Coolie Day 4 Boxoffice: 'ಕೂಲಿ' ಫಸ್ಟ್ ವೀಕೆಂಡ್ ಕಲೆಕ್ಷನ್ ಘೋಷಿಸಿದ ಸನ್ ಪಿಕ್ಚರ್ಸ್
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಗೆಲುವಿನ ಓಟ ಮುಂದುವರೆಸಿದೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡ್ತಿದೆ. ಉಪೇಂದ್ರ, ರಚಿತಾ ರಾಮ್, ನಾಗಾರ್ಜುನ, ಆಮೀರ್ ಖಾನ್ ಹಾಗೂ ಸೌಬಿನ್ ಶಾಹಿರ್ ಚಿತ್ರದಲ್ಲಿ ನಟಿಸಿರುವುದು ಅದಕ್ಕೆ ಕಾರಣ ಎನ್ನುವವರು ಇದ್ದಾರೆ. ಫಸ್ಟ್ ವೀಕೆಂಡ್ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಕಲೆಕ್ಷನ್ ಲೆಕ್ಕ ಹೊರಬಿದ್ದಿದೆ.
ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಈ ಬಾರಿ ಲೋಕೇಶ್ ಕನಕರಾಜ್ ವಿಫಲರಾಗಿದ್ದಾರೆ. ರಜನಿಕಾಂತ್ ರೀತಿಯ ಸೂಪರ್ ಸ್ಟಾರ್ ಜೊತೆಗೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ಇಂತಹ ದೊಡ್ಡ ಸ್ಟಾರ್ ಕಾಸ್ಟ್ ಕಟ್ಟಿಕೊಂಡು ಒಂದೊಳ್ಳೆ ಕಥೆ, ಚಿತ್ರಕಥೆ ಮಾಡುವಲ್ಲಿ ವಿಫಲರಾಗಿದ್ದಾರೆ. ಕೆಲ ಅಭಿಮಾನಿಗಳು ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅತಿಯಾದ ನಿರೀಕ್ಷೆಯಿಂದ ಚಿತ್ರಮಂದಿರಕ್ಕೆ ಹೋದರೆ ಭ್ರಮನಿರಸನವಾಗುತ್ತದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಮುನ್ನಾ ದಿನ 'ಕೂಲಿ' ಸಿನಿಮಾ ಬಿಡುಗಡೆ ಆಗಿತ್ತು. ಬಳಿಕ ಆಗಸ್ಟ್ 15ರ ಶುಕ್ರವಾರ ರಜೆ, ಜೊತೆಗೆ ಶನಿವಾರ, ಭಾನುವಾರ ವೀಕೆಂಡ್ ರಜೆ ಕೂಡ ಹೆಚ್ಚು ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆದಿತ್ತು. 'ಕೂಲಿ' ಎದುರು ಬಾಲಿವುಡ್ 'ವಾರ್- 2' ಸಿನಿಮಾ ಕೂಡ ತೆರೆಗೆ ಬಂದಿದೆ. ಆ ಚಿತ್ರಕ್ಕೂ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ ಬಾಕ್ಸಾಫೀಸ್ ಕ್ಲ್ಯಾಶ್‌ನಲ್ಲಿ 'ಕೂಲಿ' ಗೆದ್ದಂತಾಗಿದೆ.
ಫಸ್ಟ್ ವೀಕೆಂಡ್ ಕಲೆಕ್ಷನ್
'ಕೂಲಿ' ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ದೊಡ್ಡಮಟ್ಟದಲ್ಲೇ ಆಗಿತ್ತು. ಕರ್ನಾಟಕದಲ್ಲಿ ಬೆಳ್ಳಂ ಬೆಳಗ್ಗೆ ಸಾಕಷ್ಟು ಪ್ರದರ್ಶನಗಳು ಏರ್ಪಾಡಾಗಿತ್ತು. ಕೆಲವೆಡೆ ಸಿನಿಮಾ ಟಿಕೆಟ್ ದರ 2000 ರೂ.ತಲುಪಿತ್ತು. ಇನ್ನು ಮೊದಲ ದಿನವೇ ಸಿನಿಮಾ 151 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಸನ್ ಪಿಕ್ಚರ್ಸ್ ಸಂಸ್ಥೆ ಘೋಷಿಸಿತ್ತು. ಇದೀಗ ಫಸ್ಟ್ ವೀಕೆಂಡ್ ಅಂದರೆ ಮೊದಲ 4 ದಿನಗಳಲ್ಲಿ 404 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಅಧಿಕೃತ ಮಾಹಿತಿ ಸಿಕ್ಕಿದೆ.
