11 ವರ್ಷ 11 ಫ್ಲಾಪ್ ; ಸೋಲುಗಳಿಂದ ಕಂಗಾಲಾದ ಈ ಖ್ಯಾತ ನಟಿಗೆ ಇನ್ನಾದರೂ ಸಿಗುತ್ತಾ ಗೆಲುವು ?
ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಎಷ್ಟೇ ಪ್ರಯತ್ನ ಮಾಡಿದರು ಕೂಡ ಕಳೆದು ಹೋದ ಸ್ಟಾರ್ ಮತ್ತೆ ಇವರ ಕೈಗೆ ಸಿಗುವುದೇ ಇಲ್ಲ. ಗೆಲುವಿನ ಆಶಯದಲ್ಲಿ ಹೋದವರಿಗೆ ಕೇವಲ ನಿರಾಸೆಯೇ ದಕ್ಕುತ್ತೆ. ಇದಕ್ಕೆ ಬಾಲಿವುಡ್‌ನ ನಾಯಕಿ, ನಿರ್ದೇಶಕಿ ಕಂಗನಾ ರಣಾವತ್ ಸದ್ಯದ ಉದಾಹರಣೆ.
ಹೌದು, ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿಕ್ಕ ಮಕ್ಕಳು ಕೂಡ ಕಂಗನಾ ರಣಾವತ್ ನಮ್ಮ ನೆಚ್ಚಿನ ನಾಯಕಿ ಎಂದು ಹೇಳುತ್ತಿದ್ದರು. ಕಂಗನಾ ಹವಾ ಕೂಡ ಹಾಗೇ ಇತ್ತು. ಮಾತಿಗಿಂತ ಕೃತಿ ಮುಖ್ಯ ಎಂಬಂತೆ ಕಂಗನಾ ಆಗ ತಮ್ಮ ಕೆಲಸದ ಕಡೆ ಮಾತ್ರ ಗಮನ ಕೊಡುತ್ತಿದ್ದರು. ಚಿತ್ರಕ್ಕೆ ಮತ್ತು ಪಾತ್ರಕ್ಕೆ ಜೀವ ತುಂಬಲು ಶ್ರಮ ಹಾಕುತ್ತಿದ್ದರು. ಮೂರು ಬಾರಿ ಇವರಿಗೆ ಸಿಕ್ಕ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಇದಕ್ಕೆ ಕೈಗನ್ನಡಿ.

ಆದರೆ ಈಗ ಕಾಲ ಬದಲಾಗಿದೆ. ಬದಲಾದ ಕಾಲದಲ್ಲಿ ಕಂಗನಾ ವ್ಯಕ್ತಿತ್ವದಲ್ಲಿ ಕೂಡ ಬದಲಾವಣೆಗಳಾಗಿವೆ. ಚಿತ್ರಕ್ಕಿಂತ ವಿವಾದಗಳಿಂದ ಸುದ್ದಿಯಲ್ಲಿರುವುದು ಕಂಗನಾಗೆ ಈಗ ರೂಢಿಯಾಗಿದೆ. ಮೊದಲೆಲ್ಲ ಒಂದು ಸೋಲಿನಿಂದ ವಿಚಲಿತಗೊಳ್ಳುತ್ತಿದ್ದ ಕಂಗನಾಗೆ ಈಗ ಸೋಲುವ ಅಭ್ಯಾಸವಾಗಿದೆ.
ಇದಕ್ಕೆ ಕೈಗನ್ನಡಿ ಎಂಬಂತೆ ಕಂಗನಾ ರಣಾವತ್ ಕಳೆದ ಹನ್ನೊಂದು ವರ್ಷಗಳಲ್ಲಿ ಹದಿಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಪರ್ಯಾಸ ಅಂದರೆ ಈ ಹದಿಮೂರರಲ್ಲಿ ಹನ್ನೊಂದು ಚಿತ್ರಗಳು ಕೂಡ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿವೆ.
