ಮಹಾವತಾರ್ ನರಸಿಂಹ ಅಬ್ಬರಕ್ಕೆ ಪತರುಗಟ್ಟಿದ ಬಾಲಿವುಡ್, ಸನ್ ಆಫ್ ಸರ್ದಾರ್ 2, ಧಡಕ್ 2 ಖೇಲ್ ಖತಂ
''ಸೂಪರ್ ಸ್ಟಾರ್'' ಎಂಬ ಭ್ರಮೆಯಲ್ಲಿ ಮೆರೆದಾಡುತ್ತಿರುವವರನ್ನು ಪ್ರೇಕ್ಷಕರು ಮೂಲೆಗುಂಪು ಮಾಡುತ್ತಿರುವ ಕಾಲ ಇದು. ಈ ಕಾಲದಲ್ಲಿ.. ಚಿತ್ರಕ್ಕೆ ಯಾರು ಎಷ್ಟೇ ಬೆವರು ಸುರಿಸಿರಲಿ.. ಆ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಚಿತ್ರದಲ್ಲಿನ ತಾರೆಯರು ತಮ್ಮ ರಕ್ತವನ್ನೇ ಹರಿಸಿರಲಿ.. ಪ್ರೇಕ್ಷಕರು ಅದ್ಯಾವುದನ್ನು ನೋಡುವುದಿಲ್ಲ. ಚಿತ್ರದ ಕಥೆ ಅವರಿಗೆ ಆಪ್ತವಾದರೆ ಸಾಕು. ಆ ಚಿತ್ರವನ್ನಷ್ಟೇ ಅವರು ಹೊತ್ತು ಮೆರೆಸುತ್ತಾರೆ. ಗೆಲ್ಲಿಸುತ್ತಾರೆ.
ಇದಕ್ಕೆ ''ಮಹಾವತಾರ್ ನರಸಿಂಹ'' ಸದ್ಯದ ಉದಾಹರಣೆ. ಹೌದು .. ''ಮಹಾವತಾರ್ ನರಸಿಂಹ'', ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ''ಹೊಂಬಾಳೆ''ಯ ಕೊಡುಗೆ. ಯಾವ ಸ್ಟಾರ್‌ಗಳಿರದೇ.. ಯಾವ ಅಬ್ಬರದ ಪ್ರಚಾರ ಇಲ್ಲದೇ.. ಬಿಡುಗಡೆಯಾದ ಈ ಚಿತ್ರ ಸದ್ಯ ಬಾಕ್ಸಾಫೀಸ್‌ನಲ್ಲಿ ಚಮತ್ಕಾರವನ್ನು ಮಾಡುತ್ತಿದೆ.

ವಿಶೇಷ ಅಂದರೆ ಕನ್ನಡ ನಿರ್ಮಾಣ ಸಂಸ್ಥೆಯ ಈ ಆ್ಯನಿಮೇಷನ್ ಚಿತ್ರ ಸದ್ಯ ಬಾಲಿವುಡ್‌ನವರ ನಿದ್ದೆ ಕೆಡಿಸಿದೆ. ''ನರಸಿಂಹ''ನ ಘರ್ಜನೆಯ ಎದುರು ಅಜಯ್ ದೇವಗನ್ ಅಭಿನಯದ ''ಸನ್ ಆಫ್ ಸರ್ದಾರ್ 2'' ಮತ್ತು ಸಿದ್ದಾಂತ್ ಚತುರ್ವೇದಿ , ತೃಪ್ತಿ ದಿಮ್ರಿ ಅಭಿನಯದ ''ಧಡಕ್ 2'' ಚಿತ್ರಗಳ ಸದ್ದಡಗಿದೆ.
ಹೌದು, ಅಸಲಿಗೆ ''ಮಹಾವತಾರ್ ನರಸಿಂಹ'' ಚಿತ್ರ ತೆರೆಗೆ ಬಂದು ಇಂದಿಗೆ ಹತ್ತು ದಿನಗಳಾಗಿವೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಚಿತ್ರ ಇಲ್ಲಿಯವರೆಗೆ ₹ 72.54 ಕೋಟಿ ಹಣ ಗಳಿಸಿದೆ. ಕೇವಲ ನಿನ್ನೆ ಒಂದೇ ದಿನ [ ಆಗಸ್ಟ್ 2-ಶನಿವಾರ ] ₹ 15.4 ಕೋಟಿ ಹಣವನ್ನು ಚಿತ್ರ ದೋಚಿದೆ. ವಿಪರ್ಯಾಸ ಅಂದರೆ ಮೊನ್ನೆ ಮೊನ್ನೆ ಬಿಡುಗಡೆಯಾದ ಅಜಯ್ ದೇವಗನ್ ಅಭಿನಯದ ''ಸನ್ ಆಫ್ ಸರ್ದಾರ್ 2'' ಇದೇ ಹಣವನ್ನು ಗಳಿಸಲು ಎರಡು ದಿನ ತೆಗೆದುಕೊಂಡಿದೆ.
