ಡಿವೈನ್ ಬ್ಲಾಕ್ ಬಸ್ಟರ್ ; ಬಾಕ್ಸಾಫೀಸ್‌ನಲ್ಲಿ 'ಮಹಾವತಾರ್ ನರಸಿಂಹ' ಅಬ್ಬರ, 632% ಲಾಭ
ಪ್ಯಾನ್ ಇಂಡಿಯಾ ಎಂಬ ಭ್ರಮೆಯಲ್ಲಿ ತೇಲುತ್ತಿರುವ ಅನೇಕ ಸ್ಟಾರ್‌ಗಳು ತ್ರೈವಾರ್ಷಿಕ.. ಪಂಚವಾರ್ಷಿಕ.. ಯೋಜನೆಯಡಿ ಚಿತ್ರವನ್ನು ಮಾಡುತ್ತಿದ್ದಾರೆ. ಆದರೆ ಹೀಗೆ ಬಂದ ಚಿತ್ರಗಳಾದರು ಗೆಲ್ಲುತ್ತಾವಾ ? ಹಣದ ಹೊಳೆ ಹರಿಯುತ್ತಾ ? ಅಂದರೆ ಅದು ಇಲ್ಲ. ಹಾಕಿದ ಬಂಡವಾಳ ವಾಪಸಾದರೆ ಸಾಕು ಎನ್ನುವಂತಹ ಸ್ಥಿತಿ ನಿರ್ಮಾಣವಾಗಿರುತ್ತೆ. ನಮ್ಮಲ್ಲಿ ಹೊಸತನ ಮತ್ತು ಪ್ರಯೋಗಶೀಲತೆಯೇ ಚಿತ್ರರಂಗದ ಜೀವಾಳ ಎನ್ನುವುದು ಬಹುತೇಕರಿಗೆ ಅರ್ಥವೇ ಆಗುವುದಿಲ್ಲ.
ಈ ಮಾತು ಅರ್ಥ ಮಾಡಿಕೊಂಡ ಅಲ್ಲೊಬ್ಬರು .. ಇಲ್ಲೊಬ್ಬರು .. ಮಾತ್ರ ಭಿನ್ನ ಪ್ರಯತ್ನಗಳನ್ನು ಮಾಡುತ್ತಾರೆ. ಹೊಸ ಹಾದಿಯತ್ತ ಹೊರಳುತ್ತಾರೆ. ಇದಕ್ಕೆ ಸದ್ಯದ ''ಸು ಫ್ರಮ್ ಸೋ'' ಒಂದು ಉದಾಹರಣೆಯಾದರೆ ''ಮಹಾವತಾರ್ ನರಸಿಂಹ'' ಚಿತ್ರ ಮತ್ತೊಂದು ಉದಾಹರಣೆ.

ಹೌದು, ''ಮಹಾವತಾರ್ ನರಸಿಂಹ'' ಅಖಂಡ ಭಾರತವನ್ನು ಆವರಿಸಿಕೊಂಡಿರುವ ಚಿತ್ರ. ಸ್ಟಾರ್‌ಗಳ ಚಿತ್ರಗಳನ್ನೇ ಕ್ಯಾರೇ ಎನ್ನದ ಪ್ರೇಕ್ಷಕರು ಈ ಆನಿಮೇಷನ್ ಚಿತ್ರವನ್ನು ಮುಗಿ ಬಿದ್ದು ನೋಡುತ್ತಿದ್ದಾರೆ. ಭಕ್ತಿಯ ಅಲೆಯಲ್ಲಿ ತೇಲುತ್ತಿದ್ದಾರೆ.
ಇದಕ್ಕೆ ಪುರಾವೆ ಎಂಬಂತೆ ''ಹೊಂಬಾಳೆ ಸಂಸ್ಥೆ''ಯ ಸಹಕಾರದ ಜೊತೆ ನಿರ್ಮಾಣವಾಗಿ ಬಿಡುಗಡೆಯಾದ ''ಮಹಾವತಾರ್ ನರಸಿಂಹ'' ಕೇವಲ ಹದಿಮೂರೇ ದಿನದಲ್ಲಿ ನೂರು ಕೋಟಿಯನ್ನು ದೋಚಿದೆ. ಅಬ್ಬರಿಸಿ ಬೊಬ್ಬಿರಿಯುತ್ತಿದೆ.
ಬಾಕ್ಸಾಫೀಸ್‌ನ ಅಂಕಿ -ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಈ ಹದಿಮೂರು ದಿನದಲ್ಲಿ ಚಿತ್ರದ ಗಳಿಕೆ ₹ 112 ಕೋಟಿಯಾಗಿದ್ದು, ಕೇವಲ ಹಿಂದಿಯಲ್ಲಿಯೇ ಚಿತ್ರ ₹ 83.3 ಕೋಟಿಯನ್ನು ಇಲ್ಲಿಯವರೆಗೆ ಗಳಿಸಿದೆ.
