ಮುಂದುವರೆದ ಮಹಾವತಾರ್ ನರಸಿಂಹ ಅಬ್ಬರ,ಬಾಕ್ಸಾಫೀಸ್‌ನಲ್ಲಿ 'ಸಲಾರ್' ಸಾಮ್ರಾಜ್ಯ ಪತನ ; ಮುಂದಿನ ಟಾರ್ಗೆಟ್ ರಜಿನಿಯ 2.0
ಮೊದಲೆಲ್ಲಾ ತಮ್ಮ ನೆಚ್ಚಿನ ನಾಯಕನ ಚಿತ್ರ ಬರುತ್ತಿದೆ ಅಂದರೆ ಅಭಿಮಾನಿಗಳಲ್ಲಿ ಒಂದು ರೀತಿಯ ಉತ್ಸಾಹ ಕಾಣುತ್ತಿತ್ತು. ಕಾತುರದಿಂದ ಕಾಯುತ್ತಾ ಕುಳಿತುಕೊಳ್ಳುತ್ತಿದ್ದರು. ಇನ್ನು ಆಗ ಸೋಶಿಯಲ್ ಮೀಡಿಯಾ ಕೂಡ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಓಟಿಟಿಯ ಅಲೆ ಕೂಡ ಎದ್ದಿರಲಿಲ್ಲ. ಹೀಗಾಗಿ ಚಿತ್ರಮಂದಿರಗಳಲ್ಲಿಯೇ ಚಿತ್ರವನ್ನು ಅಭಿಮಾನಿಗಳು ನೋಡಬೇಕಿತ್ತು. ಆದರೆ ಈಗ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರದ ಮೊದಲ ಪ್ರದರ್ಶನ ಮುಕ್ತಾಯವಾಗುತ್ತಿದ್ದಂತೆಯೇ ಚಿತ್ರದ ಹಣೆ ಬರಹ ಗೊತ್ತಾಗಿ ಬಿಡುತ್ತೆ.
ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಪ್ರಮುಖವಾದ ಸನ್ನಿವೇಶಗಳು ಹರಿದಾಡುತ್ತವೆ. ಇಡೀ ಚಿತ್ರ ಕ್ಷಣಾರ್ಧದಲ್ಲಿಯೇ ಆನ್ ಲೈನ್‌ನಲ್ಲಿ ಸೋರಿಕೆಯಾಗುತ್ತೆ. ಇಂತಹ ವಾತಾವರಣದಲ್ಲಿ ಆನಿಮೇಷನ್ ಚಿತ್ರವೊಂದು ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ ಅಂದರೆ ಅದು ಪವಾಡವೇ ಸರಿ.

ಹೌದು, 25 ದಿನವಾದರೂ ಬಾಕ್ಸಾಫೀಸ್‌ನಲ್ಲಿ ''ಮಹಾವತಾರ್ ನರಸಿಂಹ'' ಅಬ್ಬರ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ಪ್ರಕಾರ ಚಿತ್ರ ಕಳೆದ ಭಾನುವಾರ (ಆಗಸ್ಟ್ 17 ) ₹ 8.15 ಕೋಟಿಯನ್ನು ಗಳಿಸಿದೆ. ಇನ್ನು ಸೋಮವಾರ (ಆಗಸ್ಟ್ 18 ) ₹ 2.25 ಕೋಟಿಯನ್ನು ದೋಚಿದೆ. ಈ ಮೂಲಕ 25 ದಿನದಲ್ಲಿ ₹ 212.75 ಕೋಟಿಯನ್ನು ಗಳಿಸಿದೆ.
ಇನ್ನು ''ಮಹಾವತಾರ್ ನರಸಿಂಹ'' ಘರ್ಜನೆಗೆ ಹಲವು ದಾಖಲೆಗಳು ಈಗಾಗಲೇ ಪುಡಿಪುಡಿಯಾಗಿವೆ. ಬಾಲಿವುಡ್‌ನ ಸೂಪರ್ ಸ್ಟಾರ್‌ಗಳ ಸಿನಿಮಾಗಳೇ ನರಸಿಂಹನ ಅಬ್ಬರದ ಮುಂದೆ ನೆಲಕಚ್ಚಿವೆ. ಇನ್ನೂ ಹಿಂದೆಯಿಂದಲೂ ನಾವು ಹೇಳುತ್ತಾ ಬಂದಂತೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ನಡಿ ತೆರೆಗೆ ಬಂದ ''ಮಹಾವತಾರ್ ನರಸಿಂಹ'' ಚಿತ್ರಕ್ಕೆ ಹಿಂದಿಯಲ್ಲಿ ವ್ಯಾಪಕವಾದ ಬೇಡಿಕೆ ಇದೆ. ಹಿಂದಿ ಪ್ರೇಕ್ಷಕರು ಈ ಚಿತ್ರವನ್ನು ಮುಗಿ ಬಿದ್ದು ನೋಡುತ್ತಿದ್ಧಾರೆ.