ಹೌದು, ಕಂಗನಾ ಕೊನೆಯ ಬಾರಿ ಗೆದ್ದು ಬೀಗಿದ್ದು ''ತನು ವೆಡ್ಸ್ ಮನು 2'' ಚಿತ್ರದಲ್ಲಿ ಮಾತ್ರ. ಅದೆ ಕೊನೆ. ಆ ನಂತರ ಬಂದ ''ಐ ಲವ್ ನ್ಯೂ ಇಯರ್'' ಮತ್ತು ''ಕಟ್ಟಿಬಟ್ಟಿ'' ಬಂದು ಹೋಗಿದ್ದು ಗೊತ್ತಾಗಲಿಲ್ಲ. ಹಣೆಬರಹಕ್ಕೆ ಹೊಣೆ ಯಾರು ಎಂಬಂತೆ ವಿಶಾಲ್ ಭಾರದ್ವಾಜ್ ನಿರ್ದೇಶನದ ''ರಂಗೂನ್'' ಚಿತ್ರದಲ್ಲಿ ಬಣ್ಣ ಹಚ್ಚಿದರು ಕೂಡ ಗೆಲುವು ದಕ್ಕಲಿಲ್ಲ . ''ಸಿಮ್ರನ್'', ''ಜಡ್ಜಮೆಂಟಲ್ ಹೈ ಕ್ಯಾ'', ''ಪಂಗಾ'', ''ಧಾಕಡ್'', ''ತೇಜಸ್'' ಚಿತ್ರಗಳು ಗೆಲ್ಲಲಿಲ್ಲ.
ಇನ್ನು ಹಿಂದಿಯಲ್ಲಿ ಗೆಲುವು ಸಿಕ್ತಿಲ್ಲವೆಂದು ಕಂಗನಾ ದಕ್ಷಿಣಕ್ಕೆ ಬಂದರು. ''ತಲೈವಿ'', ''ಚಂದ್ರಮುಖಿ 2'' ಚಿತ್ರದಲ್ಲಿ ಕಾಣಿಸಿಕೊಂಡರು. ಆದರೆ. ಇಲ್ಲಿಯೂ ಕೂಡ ಕಂಗನಾಗೆ ದಕ್ಕಿದ್ದು ಕೇವಲ ಸೋಲು ಮಾತ್ರ.

ಹೀಗೆ ಸತತ ಸೋಲುಗಳಿಂದ ಕಂಗಾಲಾದ ಕಂಗನಾ, ಕೊನೆಗೆ ಕಂಗನಾ ತಾವೇ ನಿರ್ದೇಶನಕ್ಕೆ ಇಳಿದಿದ್ದರು. ಗೆಲುವಿನ ಲಯಕ್ಕೆ ಬರುವ ಪ್ರಯತ್ನ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ಕಂಗನಾ ಪೂರ್ಣ ಪ್ರಮಾಣದಲ್ಲಿ ನಿರ್ದೇಶಿಸಿದ ''ಎಮರ್ಜೆನ್ಸಿ'' ಕೂಡ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತು.
ಇನ್ನು ಕಂಗನಾ ''ಎಮರ್ಜೆನ್ಸಿ'' ಚಿತ್ರದ ನಿರ್ದೇಶಕಿ ಮಾತ್ರ ಆಗಿರಲಿಲ್ಲ. ನಿರ್ಮಾಪಕರಲ್ಲಿ ಒಬ್ಬರಾಗಿದ್ದರು ಕಂಗನಾ. ಎಲ್ಲಕ್ಕಿಂತ ಹೆಚ್ಚಾಗಿ ''ಎಮರ್ಜೆನ್ಸಿ'' ಚಿತ್ರ ವಿವಾದದಿಂದ ಸದ್ದು ಮಾಡಿತ್ತು. ಮೂರು ಮೂರು ಬಾರಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು. ಹೀಗಾಗಿ ಚಿತ್ರದಲ್ಲಿ ಅಂಥದ್ದೇನು ಇದೆ ಎಂದು ನೋಡಲಾದರೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ ಎಂದು ಅನೇಕರು ಅಂದುಕೊಂಡಿದ್ದರು. ಆದರೆ ಅದು ಕೂಡ ಆಗಲಿಲ್ಲ. ಚಿತ್ರ ಗೆಲ್ಲಲಿಲ್ಲ.
