು ದೋಚಿರುವ ''ಹಾಂಟೆಡ್ 3ಡಿ: ಎಕೋಸ್ ಆಫ್ ದಿ ಪಾಸ್ಟ್'' ಚಿತ್ರ ಸೇಫ್ ಜೋನ್‌ಗೆ ಬರಲು ಇನ್ನು ಕೇವಲ ₹1.45 ಕೋಟಿ ಮಾತ್ರ ಬೇಕು. ಬಾಲಿವುಡ್ ಪಂಡಿತರ ಪ್ರಕಾರ ಈ ಚಿತ್ರ ₹20 ಕೋಟಿಯನ್ನು ಗಳಿಸುವುದು ಖಚಿತ. ಹೀಗಾಗಿ ಈ ಚಿತ್ರವನ್ನು ಆಗಲೇ ಹಿಟ್ ಎಂದು ಘೋಷಿಸಿದ್ದಾರೆ ಮುಂಬೈನ ಟ್ರೇಡ್ ವಿಶ್ಲೇಷಕರು.
ಒಟ್ನಲ್ಲಿ ಒಂದು ಚಿತ್ರದ ಗೆಲುವಿಗೆ ಕೇವಲ ಕೋಟಿ ಕೋಟಿ ಬಜೆಟ್ ಅಥವಾ ಸೂಪರ್ ಸ್ಟಾರ್ ನಟರೇ ಬೇಕಂತೆನೂ ಇಲ್ಲ. ಬದಲಿಗೆ ಪ್ರೇಕ್ಷಕರಿಗೆ ಇಷ್ಟವಾಗುವ ಕಥೆ ಮತ್ತು ತಾಂತ್ರಿಕ ಗುಣಮಟ್ಟವಿದ್ದರೆ ಸಾಕು ಚಿತ್ರ ಗೆಲ್ಲುತ್ತೆ ಎನ್ನುವುದನ್ನು ವಿಕ್ರಮ್ ಭಟ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಮೂಲಕ ತಮ್ಮ ಹಳೆಯ ಫ್ರಾಂಚೈಸಿಗೆ (ಹಾಂಟೆಡ್) ಮರುಜೀವವನ್ನು ಕೂಡ ನೀಡಿರುವ ವಿಕ್ರಮ್ ಭಟ್ ಕಮರ್ಷಿಯಲ್ ಸಿನಿಮಾಗಳ ಯಶಸ್ಸಿನ ಸೂತ್ರವನ್ನು ಮತ್ತೊಮ್ಮೆ ಬಾಲಿವುಡ್‌ಗೆ ನೆನಪಿಸಿದ್ದಾರೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications