Kingdom Box Office Day 5 ; ಬಾಕ್ಸಾಫೀಸ್‌ನಲ್ಲಿ ಕುಸಿದ ದೇವರಕೊಂಡ 'ಕಿಂಗ್‌ಡಮ್', ಢಮಾರ್ ಆದ 'ಸ್ಟಾರ್‌ಡಮ್'..!
ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಗೆದ್ದವರೂ ಹಿಗ್ಗದೆ ಸೋತವರೂ ಕುಗ್ಗದೆ..ಸೋಲು ಮತ್ತು ಗೆಲುವನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಬೇಕು. ಆದರೆ.. ಕೆಲ ಒಮ್ಮೆ ಕೆಲವರು ಪದೇ ಪದೇ ಸೋಲನ್ನೇ ಮಾತ್ರ ಕಾಣುತ್ತಿರುತ್ತಾರೆ. ಎಷ್ಟೇ ಪ್ರಯತ್ನ ಮಾಡಿದರು ಕೂಡ ಇವರ ಕೈಗೆ ದಕ್ಕುವುದು ಬರೀ ನಿರಾಸೆ ಮಾತ್ರ. ಹೀಗಾದಾಗ ಹಲವರು ಸೋತೆ ಎಂದು ಕೊರಗುತ್ತಾ ಕೂರುತ್ತಾರೆ.
ಇನ್ನು ಕೆಲವರು ಎಡವಲು ಕಾರಣಗಳೇನು ? ಎನ್ನುವುದರ ಕುರಿತು ಯೋಚನೆ ಮಾಡುತ್ತಾರೆ. ತೆಗೆದುಕೊಂಡ ನಿರ್ಧಾರ ತಪ್ಪಾಗುತ್ತಿರುವುದಕ್ಕೆ ಸೋಲು ಬೆನ್ನತ್ತಿರಬಹುದಾ ? ಎಂಬ ಆತ್ಮ ವಿಮರ್ಶೆ ಮಾಡಿಕೊಳ್ಳುತ್ತಾರೆ. ಈ ಎರಡು ಸಾಲಿನಲ್ಲಿ ಸದ್ಯ ಆಂಧ್ರದ ರೌಡಿ ವಿಜಯ್ ದೇವರಕೊಂಡ ಯಾವ ಸಾಲಿನಲ್ಲಿ ಸದ್ಯ ನಿಂತಿದ್ದಾರೆ ಎನ್ನುವುದು ಗೊತ್ತಿಲ್ಲವಾದರೂ ಸದ್ಯ ಇವರ ''ಕಿಂಗ್‌ಡಮ್'' ಬಾಕ್ಸಾಫೀಸ್‌ನಲ್ಲಿ ಕುಸಿದು ಬಿದ್ದಿದೆ. ಇವರ ''ಸ್ಟಾರ್‌ಡಮ್'' ಮೇಲೆ ಮತ್ತೊಮ್ಮೆ ಪ್ರಶ್ನಾರ್ಥಕ ಚಿಹ್ನೆ ಎದ್ದಿದೆ.

ಹೌದು, ಅಸಲಿಗೆ ಆರಂಭದಿಂದಲೂ ಸದ್ದು ಮಾಡುತ್ತಲೇ ಬಂದ ಈ ಚಿತ್ರಕ್ಕೆ ಮೊದಲ ದಿನ ಅದ್ಧೂರಿಯಾದ ಸ್ವಾಗತ ಸಿಕ್ಕಿತ್ತು. ದೇವರಕೊಂಡ ವೃತ್ತಿ ಬದುಕಿನಲ್ಲಿ ಮೊದಲ ದಿನ [ಜುಲೈ 31] ಅತೀ ಹೆಚ್ಚು ಹಣ ಸಂಪಾದನೆ ಮಾಡಿದ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ''ಲೈಗರ್'' ಚಿತ್ರದ ಮೊದಲ ದಿನದ ಗಳಿಕೆ [ ₹ 15.95 ಕೋಟಿ]ಯನ್ನು ಹಿಂದಿಕ್ಕಿ ₹ 18 ಕೋಟಿ ಹಣವನ್ನು ಗಳಿಸಿತ್ತು.
''ಸ್ಯಾಕ್ನಿಲ್'' ಉಲ್ಲೇಖಿಸಿದ ಈ ಅಂಕಿ-ಸಂಖ್ಯೆಯನ್ನು ಕಂಡು ಇನ್ನೇನು ದೇವರಕೊಂಡ ಬಳಗ ಖುಷಿಯಾಗಬೇಕಿತ್ತು. ಆದರೆ .. ಅಷ್ಟರಲ್ಲಿ ಗೌತಮ್ ತಿನ್ನನೂರಿ ನಿರ್ದೇಶನದ ''ಕಿಂಗ್‌ಡಮ್'' ನಿರೀಕ್ಷೆಗೆ ತಕ್ಕಂತೆ ಮೂಡಿ ಬಂದಿಲ್ಲ ಎಂಬ ಅಪಸ್ವರ ಕೇಳಿ ಬಂತು. ವಿಜಯ್ ದೇವರಕೊಂಡ ಅವರ ಅಭಿಮಾನಿಗಳಲ್ಲಿ ಅಸಮಾಧಾನದ ಹೊಗೆ ಕಂಡು ಬಂತು. ಇದರ ಫಲಿತಾಂಶ ಬಾಕ್ಸಾಫೀಸ್‌ನಲ್ಲಿ ಕಾಣಿಸಿತು ಕೂಡ.