ಇದೆಲ್ಲದರ ನಡುವೆ ಬಂದ ಮಣಿಕರ್ಣಿಕಾ ಚಿತ್ರ ಮಾತ್ರ ಕಂಗನಾಗೆ ಖುಷಿಯನ್ನು ನೀಡಿತ್ತು. ಬ್ಲಾಕ್ ಬಸ್ಟರ್ ಆಗದಿದ್ದರು ಕೂಡ ಬಾಕ್ಸಾಫೀಸ್‌ನಲ್ಲಿ ಸೋಲದ ಮಣಿಕರ್ಣಿಕಾ ಹಾಕಿದ ಬಂಡವಾಳದ ಮೇಲೆ ಚೂರು ಲಾಭವನ್ನು ಕಂಡಿತ್ತು.
ಇಂಥಾ ಕಂಗನಾ ಈಗ ಭಾರತ ಭಾಗ್ಯ ವಿಧಾತಾ ಚಿತ್ರದ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇದೇ ಜೂನ್ 12ರಂದು ಚಿತ್ರ ಬಿಡುಗಡೆಯಾಗಲಿದೆ. ಮುಂಬೈ ಉಗ್ರರ ದಾಳಿ ಆಧಾರರಿತ ನೈಜ ಕಥೆ ಇದು. ಈ ಚಿತ್ರದಲ್ಲಿ ಕಂಗನಾ ನರ್ಸ್ ಪಾತ್ರವನ್ನು ಮಾಡಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಫಸ್ಟ್ ಲುಕ್ ಭರವಸೆಯನ್ನು ಮೂಡಿಸಿದೆ. ಈ ಚಿತ್ರವಾದರೂ ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತಾ..? ಈ ಮೂಲಕ ಕಂಗನಾ ಸೋಲಿನ ಸರಪಳಿ ಕಳಚುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.
ಕಂಗನಾ ರಣಾವತ್ ಅವರ ಹನ್ನೊಂದು ವರ್ಷದ ಸಾಧನೆ ಈ ಕೆಳಗಿನಂತೆ ಇದೆ.
| ಚಿತ್ರದ ಹೆಸರು (Film Name) | ವರ್ಷ (Year) | ಬಾಕ್ಸ್ ಆಫೀಸ್ ಫಲಿತಾಂಶ (Verdict) |
|---|---|---|
| ಎಮರ್ಜೆನ್ಸಿ | 2024/25 | ಫ್ಲಾಪ್ / ಡಿಸಾಸ್ಟರ್ |
| ತೇಜಸ್ | 2023 | ಡಿಸಾಸ್ಟರ್ |
| ಚಂದ್ರಮುಖಿ 2 | 2023 | ಫ್ಲಾಪ್ |
| ಧಾಕಡ್ | 2022 | ಮೆಗಾ ಡಿಸಾಸ್ಟರ್ |
| ಥಲೈವಿ | 2021 | ಫ್ಲಾಪ್ |
| ಪಂಗಾ | 2020 | ಫ್ಲಾಪ್ |
| ಜಡ್ಜ್‌ಮೆಂಟಲ್ ಹೈ ಕ್ಯಾ | 2019 | ಫ್ಲಾಪ್ / ಅವರೇಜ್ |
| ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ | 2019 | ಅವರೇಜ್ / ಸೆಮಿ-ಹಿಟ್ |
| ಸಿಮ್ರಾನ್ | 2017 | ಫ್ಲಾಪ್ |
| ರಂಗೂನ್ | 2017 | ಡಿಸಾಸ್ಟರ್ |
| ಕಟ್ಟಿ ಬಟ್ಟಿ | 2015 | ಫ್ಲಾಪ್ |
| ಐ ಲವ್ ಎನ್‌ವೈ (I Love NY) | 2015 | ಡಿಸಾಸ್ಟರ್ |
| ತನು ವೆಡ್ಸ್ ಮನು ರಿಟರ್ನ್ಸ್ | 2015 | ಆಲ್-ಟೈಮ್ ಬ್ಲಾಕ್‌ಬಸ್ಟರ್ |


Click it and Unblock the Notifications