ಇದಕ್ಕೆ ಪುರಾವೆ ಎನ್ನುವಂತೆ ಹಿಂದಿಗೆ ಡಬ್ ಆಗಿ ಬಿಡುಗಡೆಯಾಗಿ ಅತೀ ಹೆಚ್ಚು ಹಣ ಗಳಿಸಿದ ದಕ್ಷಿಣದ ಚಿತ್ರಗಳಲ್ಲಿ ಟಾಫ್ 10ರಲ್ಲಿ ಸ್ಥಾನ ಪಡೆದಿರುವ ''ಮಹಾವತಾರ್ ನರಸಿಂಹ'' ಚಿತ್ರ ಈಗಾಗಲೇ ''ಬಾಹುಬಲಿ 2'' .. ''ಸಾಹೋ'' ಚಿತ್ರಗಳ ಹಿಂದಿ ಅವತರಣಿಕೆಯ ದಾಖಲೆಯನ್ನು ಕೂಡ ಮುರಿದಿದೆ. ಈಗ ''ಸಲಾರ್'' ಸರದಿ.
ಹೌದು, ''ಮಹಾವತಾರ್ ನರಸಿಂಹ'' ಚಿತ್ರದಂತೆಯೇ ''ಸಲಾರ್'' ಕೂಡ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಬಿಡುಗಡೆ ಆಗಿತ್ತು. ''ಬಾಲಿವುಡ್ ಹಂಗಾಮಾ'' ವರದಿಯ ಪ್ರಕಾರ ಈ ಚಿತ್ರ ಕೇವಲ ಹಿಂದಿಯಲ್ಲಿ ₹153.84 ಕೋಟಿ ಹಣವನ್ನು ಗಳಿಸಿತ್ತು. ಈ ಗಳಿಕೆಯನ್ನು ''ಮಹಾವತಾರ್ ನರಸಿಂಹ'' ಚಿತ್ರ ಹಿಂದಿಕ್ಕಿದೆ. ಕೇವಲ ಹಿಂದಿಯಲ್ಲಿಯೇ ಚಿತ್ರ ₹155.67 ಕೋಟಿ ಹಣವನ್ನು ಗಳಿಸಿದೆ. ಈ ಮೂಲಕ ಹಿಂದಿಗೆ ಡಬ್ ಆಗಿ ಅತೀ ಹೆಚ್ಚು ಹಣ ಗಳಿಸಿದ ದಕ್ಷಿಣ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದೆ. ''ಸಲಾರ್'' ಮತ್ತು ''ಮಹಾವತಾರ್ ನರಸಿಂಹ'' ಈ ಎರಡು ಚಿತ್ರಗಳು ಕನ್ನಡದ ''ಹೊಂಬಾಳೆ ಸಂಸ್ಥೆ''ಯ ಕೊಡುಗೆಗಳೇ ಎನ್ನುವುದು ವಿಶೇಷ.

ಹಿಂದಿಗೆ ಡಬ್ ಆಗಿ ಅಬ್ಬರಿಸಿದ ದಕ್ಷಿಣ ಭಾರತದ 10 ಚಿತ್ರಗಳ ಪಟ್ಟಿ
1. ಪುಷ್ಪ 2 : ₹830.10 ಕೋಟಿ
2. ಬಾಹುಬಲಿ 2 : ₹510.99 ಕೋಟಿ
3.ಕೆಜಿಎಫ್ 2 : ₹434.70 ಕೋಟಿ
4.ಕಲ್ಕಿ 2898 ಎಡಿ: ₹294.25 ಕೋಟಿ .
5.ಆರ್‌ಆರ್‌ಆರ್: ₹274.31 ಕೋಟಿ.
6. 2.0 : ₹189.55 ಕೋಟಿ .
7. ಮಹಾವತಾರ ನರಸಿಂಹ ₹155.67 ಕೋಟಿ
8. ಸಲಾರ್ : ₹153.84 ಕೋಟಿ
9. ಸಾಹೋ - ₹142.95 ಕೋಟಿ
10. ಬಾಹುಬಲಿ - ₹118.7 ಕೋಟಿ
ಸದ್ಯ 7ನೇ ಸ್ಥಾನಕ್ಕೇರಿರುವ '' ಮಹಾವತಾರ ನರಸಿಂಹ ಚಿತ್ರದ ಮುಂದೆ ಸದ್ಯ ರಜಿನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯಿಸಿದ್ದ ಶಂಕರ್ ನಿರ್ದೇಶನದ ''2.0'' ಚಿತ್ರದ ದಾಖಲೆ ಇದೆ. ''2.0'' ಚಿತ್ರದ ಗಳಿಕೆಯನ್ನು ಹಿಂದಿಕ್ಕಲು ಆರನೇ ಸ್ಥಾನವನ್ನು ಆಕ್ರಮಿಸಿಕೊಳ್ಳಲು ''ಮಹಾವತಾರ್ ನರಸಿಂಹ'' ಚಿತ್ರಕ್ಕೆ ಇನ್ನೂ ₹33.88 ಕೋಟಿ ಹಣ ಬೇಕಿದೆ. ಈ ಗಡಿಯನ್ನು ''ಮಹಾವತಾರ್ ನರಸಿಂಹ'' ದಾಟುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