''ಸ್ಯಾಕ್ನಿಲ್'' ವೆಬ್ ಸೈಟ್ ಪ್ರಕಾರ ಎರಡನೇ ದಿನ [ ಆಗಸ್ಟ್ 1] ಚಿತ್ರದ ಗಳಿಕೆಯಲ್ಲಿ ಶೇಕಡಾ 58.33% ಕುಸಿತ ಕಂಡು ಬಂದಿತ್ತು. ಕೇವಲ ₹ 7.5 ಕೋಟಿಯನ್ನಷ್ಟೇ ಗಳಿಸಿತ್ತು. ಶನಿವಾರ ಅಂದರೆ ಮೂರನೇ ದಿನ [ ಆಗಸ್ಟ್ 2 ] ₹8 ಕೋಟಿಯನ್ನು ಮಾತ್ರ ಗಳಿಸಿದ ''ಕಿಂಗ್‌ಡಮ್''ನಲ್ಲಿ ಭಾನುವಾರ ಕೂಡ ಯಾವ ಕಂಪನದ ಸದ್ದು ಕೇಳಿ ಬರಲಿಲ್ಲ. ಶೇಕಡಾ 7.50% ಕುಸಿತ ಕಂಡು ಬಂತು.
ನಾಲ್ಕನೇ ದಿನ [ ಆಗಸ್ಟ್ 3 ] ಕೇವಲ ₹7.6 ಕೋಟಿಯನ್ನು ಮಾತ್ರ ಗಳಿಸುವ ಮೂಲಕ ವಾರಾಂತ್ಯದ ಕಥೆಯನ್ನು ₹ 40.58 ಕೋಟಿ ಗಳಿಸುವ ಮೂಲಕ ಅಂತ್ಯ ಮಾಡಿದ ''ಕಿಂಗ್‌ಡಮ್'' ಪಾಲಿಗೆ ಸೋಮವಾರ ನಿರ್ಣಾಯಕವಾಗಿತ್ತು. ಆದರೆ.. ಸೋಮವಾರದ ಕಥೆ ಕೂಡ ಬದಲಾಗಲಿಲ್ಲ. ಪ್ರೇಕ್ಷಕರು ದೇವರಕೊಂಡಗೆ ಉಘೇ ಉಘೇ ಎನ್ನಲಿಲ್ಲ. ಪರಿಣಾಮ ನಿನ್ನೆ ಐದನೇ ದಿನ [ ಆಗಸ್ಟ್ 4 ] ಚಿತ್ರ ಕೇವಲ ₹ 2.25 ಕೋಟಿ ಹಣವನ್ನು ಮಾತ್ರ ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ ₹ 43.15 ಕೋಟಿಯಾಗಿದೆ.
ಅಂದ್ಹಾಗೇ ಚಿತ್ರದ ಒಟ್ಟಾರೆ ಬಜೆಟ್ 130 ಕೋಟಿ ಎಂದು ತೆಲುಗು ಮಾಧ್ಯಮಗಳು ವರದಿಯನ್ನು ಮಾಡಿವೆ. ಹೀಗಾಗಿ ಹಾಕಿದ ಬಂಡವಾಳದ ಮೇಲೆ ಲಾಭ ಬಿಡಿ, ಸದ್ಯ ಹೂಡಿರುವ ಹಣದಲ್ಲಿ ಅರ್ಧ ಹಣ ಬಂದರೆ ಸಾಕು ಎನ್ನುವ ಮಾತು ಈಗ ಹೈದರಾಬಾದ್‌ನಲ್ಲಿ ಕೇಳಿ ಬರುತ್ತಿದೆ. ಈ ಶುಕ್ರವಾರ ಬಹುತೇಕ ಕಡೆ ಚಿತ್ರ ಎತ್ತಂಗಡಿಯಾಗಲಿದೆ. ''ಕಿಂಗ್‌ಡಮ್'' ಖಾಲಿ ಮಾಡಿದ ಜಾಗವನ್ನು ಮುಂದಿನ ವಾರ ವಾರ್ 2 ಮತ್ತು ಕೂಲಿ ಆಕ್ರಮಿಸಿಕೊಳ್ಳಲಿವೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











