ಬೆಳ್ಳಿತೆರೆಯಲ್ಲಿ ದೈವ ನರ್ತನ ; 'ಕಾಂತಾರ' ಅಲೆ ಎದುರು ಬಂದ ಧನುಷ್‌ಗೆ ₹68 ಕೋಟಿ ಆಘಾತ ?
ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಪ್ರಪಂಚದಲ್ಲಿ ಹಲವಾರು ಜನ ತಮ್ಮ ಬದುಕು ಬದಲಾಗಬಹುದೆಂಬ ಆಶಯದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ತಾರೆ. ನಿರ್ಮಾಪಕರು ಕೂಡ ಹಿಂದೆ ಮುಂದೆ ಯೋಚನೆ ಮಾಡದೇ ಲಾಭದಾಸೆಗೆ ಯತೇಚ್ಚವಾಗಿ ದುಡ್ಡು ಸುರಿಯುತ್ತಾರೆ. ಆದರೆ.. ಇದು ಬಣ್ಣದ ಲೋಕ. ಇಲ್ಲಿ ಯಾವತ್ತು ಯಾರ ಹಣೆಬರಹ ಖುಲಾಯಿಸುತ್ತೆ. ಯಾರ ಬದುಕು ಹಳಿ ತಪ್ಪುತ್ತೆ ಎಂದು ಹೇಳುವುದು ಕಷ್ಟ.
ಕೆಲ ಒಮ್ಮೆ ಹಾಕಿದ ಬಂಡವಾಳ ಬಂದರೆ ಸಾಕು ಎಂಬ ಮನೋಭಾವದಲ್ಲಿ ನಿರ್ಮಾಣವಾದ ಚಿತ್ರಗಳು ಚರಿತ್ರೆ ಬರೆಯುತ್ತವೆ. ಇನ್ನೂ ಕೆಲ ಒಮ್ಮೆ ಲಾಭದ ಆಸೆಯನ್ನೊತ್ತು ಮಾಡಿದ ಚಿತ್ರಗಳು ನೆಲ ಕಚ್ಚುತ್ತವೆ. ನಿರ್ಮಾಪಕರ ಕೈಯನ್ನು ಕೂಡ ಕಚ್ಚುತ್ತವೆ. ಉದಾಹರಣೆಗೆ ಧನುಷ್ ಅಭಿನಯದ ''ಇಡ್ಲಿ ಕಡೇ'' ಚಿತ್ರವನ್ನೇ ತೆಗೆದುಕೊಳ್ಳಿ.

ಹೌದು. ''ಇಡ್ಲಿ ಕಡೇ'' ಕಾಲಿವುಡ್‌ನ ಸೂಪರ್ ಸ್ಟಾರ್ ಧನುಷ್ ಅಭಿನಯದ ಸಿನಿಮಾ. ನಿರ್ದೇಶನ ಕೂಡ ಇವರದ್ದೇ. ನಿರ್ಮಾಣ ಕೂಡ ಇವರದ್ದೇ. ತಮ್ಮ ಈ ಚಿತ್ರದ ಪ್ರಚಾರಕ್ಕೆ ಹೇಳಬಾರದ ಸುಳ್ಳನ್ನೆಲ್ಲಾ ಪ್ರೇಕ್ಷಕರ ಮುಂದೆ ಹೇಳಿದ್ದ ಧನುಷ್ ಅವರಿಗೆ ತಾವು ಮಾಡಿದ ಕಥೆಯ ಮೇಲೆ ಅಪಾರವಾದ ನಿರೀಕ್ಷೆ ಇತ್ತು. ಯಾವ ಚಿತ್ರ ಬಂದರೂ ಕೂಡ ತಮ್ಮ ಚಿತ್ರ ಸೋಲುವುದಿಲ್ಲ ಎನ್ನುವ ವಿಶ್ವಾಸ ಇತ್ತು.
ಇದೇ ವಿಶ್ವಾಸದಲ್ಲಿ ರಿಷಬ್ ಶೆಟ್ಟಿಯ ''ಕಾಂತಾರ-1'' ಎದುರು ಧನುಷ್ ರಣಕಹಳೆ ಊದಿದ್ದರು. ತಾವು ಕೈಯಾರೆ ಮಾಡಿರುವ ''ಇಡ್ಲಿ'' ತುಂಬಾ ರುಚಿಯಾಗಿದೆ ಎಂದುಕೊಂಡಿದ್ದರು.
ಆದರೆ.. ಅಂದುಕೊಂಡಿದ್ದು ಒಂದು. ಆಗಿದ್ದು ಮತ್ತೊಂದು. ''ಕಾಂತಾರ-ಚಾಪ್ಟರ್ 1'' ಎದುರು ಬಿಡುಗಡೆಯಾದ ''ಇಡ್ಲಿ ಕಡೇ'' ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿಯ ಪ್ರಕಾರ ''ಇಡ್ಲಿ ಕಡೇ'' ಚಿತ್ರದ ಗಳಿಕೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಈ ನಾಲ್ಕು ದಿನದಲ್ಲಿ ಈ ಚಿತ್ರ ಕೇವಲ ₹32.5 ಕೋಟಿಯನ್ನು ಮಾತ್ರ ಗಳಿಸಿದೆ.
