'ಮಾರ್ಕ್' vs '45' vs 'ವೃಷಭ'; ಬಾಕ್ಸಾಫೀಸ್‌ನಲ್ಲಿ ಸಹೋದರರ ಸವಾಲ್
ಚಿತ್ರರಂಗದಲ್ಲಿ ಬಾಕ್ಸಾಫೀಸ್ ಫೈಟ್ ಹೊಸದೇನು ಅಲ್ಲ. ದೊಡ್ಡ ದೊಡ್ಡ ಸಿನಿಮಾಗಳು ಒಟ್ಟಿಗೆ ಬಂದು ಕ್ಲ್ಯಾಶ್ ಆಗಿದೆ. ಒಟ್ಟಿಗೆ ಸಿನಿಮಾಗಳನ್ನು ಬಿಡುಗಡೆ ಮಾಡುವುದರಿಂದ ಆಗುವ ಲಾಭ, ನಷ್ಟದ ಬಗ್ಗೆ ಸಾಕಷ್ಟು ಬಾರಿ ಚರ್ಚೆ ನಡೆಯುತ್ತದೆ. ಕೆಲವೊಮ್ಮೆ ಸ್ಟಾರ್ ನಟರು ಎಲ್ಲಾ ಸಾಧಕ ಬಾಧಕಗಳ ಬಗ್ಗೆ ಗೊತ್ತಿದ್ದು ಸಿನಿಮಾ ಬಿಡುಗಡೆ ಒಪ್ಪುತ್ತಾರೆ.
ಹಬ್ಬದ ರಜೆ ಸಮಯದಲ್ಲಿ ದೊಡ್ಡ ಸಿನಿಮಾಗಳನ್ನು ಒಟ್ಟೊಟ್ಟಿಗೆ ಬಿಡುಗಡೆ ಮಾಡುವ ಲೆಕ್ಕಾಚಾರ ನಡೆಯುತ್ತದೆ. ಈ ಬಾರಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮದಲ್ಲಿ ಕನ್ನಡದ 'ಮಾರ್ಕ್' ಹಾಗೂ '45' ಚಿತ್ರಗಳು ಎದುರುಬದಿರಾಗುತ್ತಿವೆ. ಜೊತೆ ಮಲಯಾಳಂ ಸಿನಿಮಾ 'ವೃಷಭ' ಕೂಡ ಅದೇ ದಿನ ತೆರೆಗಪ್ಪಳಿಸುತ್ತಿದೆ. ಮೋಹನ್ ಲಾಲ್ ನಟನೆಯ ಈ ಚಿತ್ರಕ್ಕೆ ಕನ್ನಡ ನಿರ್ದೇಶಕ ನಂದ ಕಿಶೋರ್ ಆಕ್ಷನ್ ಕಟ್ ಹೇಳಿದ್ದಾರೆ.

ಹಾಲಿವುಡ್ ಸಿನಿಮಾ 'ಅನಕೊಂಡ' ಕೂಡ ಡಿಸೆಂಬರ್ 25ರಂದು ಬಿಡುಗಡೆ ಆಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕರ್ನಾಟಕದಲ್ಲಿ ಈ ಸಿನಿಮಾ ವಿತರಣೆ ಮಾಡ್ತಿದೆ. ಮಾರ್ಕ್ ಹಾಗೂ 45 ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆಗುತ್ತಿರುವ ಬಗ್ಗೆ ಸುದೀಪ್ ಈಗಾಗಲೇ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಸಮಸ್ಯೆ ಆಗಲ್ಲ. ಹಬ್ಬದ ರಜಾ ದಿನಗಳನ್ನು ಮಿಸ್ ಮಾಡಿಕೊಳ್ಳುವುದು ಬೇಡ. ದೀಪಾವಳಿ ಹಬ್ಬ ಬಂದರೆ ಎಲ್ಲರ ಮನೆಯಲ್ಲಿ ಪಟಾಕಿ ಹೊಡೆಯುತ್ತಾರೆ. ಅದೇ ರೀತಿ ಅವ್ರ್ ಪಟಾಕಿ ಅವ್ರು ಹೊಡಿತ್ತಾರೆ, ನಮ್ಮ ಪಟಾಕಿ ನಾವ್ ಹೊಡೀತಿವೆ. ಸಮಸ್ಯೆ ಏನು ಆಗಲ್ಲ ಎಂದು ಸುದೀಪ್ ಹೇಳಿದ್ದಾರೆ.
ಎರಡೂ ಸಿನಿಮಾಗಳನ್ನು ಚೆನ್ನಾಗಿದ್ದರೆ ಎರಡನ್ನೂ ಕೂಡ ಜನ ನೋಡುತ್ತಾರೆ ಎನ್ನುವುದು ಸುದೀಪ್ ಅಭಿಪ್ರಾಯ. ಅದು ನಿಜ ಕೂಡ. ಚಿತ್ರಮಂದಿರಗಳ ಸಮಸ್ಯೆ ಆಗುವುದಿಲ್ಲವೇ ಎನ್ನುವ ಪ್ರಶ್ನೆಗೆ ಏನು ಆಗಲ್ಲ, ಎಲ್ಲಾ ಗೊತ್ತಿದ್ದೆ ಅಲ್ವಾ? ಸಿನಿಮಾ ಬಿಡುಗಡೆ ಮಾಡುತ್ತಿರುವುದು ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ. ಅರ್ಜುನ್ ಜನ್ಯಾ ನನ್ನ ಸಹೋದರ. ನನ್ನ ಸಹೋದರನ ಸಿನಿಮಾ ಜೊತೆಗೆ 'ಮಾರ್ಕ್' ಸಿನಿಮಾ ಬರ್ತಿದೆ. ಆ ಚಿತ್ರಕ್ಕೂ ಶುಭವಾಗಲಿ ಎಂದು ಸುದೀಪ್ ಹಾರೈಸಿದ್ದಾರೆ.