ಹಿಂದಿ ಹೊರತು ಪಡಿಸಿದರೆ ತೆಲುಗು ಪ್ರೇಕ್ಷಕರು ''ನರಸಿಂಹ''ನ ಮಹಾವತಾರವನ್ನು ಚಿತ್ರಮಂದಿರದಲ್ಲಿ ಕಣ್ತುಂಬಿಕೊಂಡು ಉಘೇ ಉಘೇ ಎನ್ನುತ್ತಿದ್ದು ತೆಲುಗಿನಲ್ಲಿ ಈ 13 ದಿನದಲ್ಲಿ ಚಿತ್ರ ₹24.92 ಕೋಟಿಯನ್ನು ದೋಚಿದೆ. ಕನ್ನಡದ ಪ್ರೇಕ್ಷಕರು ಕೂಡ ನರಸಿಂಹನ ದರ್ಶನವನ್ನು ಮಾಡುತ್ತಿದ್ದು ಇಲ್ಲಿಯವರೆಗೆ ಕನ್ನಡದಲ್ಲಿ ₹2.99ಕೋಟಿಯನ್ನು ಚಿತ್ರ ಗಳಿಸಿದೆ. ಇನ್ನು ತಮಿಳು ಮತ್ತು ಮಲಯಾಳಂನಲ್ಲಿ ₹1.3 ಕೋಟಿ ಮತ್ತು 29ಲಕ್ಷವನ್ನು ಕ್ರಮವಾಗಿ ಈ ಚಿತ್ರ ಗಳಿಸಿದೆ.

ಇನ್ನು ಈ 13 ದಿನದಲ್ಲಿ ಹಲವು ಚಿತ್ರಗಳು ತೆರೆಗೆ ಬಂದಿವೆ. ಉದಾಹರಣೆಗೆ ಕಿಂಗ್‌ಡಮ್.. ಸನ್ ಆಫ್ ಸರ್ದಾರ್ 2.. ಧಡಕ್ 2.. ಆದರೂ ಕೂಡ ಹಿಂದಿ ಮಾರುಕಟ್ಟೆಯಲ್ಲಿ ನರಸಿಂಹನ ಘರ್ಜನೆ ಕಡಿಮೆಯಾಗಿಲ್ಲ. ನಿನ್ನೆ ಒಂದೇ ದಿನ ಹಿಂದಿಯಲ್ಲಿ ₹4.5 ಕೋಟಿಯನ್ನು ಗಳಿಸಿರುವ ಈ ಚಿತ್ರ ಬೇರೆ ಭಾಷೆಗಳಲ್ಲಿ 1.5 ಕೋಟಿ ಹಣವನ್ನು ಗಳಿಸಿದೆ. ಈ ಮೂಲಕ ಹದಿಮೂರನೇ ದಿನದಂದು ಒಟ್ಟು 6 ಕೋಟಿಯನ್ನು ಚಿತ್ರ ಗಳಿಸಿದೆ ಎಂದು ಸ್ಯಾಕ್ನಿಲ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಹೀಗೆ ₹ 112 ಗಳಿಸಿರುವ ''ಮಹಾವತಾರ್ ನರಸಿಂಹ'' ಅತೀ ಹೆಚ್ಚು ಗಳಿಕೆ ಕಂಡ ಭಾರತದ ಮೊದಲ ಆನಿಮೇಷನ್ ಚಿತ್ರ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ. ಈ ಮೂಲಕ ಹೊಸದೊಂದು ಇತಿಹಾಸವನ್ನು ಚಿತ್ರ ಬರೆದಿದೆ.
ಅಂದ್ಹಾಗೇ ಹಲವು ಮಾಧ್ಯಮಗಳಲ್ಲಿ ವರದಿಯಾದಂತೆ, ''ಮಹಾವತಾರ್ ನರಸಿಂಹ'' ವಿಕ್ಕಿಪೀಡಿಯಾದಲ್ಲಿ ಕೂಡ ಉಲ್ಲೇಖಿಸಿದಂತೆ ಈ ಚಿತ್ರಕ್ಕೆ ₹15 ಕೋಟಿ ಖರ್ಚು ಮಾಡಲಾಗಿದೆ. ಸದ್ಯ ₹112 ಕೋಟಿ ಹಣಗಳಿಸಿದೆ. ಈ ಹಿನ್ನೆಲೆ ಲೆಕ್ಕಾಚಾರ ಮಾಡಿದರೆ ಚಿತ್ರದ ನಿರ್ಮಾಣ ಸಂಸ್ಥೆ ಕ್ಲೀಮ್ ಪ್ರೊಡಕ್ಷನ್ಸ್ ಮತ್ತು ಹೊಂಬಾಳೆಗೆ ಈ ಚಿತ್ರದಿಂದ 632% ಲಾಭವಾದಂತೆ ಆಗಿದೆ ಎಂದು koimoi.com ತನ್ನ ವರದಿಯಲ್ಲಿ ಹೇಳಿದೆ. ಚಿತ್ರ ₹150 ಕೋಟಿಯ ಗಡಿಯನ್ನು ಕೂಡ ಗಳಿಸಲಿದೆ ಎಂದು ಹೇಳಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