ಹೊಸ ಪೋಸ್ಟರ್ ಸಮೇತ ಸನ್ ಫಿಕ್ಚರ್ಸ್ ಸಂಸ್ಥೆ ಚಿತ್ರದ ಕಲೆಕ್ಷನ್ ಬಗ್ಗೆ ಮಾಹಿತಿ ನೀಡಿದೆ. ತಮಿಳು ಚಿತ್ರರಂಗದ ಇತಿಹಾಸದಲ್ಲಿ ಇದು ಹೊಸ ದಾಖಲೆ ಎಂದು ಚಿತ್ರತಂಡ ಹೇಳಿದೆ. "ರಜನಿಕಾಂತ್ ರೆಕಾರ್ಡ್ ಮೇಕರ್, ರೆಕಾರ್ಡ್ ಬ್ರೇಕರ್" ಎಂದು ಪೋಸ್ಟರ್‌ನಲ್ಲಿ ಹಾಕಿದ್ದಾರೆ.
'ವಾರ್-2' ಕಲೆಕ್ಷನ್
ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ 'ವಾರ್-2' ಸಿನಿಮಾ ಕೂಡ ತಕ್ಕ ಮಟ್ಟಿಗೆ ಕಲೆಕ್ಷನ್ ಮಾಡ್ತಿದೆ. ಮೊದಲ 4 ದಿನಕ್ಕೆ 208 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕಿದ್ದಾರೆ. ತಾರಕ್ ನಟಿಸಿರುವುದರಿಂದ ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ಉತ್ತಮ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್ ಗಳಿಕೆಗೆ ತೆಲುಗು ರಾಜ್ಯಗಳ ಪಾಲು ದೊಡ್ಡದಿದೆ.
ಸೋಮವಾರ ಪರೀಕ್ಷೆ
ಯಾವುದೇ ದೊಡ್ಡ ಸಿನಿಮಾ ಭವಿಷ್ಯ ಗೊತ್ತಾಗಲು ಸೋಮವಾರದವರೆಗೆ ಕಾಯಬೇಕು. ಫಸ್ಟ್ ವೀಕೆಂಡ್ ರಜೆ ಕಾರಣಕ್ಕೆ ಅಭಿಮಾನಿಗಳು ಸಿನಿಮಾ ನೋಡುತ್ತಾರೆ. ವಾರದ ದಿನದಲ್ಲಿ ಕೂಡ ಯಾವ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲವಾಗುತ್ತೋ ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಂತೆ. 'ಕೂಲಿ' ಹಾಗೂ 'ವಾರ್-2' ಎರಡೂ ಚಿತ್ರಗಳಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಭಾನುವಾರದ ಸಂಜೆ ವೇಳೆಗೆ ಕ್ರೇಜ್ ಕಮ್ಮಿ ಆಗಿತ್ತು. ಸದ್ಯದ ಮಾಹಿತಿ ಪ್ರಕಾರ ಸೋಮವಾರ ಸಿನಿಮಾ ಗಳಿಕೆ ಗಣನೀಯವಾಗಿ ಕುಸಿದಿದೆ. ಮುಂದಿನ ದಿನಗಳಲ್ಲಿ 'ಕೂಲಿ' ಖದರ್ ಹೇಗಿರುತ್ತೋ ಕಾದು ನೋಡಬೇಕಿದೆ.


Click it and Unblock the Notifications