ನಂದ ಕಿಶೋರ್ ನಿರ್ದೇಶನದ 'ವೃಷಭ' ಸಿನಿಮಾ ಕೂಡ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸೇರಿ 5 ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರ್ತಿದೆ. ಕನ್ನಡ ಕಲಾವಿದರಾದ ಸಮರ್ಜಿತ್ ಲಂಕೇಶ್, ಕಿಶೋರ್, ಗರುಡ ರಾಮ್, ಮ್ಯೂಟಂಟ್ ರಘು ಹಾಗೂ ರಾಗಿಣಿ ದ್ವಿವೇದಿ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ನಂದ ಕಿಶೋರ್ ಕೂಡ ಕಿಚ್ಚನಿಗೆ ಬಹಳ ಆತ್ಮೀಯ. ಅವರ ಆಪ್ತ ವಲಯದಲ್ಲಿ ಗುರ್ತಿಸಿಕೊಂಡವರು. ಒಂದರ್ಥದಲ್ಲಿ ಸಹೋದರನ ಸಮಾನ. ಹಾಗಾಗಿ ಇದೀಗ ಬಾಕ್ಸಾಫೀಸ್‌ನಲ್ಲಿ ಸಹೋದರರ ಸವಾಲ್ ಎನ್ನುವಂತಾಗಿದೆ.
'45' ಚಿತ್ರದ ಜೊತೆಗೆ 'ವೃಷಭ' ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗಿ ಸದ್ದು ಮಾಡ್ತಿದೆ. 'ಮಗಧೀರ' ಶೈಲಿಯ ಸಿನಿಮಾ ಇದು. ಫ್ಲ್ಯಾಶ್‌ಬ್ಯಾಕ್ ಎಪಿಸೋಡ್‌ನಲ್ಲಿ ನೂರಾರು ವರ್ಷಗಳ ಹಿಂದಿನ ಕಥೆ ಹೇಳಲಾಗ್ತಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ಮೋಹನ್ ಲಾಲ್ ನಟಿಸುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ 'ವೃಷಭ' ಸಿನಿಮಾ ಕೂಡ ನಿರೀಕ್ಷೆ ಹುಟ್ಟಾಕ್ಕಿದೆ.
ಅರ್ಜುನ್ ಜನ್ಯಾ ನಿರ್ದೇಶನದ '45' ಚಿತ್ರದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಹಾಗಾಗಿ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಟ್ರೈಲರ್ ಕೂಡ ಹಿಟ್ ಆಗಿದ್ದು ಶಿವಣ್ಣ, ಉಪ್ಪಿ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾತರರಾಗಿದ್ದಾರೆ. ಹಾಗಾಗಿ ಬಾಕ್ಸಾಫೀಸ್ ಫೈಟ್ ಜೋರಾಗಿರುತ್ತದೆ ಎನ್ನುವುದು ಗೊತ್ತಾಗುತ್ತಿದೆ.


Click it and Unblock the Notifications