''ಸ್ಯಾಕ್ನಿಲ್'' ವೆಬ್ ಸೈಟ್ ಪ್ರಕಾರ ಬಿಡುಗಡೆಯಾದ ಮೊದಲ ದಿನದಂದು [ ಆಗಸ್ಟ್ 1] ₹ 7.25 ಕೋಟಿ ಹಣ ಗಳಿಸಿದ್ದ ''ಸನ್ ಆಫ್ ಸರ್ದಾರ್ 2'' ಎರಡನೇ ದಿನ [ ಆಗಸ್ಟ್ 2 ] ₹ 8.25 ಕೋಟಿ ಹಣ ಗಳಿಸಿದೆ. ಈ ಮೂಲಕ ಚಿತ್ರದ ಗಳಿಕೆ ಈ ಎರಡು ದಿನದಲ್ಲಿ ₹ 15.5 ಕೋಟಿಯಾಗಿದೆ. ಈ ಹಣವನ್ನು ''ಮಹಾವತಾರ್ ನರಸಿಂಹ'' ಚಿತ್ರ ಇಂದೇ ದಿನದಲ್ಲಿ ಗಳಿಸಿದೆ. ಇನ್ನೂ ವಿಶೇಷ ಅಂದರೆ ''ಮಹಾವತಾರ್ ನರಸಿಂಹ'' ಚಿತ್ರ ಗಳಿಸಿದ ಈ ₹ 15.4ಕೋಟಿ ಹಣದಲ್ಲಿ ಹಿಂದಿ ಪ್ರೇಕ್ಷಕರು ನೀಡಿರುವ ದೇಣಿಗೆಯೇ ₹ 11.5 ಕೋಟಿ ಇದೆ.
ಕೇವಲ ''ಸನ್ ಆಫ್ ಸರ್ದಾರ್ 2'' ಮಾತ್ರವಲ್ಲ ''ಮಹಾವತಾರ್ ನರಸಿಂಹ'' ಚಿತ್ರದ ಅಬ್ಬರದ ಮುಂದೆ ''ಧಡಕ್ 2'' ಚಿತ್ರ ಕೂಡ ಮಂಕಾಗಿದೆ. ''ಸನ್ ಆಫ್ ಸರ್ದಾರ್ 2'' ಚಿತ್ರದ ಜೊತೆಯಲ್ಲಿಯೇ ಬಿಡುಗಡೆಯಾದ ''ಧಡಕ್ 2'' ಈ ಎರಡು ದಿನದಲ್ಲಿ ಕೇವಲ ₹ 7.25 ಕೋಟಿ ಹಣವನ್ನಷ್ಟೇ ಗಳಿಸಿದೆ.

ಹೀಗೆ ಹಿಂದಿ ನೆಲದಲ್ಲಿ ಕನ್ನಡ ಸಂಸ್ಥೆಯ ಸಹಕಾರದ ಜೊತೆ ನಿರ್ಮಾಣವಾದ ''ಮಹಾವತಾರ್ ನರಸಿಂಹ'' ಚಿತ್ರ ಸದ್ಯ ಅಬ್ಬರಿಸುತ್ತಿದೆ. ಹೊಸ ಚಿತ್ರಗಳು ಕೂಡ ಗಳಿಸದಷ್ಟು.. ಸೂಪರ್ ಸ್ಟಾರ್ ಎಂಬ ಸ್ಥಾನ ಅಲಂಕರಿಸಿದವರ ಚಿತ್ರ ಕೂಡ ದೋಚದಷ್ಟು ಹಣವನ್ನು ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಚಿತ್ರ ಗಳಿಸುತ್ತಿದೆ. ಬಾಲಿವುಡ್ ಪಂಡಿತರ ಪ್ರಕಾರ ''ಮಹಾವತಾರ್ ನರಸಿಂಹ'' ಚಿತ್ರ ಬಾಕ್ಸಾಫೀಸ್‌ನಲ್ಲಿ ನೂರು ಕೋಟಿ ಹಣವನ್ನು ಅನಾಯಾಸವಾಗಿ ಗಳಿಸಲಿದೆ. ಈ ಓಟಕ್ಕೆ ಬ್ರೇಕ್ ಹಾಕಲು ಸದ್ಯ ಯಾರಿಂದಲೂ ಸಾಧ್ಯ ಇಲ್ಲ ಎನ್ನುವ ಅಭಿಪ್ರಾಯ ಕೂಡ ಹಿಂದಿ ಉದ್ಯಮದಲ್ಲಿ ವ್ಯಕ್ತವಾಗುತ್ತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