ಸ್ಯಾಕ್ನಿಲ್ ಪ್ರಕಾರ ''ಇಡ್ಲಿ ಕಡೇ'' ಚಿತ್ರದ 4 ದಿನಗಳ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ [ಬುಧವಾರ] ₹ 11 ಕೋಟಿ
ಎರಡನೇ ದಿನ [ಗುರುವಾರ] ₹ 9.75ಕೋಟಿ
ಮೂರನೇ ದಿನ[ಶುಕ್ರವಾರ] ₹ 5.6 ಕೋಟಿ
ನಾಲ್ಕನೇ ದಿನ [ಶನಿವಾರ ] ₹ 6.25 ಕೋಟಿ
ಒಟ್ಟು ಗಳಿಕೆ ₹ 32.5 ಕೋಟಿ

ಹಾಕಿದ ಬಂಡವಾಳವಾದರೂ ಮರಳಿ ಬರುತ್ತಾ ?
ಇನ್ನೂ ಆಕಾಶ್ ಭಾಸ್ಕರನ್ ಅವರ ಜೊತೆ ಸೇರಿ ಧನುಷ್ ತಮ್ಮ ''ಇಡ್ಲಿ ಕಡೇ'' ಚಿತ್ರಕ್ಕೆ ₹ 100 ಕೋಟಿ ಹಣ ಸುರಿದಿದ್ದಾರೆ. ಈ ಚಿತ್ರದ ವಿಕ್ಕಿಪೀಡಿಯಾದಲ್ಲಿಯೇ ಚಿತ್ರದ ವೆಚ್ಚ ₹104 ಕೋಟಿ ಎಂದು ಉಲ್ಲೇಖಿಸಲಾಗಿದೆ. ಆದರೆ.. ಹೀಗೆ ಹಾಕಿದ ಹಣ ಮರಳಿ ಬರುತ್ತಾ..? ಎನ್ನುವುದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ.
ಯಾಕೆಂದರೆ..ದಸರಾದ ರಜಾ-ಮಜಾ ಕಾರ್ಯಕ್ರಮ ಸದ್ಯ ಮುಕ್ತಾಯವಾಗಿದೆ. ಈ ಹಾಲಿಡೇ ಅವಧಿಯಲ್ಲಿಯೇ ಚಿತ್ರ ಕೇವಲ ₹32.5 ಕೋಟಿ ಹಣ ಗಳಿಸಿದೆ. ''ಸ್ಯಾಕ್ನಿಲ್'' ಪ್ರಕಾರ ಇಂದು (ಭಾನುವಾರ-ಅಕ್ಟೋಬರ್ 5) ಅಂದಾಜು ₹ 5 ಕೋಟಿ ಹಣವನ್ನು ಈ ಚಿತ್ರ ಗಳಿಸಬಹುದು.
ಹಾಗೊಂದು ವೇಳೆ ಈ ಲೆಕ್ಕಾಚಾರ ಸರಿಯಾದರೆ ''ಇಡ್ಲಿ ಕಡೇ'' ಐದು ದಿನದಲ್ಲಿ ₹37 ಕೋಟಿಯ ಆಸು-ಪಾಸು ಗಳಿಸಿದಂತಾಗಲಿದೆ. ಆದರೆ ಇಷ್ಟೇ ಸಾಕಾ..? ಖಂಡಿತ ಇಲ್ಲ. ಸೇಫ್ ಝೋನ್‌ಗೆ ಬರಲು ಧನುಷ್‌ಗೆ ಇನ್ನು ₹60 ಕೋಟಿಗೂ ಅಧಿಕ ಹಣ ಬೇಕಿದೆ. ಸ್ಯಾಟ್‌ಲೈಟ್.. ಓಟಿಟಿ.. ಇತರೆ ಹಕ್ಕುಗಳಿಂದ ಹಣ ಬರಬಹುದಾದರೂ ಸ್ಟಾರ್‌ಗಳ ಪಾಲಿಗೆ ಚಿತ್ರಗಳು ಚಿತ್ರಮಂದಿರದಲ್ಲಿ ಓಡುವುದು ಮುಖ್ಯ. ಚಿತ್ರಮಂದಿರಗಳಲ್ಲಿ ಹಣ ಗಳಿಸುವುದು ಮುಖ್ಯ. ಈ ವಿಚಾರದಲ್ಲಿ ''ಇಡ್ಲಿ ಕಡೇ'' ಚಿತ್ರಕ್ಕೆ ಸೋಲಾಗಲಿದೆ.
ಈ ಹಿನ್ನೆಲೆ ಧನುಷ್‌ಗೆ ''ಇಡ್ಲಿ ಕಡೇ'' ಚಿತ್ರದಿಂದ ಸದ್ಯ ₹68 ಕೋಟಿ ನಷ್ಟವಾಗಿದೆ ಎಂದು ತಮಿಳು ಉದ್ಯಮ ಮಾತನಾಡಿಕೊಳ್ಳುತ್ತಿದೆ. ಮುಂಬರುವ ಒಂದು ವಾರದಲ್ಲಿ ಹೆಚ್ಚೆಂದರೆ ₹8 ಕೋಟಿ ಹಣವನ್ನು ಈ ಚಿತ್ರ ಗಳಿಸಬಹುದು. ₹8ಗಿಂತ ಹೆಚ್ಚಿನ ಹಣ ಗಳಿಸುವುದು ಅಸಾಧ್ಯ ಹೀಗಾಗಿ ₹60 ಕೋಟಿಯ ನಷ್ಟ ಕಟ್ಟಿಟ್ಟ ಬುತ್ತಿ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











